CrimeLatest

ಹಿಂಭಾಗದಿಂದ ಗಾಳಿ ಹೊಡೆದ ಭೂಪ… ಅವನು ಉಸಿರು ಚೆಲ್ಲಿದ… ಇವನು ಜೈಲ್ ಸೇರಿದ..

ಎಲ್ಲೆ ಮೀರಿದ ಹುಚ್ಚಾಟಕ್ಕೆ ಜೀವ ಬಲಿ

ಗುರುಗ್ರಾಮ್: ಮಾತು ಮಾತಿಗೂ ಕೆಲವರು ಗಾಳಿ ಹೊಡಿಬೇಡ ಅಂತಿರುತ್ತಾರೆ.. ಅಂತಹವರು ಗಾಳಿ ಹೊಡೆದರೆ ಏನಾಗುತ್ತದೆ ಎಂಬುದನ್ನು ಹರಿಯಾಣದ ಗುರುಗ್ರಾಮ್ ನಲ್ಲಿ ನಡೆದ ಘಟನೆಯಿಂದ ತಿಳಿದುಕೊಳ್ಳಬೇಕಾಗುತ್ತದೆ. ಹರಿಯಾಣದ ಗುರುಗ್ರಾಮ್ ನ ಖಾರ್ಖೋಡಾ ಪ್ರದೇಶದ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದ ಸಹದ್ಯೋಗಿಗಳ ಪೈಕಿ ಒಬ್ಬ ಮತ್ತೊಬ್ಬನ ಹಿಂಭಾಗಕ್ಕೆ ಏರ್ ಗನ್ ಮೂಲಕ ಗಾಳಿ ಹೊಡೆದಿದ್ದರಿಂದ ಕ್ಷಣ ಮಾತ್ರದಲ್ಲಿ ಆತನ ಹೊಟ್ಟೆಯೊಳಗೆ ನುಗ್ಗಿದ ಗಾಳಿ ಪ್ರಾಣವನ್ನೇ ತೆಗೆದು ಹಾಕಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಮನೆ ಬಾಡಿಗೆಗೆ ನೀಡುವ ಮುನ್ನ ಎಚ್ಚರವಿರಲಿ… 
ಮೂಲತಃ ಉತ್ತರ ಪ್ರದೇಶದ ಅಲಿಗಢದ ನಿವಾಸಿ ಹರ್ವಿಂದರ್(38) ಮೃತಪಟ್ಟ ದುರ್ದೈವಿಯಾಗಿದ್ದರೆ, ರಾಜಸ್ತಾನ ಮೂಲದ ನರೇಶ್ ಕುಮಾರ್(40) ಆರೋಪಿಯಾಗಿದ್ದಾನೆ.  ಗುರುಗ್ರಾಮ್ ನ ಖಾರ್ಖೋಡಾ ಕೈಗಾರಿಕಾ ಪ್ರದೇಶದ ಸೆಕ್ಟರ್-82ಎ ನಲ್ಲಿರುವ ಕಾರ್ಯಾಗಾರವೊಂದರಲ್ಲಿ ಇವರಿಬ್ಬರು ಕೆಲಸ ಮಾಡುತ್ತಿದ್ದರು. ಬೇರೆ, ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.

ಹೀಗೆ ಕೆಲಸ ಮಾಡಿಕೊಂಡು ಹೋಗಿದ್ದರೆ,  ಒಬ್ಬ ಪ್ರಾಣವನ್ನು ಕಳೆದುಕೊಳ್ಳುತ್ತಿರಲಿಲ್ಲ, ಮತ್ತೊಬ್ಬ ಜೈಲಿಗೂ ಹೋಗುತ್ತಿರಲಿಲ್ಲ. ಆದರೆ ಎಲ್ಲೆ ಮೀರಿದ ಹುಚ್ಚಾಟ ಎಂತಹ ಕಠಿಣ ಪರಿಸ್ಥಿತಿಗೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಇದನ್ನೂ ಓದಿ : 15ಲಕ್ಷ ಪರಿಹಾರದ ಆಸೆಗೆ ಪತಿಯನ್ನೇ ಬಲಿಕೊಟ್ಟ ಪತ್ನಿ… 
ಏಪ್ರಿಲ್ 7ರಂದು ಹರ್ಮಿಂದರ್ ಮತ್ತು ನರೇಶ್ ಕುಮಾರ್ ಎಂದಿನಂತೆ ಕೆಲಸಕ್ಕೆ ಹೋಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಇಬ್ಬರ ಹುಚ್ಚಾಟ ಮುಂದುವರೆದಿತ್ತು. ಅದೇನಾಯಿತೋ ಗೊತ್ತಿಲ್ಲ ಹರ್ಮಿಂದರ್ ಕೆಲಸ ಮಾಡುತ್ತಿದ್ದಾಗಲೇ ನರೇಶ್ ಕುಮಾರ್ ತನ್ನ ಬಳಿಯಿದ್ದ ಏರ್ ಗನ್ ನಿಂದ ಆತನ ಹಿಂಭಾಗದಿಂದ ಗಾಳಿ ಬಿಟ್ಟಿದ್ದಾನೆ. ಕ್ಷಣ ಮಾತ್ರದಲ್ಲಿ ಗಾಳಿ ದೇಹದೊಳಗೆ ನುಗ್ಗಿ ಅಂಗಾಂಗವನ್ನು ಒಡೆದು ಹಾಕಿದ್ದು ಆತ ನೆಲಕ್ಕುರುಳಿದ್ದಾನೆ. ಇನ್ನು ಇಲ್ಲಿದ್ದರೆ ಕಷ್ಟವೆಂದರಿತ ಆರೋಪಿ ನರೇಶ್ ಕುಮಾರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ವಿಷಯ ತಿಳಿದ ತಕ್ಷಣ ಹರ್ಮಿಂದರ್ ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರೂ ಅಂಗಾಂಗ ಗಾಳಿಯ ಒತ್ತಡಕ್ಕೆ ಒಡೆದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.  ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಖೇರ್ಕಿ ದೌಲಾ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಲ್ಲದೆ, ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?… 
ಇದಾದ ನಂತರ ಆರೋಪಿ ನರೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದು, ರಾಂಪುರದಲ್ಲಿ ಆರೋಪಿ ನರೇಶ್ ಕುಮಾರ್ ತಲೆಮರೆಸಿಕೊಂಡಿರುವುದು ತಿಳಿದು ಬಂದಿದ್ದರಿಂದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂತು ಎಲ್ಲೆ ಮೀರಿದ ವರ್ತನೆಯಿಂದಾಗಿ ಒಬ್ಬ ಉಸಿರು ಚೆಲ್ಲುವಂತಾಗಿದ್ದು, ಮತ್ತೊಬ್ಬ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ..

 

 

admin
the authoradmin

Leave a Reply

Translate to any language you want