LatestMysore

ಕೆ.ಆರ್.ನಗರದಲ್ಲಿ ಜನರ ಆಕ್ರೋಶಕ್ಕೆ ಕಾರಣವಾದ ಎರಡು ದೃಶ್ಯಗಳು… ಏನಿದು?

*ದುಸ್ಥಿತಿಯಲ್ಲಿ ಡಾಂಬರ್ ಇಲ್ಲದ ತಾಪಂ ಕಚೇರಿ ಆವರಣ.. *ಸುಸ್ಥಿತಿಯಲ್ಲಿದ್ದರೂ ತಾಲೂಕು ಕಚೇರಿಯಲ್ಲಿ ಕಾಮಗಾರಿ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಒಂದೆಡೆ ಹಲವು ವರ್ಷಗಳಿಂದ ಡಾಂಬರ್ ಕಾಣದ ಸರಕಾರಿ ಕಚೇರಿ ಆವರಣ.. ಮತ್ತೊಂದೆಡೆ ಗಟ್ಟಿಮುಟ್ಟಾದ ಸೀಮೆಂಟ್ ಪದರ ಕಿತ್ತು ಮತ್ತೆ ಸೀಮೆಂಟ್‌ಹಾಕಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗದ ಹುನ್ನಾರ..  ಇದು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮತ್ತು ತಾಲೂಕು ಕಚೇರಿಯ ಮುಂಭಾಗದ ಆವರಣದ ಸ್ಥಿತಿಗತಿ…

ಇವೆರಡು ಚಿತ್ರಣಗಳು ಸಂಬಂಧಪಟ್ಟ ಅಧಿಕಾರಿಗಳನಿರ್ಲಕ್ಷ್ಯ ಹಾಗೂ ಸರಕಾರಿ ಹಣ ಪೋಲಾಗುತ್ತಿರುವುದಕ್ಕೆ ಹಿಡಿದ ಕನ್ನಡಿಯಾಗಿದ್ದು ಅಧಿಕಾರಿಗಳ ಇಂತಹ ವರ್ತನೆಯಿಂದ ಒಂದೆಡೆ ಕಿತ್ತು ಬಂದ ಕಲ್ಲಿನ ರಸ್ತೆಯಲ್ಲಿ ಹಿಡಿಶಾಪ ಹಾಕಿಕೊಂಡು ಹೋಗಿ ಕಚೇರಿ ಬಾಗಿಲು ತಟ್ಟುವಂತಾಗಿದ್ದರೆ, ಮತ್ತೊಂದೆಡೆ ಚೆನ್ನಾಗಿ ಗಟ್ಟಿಮುಟ್ಟಾಗಿರುವ ಸೀಮೆಂಟ್‌ ಹಾಸನ್ನು ಕಿತ್ತು ಮತ್ತೆ ಸೀಮೆಂಟ್ ಹಾಕುವ ಪರಿಯನ್ನುಕಂಡು ಅಧಿಕಾರಿಗಳ ಹುಚ್ಚಾಟಕ್ಕೆ ಏನೆನ್ನಬೇಕು ಎಂದು ಮಾತನಾಡಿಕೊಂಡು ಕಚೇರಿ ಕಡೆಗೆ ಹೋಗುವಂತಾಗಿದೆ.

ಈ ಎರಡು ಕಚೇರಿಯ ಚಿತ್ರಣವು ತಾಲೂಕಿನ ಜನತೆಯ ಭಾರಿ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ. ತಾ.ಪಂ.ಮುಂದಿರುವ ರಸ್ತೆಯ ಡಾಂಬರ್‌ ಕಿತ್ತುಬಂದು ದಶಕಗಳೇ ಕಳೆದಿದ್ದು, ಮೇಲೆದ್ದು ಬಂದ ಕಲ್ಲುಗಳಿಂದ ಜನ ಎಡವಿ ಬೀಳುತ್ತಿದ್ದರೂ ಕಂಡು ಕಾಣದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿದ್ದಾರೆ.

ಇನ್ನು ಮೂಲ ಸೌಕರ್ಯವಾದ ಶೌಚಾಲಯವಿಲ್ಲದ ಕಾರಣ ಕಚೇರಿ ಸುತ್ತಲ ಕಾಂಪೌಂಡು ಬಯಲು ಶೌಚಾಲಯವಾಗಿ ಮಾರ್ಪಟ್ಟಿದ್ದು ಇಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಎಷ್ಟೆಒತ್ತಾಯ, ಮನವಿ ಮಾಡಿದರೂ  ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಸದ್ಯಕ್ಕೆ ಶೌಚಾಲಯ ನಿರ್ಮಾಣ, ರಸ್ತೆಯ ದುರಸ್ತಿ ಯಾವುದನ್ನೂ ಮಾಡುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ.

ಇನ್ನು ಈ ವ್ಯವಸ್ಥೆಗೆ ವ್ಯತಿರಿಕ್ತ ಎನಿಸುವಂತೆ ತಾಲೂಕು ಕಚೇರಿ ಆವರಣದಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವುದು ಸಾರ್ವಜನಿಕರ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ. ತಾ.ಪಂ.ಆವರಣದ ರಸ್ತೆ ದುರಸ್ತಿಗೆ ಹಣವಿಲ್ಲ ಎನ್ನುವ ಅಧಿಕಾರಿಗಳು, ತಾಲೂಕು ಕಚೇರಿಯ ಮುಂದೆ ಬಳಕೆ ಮಾಡದ ಶೌಚಾಲಯಕ್ಕೆ ಸೇರಿದಂತೆ ಕಟ್ಟಡ ನಿರ್ಮಾಣ ಮಾಡುತ್ತಿರುವುದು, ಉತ್ತಮವಾಗಿದ್ದ ಸೀಮೆಂಟ್‌ ಹಾಸನ್ನು ಕಿತ್ತು ಮತ್ತೆ ಸೀಮೆಂಟ್ ಹಾಕುತ್ತಿರುವುದು ಕಂಡು ಬರುತ್ತಿದೆ.

ಈ ಕಚೇರಿ ಸುತ್ತಲೂ ಈಗಲೂ ಸುಸ್ಥಿತಿಯಲ್ಲಿರುವ 12ಬೀದಿ ದೀಪಗಳಿದ್ದರೂ, ಸುತ್ತಲೂ ಬೆಳಕು ಚೆಲ್ಲದಿದ್ದರೂ ಲಕ್ಷಾಂತರ ರೂಪಾಯಿಗಳಲ್ಲಿ ಹೈಮಾಸ್ಕ್ ಅಳವಡಿಸಿರುವುದು ಸಾರ್ವಜನಿಕರ ಹಣ ದುಂದು ವೆಚ್ಚಮಾಡುವ ಹಾಗೂ ಸರಕಾರಿ ಹಣವನ್ನು ವೆಚ್ಚ ಮಾಡಿ ಬಿಲ್‌ ಬರೆಯುವ ಒಂದೇ ಉದ್ದೇಶವಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ.

ಇಡೀ ತಾಲೂಕಿನ ಜನತೆಗೆ ರಸ್ತೆ, ಮನೆ, ನೀರು, ಶೌಚಾಲಯ ನೀಡುವ ತಾ.ಪಂ.ಕಚೇರಿ ಆವರಣಕ್ಕೆ ಸೌಲಭ್ಯ ನೀಡಲು ಸರಕಾರದಲ್ಲಿ ಅನುದಾನಿಲ್ಲ, ಆದರೆ ತಾಲೂಕು ಕಚೇರಿಯಲ್ಲಿ ಎಲ್ಲವೂ ಇದ್ದು ಚೆನ್ನಾಗಿರುವುದನ್ನು ಕಿತ್ತು ನೂತನವಾಗಿ ನಿರ್ಮಾಣ ಮಾಡುವ ಕೆಲಸಕ್ಕೆಮಾತ್ರ  ಅನುದಾನ ಇದೆ ಎಂದರೆ ಹೇಗೆ ಎಂಬುದು ಜನ ಕೇಳುತ್ತಿರುವ ಪ್ರಶ್ನೆಯಾಗಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಎಲ್ಲವೂ ಇರುವ ತಾಲೂಕು ಕಚೇರಿಯಲ್ಲಿ ಚೆನ್ನಾಗಿರುವುದನ್ನು ಕಿತ್ತು ಬಿಲ್‌ ಮಾಡುವ ಉದ್ದೇಶದಿಂದ ಕಾಮಗಾರಿ ಮಾಡುವ ಬದಲು, ಏನು ಇಲ್ಲದ ತಾ.ಪಂ.ಕಛೇರಿಗೆ ಒಂದಷ್ಟು ಅನುದಾನ ನೀಡಿ ರಸ್ತೆ, ಶೌಚಾಲಯ, ವಾಹನನಿ ಲ್ದಾಣಗಳನ್ನು ನಿರ್ಮಾಣ ಮಾಡಿ ಜನತೆಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ತಹಸೀಲ್ದಾರ್  ಜಿ.ಸುರೇಂದ್ರಮೂರ್ತಿ ಅವರು, ತಾಲೂಕು ಕಚೇರಿಯ ದುರಸ್ತಿ ಮತ್ತು ಇತರೆ ಕಾಮಗಾರಿಗಾಗಿ ಸರಕಾರ 1ಕೋಟಿ 20 ಲಕ್ಷ ಅನುದಾನ ನೀಡಿದ್ದು ಜಿಲ್ಲಾಧಿಕಾರಿಗಳು ಮತ್ತು ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಕುಳಿತು ಕಾಮಗಾರಿಯ ರೂಪುರೇಷೆ ತಯಾರು ಮಾಡಿ ಅದರಂತೆ ಕಾಮಗಾರಿ ನಡೆಯುತ್ತಿದೆ ಎಂದಿದ್ದಾರೆ.

ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ವಿ.ಪಿ.ಕುಲದೀಪ್ ಮಾತನಾಡಿ ತಾ.ಪಂ.ಆವರಣ ಹದಗೆಟ್ಟು ಹಲವುವರ್ಷಗಳೇ ಆಗಿದ್ದು ಆವರಣದ ಡಾಂಬರೀಕರಣಕ್ಕಾಗಲೀ ಇತರೆ ಕಾಮಗಾರಿಗೆ ಯಾವುದೇ ಅನುದಾನ ಇಲ್ಲದ ಕಾರಣ ರಸ್ತೆಯಾಗಲೀ, ಶೌಚಾಲಯವಾಗಲೀ ದುರಸ್ತಿ ಮಾಡಲಾಗಿಲ್ಲ ಅನುದಾನ ಬರುತ್ತಿದ್ದಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇನ್ನು ಪಿ.ಗುರುಪ್ರಸಾದ್ ಎಂಬುವರು ಮಾತನಾಡಿ ಇಲಾಖೆ ಬೇರೆಯಾದರೂ ಸರಕಾರ ಒಂದೇ ಆಗಿರುವುದರಿಂದ ಚೆನ್ನಾಗಿರುವ ಕಾಮಗಾರಿಗಳನ್ನು ಕಿತ್ತು ಮತ್ತೆ ಮಾಡಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ಬದಲು ಏನೂ ಇಲ್ಲದೆ ಹದಗೆಟ್ಟಿರುವ ಕಚೇರಿ ಆವರಣದ ದುರಸ್ತಿಗೆ ಅನುದಾನ ಏಕೆ ನೀಡಬಾರದು? ಎಂದು ಪ್ರಶ್ನಿಸಿರುವ ಅವರು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೆಡೆ ಕುಳಿತು ಚರ್ಚಿಸಿ ತಾ.ಪಂ.ಕಛೇರಿ ಆವರಣಕ್ಕೆ ಮೂಲಭೂತಸೌಲಭ್ಯ ನೀಡಲು ಮುಂದಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

admin
the authoradmin

Leave a Reply

Translate to any language you want