“ಡಾ ಸಿ.ಪಿ.ಕೆ”- (ಡಾ ಸಿ. ಪಿ. ಕೃಷ್ಣಕುಮಾರ್) ಎಂಬ ಮೂರಕ್ಷರ ಕನ್ನಡ ಸಾರಸ್ವತ ಲೋಕದಲ್ಲಿ ಒಂದು ರೀತಿಯಲ್ಲಿ ಮೋಡಿ ಮಾಡಿದೆ ಎಂದು ಹೇಳಬೇಕು!. ಇವರ ಲೇಖನಿಯಿಂದ ಇದುವರೆವಿಗೂ ಹರಿದು ಬಂದಿರುವ ಸಾಹಿತ್ಯ ಸಾರ ನಿಜಕ್ಕೂ ಅರ್ಥಪೂರ್ಣ, ಮೌಲಿಕ. ಇಂತಹ ಹಿರಿಯ ಸಾಹಿತಿಯೊಂದಿಗಿನ ಒಡನಾಟವನ್ನು ಬರಹಗಾರರಾದ ಕಾಳಿಹುಂಡಿ ಶಿವಕುಮಾರ್ ಅವರು ಇಲ್ಲಿ ಮೆಲುಕು ಹಾಕಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ
ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡರ ಮಗ ಕೃಷ್ಣಕುಮಾರ್ ಅವರು 1939 ಎಪ್ರಿಲ್ 8 ರಂದು ಜನಿಸಿದರು. ತಾಯಿ ಚಿಕ್ಕಮ್ಮ; ತಂದೆ ಪುಟ್ಟೇಗೌಡರು. ಇವರು ಮೋಜಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಸಿ.ಪಿ.ಕೆ. 9 ತಿಂಗಳ ಕೂಸಿದ್ದಾಗ ತಾಯಿ ತೀರಿಕೊಂಡರು. ತಾಯಿಯ ಪ್ರೀತಿಯನ್ನು ಕಳೆದುಕೊಂಡ ಸಿಪಿಕೆಯವರು ಬೇರೆಯವರ ಆಶ್ರಯದಲ್ಲಿ ಬೆಳೆದರು.

ಸಿ. ಪಿ. ಕೃಷ್ಣಕುಮಾರ್ ರವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಇಂದಿಗೂ ಸಹ ತಮ್ಮ ಎಂದಿನ ಚಿಕ್ಕ-ಚೊಕ್ಕ ಅರ್ಥಪೂರ್ಣ, ಜೊತೆಗೆ ಸಮಗ್ರವನ್ನು ಸಾರುವ ಇವರ ಲೇಖನಗಳನ್ನು, ಕವನಗಳನ್ನು, ಒಟ್ಟಾರೆ ಎಲ್ಲಾ ಸಾಹಿತ್ಯವನ್ನು ಓದುವುದೇ ಒಂದು ರೀತಿಯ ಸೊಗಸು. ಜೊತೆಗೆ ರಸಪಾಕ!. ಇವರು ಬರೆದಿರುವ ಪುಸ್ತಕಗಳು ಸಮಗ್ರ ಮಾಹಿತಿಗಳ ಸಂಗ್ರಹ. ಅದರಲ್ಲೂ “ಚಿಂತನ ಚಿಂತಾಮಣಿ”- 793 ಚಿಂತನ ಬರಹಗಳು ಈ ಪುಸ್ತಕದಲ್ಲಿ ಅಡಗಿವೆ.
ಇದು ಮತ್ತಷ್ಟು ಹೊಸ ರೂಪ ಪಡೆದು ಹೊಸ ಮಾಲಿಕೆಯಾಗಿ ಓದುಗರ ಕೈ ಸೇರಿದೆ. ಅವನ್ನು ಓದುತ್ತಾ ಹೋದರೆ ಬದುಕಿನ ವಿವಿಧ ಮಜಲುಗಳ ಬಗ್ಗೆ….. ತಾವು ಕಂಡ, ಜೀವನ ಸತ್ಯ ದರ್ಶನ….. ಅನುಭವಗಳ ರಸಮಾಲೆ….. ಜೊತೆಗೆ ಅವರು ತಮ್ಮ ಲೇಖನಗಳಿಗೆ ಬಳಸುವ ಉಪಮಾನ, ಉಪಮೇಯಗಳು….. ನವಿರಾಗಿ ಓದಿಸಿಕೊಂಡು ಹೋಗುವ ಸಾಮರ್ಥ್ಯ……. ಸರಳ, ಸುಂದರ, ಅರ್ಥಪೂರ್ಣ, ಮೌಲಿಕ ಬರಹಗಳು……. ಮತ್ತೆ ಮತ್ತೆ ಓದಬೇಕೆನಿಸುವ ಆಸಕ್ತಿ ಮೂಡಿಸುವ ಸಾಹಿತ್ಯ ಸುಧೆ…… ಇದೇ ರೀತಿ ವಿಭಿನ್ನ ಅಭಿಪ್ರಾಯಗಳು ಓದಿದ ಪ್ರತಿಯೊಬ್ಬರಿಗೂ ಮೂಡುತ್ತದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆಕಾಶವಾಣಿಯಲ್ಲಿ ಇವರ ಸಾಕಷ್ಟು ಚಿಂತನಗಳು ಪ್ರಸಾರವಾಗಿವೆ. ಅವುಗಳೆಲ್ಲವೂ ಕೂಡ ಲೇಖನ ರೂಪದಲ್ಲಿ ಓದುಗರಿಗೆ ಮತ್ತಷ್ಟು ಸಾಹಿತ್ಯ ಸುಧೆ ಹರಿಸಿದವು. ಆಕಾಶವಾಣಿಯಲ್ಲಿ ಇವರ ಚರ್ಚೆ, ಸಂದರ್ಶನ, ಸಂವಾದ ಎಲ್ಲಾ ಕಾರ್ಯಕ್ರಮಗಳು ಪ್ರಸಾರವಾಗಿವೆ. ಅವರ ಸರಳ ಸುಂದರ ಮಾತುಗಳನ್ನು ಕೇಳುವುದೇ ಒಂದು ರೀತಿಯಲ್ಲಿ ಸೊಗಸು. ಅವರಿಗೆ ಮಾತನಾಡುವ ಕಲೆ ಸಿದ್ದಿಸಿದೆ.
ಜೊತೆಗೆ ಒಂದು ಟಿಪ್ಪಣಿ ಹಾಕಿಕೊಳ್ಳುತ್ತಾರೆ. ಅದರಂತೆ ವಿಷಯಾಂತರ ಮಾಡದೆ ಆ ದಿನದ ಕಾರ್ಯಕ್ರಮದ ಉದ್ದೇಶ, ಸಮಯ ಪಾಲನೆ ಎಲ್ಲವೂ ಒಂದು ಶಿಸ್ತು. ಸಮಯವನ್ನ ಮೀರದೆ ತಮ್ಮ ಅವಧಿಯ ಕಾಲಾವಕಾಶದಲ್ಲಿ ಏನನ್ನು ಹೇಳಬೇಕೋ ಅದನ್ನೆಲ್ಲಾ ಅಂಕಿ ಅಂಶಗಳ ಸಮೇತ ಹೇಳಿಬಿಡುತ್ತಾರೆ.

ಇನ್ನು ಒಂದು ಗಮನಿಸಬೇಕಾದ ಅಂಶವೆಂದರೆ…… ಅವರು ಹಲವು ಉತ್ಕೃಷ್ಟ ಗ್ರಂಥಗಳನ್ನು ಬರೆದಿದ್ದರೂ ಕೂಡ, ಅವತ್ತಿನಿಂದ ಇವತ್ತಿನ ತಮ್ಮ ಇಳಿ ವಯಸ್ಸಿನವರೆಗೂ ಕೂಡ ಪತ್ರಿಕೆಗಳಿಗೆ ಬರೆಯುವುದನ್ನು ಮಾತ್ರ ನಿಲ್ಲಿಸಿಲ್ಲ!. ಪತ್ರಿಕೆಗಳ ಹಲವು ಕಾಲಂ ಗಳಲ್ಲಿ ಅವರ ಹನಿಗವಿತೆ, ಚುಟುಕು, ಲೇಖನ, ಪ್ರಚಲಿತ ವಿದ್ಯಾಮಾನಗಳಿಗೆ ಸಂಬಂಧಿಸಿದಂತ ಚಿಕ್ಕ ವಿಮರ್ಶಾ ಲೇಖನ ಆಗಿರಬಹುದು…..
ದಿನಂಪ್ರತಿ ಪತ್ರಿಕೆಗಳಿಗೆ ಇವರು ಬರೆಯುವ ಹವ್ಯಾಸ ನಿಜಕ್ಕೂ ಯುವಕರನ್ನು ನಾಚಿಸುತ್ತಿದೆ!. ಅದರಲ್ಲೂ ಯುಗಾದಿ, ದೀಪಾವಳಿ, ಹೊಸ ವರ್ಷದ ಸಂಚಿಕೆಗಳಲ್ಲಿ ಇವರ ಕವನ, ಚುಟುಕು, ಹನಿ ಗವಿತೆಗಳು ಇದ್ದೇ ಇರುತ್ತಿದ್ದವು. ಈಗಲೂ ಇವೆ.
ಪ್ರಚಲಿತ ವಿಷಯಗಳಿಗೆ ತಕ್ಕಂತೆ ತಮ್ಮದೇ ಆದ ಶೈಲಿಯಲ್ಲಿ ಪದಗಳನ್ನು ಸೇರಿಸಿ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸುವ ರೀತಿ ನಿಜಕ್ಕೂ ಅದ್ಭುತ!. “ಒಬ್ಬ ಕವಿಯಾದವನು, ಲೇಖಕನಾದವನು ಒಂದಿಷ್ಟು ಪುಸ್ತಕಗಳನ್ನು ಬರೆದು, ಕೆಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಸಾಲದು” ಎಂಬ ಮಾತಿದೆ. ಇದಕ್ಕೆ ವಿರುದ್ಧವಾಗಿ ನಿಲ್ಲುವವರು ಸಿ.ಪಿ.ಕೆ. ಅನಿಸುತ್ತದೆ!.
ಪ್ರಚಲಿತ ಸಮಸ್ಯೆಗಳಿಗೆ ಕವಿಯಾದವನು, ಲೇಖಕನಾದವನು ಸ್ಪಂದಿಸುವ ರೀತಿಯಲ್ಲಿ ಆಗಬೇಕು. ಸಿ ಪಿ ಕೆ ರವರು ದಿನನಿತ್ಯದ ಸಾಮಾಜಿಕ ಘಟನೆಗಳನ್ನು ತಮ್ಮ ಲೇಖನಿಯ ಮೂಲಕ ಸ್ಪಂದಿಸುವುದರಲ್ಲೀ ಒಂದು ರೀತಿಯಲ್ಲಿ ಇವರು ಸಿದ್ಧಹಸ್ತರು. ರಾಜ್ಯದ ಎಲ್ಲಾ ದಿನ, ವಾರ, ಮಾಸ ಪತ್ರಿಕೆಗಳು ಅಲ್ಲದೇ ಸ್ಥಳೀಯ ಪತ್ರಿಕೆಗಳಲ್ಲಿ ಏನಾದರೊಂದು ಬರಹ ಇದ್ದೇ ಇರುತ್ತದೆ. ತಮ್ಮ ಬರಹದಂತೆ ಭಾಷಣ ಕೂಡಾ ಅರ್ಥ ಪೂರ್ಣವಾಗಿರುತ್ತದೆ.

ಬಾಲ್ಯದಿಂದಲೂ ಸಿ.ಪಿ.ಕೆ. ಎಂದರೆ ನನಗೆ ತುಂಬಾ ಅಚ್ಚುಮೆಚ್ಚು. ನಾನು ಪ್ರೌಢಾವಸ್ಥೆಗೆ ಬಂದಾಗ ನನಗಿನ್ನೂ ನೆನಪಿದೆ…. ಪತ್ರಿಕೆಗಳಲ್ಲಿ ಇವರ ವಿಚಾರಪೂರ್ಣ ಬರಹಗಳನ್ನು ಓದಿ ತುಂಬಾ ಸ್ಪೂರ್ತಿ ಗೊಳ್ಳುತ್ತಿದ್ದೆ. “ಮೈಸೂರು ಮಿತ್ರ” ದಿನ ಪತ್ರಿಕೆಯಲ್ಲಿ ಇವರ ವಿಳಾಸ ಪ್ರಕಟವಾಗಿತ್ತು. ನಾನು ತಕ್ಷಣ ಅವರಿಗೆ ಒಂದು ಪತ್ರ ಬರೆದು ಸುಮ್ಮನಾದೆ.
ವಾರದೊಳಗೆ ನನ್ನ ಪತ್ರಕ್ಕೆ ಪ್ರತಿಸ್ಪಂದನೆ ಬಂತು!. ನಿಜಕ್ಕೂ ಅಚ್ಚರಿಯಾಯಿತು. ಸಾಹಿತಿಗಳು ಸಾಮಾನ್ಯರ ಪ್ರತಿಕ್ರಿಯೆಗೆ ಸ್ಪಂದಿಸುವುದು ಇವರ ದೊಡ್ಡ ಗುಣ. ಪತ್ರದಲ್ಲಿ ಚಿಕ್ಕ ಸಾಲುಗಳು ಗಮನ ಸೆಳೆದವು…..”ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮ್ಮ ಸಾಹಿತ್ಯ ಕೃಷಿ ಉಜ್ವಲವಾಗಲಿ…” ಶುಭಾಶಯಗಳೊಂದಿಗೆ ಎಂದು ಆಶೀರ್ವದಿಸಿದ್ದರು.
ಆ ಪತ್ರವನ್ನು ನಾನು ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ನಂತರ ಅವರನ್ನು ನೋಡಬೇಕೆಂಬ ಕುತೂಹಲ ಒಂದಲ್ಲ ಒಂದು ರೀತಿಯಲ್ಲಿ ನನಗೆ ನಿರಂತರವಾಗಿ ಕಾಡುತ್ತಲೇ ಇತ್ತು. ಸಭೆ- ಸಮಾರಂಭಗಳಲ್ಲಿ ಮಾತ್ರ ಅವರನ್ನು ದೂರದಿಂದ ನೋಡಿ ಯಾವಾಗಲೂ ಒಂದು ಬಾರಿ ಫೋಟೋ ತೆಗೆಸಿಕೊಂಡಿದ್ದರು ನೆನಪು.
ನಂತರದ ದಿನಗಳಲ್ಲಿ ಪಿ.ಯು.ಸಿ ಓದುತ್ತಿರುವಾಗಲೇ ನನಗೆ ನನ್ನ ತಂದೆಯ ಅನುಕಂಪ ಆಧಾರಿತ ಸರ್ಕಾರಿ ಕೆಲಸ ಸಿಕ್ಕಿದ್ದರಿಂದ, ಪಿಯುಸಿ ಮುಗಿದ ನಂತರ ನಾನು ಮಹಾರಾಜ ಸಂಜೆ ಕಾಲೇಜಿಗೆ ಪದವಿ ತರಗತಿಗಾಗಿ ಸೇರಿಕೊಂಡೆ. ಆದರೆ ಆರು ತಿಂಗಳು ಮಾತ್ರ ಹೋದೆ!. ನಂತರ ಪೂರ್ತಿ ಓದಲಾಗಲಿಲ್ಲ. ಸಾಹಿತ್ಯದ ಆಸಕ್ತಿ ಇದ್ದುದರಿಂದ, ಕೆಲಸವು ಕೂಡ ಸಿಕ್ಕಿದ್ದರಿಂದ ಪೂರ್ತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡೆ.

ನಂತರದ ದಿನಗಳಲ್ಲಿ ಪ್ರೊ ಕೆ. ಭೈರವಮೂರ್ತಿ ಅವರು ಸಹ ಪರಿಚಯ ಆದರು. ನಂತರ ನಾನು ತ್ರಿವೇಣಿ ಪಾಂಡವಪುರ ಇವರ ಕವನ ಸಂಕಲನ ವನ್ನೂ ಪ್ರೋತ್ಸಾಹದ ದೃಷ್ಟಿಯಿಂದ ಹೊರ ತಂದಾಗ ಸಿ.ಪಿ.ಕೆ. ಯವರು … “ಮನದ ಮಿಡಿತ.”.. ಕವನ ಸಂಕಲನಕ್ಕೇ ಬೆನ್ನುಡಿ ಬರೆದು ಕೊಟ್ಟರು. ಉದ್ಯಾನ ನಗರಿ ಮೈಸೂರಿನಲ್ಲಿ ನಡೆಯುವ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸಿ ಪಿ ಕೆ ಮತ್ತು ಭೈರವಮೂರ್ತಿ ಜೋಡಿ ಕಾರ್ಯಕ್ರಮಗಳಿಗೆ ಒಂದು ರೀತಿಯಲ್ಲಿ ಮೆರಗು ನೀಡುತ್ತಿತ್ತು. ಸಿ ಪಿ ಕೆ ಅವರ ಮನೆಗೆ ಪ್ರೊಫೆಸರ್ ಕೆ ಭೈರವಮೂರ್ತಿ ಯವರ ಕಾರು…. ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧ ಇರುತ್ತಿತ್ತು. ಭೈರವಮೂರ್ತಿಗಳು ನಿಧನರಾದಾಗ ಸಿ ಪಿ ಕೆ ಅವರು ಭಾವುಕರಾಗಿದ್ದರು.
ರಾಷ್ಟ್ರ ಕವಿ ಕುವೆಂಪುರವರ ಶಿಷ್ಯ ಜವರೇಗೌಡ ರವರು…… ದೇ ಜವರೇಗೌಡರ ಶಿಷ್ಯ ಸಿ ಪಿ ಕೆ…… ಡಾ ಸಿ ಪಿ ಕೆ ರವರ ಶಿಷ್ಯ ಪ್ರೊ ಕೆ ಬೈರವಮೂರ್ತಿ ರವರು….. ಈ ರೀತಿ ಶಿಷ್ಯ ಪರಂಪರೆ ನಿರಂತರವಾಗಿ ಸಾಗುತ್ತಿತ್ತು. ಸಿ ಪಿ ಕೆ ಅವರು ಕೂಡ ಹಲವು ಸಾಹಿತ್ಯ ವಿದ್ಯಾರ್ಥಿಗಳನ್ನು…. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೊಂದಿರುವ ಎಲ್ಲರನ್ನೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರೋತ್ಸಾಹಿಸುವ ಗುಣವನ್ನು ಕೂಡ ಹೊಂದಿದ್ದಾರೆ. ಸಿ ಪಿ ಕೆ ಮತ್ತು ಭೈರವ ಮೂರ್ತಿರವರ ಒಡನಾಟ ಸಿಕ್ಕಿರುವುದು ನನ್ನ ಪಾಲಿಗೆ ಮರೆಯಲಾಗದ ವಿಷಯ. ನಂತರದಲ್ಲಿ ನನಗೆ ಆತ್ಮೀಯರಾದರು ಸಿ.ಪಿ.ಕೆ. ಯವರು.

ಇವರ ಮನೆಗೆ ನಾನು ಹಲವು ಬಾರಿ ನನ್ನ ಆತ್ಮೀಯ ಸ್ನೇಹಿತರಾದ ಕಣ್ಣೂರು. ವಿ. ಗೋವಿಂದಾಚಾರಿ ರವರೊಂದಿಗೆ ಹೋಗಿದ್ದೇವೆ. ಆ ಸಮಯಗಳಲ್ಲಿ ಹತ್ತು ನಿಮಿಷಗಳಲ್ಲಿ ಅವರೊಂದಿಗಿನ ಆತ್ಮೀಯ ಮಾತುಕತೆ, ಅವರ ಸರಳತನ, ಚಹಾಕೂಟ, ಎಲ್ಲವೂ ಸಹ ಇಂದಿಗೂ ಸಹ ಸವಿ-ಸವಿ-ನೆನಪು ಮೂಡಿಸುತ್ತದೆ. ಇದೆಲ್ಲಾ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈಗಲೂ ಸಮಯ ಸಿಕ್ಕಾಗ ಹೋಗುತ್ತೇವೆ.
ಹಲವು ಯುವ ಲೇಖಕರು/ ಕವಿಗಳ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿದ್ದಾರೆ. ಪಡುವಾರಹಳ್ಳಿ ಕಡೆಗೆ ಹೋದಾಗಲೆಲ್ಲ ಅವರನ್ನು ಕನಿಷ್ಠ ಐದು ನಿಮಿಷವಾದರೂ ಸಹ ಭೇಟಿ ಮಾಡುವುದು ಇಂದಿಗೂ ಸಹ ನಡೆಯುತ್ತಲೇ ಇದೆ. ಇನ್ನೂ ಅವರ ವ್ಯಕ್ತಿತ್ವದ ಬಗ್ಗೆ….. ಸಾಹಿತ್ಯದಲ್ಲಿನ ಶಿಸ್ತಿನ ಬಗ್ಗೆ….. ಹೇಳುವುದಾದರೆ ಅವರು ತುಂಬಾ ಸರಳ ವ್ಯಕ್ತಿ. ಎಂದಿಗೂ ಸಹ ಮೋಟರ್ ಗಾಡಿಯನ್ನು ಓಡಿಸುವುದಿಲ್ಲ. ಮೊಬೈಲನ್ನು ಬಳಸುವುದಿಲ್ಲ. ಇದು ವಿಶೇಷ!.
ಇದರ ಜೊತೆಗೆ ಸಾಹಿತ್ಯದ ಯಾವುದೇ ಕಾರ್ಯಕ್ರಮಕ್ಕೆ ನಾವು ಅವರನ್ನು ಕರೆಯಲು ಹೋದಾಗ ಅವರು ಮೊದಲು ಕ್ಯಾಲೆಂಡರ್ ನೋಡುತ್ತಾರೆ. ಏಕೆಂದರೆ ಯಾವುದಾದರೂ ಕಾರ್ಯಕ್ರಮ ಮೊದಲೇ ನಿಗದಿಯಾಗಿದೆಯೇ ಎಂದು ಪರಿಶೀಲಿಸಿ, ನಂತರ ಕಾರ್ಯಕ್ರಮಕ್ಕೆ ಬರುವುದನ್ನು ಒಪ್ಪಿಕೊಳ್ಳುತ್ತಾರೆ. ಜೊತೆಗೆ ಮುಂಚಿತವಾಗಿಯೇ ಕಾರ್ಯಕ್ರಮಕ್ಕೆ ಬಂದು ಅಲ್ಲಿ ಅವರಿಗೆ ನೀಡಿರುವ ಸಭಾ ಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಕೊನೆಯವರೆಗೂ ಸಹ ಇದ್ದು, ಯಶಸ್ವಿಗೊಳಿಸಿ, ಆಶೀರ್ವದಿಸಿ ಹೋಗುತ್ತಾರೆ. ಇದೊಂದು ಅವರ ದಿನಚರಿ. ಜೊತೆಗೆ ಅವರು ಬರೆದಂತೆ ಅವರ ಭಾಷಣಗಳು ಕೂಡ ಅರ್ಥಪೂರ್ಣ. ಮನಮೋಹಕ ಹಾಗೂ ಮಾಹಿತಿ ದಾಯಕವಾಗಿರುತ್ತವೆ.

ಅವರು ಪೂರ್ವ ತಯಾರಿಯೊಂದಿಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವ ಪೀಠಿಕೆ ಹಾಕಿಕೊಂಡು 15 ನಿಮಿಷ ದಿಂದ ಅರ್ಧಗಂಟೆಯೊಳಗೆ ಏನು ಹೇಳಬೇಕೋ ಎಲ್ಲವನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳಿ ಮುಗಿಸುತ್ತಾರೆ. ಅದು ವಿನೋದ ಚಟಾಕಿ ಯೊಂದಿಗೆ!. ಇದನ್ನ ಇವತ್ತಿನ ಪ್ರತಿಯೊಬ್ಬ ಭಾಷಣಕಾರರು ಕೂಡ ಇವರ ಮಾರ್ಗವನ್ನೇ ಅನುಸರಿಸಬೇಕು. ಲಘು ಧಾಟಿಯ ಭಾಷಣದ ರೀತಿಯಲ್ಲಿ ಒಂದು ಪ್ರೀತಿ ಇರುತ್ತದೆ. ವಿಷಯದ ಒಳ-ಹೊರಗು ಇರುತ್ತದೆ.
ನಾನು “ದೀಪ್ತಿ ಸಂಸ್ಕೃತಿಕ ವೇದಿಕೆ”ಯನ್ನು ಪ್ರಾರಂಭಿಸಲು ಪ್ರೇರಣೆಯಾದವರು ಪ್ರೊ. ಕೆ. ಭೈರವಮೂರ್ತಿಯವರು ಕೂಡಾ. ಇವರ ಜೊತೆಗೂಡಿ ಸಿ.ಪಿ.ಕೆ ಯವರು ನನ್ನ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು. ನನ್ನ ಸಂಸ್ಥೆ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸಾಗುತ್ತಿದೆ. ಜೊತೆಗೆ ಒಂದಲ್ಲ ಒಂದು ನನ್ನ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇವರು ಭಾಗವಹಿಸುತ್ತಾ ಬಂದಿದ್ದಾರೆ. ನನಗೆ ಇದೊಂದು ಹೆಮ್ಮೆಯ ಸಂಗತಿ. ಇವರ ಆತ್ಮೀಯ ಒಡನಾಟದ ಬಗ್ಗೆ ಬರೆಯಬೇಕೆಂದರೆ ನನಗೆ ಸಮಯ ಸಾಲದು!.
ಸಿ.ಪಿ.ಕೆ ಯವರು ತಮ್ಮ ವಿಚಾರಪೂರ್ಣ ಸಾಹಿತ್ಯವನ್ನು ಆಬಾಲವೃದ್ಧರಾದಿಯಾಗಿ ಬರೆದಿದ್ದಾರೆ. ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. ಅವರ ಇದುವರೆಗಿನ ಸಾಹಿತ್ಯ ಸೇವೆಗೆ ಮತ್ತಷ್ಟು ಪ್ರಶಸ್ತಿಗಳು ಬರಲಿ. ಬಂದರೆ ಕನ್ನಡಾಂಬೆಗೆ ಹೆಮ್ಮೆ. ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಾ ಸಾಹಿತ್ಯದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಇರುತ್ತಾರೆ.

ಇವರಿಗೆ ಮೂವರು ಹೆಣ್ಣು ಮಕ್ಕಳು. ಒಬ್ಬ ಮಗ. ಪಡುವರಹಳ್ಳಿ ಹೊಸದಾದ ಬಂಗಲೆಯಲ್ಲಿ ವಾಸವಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಅವರ ಮಗಳು ವೈದ್ಯೆ ನಿಧನರಾದರು. ಇತ್ತೀಚೆಗೆ ತಮ್ಮ ಪತ್ನಿ ಶ್ರೀಮತಿ ಶಾರದ ರವರನ್ನು ಕೂಡ ಕಳೆದುಕೊಂಡರು. ಈ ಸಂದರ್ಭದಲ್ಲಿ ನಾವು ಹೋಗಿದ್ದಾಗ ಎಲ್ಲಾ ವಿಧಿಲಿಖಿತ ಏನು ನಡೆಯಬೇಕೋ ಅದು ನಡೆದೇ ತೀರುತ್ತದೆ ಎಂದಿದ್ದರು.
ಇವರ ಲೇಖನಿಯಿಂದ ಮತ್ತಷ್ಟು ಸಾಹಿತ್ಯ ಕೃತಿಗಳು ಹೊರಬರಲಿ. ಇದು ನಮ್ಮೆಲ್ಲರ ಆಶಯ. ಈ ದಿನ ಅಂದರೆ 08.04.2026 ರ ಬುಧವಾರ ಬೆಳಿಗ್ಗೆ ಅವರ ಮನೆಗೆ ಹೋಗಿದ್ದೆವು. 87ರ ಹುಟ್ಟುಹಬ್ಬದ ಸಂಭ್ರಮದಲ್ಲಿ ನಾವು ಪಾಲ್ಗೊಂಡಿದ್ದೆ ವಿಶೇಷವಾಗಿತ್ತು. ಬೆಳಿಗ್ಗೆ ಬೇಗನೆ ಎದ್ದು, ಸ್ಥಾನ ಮಾಡಿ, ಹಣೆಗೆ ಕುಂಕುಮ ಇಟ್ಟು ಯಾವುದೋ ಯೋಚನಾ ಸ್ಥಿತಿಯಲ್ಲಿ ಕುಳಿತಿದ್ದರು. ನಾನು ಮತ್ತು ಕಣ್ಣೂರು ವಿ ಗೋವಿಂದಾಚಾರಿ ಅವರ ಮನೆಗೆ ಹೋದಾಗ ಓ ಬನ್ನಿ…. ಬನ್ನಿ… ಎಂದು ಸಂಭ್ರಮ ಪಟ್ಟರು.
ಆದರೆ ಅವರಲ್ಲಿ ಕಳೆದ ವರ್ಷದ ಸಂಭ್ರಮ ಕಾಣಲಿಲ್ಲ. ಏಕೆಂದರೆ ಅವರ ಧರ್ಮಪತ್ನಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೂ ಮುಂಚೆ ಮಗಳನ್ನು ಕೂಡ. ಎಲ್ಲೋ ಒಂದು ಕಡೆ ಆ ಕೊರಗು ಅವರನ್ನು ಕಾಡುತ್ತಿತ್ತು. ಆ ನಡುವೆಯೂ ನಮ್ಮನ್ನ ಕಂಡು ನಸುನಗುತ್ತ ಸ್ವಾಗತಿಸಿದರು. ಜೊತೆಗೆ ಚಹಾ ಕುಡಿದು ಹೋಗಿ ಎಂದು ಹೇಳಿದರು. ಅವರ ಸರಳ ವ್ಯಕ್ತಿತ್ವ, ಅವರ ಸಾಹಿತ್ಯ ಮೇರು ಪ್ರತಿಭೆ, ಎಲ್ಲವೂ ಆ ಕ್ಷಣದಲ್ಲಿ ನೆನಪಾಯಿತು. ಸರ್ ನಿಮಗಿದೋ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.









