ಮಂಡ್ಯ: ನಗರದ ಲಕ್ಷ್ಮೀಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶ್ವವಿಖ್ಯಾತ ಚಲುವರಾಯಸ್ವಾಮಿ ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ತಂದು ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಂತರ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಯೋಗಾನಂದ್, ಜಿಲ್ಲೆಯಲ್ಲಿ ನಡೆಯುವ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಅದರದೇ ಆದ ಇತಿಹಾಸವಿದೆ. ವಿಜೃಂಭಣೆಯಿಂದ ನಡೆಯುವ ವೈರಮುಡಿ ಬ್ರಹೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗುತ್ತಾರೆ. ಅದರ ಭಾಗವಾಗಿ ವಜ್ರಖಚಿತವಾದ ಕಿರೀಟವನ್ನು ಚಲುವನಾರಾಯಣಸ್ವಾಮಿಗೆ ಧರಿಸಿ ಉತ್ಸವ ನಡೆಸುವುದನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ ಎಂದು ವಿವರಿಸಿದರು.
ಇದಕ್ಕೂ ಮೊದಲು ಖಜಾನೆಯಿಂದ ವೈರಮುಡಿಗೆ ಲಕ್ಷ್ಮಿ ಜನಾರ್ಧನ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮೊದಲಿನಿಂದಲೂ ಪೂಜೆ ಬಳಿಕ ತೆಗೆದುಕೊಂಡು ಹೋಗುವ ಸಂಪ್ರದಾಯವಿದ್ದು, ಅದರಂತೆ ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮೇಲುಕೋಟೆಗೆ ಆಗಮಿಸಿ ದೇವರ ದರ್ಶನ ಪಡೆಯುವಂತೆ ವಿಶ್ವಕರ್ಮ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಮನವಿ ಮಾಡಿದರು.

ನಗರದ ಲಕ್ಷ್ಮೀ ಜನಾರ್ಧನ ದೇವಾಲಯಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ನಮ್ಮ ಕುಲಬಾಂಧವರು ತುಂಬಾ ಆಸಕ್ತಿಯಿಂದ ಮೇಲುಕೋಟೆಯ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅದರಂತೆ ಎಲ್ಲರೂ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದರು.
ಪ್ರಸ್ತುತದಲ್ಲಿ ಚಿನ್ನದ ಕೆಲಸಗಾರರಿಗೆ ಚಿನ್ನ ಬೆಲೆ ಹೆಚ್ಚಳದಿಂದ ಸ್ವಲ್ಪ ಹಿನ್ನಡೆಯಾಗಿದೆ. ನಮ್ಮ ಕುಲಕಸುಬಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸಮಗ್ರವಾಗಿ ಕೆಲಸ ನಿರ್ವಹಿಸಿಕೊಂಡು ಹೋಗುವಂತಹ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ತಿರುಮಲಾಚಾರ್, ಪೇಟೆಬೀದಿ ಸೋಮು, ಆನಂದ್, ಶಂಕರ್, ರಾಮಕೃಷ್ಣ ಭಾಗವಹಿಸಿದ್ದರು.








