ಬೂದಂಬಳ್ಳಿ “ವಚನ ಗ್ರಾಮ” ಪಯಣ… ಇದು ಬರೀ ಪಯಣವಲ್ಲ ಅದ್ಭುತ ಶಿವಕಾಯಕದ ಪಯಣ…
ಸವಿ ಸವಿ ನೆನಪಿನ ಪಯಣ-3

ವಚನಗಳ ಮಹತ್ವವನ್ನು ಮನೆಮನೆಗೆ ತಲುಪಿಸುವ ಕಾಯಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಅದೊಂದು ಶಿವಕಾಯಕದ ಅನುಸಂಧಾನ. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಬೂದಂಬಳ್ಳಿ ಗ್ರಾಮದಲ್ಲಿ “ವಚನ ಗ್ರಾಮ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬದುಕಿನ ಪುಟಗಳಲ್ಲಿ ಎಂದಿಗೂ ಹಚ್ಚಹಸಿರಾಗಿ ಉಳಿಯುವಂತಹ ಒಂದು ಸುಂದರ ಅನುಭವವನ್ನು ನೀಡಿದ ಈ ಪಯಣ ಜುಲೈ 2, 2026ರ ಗುರುವಾರದಂದು ಆರಂಭವಾಯಿತು.
ಪ್ರಕೃತಿಯ ಮಡಿಲಲ್ಲಿ ಪಯಣ ಮತ್ತು ದತ್ತಿ ಚಿಂತನೆ
ಮೈಸೂರಿನಿಂದ ನಮ್ಮ ಕಾರು ಚಲಿಸತೊಡಗಿದಾಗ ಕಾರಿನಲ್ಲಿ ಖುಷಿಯಿಂದ ಒಟ್ಟಾಗಿ ಪಯಣ ಬೆಳೆಸಿದವರು ನಾನು (ವಚನ ಕುಮಾರಸ್ವಾಮಿ), ನನ್ನ ಧರ್ಮಪತ್ನಿ ರೂಪಾ ಕುಮಾರಸ್ವಾಮಿ, ಹೈಕೋರ್ಟ್‌ನ ನಿವೃತ್ತ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಅರಳಿ ನಾಗರಾಜ ಗಂಗಾವತಿ ರವರು, ಮತ್ತು ನಮ್ಮ ಫೌಂಡೇಷನ್‌ನ ಕೇಂದ್ರೀಯ ಸಂಚಾಲಕರಾದ ವಿ. ಲಿಂಗಣ್ಣನವರು.

ದಾರಿಯುದ್ದಕ್ಕೂ ಚಾಮರಾಜನಗರ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾದ ಕೋಶಾಧ್ಯಕ್ಷರಾದ ಶ್ರೀ ಎನ್. ಶಿವಪ್ರಸಾದ್ ರವರು ನಮ್ಮ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಿರುವ ಶಾಲೆಗಳ “ವಚನ ಗ್ರಾಮ ದತ್ತಿ” ಕಾರ್ಯಕ್ರಮದ ಕುರಿತು ಸಮಾಲೋಚನೆಗಳು ನಡೆದವು. ಶ್ರೀ ಎನ್. ಶಿವಪ್ರಸಾದ್ ಅವರು ನಮ್ಮ ಸಂಸ್ಥೆಯಲ್ಲಿ ಎರಡು ಮಹತ್ವದ ದತ್ತಿಗಳನ್ನು ಸ್ಥಾಪಿಸಿದ್ದಾರೆ:
- ವಚನ ಸಾಹಿತ್ಯ ಸಂರಕ್ಷಕ ಡಾ. ಫ. ಗು. ಹಳಕಟ್ಟಿಯವರ ದತ್ತಿ, 2. ಡಾ. ಎಂ. ಎಂ. ಕಲ್ಬುರ್ಗಿಯವರ ದತ್ತಿ
ಈ ದತ್ತಿಗಳ ಅಡಿಯಲ್ಲಿ ವರ್ಷಕ್ಕೆ ಎರಡು ವಿಶೇಷ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತದೆ. ಜುಲೈ 2 ವಚನ ಗುಮ್ಮಟ ಡಾ. ಫ. ಗು. ಹಳಕಟ್ಟಿಯವರ ಜಯಂತಿಯಾದ್ದರಿಂದ, ಆ ಪವಿತ್ರ ದಿನದ ಸವಿನೆನಪಿನಲ್ಲೇ ಬೂದಂಬಳ್ಳಿ ಗ್ರಾಮದಲ್ಲಿ ಈ “ವಚನ ಗ್ರಾಮ ದತ್ತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರಿನ ಕಿಟಕಿಯ ಹೊರಗೆ ಕಣ್ಣು ಹಾಯಿಸಿದಷ್ಟೂ ಹಸಿರು ವನಸಿರಿ, ಮೈದುಂಬಿ ಹರಿಯುತ್ತಿದ್ದ ನದಿಗಳು ಕಣ್ಮನ ಸೆಳೆಯುತ್ತಿದ್ದವು. ಆ ನಿಸರ್ಗದ ಸೌಂದರ್ಯಕ್ಕೆ ಮನಸೋತು, ಎಲ್ಲರೂ ಒಟ್ಟಾಗಿ ಆ ಸುಂದರ ಕ್ಷಣವನ್ನು ಒಂದು ‘ಸೆಲ್ಫಿ’ ಮೂಲಕ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡೆವು.

ನಡೆದಾಡುವ ದೇವರಿಗೆ ಪುಷ್ಪಾರ್ಚನೆ ಮತ್ತು ಹಸಿರು ಕಮಾನು!
ಸಂತೆಮರಹಳ್ಳಿ ದಾಟಿ ಯಳಂದೂರಿಗೆ ಬಂದೆವು. ಯಳಂದೂರಿನಿಂದ ಬೂದಂಬಳ್ಳಿಗೆ ಸಾಗುವ ದಾರಿ ಅದ್ಭುತವಾಗಿತ್ತು. ಎರಡೂ ಕಡೆ ವಿಶಾಲವಾದ ಕೆರೆಗಳು, ಮಧ್ಯದಲ್ಲಿ ನಮ್ಮ ಕಾರು! ಪ್ರಕೃತಿಯ ಆ ಸೌಂದರ್ಯಕ್ಕೆ ಮರುಳಾಗಿ ನಾವೂ ಒಂದು ಎರಡು ಕಿಲೋಮೀಟರ್ ದಾರಿ ತಪ್ಪಿ ಮುಂದೆ ಹೋಗಿಬಿಟ್ಟೆವು. ನಂತರ ಸ್ಥಳೀಯರೊಬ್ಬರನ್ನು ವಿಚಾರಿಸಿ, ಮತ್ತೆ ಹಿಂದಿರುಗಿ ಎಡಕ್ಕೆ ತಿರುವು ಪಡೆದುಕೊಂಡೆವು.
ಇದನ್ನೂ ಓದಿ… ನೆನಪಿನ ಪುಟದಲ್ಲಿ ಹಸಿರಾಗಿ ಉಳಿದ ಕೊಡಗಿನ ಒಂದು ದಿನದ ಪಯಣ… ಹೇಗಿತ್ತು ಗೊತ್ತಾ?
ಆ ರಸ್ತೆಯಂತೂ ನಮಗೆ ಹಸಿರು ಚಪ್ಪರ ಹಾಕಿ ಸ್ವಾಗತ ಕೋರುವಂತಿತ್ತು! ರಸ್ತೆಯ ಎರಡೂ ಬದಿಯ ಗಿಡಮರಗಳ ಕೊಂಬೆಗಳು ಉದ್ದವಾಗಿ ಬೆಳೆದು, ರಸ್ತೆಗೆ ಬಾಗಿದ್ದವು. ಕಮಾನು ಆಕಾರದ ಆ ಹಸಿರು ರೆಂಬೆಗಳು ನಮ್ಮ ಕಾರನ್ನು ಮೆಲ್ಲನೆ ಸ್ಪರ್ಶಿಸುತ್ತಾ ಸಾಗುತ್ತಿದ್ದವು.
ಬೂದಂಬಳ್ಳಿ ಗ್ರಾಮದ ಮುಖ್ಯ ದ್ವಾರಕ್ಕೆ ತಲುಪುತ್ತಿದ್ದಂತೆ ನಮಗೆ ಪರಮ ಪವಿತ್ರವಾದ ದರ್ಶನವೊಂದು ಕಾಯುತ್ತಿತ್ತು. ಅಲ್ಲಿ ಸಾಕ್ಷಾತ್ ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮಿಗಳವರ ಭವ್ಯ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಆ ಪುತ್ಥಳಿಗೆ ಭಕ್ತಿಭಾವದಿಂದ ಪುಷ್ಪಾರ್ಚನೆ ಮಾಡಿಸುವುದರ ಮುಖಾಂತರ ನಮ್ಮ ಈ ದಿನದ “ವಚನ ಗ್ರಾಮ” ಕಾರ್ಯಕ್ರಮಕ್ಕೆ ಅತ್ಯಂತ ವಿಶೇಷ ಹಾಗೂ ಮಂಗಲಕರವಾದ ಚಾಲನೆಯನ್ನು ನೀಡಲಾಯಿತು.

ಆತ್ಮೀಯ ಸ್ವಾಗತ ಮತ್ತು ಕಾಯಕದ ಉತ್ಸಾಹ
ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಶ್ರೀ ಶಂಕರಪ್ಪನವರು ಪ್ರೀತಿಯ ನಗುಮುಖದಿಂದ ನಮ್ಮನ್ನು ಸ್ವಾಗತಿಸಿದರು. ಈ ಮಹತ್ಕಾರ್ಯಕ್ಕೆ ಬೂದಂಬಳ್ಳಿ ಗ್ರಾಮದ ಗೌಡಿಕೆ ಮಹಾದೇವಪ್ಪನವರು ತುಂಬು ಹೃದಯದಿಂದ, ಅತ್ಯಂತ ಅರ್ಥಪೂರ್ಣವಾಗಿ ಸಹಕರಿಸಿ ನಮಗೆ ಬೆನ್ನೆಲುಬಾಗಿ ನಿಂತರು. ಶಂಕರಪ್ಪನವರು ನಮ್ಮನ್ನು ಮತ್ತು ಶಿವಪ್ರಸಾದ್ ಅವರನ್ನು ತಮ್ಮ ಮನೆಗೆ ಕರೆದೊಯ್ದು, ಬಿಸಿ ಬಿಸಿ ಚಹಾ ಮತ್ತು ಬಿಸ್ಕತ್ ನೀಡಿ ಸತ್ಕರಿಸಿದರು.
ಆತಿಥ್ಯ ಮುಗಿಸಿ ನೇರವಾಗಿ ಕಾರ್ಯಕ್ರಮದ ವೇದಿಕೆಗೆ ಧಾವಿಸಿದೆವು. ಧ್ವಜಸ್ತಂಭ, ಬ್ಯಾನರ್ ಹಾಗೂ ಕಾರ್ಯಕ್ರಮದ ಪರಿಕರಗಳನ್ನು ಅಚ್ಚುಕಟ್ಟಾಗಿ ಜೋಡಿಸಿದೆವು. ತದನಂತರ ಆರಂಭವಾಗಿದ್ದೇ ಅಸಲಿ ಕಾಯಕ!
ಮನೆ ಮನೆಗೆ ವಚನದ ಬೆಳಕು
ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಅರಳಿ ನಾಗರಾಜ ಗಂಗಾವತಿ ಸರ್ ಅವರ ಉತ್ಸಾಹ ನಮಗೆಲ್ಲ ಸ್ಪೂರ್ತಿಯಾಗಿತ್ತು. ಆ ವಯಸ್ಸಿನಲ್ಲೂ ಅವರು ನಮ್ಮೊಂದಿಗೆ ಹೆಜ್ಜೆ ಹಾಕಿ, ಸುಮಾರು ನೂರು ಮನೆಗಳಿಗೆ ಸ್ವತಃ ನಡೆದು ಬಂದು ವಚನ ಪುಸ್ತಕಗಳನ್ನು ವಿತರಿಸಿದರು. “ವಚನಗಳನ್ನು ಓದಿ, ಜೀವನದಲ್ಲಿ ಅಳವಡಿಸಿಕೊಳ್ಳಿ” ಎಂದು ಪ್ರತಿಯೊಬ್ಬರಿಗೂ ಪ್ರೀತಿಯಿಂದ ಕರೆ ನೀಡುತ್ತಾ, ರಾತ್ರಿ 8 ಗಂಟೆಯವರೆಗೂ ಮನೆಮನೆಗೆ ವಚನ ತಲುಪಿಸುವ ಕಾಯಕ ನಡೆಯಿತು.

ಅರ್ಥಪೂರ್ಣ ವೇದಿಕೆ ಕಾರ್ಯಕ್ರಮ
ರಾತ್ರಿ 8 ಗಂಟೆಗೆ ಸರಿಯಾಗಿ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ಗೌರವಾನ್ವಿತ ನ್ಯಾಯಾಧೀಶರು ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾರ್ಮಿಕ ನುಡಿಗಳನ್ನಾಡಿದರು. ತದನಂತರ ಶಿವಪ್ರಸಾದ್ ಸರ್ ತಮ್ಮ ದಾಸೋಹದ ಚಿಂತನೆಗಳನ್ನು ಹಂಚಿಕೊಂಡರು. ‘ಕೆರೆಗಳ ಜನಕ’ ಎಂದೇ ಪ್ರಸಿದ್ಧರಾದ ಕಾಳನಹುಂಡಿ ಗುರುಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರೇರಣಾದಾಯಕ ಮಾತುಗಳನ್ನಾಡಿದರು. ಶಂಕರಪ್ಪನವರು ಎಲ್ಲರನ್ನೂ ಸ್ವಾಗತಿಸಿ, ಸನ್ಮಾನಿಸಿದರು. ಇಡೀ ಕಾರ್ಯಕ್ರಮವನ್ನು ನನ್ನ ಧರ್ಮಪತ್ನಿ ರೂಪಾ ಕುಮಾರಸ್ವಾಮಿ ಅತ್ಯಂತ ಮನೋಜ್ಞವಾಗಿ ನಿರೂಪಿಸಿದರೆ, ಕೊನೆಯಲ್ಲಿ ನಾನು ಅಧ್ಯಕ್ಷೀಯ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆ.
ಶರಣರ ಶೈಲಿಯ ಪ್ರಸಾದ ಸ್ವೀಕಾರ
ಕಾರ್ಯಕ್ರಮ ಮುಗಿಯುವಾಗ ರಾತ್ರಿ 10 ಗಂಟೆಯಾಗಿತ್ತು. ಹೊಟ್ಟೆಯಲ್ಲಿ ಹಸಿವಿನ ಬೆಂಕಿ ಚುರುಗುಟ್ಟುತ್ತಿತ್ತು. ಶಂಕರಪ್ಪನವರ ನೂತನ ಗೃಹದ ಕಡೆಗೆ ನಮ್ಮ ಪಯಣ ಸಾಗಿತು. ಅಲ್ಲಿ ನಮಗಾಗಿ ಬಿಸಿಬಿಸಿ ಒಬ್ಬಟ್ಟಿನ ಹಬ್ಬದೂಟ ಕಾಯುತ್ತಿತ್ತು! ತಟ್ಟೆಯಲ್ಲಿ ಒಬ್ಬಟ್ಟು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ ಸೇರಿದಂತೆ ವಿವಿಧ ಭಕ್ಷ್ಯ ಭೋಜನಗಳನ್ನು ಬಡಿಸಲಾಯಿತು.

ನಾವು ಶರಣರ ಸಂಪ್ರದಾಯದಂತೆ ಭಸ್ಮವನ್ನು ಧರಿಸಿ, ಬಸವಣ್ಣನವರ ಪವಿತ್ರ ವಚನವನ್ನು ಸ್ಮರಿಸಿದೆವು:
ಮೌನದಲ್ಲುಂಬುದು ಆಚಾರವಲ್ಲ,
ಲಿಂಗಾರ್ಪಿತ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವಶರಣೆನುತಿರಬೇಕು.
ಕರಣ ವೃತ್ತಿಗಳಡಗುವುವು ಕೂಡಲ ಸಂಗನ ನೆನೆವುತ್ತ ಉಂಡಡೆ.
ಈ ವಚನವನ್ನು ಭಕ್ತಿಭಾವದಿಂದ ಪಠಿಸಿ, ಪ್ರಸಾದವನ್ನು ಸ್ವೀಕರಿಸಿದೆವು. ಹಸಿವಾಗಿದ್ದ ಹೊಟ್ಟೆಗೆ ಆ ಪ್ರಸಾದ ಅಮೃತದಂತಿತ್ತು.
ಮರಳಿ ಗೂಡಿಗೆ..
ರಾತ್ರಿ 10:30ಕ್ಕೆ ಪ್ರಸಾದ ಮುಗಿಸಿ, ಅನ್ನದಾಸೋಹ ಮಾಡಿದ ಅನ್ನದಾತ ಶಂಕರಣ್ಣನವರಿಗೆ ಹಾಗೂ ಎಲ್ಲಾ ರೀತಿಯಲ್ಲೂ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಗೌಡಿಕೆ ಮಹಾದೇವಪ್ಪನವರಿಗೆ ಮತ್ತು ಇಡೀ ಗ್ರಾಮಸ್ಥರಿಗೆ ಮನತುಂಬಿ ಹರಸಿದೆವು. “ಬೂದಂಬಳ್ಳಿ ಗ್ರಾಮದಲ್ಲಿ ಬಸವ ಬೆಳಕು ಸದಾ ಬೆಳಗಲಿ” ಎಂದು ಹಾರೈಸಿ, ಅಲ್ಲಿಂದ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.
ಇದನ್ನೂ ಓದಿ… ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠ ಮತ್ತು ಗಜರಾಜಗಿರಿಗೊಂದು ಆಧ್ಯಾತ್ಮಿಕ ಪಯಣ
ಮಧ್ಯರಾತ್ರಿ 12:05 ಕ್ಕೆ ನಮ್ಮ ಶರಣು ವಿಶ್ವವಚನ ಫೌಂಡೇಷನ್‌ನ ಕುಟೀರಕ್ಕೆ (ಮನೆಗೆ) ಬಂದು ತಲುಪಿದೆವು. ನ್ಯಾಯಾಧೀಶರೂ ನಮ್ಮ ಮನೆಯಲ್ಲೇ ವಿಶ್ರಾಂತಿ ಪಡೆದರು. ಕಣ್ಣು ಮುಚ್ಚಿದರೂ ಪೂಜ್ಯ ಶಿವಕುಮಾರ ಸ್ವಾಮೀಜಿಯವರ ದಿವ್ಯ ಪುತ್ಥಳಿ, ಬೂದಂಬಳ್ಳಿಯ ಹಸಿರು ದಾರಿ, ಜನರ ಭಕ್ತಿ, ಹಳಕಟ್ಟಿಯವರ ಜಯಂತಿಯ ದಿನದಂದು ವಚನ ಹಂಚಿದ ಆ ಮಹದಾನಂದ ಕಣ್ಣಮುಂದೆಯೇ ತೇಲಾಡುತ್ತಿತ್ತು. ಸಾರ್ಥಕತೆಯ ಮುದ ನೀಡಿದ, ನೆನಪಿನ ಬುತ್ತಿಯಲ್ಲಿ ಸದಾ ಹಸಿರಾಗಿ ಉಳಿಯುವಂತಹ ಅದ್ಭುತ ಶಿವಕಾಯಕದ ಪಯಣವಿದು!

ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠ ಮತ್ತು ಗಜರಾಜಗಿರಿಗೊಂದು ಆಧ್ಯಾತ್ಮಿಕ ಪಯಣ







