LatestMysore

ಜ್ಞಾನವನ್ನು ಅಲಂಕರಿಸಿದವನೇ ನಿಜವಾದ ಸಿರಿವಂತ: ಶರಣು ವಿಶ್ವವಚನ ಫೌಂಡೇಷನ್‌ ಸಂಸ್ಥಾಪಕ ವಚನ ಕುಮಾರಸ್ವಾಮಿ

ಮೈಸೂರು: ಜ್ಞಾನವನ್ನು ಅಲಂಕರಿಸಿದವನೇ ನಿಜವಾದ ಸಿರಿವಂತ ಎಂದು ಶರಣು ವಿಶ್ವವಚನ ಫೌಂಡೇಷನ್‌ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ ಮತ್ತು ಶರಣು ವಿಶ್ವವಚನ ಫೌಂಡೇಷನ್‌ ಸಹಯೋಗದೊಂದಿಗೆ ಆಚರಿಸಲಾದ ಅಲ್ಲಮಪ್ರಭು ಜಯಂತಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ ಜನಿಸಿದ ಅಲ್ಲಮಪ್ರಭುಗಳು, ಯುವಕರಾಗಿದ್ದಾಗ ಜೀವನದಲ್ಲಿ ಎದುರಾದ ಕಾಮಲತೆಯ ಪ್ರಸಂಗದಿಂದ ವೈರಾಗ್ಯದ ದಾರಿಯನ್ನು ಹಿಡಿದು, ಅನಿಮಿಷ ಗುರುವಿನಿಂದ ಲಿಂಗಧಾರಿಗಳಾಗಿ ಆತ್ಮಜ್ಞಾನಕ್ಕೆ ಮುನ್ನುಗ್ಗಿದ ಮಹಾನ್ ಸಾಧಕರಾಗಿ ಹೊರಹೊಮ್ಮಿದರು.

ಗೊಗ್ಗಯ್ಯ, ಸಿದ್ದರಾಮೇಶ್ವರ, ಮುಕ್ತಾಯಕ್ಕ ಮತ್ತು ಗೋರಕ್ಷರಂತಹ ಶರಣರಿಗೆ ಅರಿವಿನ ದೀಪವಾಗಿದ್ದ ಅವರು, ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಅಧ್ಯಕ್ಷರಾಗಿ ಅನೇಕ ವಚನಕಾರರ ಚಿಂತನೆಗೆ ದಿಕ್ಕು ತೋರಿದ ಮಹತ್ವದ ವ್ಯಕ್ತಿತ್ವ. ಅಲ್ಲಮಪ್ರಭುಗಳ ವಚನಗಳು ಮಾನವನ ಜೀವನದ ನಿಜಾರ್ಥವನ್ನು ಅನಾವರಣಗೊಳಿಸುವ ದಿವ್ಯ ಕನ್ನಡಿ ಎಂದು ಹೇಳಿದ ಅವರು, “ಹೊನ್ನಿಗಾಗಿ ಸತ್ತುದೊಂದು ಕೋಟ್ಯಾನುಕೋಟಿ, ಹೆಣ್ಣಿಗಾಗಿ ಸತ್ತುದೊಂದು ಕೋಟ್ಯಾನುಕೋಟಿ, ಮಣ್ಣಿಗಾಗಿ ಸತ್ತುದೊಂದು ಕೋಟ್ಯಾನುಕೋಟಿ, ನೀ ಗುರಿಯಾಗಿ ಸತ್ತವರನಾರನೂ ಕಾಣೆ ಗುಹೇಶ್ವರ” ಎಂಬ ವಚನದ ಮೂಲಕ ಮಾನವನ ಅಸ್ಥಿರ ಆಸೆಗಳ ಬಗ್ಗೆ ಜಾಗೃತಿ ಮೂಡಿಸಿ  ನಿನ್ನ ಒಡವೆ ಎಂಬುದು ಜ್ಞಾನರತ್ನ ಎಂಬ ವಚನದ ಮೂಲಕ ಜ್ಞಾನವೇ ನಿಜವಾದ ಸಂಪತ್ತು ಎಂಬ ಸಂದೇಶವನ್ನು ನೀಡಿದ ಮಹಾನ್ ದಾರ್ಶನಿಕರು ಎಂದು ಹೇಳಿದರು.

ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೇಸ್ವಾಮಿಗಳು ಆಶೀರ್ವಚನ ನೀಡಿ ಅಲ್ಲಮಪ್ರಭುಗಳ ಬೆಡಗಿನ ವಚನಗಳು ಮನಸ್ಸನ್ನು ಸತ್ಚಿಂತನೆಯ ಕಡೆಗೆ ತಿರುಗಿಸುವ ಶಕ್ತಿಯನ್ನು ಹೊಂದಿವೆ. ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿಯವರನ್ನು ಪರೀಕ್ಷಿಸಿ ಅವರನ್ನು ವಿಶ್ವ ಸ್ತ್ರೀಕುಲದ ಜ್ಯೋತಿ ಎಂದು ಕರೆದ ಅಲ್ಲಮಪ್ರಭುಗಳು ಆಧ್ಯಾತ್ಮಿಕ ಪ್ರಪಂಚದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಅವರು ಮಾತನಾಡಿ, “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ” ಎಂಬ ವಚನವನ್ನು ಉಲ್ಲೇಖಿಸಿ, ಯುಗಾದಿಯ  ಚೈತ್ರ ಮಾಸದಲ್ಲಿ ಅಲ್ಲಮಪ್ರಭು ಜಯಂತಿ ಆಚರಣೆ ಮಾಡುವುದರಿಂದ ಹೊಸ ವರ್ಷದ ಆರಂಭವು ಉತ್ತಮ ಚಿಂತನೆಗಳೊಂದಿಗೆ ನಡೆಯಲು ಪ್ರೇರಣೆ ದೊರೆಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಶ್ರೀಮಠದ ಹೇಮಂತಸ್ವಾಮಿಗಳು, ದೇವಲಾಪುರ ಗ್ರಾಮದ ಕೆ. ಅಂಕಣ್ಣ, ಪಿಳ್ಳಮಟ್ಟಿ ಮಾದಪ್ಪ, ದೇವರಗುಡ್ಡ, ಪಟೇಲ್‌ ಶಿವಣ್ಣ, ದೊಡ್ಡ ಕಾಳಪ್ಪ, ಈರಪಟ್ಟಿ ಅಂಕಣ್ಣ, ವಚನ ಪಾಠಶಾಲೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want