ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಮಾರಮ್ಮ ಮತ್ತು ಬಸವೇಶ್ವರ ದೇವರ ಓಕುಳಿ ಹಬ್ಬವನ್ನು ಕಳೆದ ವರ್ಷಗಳಿಗಿಂತ ಈ ಬಾರಿ ಅದ್ದೂರಿಯಾಗಿ ಆಚರಿಸಲಾಯಿತು. ಎಲ್ಲರೂ ಹಬ್ಬದ ಸಂಭ್ರಮದಲ್ಲಿ ತೇಲಿ ಖುಷಿಪಟ್ಟರು.

ಹಬ್ಬದ ಅಂಗವಾಗಿ ಬಸವೇಶ್ವರ ಮೂರ್ತಿಯನ್ನು ಸೋಮವಾರ ಮಧ್ಯಾಹ್ನ ನದಿಯಲ್ಲಿ ಮಜ್ಜನ ಮಾಡಿಸಿ ಗ್ರಾಮದ ದೇವಾಲಯದ ಆವರಣದ ಕುರ್ಜಿನಲ್ಲಿ ಕೂರಿಸಿ ಪೂಜೆ ಮಾಡಲಾಯಿತು. ನಂತರ ನೀರಿನ ಕೊಳಕ್ಕೆ ಪೂಜೆ ಸಲ್ಲಿಸಿ ನೀರಿನ ಓಕುಳಿಗೆ ಚಾಲನೆ ನೀಡಿದರು.

ಗ್ರಾಮದ ಯುವಕರು ಮಕ್ಕಳು ಬಣ್ಣ ಎರಚಿ ನೀರು ಎರಚಾಡಿ ಕೊಂಡು ಸಂಭ್ರಮಿಸಿದರು. ಮಾರಗಾಲು ಕುಣಿತ, ಪಾಳೇಗಾರಿಕೆ, ಕೀಲು ಕುದುರೆ, ಹುಲಿ ವೇಷಧಾರಿ ಕುಣಿತ ವಿವಿಧ ಜನಪದ ಗ್ರಾಮೀಣ ಕಲೆಗಳನ್ನು ವಿಭಿನ್ನವಾಗಿ ಪ್ರದರ್ಶಿಸಲಾಯಿತು. ರಾತ್ರಿ ದೇವಸ್ಥಾನದ ಆವರಣದಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಮಂಗಳವಾರ ಗ್ರಾಮದ ಬಸವೇಶ್ವರ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಉಡುಪಿಯಿಂದ ಬಂದ 25ಕ್ಕೂ ಹೆಚ್ಚು ಕಲಾತಂಡದ ಜನರು ಚಂಡೆ ಬಾರಿಸಿ, ಕರಡಿ ಕುಣಿತ, ಕೀಲುಕುಣಿತ, ಚಿಕ್ಕ ಮಕ್ಕಳನ್ನು ಆಕರ್ಷಿಸುವ ಗೊಂಬೆಗಳ ಮೂಲಕ ನಾಡಿನ ಗ್ರಾಮೀಣ ಸಂಸ್ಕೃತಿಯನ್ನು ತುಂಬಿಸುವ ಕಲಾ ಪ್ರಕಾರಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಿಗೆ ಉತ್ತಮ ಸಂದೇಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದವು.

ಇದೇ ವೇಳೆ ಗ್ರಾಮದ ತಮ್ಮ, ತಮ್ಮ ಮನೆಯ ಹತ್ತಿರ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದರು. ಸಂಜೆ ಮಾರಮ್ಮ ದೇವಿಗೆ ಊರಿನ ಹೆಣ್ಣು ಮಕ್ಕಳು, ಸೊಸೆಯಂದಿರು, ತಾಯಂದಿರು ಪ್ರಸಾದ ಸಲ್ಲಿಸಿ ತಂಪು ತೋರಿಸಿದರು. ನಂತರ ದೇವಿಗೆ ಕುರಿ ಕೋಳಿಯನ್ನು ಬಲಿ ಕೊಡುವ ಮೂಲಕ ಹಬ್ಬವು ಅಂತ್ಯಗೊಂಡಿತು.

ಇನ್ನು ಹಬ್ಬದ ಕುರಿತಂತೆ ಮಾತನಾಡಿದ ಹೊಸೂರು ಗ್ರಾಮಸ್ಥರಾದ ಎಚ್ ಕೆ ಹರೀಶ್ ರವರು ನಮ್ಮ ಪೂರ್ವಿಕರ ಕಾಲದಿಂದ ಹೊಸೂರು ಗ್ರಾಮದ ಓಕುಳಿ ಹಬ್ಬದ ಪ್ರಯುಕ್ತ ಬಸವೇಶ್ವರ ಹಾಗೂ ಮಾರಮ್ಮ ದೇವಿಯ ಓಕುಳಿಯ ಹಬ್ಬವನ್ನು ಎಲ್ಲರೂ ಒಗ್ಗೂಡಿ ಸಾಮರಸ್ಯದಿಂದ ವಿಜೃಂಭಣೆಯಿಂದ ಆಚರಣೆ ಮಾಡುತ್ತಾ ಬಂದಿದ್ದೇವೆ. ಗ್ರಾಮದ ಯುವಕರು ವಿವಿಧ ಕಲೆಗಳನ್ನು ಪ್ರದರ್ಶಿಸುವ ಮೂಲಕ ಬಸವೇಶ್ವರ ಜನಪದ ಸೊಗಡನ್ನು ಜೀವಂತವಾಗಿ ಇರಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.








