LatestMysore

ಸಾ.ರಾ.ಮಹೇಶ್, ಸಾ.ರಾ.ನಂದೀಶ್ ರವರ ಅಭಿವೃದ್ಧಿ ಕಾರ್ಯ ಸಹಿಸದೆ ಆರೋಪ

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಜಿ.ಪಂ.ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ಅವರುಗಳು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಲಾರದೆ ಕೆಲವು ಕಿಡಿಗೇಡಿಗಳು ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ಆರೋಪಿಸಿದರು.

ಪಟ್ಟಣದಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಟ್ಟಣದ ರಸ್ತೆ ಅಗಲೀಕರಣ ಮಾಡುವಾಗ ಸರ್ಕಾರದಿಂದ ಫಲಾನುಭವಿಗಳಿಗೆ ಪರಿಹಾರವನ್ನು ಕೊಡಿಸುವ ಸಂದರ್ಭದಲ್ಲಿ ತಾರತಮ್ಯ ಮಾಡಿದ್ದಾರೆ  ಹಾಗೂ ಅವರ ದೌರ್ಜನ್ಯ ಮಿತಿಮೀರಿದೆ ಎಂದು ಆರೋಪಿಸಿರುವ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಡಿ.ಚಂದ್ರಶೇಖರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಕಾಂಗ್ರೆಸ್ ಮುಖಂಡ ವಾಸಿಂಪಾಷ ಅವರುಗಳ ಹೇಳಿಕೆಯನ್ನು ಖಂಡಿಸಿ ತಿರುಗೇಟು ನೀಡಿದ್ದಾರೆ.

ಪಟ್ಟಣದ ಪೇಟೆ ಬಾಗಿಲಿನಿಂದ ಸರ್ಕಾರಿ ಆಸ್ಪತ್ರೆಯವರೆಗೆ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರುಗಳ ಸಭೆಯನ್ನು ಮಾಡಿ ಎಲ್ಲರಿಗೂ ಅನುಕೂಲವಾಗುವಂತಹ ಕಾರ್ಯವನ್ನು ಸಾ.ರಾ.ಮಹೇಶ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಸ್ತೆ ಕಾಮಗಾರಿಗೆ ತಡೆದಿದ್ದ ಚಂದ್ರಶೇಖರ್ ಗೆ ಕೆಲಸದ ಬಗ್ಗೆ ಮನವರಿಕೆ ಮಾಡಿಕೊಟ್ಟ ಸಾ.ರಾ.ಮಹೇಶ್ ಅವರೇ ಮುಂದೆ ನಿಂತು ನಮ್ಮ ಮನೆಯನ್ನು ಅಳತೆ ಮೀರಿ ಒಡೆದು ಹಾಕಿಸಿದ್ದಾರೆಂದು ಆರೋಪಿಸಿರುವ ಇವರು ಇವರ ಜಾಗವು ಹೆಚ್ಚಿನ ಅಳತೆಯಲ್ಲಿ ಹೋಗಿದ್ದರೆ ಏಕೆ ಇದುವರೆಗೂ ನ್ಯಾಯಾಲಯಕ್ಕೆ ಹೋಗಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಮನೆಗಳನ್ನು, ಬದುಕನ್ನು ಕಟ್ಟಿಕೊಡುವಂತಹ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ. ಮನೆ ಒಡೆಯುವ ಕೆಲಸವನ್ನು ಅವರು ಮಾಡಿಲ್ಲ ಪ್ರತಿನಿತ್ಯ ಜನಸೇವೆಯನ್ನೇ ಬದುಕಾಗಿ ಮಾಡಿಕೊಂಡು ನಡೆದುಕೊಳ್ಳುತ್ತಿರುವ ಸಾ.ರಾ.ಮಹೇಶ್ ಅವರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ. ಚಂದ್ರಶೇಖರ್ ಈ ಹಿಂದೆ ಅವರ ದೊಡ್ಡಪ್ಪನವರ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲಿ ರೌಡಿಶೀಟರ್ ಅವರ ಮೇಲೆ ಆಗುತ್ತಿತ್ತು  ಆದರೆ ಆ ಸಂದರ್ಭದಲ್ಲಿ ಈ ರೀತಿ ಆಗುವುದು ಬೇಡ ಎಂದು ತಿದ್ದಿ ಬುದ್ದಿ ಹೇಳಿ ಕರೆದುಕೊಂಡು ಬಂದಿದ್ದು ಯಾರು ಎಂಬುದು ನೆನಪಿದೆಯಾ ಎಂದರು. ಇದೇ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದರು.

ವಕೀಲ ಅಂಕನಹಳ್ಳಿ ತಿಮ್ಮಪ್ಪ ಮಾತನಾಡಿ, ಜಿ.ಪಂ. ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ಅವರು ಪಟ್ಟಣದಲ್ಲಿ ಏಳೆಂಟು ಜನರನ್ನು ರೌಡಿಶೀಟರ್ ಗಳನ್ನಾಗಿ ಮಾಡಿಸಿದ್ದಾರೆ ಎಂದು ಆರೋಪಿಸಿರುವ ಚಂದ್ರಶೇಖರ್ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಬಹಿರಂಗಪಡಿಸಬೇಕು ಎಂದರು.

ನೀವು ಮಾಡುವ ಅಕ್ರಮ ಮರಳು ದಂಧೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಂದು ಕೇಳಿದವರ ಮೇಲೆ ಹಲ್ಲೆ ಮಾಡುತ್ತೀರಾ ಇದು ರೌಡಿಸಂ ಅಲ್ಲವೇ? ಅಂಕನಹಳ್ಳಿ ಗ್ರಾಮ ವ್ಯಾಪ್ತಿಗೆ ಸೇರುವ ನಿಮ್ಮ ತೋಟದ ಬಳಿ ದಲಿತರಿಗೆ ಸ್ಮಶಾನಕ್ಕೆ ನೀಡಬೇಕಾದ ಒಂದು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದೀರಿ ಇದು ಯಾವ ನ್ಯಾಯ? ಅಲ್ಪಸಂಖ್ಯಾತ ಸಮಾಜಗಳು ಬದುಕೋದೇ ಕಷ್ಟ ಎನ್ನುತ್ತೀರಾ?

ಸಾಲಿಗ್ರಾಮ ಪಟ್ಟಣದಲ್ಲಿ ಸರ್ವ ಸಮಾಜದವರು ಕೂಡ ಅಣ್ಣ-ತಮ್ಮಂದಿರಂತೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ನಿಮ್ಮಂತಹವರು ಯಾರನ್ನೋ ಓಲೈಸಲು ಈ ರೀತಿ ಮಾತನಾಡುತ್ತೀರಲ್ಲ ಸಾಲಿಗ್ರಾಮದಿಂದಲೇ ನೀವು ತಾ.ಪಂ.ಗೆ  ಆಯ್ಕೆಯಾಗಿದ್ದು ಆಗ ಯಾರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದು ಮರೆತು ಹೋಗಿದೆಯಾ? ಚಂದ್ರಶೇಖರ್ ನಿಮ್ಮ ಮೇಲೆ ಯಾವ ಯಾವ ವಿಷಯಗಳ ಆಧಾರದ ಮೇಲೆ ಎಷ್ಟೆಷ್ಟು ಕೇಸುಗಳಿವೆ ಎಂಬುದು ಗೊತ್ತಿದೆಯಾ ಎಂದು ತಿರುಗೇಟು ನೀಡಿದರು. ನಮ್ಮ ಪಕ್ಷದ ನಾಯಕರುಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಇದೇ ರೀತಿ ಮುಂದುವರೆದರೆ ನಾವು ಕೂಡ ಅದಕ್ಕೆ ಉತ್ತರ ನೀಡಲು ರೆಡಿಯಾಗಿದ್ದೇವೆಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಂಬೆ ಮಹೇಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ಎಸ್ ಸಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಲಾಲು ಸಾಹೇಬ್, ಪುಟ್ಟಪ್ಪ ಇದ್ದರು.

admin
the authoradmin

Leave a Reply

Translate to any language you want