ಮೈಸೂರಲ್ಲಿ ದಳಪತಿಗಳ ರಣಕಹಳೆ… ಸೋತಲ್ಲೇ ಎದ್ದು ನಿಲ್ಲಲು ಹೋರಾಟ!
ಏ.18, ಜನರೊಂದಿಗೆ ಜನತಾದಳ ಕಾರ್ಯಕ್ರಮ

ಮೈಸೂರು: ಹಳೇ ಮೈಸೂರು ಭಾಗದಲ್ಲಿ ತನ್ನದೆ ಆದ ಪ್ರಾಬಲ್ಯ ಹೊಂದಿದ್ದ ಜೆಡಿಎಸ್ ಕಳೆದೊಂದು ದಶಕದಲ್ಲಿ ಹಲವು ಕಾರಣಗಳಿಂದಾಗಿ ಮಂಕಾಗಿದೆ. ಜೆಡಿಎಸ್ ಸ್ಥಾನಗಳನ್ನು ಕಾಂಗ್ರೆಸ್ ಅಕ್ರಮಿಸಿಕೊಂಡಿದೆ. ಇದಕ್ಕೆ ಕಾರಣಗಳು ಅನೇಕ ಇವೆಯಾದರೂ ಎಡವಿದ್ದೆಲ್ಲಿ ಎಂಬುದನ್ನು ಮನನ ಮಾಡಿಕೊಂಡಿರುವ ದಳಪತಿಗಳು ಇತ್ತೀಚೆಗಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಿಂದಲೇ ಪಕ್ಷವನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕಾಂಗ್ರೆಸ್ಸಿಗರು ಜೆಡಿಎಸ್ ಮೇಲೆ ಹಲವು ರೀತಿಯ ಟೀಕೆ ಮತ್ತು ಅಪಪ್ರಚಾರಗಳನ್ನು ಮಾಡುತ್ತಾ ಬಂದರೂ ಅದೆಲ್ಲವನ್ನು ಬದಿಗೆ ತಳ್ಳಿ ಮತ್ತೆ ಪಕ್ಷವನ್ನು ಮೇಲೆತ್ತುವ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಎನ್ ಡಿಎ ಒಕ್ಕೂಟದೊಂದಿಗೆ ಸಾಗುತ್ತಿರುವ ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿಕೊಳ್ಳುತ್ತಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದ್ದರೂ ಅದಕ್ಕೆ ಸೊಪ್ಪು ಹಾಕದೆ ಬಿಜೆಪಿಯೊಂದಿಗೆ ಸಮನ್ವಯ ಸಾಧಿಸಿಕೊಂಡೇ ಪಕ್ಷವನ್ನು ಸಂಘಟಿಸುವ ಕಾರ್ಯಕ್ಕೆ ಚಾಲನೆ ನೀಡಿರುವುದು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಹುರುಪು ತಂದಿದೆ.
2018ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜೆಡಿಎಸ್ ಮೇಲೆ ಮೆಧು ಧೋರಣೆ ತಾಳಿತ್ತು. ಇದಕ್ಕೆ ಕಾರಣವೂ ಇತ್ತು ಬಹುಮತ ಬಾರದೆ ಹೋದರೆ ಜೆಡಿಎಸ್ ಜೊತೆಗೆ ಸೇರಿ ಸರ್ಕಾರ ರಚಿಸುವ ಆಲೋಚನೆಯಲ್ಲಿ ಕಮಲದ ನಾಯಕರು ಮಾಡಿದ್ದರು. ಅವತ್ತು ಅಂದುಕೊಂಡಂತೆ ಯಾವುದೇ ಪಕ್ಷಕ್ಕೂ ಬಹುಮತ ಬರಲಿಲ್ಲ. ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿತ್ತಾದರೂ ಬಹುಮತ ಬಂದಿರಲಿಲ್ಲ. ಹೀಗಾಗಿ ಜೆಡಿಎಸ್ ತಮ್ಮ ಕೈಹಿಡಿತ್ತಾರೆಂದು ನಂಬಿದ್ದರು. ಆದರೆ ಕಾಂಗ್ರೆಸ್ ನಾಯಕರು ಬಿಜೆಪಿಗೆ ಅಧಿಕಾರ ಕೊಡಬಾರದು ಎಂಬ ಕಾರಣಕ್ಕಾಗಿ ಜೆಡಿಎಸ್ ಜತೆಗೆ ಸೇರಿ ಸರ್ಕಾರ ರಚಿಸಿದರು. ಆದರೆ ಅದು ಬರ್ಕತ್ ಆಗಲಿಲ್ಲ.

2023ರ ಚುನಾವಣೆ ಹೊತ್ತಿಗೆ ಬಿಜೆಪಿ ತನ್ನ ವರಸೆ ಬದಲಿಸಿತ್ತು. ಅದು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡನ್ನು ಟಾರ್ಗೆಟ್ ಮಾಡಿತ್ತು. ಇದರ ಪರಿಣಾಮ ಜೆಡಿಎಸ್ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳನ್ನು ಬಿಜೆಪಿ ಸೆಳೆದುಕೊಂಡಿದ್ದರಿಂದ ಕಾಂಗ್ರೆಸ್ ಗೆಲುವು ಸುಲಭವಾಗಿತ್ತು. 2024 ಲೋಕಸಭಾ ಚುನಾವಣಾ ಹೊತ್ತಿಗೆ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಚುನಾವಣೆ ಎದುರಿಸಿದವು. ಒಂದಷ್ಟು ಮಟ್ಟಿಗೆ ಉತ್ತಮ ಫಲಿತಾಂಶ ಎಂದರೆ ತಪ್ಪಾಗಲಾರದು.
ಎನ್ ಡಿಎ ಜತೆಗೆ ಕೈಜೋಡಿಸಿದ್ದರಿಂದ ಜೆಡಿಎಸ್ ನ ಅಸ್ತಿತ್ವವೇ ಮುಗಿದು ಹೋಯಿತು ಎಂದು ಟೀಕೆಗಳನ್ನು ಮಾಡುತ್ತಿದ್ದ ವಿರೋಧಿಗಳಿಗೆ ಉತ್ತರ ಕೊಡುವ ಕೆಲಸವನ್ನು ಇದೀಗ ಜೆಡಿಎಸ್ ಮಾಡುತ್ತಿದೆ. ಈಗಾಗಲೇ ಸಭೇ, ಸಮಾವೇಶಗಳನ್ನು ಮಾಡುತ್ತಾ ಬಂದಿರುವ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೀಗ ಹಳೆ ಮೈಸೂರಿನಲ್ಲಿ ಮತ್ತೆ ಎದ್ದು ನಿಲ್ಲಲು ಶತಪ್ರಯತ್ನ ನಡೆಸುತ್ತಿದೆ. ಇದರ ಒಂದು ಭಾಗವಾಗಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿ ಯಶಸ್ವಿಯಾಗಿದ್ದು ಇದೀಗ ಮೈಸೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು ಏ.18ರಂದು ಕಾರ್ಯಕ್ರಮ ನಡೆಯುತ್ತಿದೆ.

ಈ ಕುರಿತಂತೆ ಮಾಜಿ ಶಾಸಕ ಸಾರಾ ಮಹೇಶ್ ಮಾತನಾಡಿ ಮಾಹಿತಿ ನೀಡಿದ್ದಾರೆ. ಕೆ.ಆರ್.ನಗರ, ಪಿರಿಯಾಪಟ್ಟಣ ಹುಣಸೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಯಶಸ್ವಿಯಾಗಿದೆ. ಏ.18ರಂದು ಸಂಜೆ 4.30ಕ್ಕೆ ಮೈಸೂರಿನ ನಂಜರಾಜ ಬಹುದ್ದೂರ್ ಛತ್ರದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೆಡಿಎಸ್ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತ, ನಗರ ಪ್ರದೇಶದಲ್ಲಿ ಅದಕ್ಕೆ ಶಕ್ತಿ ಇಲ್ಲ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಅದರಂತೆ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರದ ಕಾರ್ಯಕರ್ತರು ಮಾತ್ರ ಭಾಗವಹಿಸಲಿದ್ದು, ಹೆಚ್ಚು ಜನರನ್ನು ಸೇರಿಸುವ ಮೂಲಕ ಮೈಸೂರು ನಗರದಲ್ಲೂ ಜೆಡಿಎಸ್ ಬಹಳ ಗಟ್ಟಿಯಾಗಿದೆ ಎನ್ನುವುದನ್ನು ಜಿಲ್ಲೆ, ರಾಜ್ಯದ ಜನತೆಗೆ ತೋರಿಸಬೇಕು. ಸಮಾವೇಶದಲ್ಲಿ ನಗರಾಧ್ಯಕ್ಷ ಎಸ್‌ಬಿಎಂ ಮಂಜು, ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್ ಅವರ ಪದಗ್ರಹಣವೂ ನಡೆಯಲಿದೆ ಎಂದಿದ್ದಾರೆ.

ರಾಜಕೀಯವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಐದು ವರ್ಷವೂ ನಮ್ಮ ತಂದೆಯೇ ಸಿಎಂ ಎಂದು ಹೇಳಿದ್ದಾರೆ. ಅದು ಅವರ ಪಕ್ಷದ ವಿಚಾರ. ನೀವು ಎಷ್ಟು ವರ್ಷವಾದರೂ ಅಧಿಕಾರದಲ್ಲಿರಿ. ನಿಮ್ಮ ಅಧಿಕಾರದ ಅವಧಿಯಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಚುನಾವಣೆ ಮಾಡಿ. ಜೆಡಿಎಸ್-ಬಿಜೆಪಿ ಒಂದಾಗಿವೆ, ನಮಗೆ ಅಧಿಕಾರ ಸಿಗುವುದಿಲ್ಲ ಎಂಬ ಭಯದಿಂದ ಚುನಾವಣೆ ನಡೆಸುತ್ತಿಲ್ಲವೇ? ನಾವು ಬೇರೆ ಬೇರೆ ಇದ್ದಾಗಲೇ ನಿಮಗೆ ಅಧಿಕಾರ ಕೊಟ್ಟಿಲ್ಲ. ಇನ್ನು ಒಂದಾಗಿರುವಾಗ ಸಿಗುತ್ತದಯೇ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಯಾವ ಸಂದರ್ಭದಲ್ಲೂ ಪಾಲಿಕೆ ಮೇಯರ್, ಜಿಪಂ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದಿಲ್ಲ. ಈಗ ಚುನಾವಣೆ ನಡೆದರೆ ಮತ್ತೆ ಹಿನ್ನೆಡೆ ಆಗಬಹುದು ಎಂಬ ಆತಂಕ ಮುಖ್ಯಮಂತ್ರಿಗಳಿಗೆ ಇರಬಹುದು. ಅವರದ್ದೇ ಪಕ್ಷದ ಮತ್ತೊಬ್ಬ ನಾಯಕರು ಮುಖ್ಯಮಂತ್ರಿಯಾಗಲು ಕಾದು ಕುಳಿತಿದ್ದಾರೆ. ಒಂದು ವೇಳೆ ಸ್ಥಳೀಯ ಸಂಸ್ಥೆಗಳಲ್ಲಿ, ಅದರಲ್ಲೂ ಮೈಸೂರಿನಲ್ಲಿ ಹಿನ್ನೆಡೆಯಾದರೆ ಖರ್ಚಿ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ಸಿದ್ದರಾಮಯ್ಯ ಅವರಿಗಿಂತಲೂ ಸ್ವಪಕ್ಷದವರ ಬಗ್ಗೆಯೇ ಭಯ ಇರಬಹುದು ಎಂದು ಲೇವಡಿ ಮಾಡಿದ್ದಾರೆ.

ಸಮಾಜವಾದಿ ಎಂದು ಹೇಳಿಕೊಳ್ಳುವ ನೀವು, ನಿಮ್ಮ ಮಗನೇ ಅಧಿಕಾರದಲ್ಲಿದ್ದರೆ ಹೇಗೆ? ಪಕ್ಷಕ್ಕಾಗಿ ದುಡಿದಿರುವ ಇತರರಿಗೂ ಅಧಿಕಾರ ಕೊಡಿ. ಯಾವುದೇ ಪಕ್ಷದ ಕಾರ್ಯಕರ್ತನಾಗಿರಲಿ ಅವರು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಾಲಿಕೆ ಸದಸ್ಯನಾಗಲು ಚುನಾವಣೆ ನಡೆಸಬೇಕು. ನಮಗೆ ಅಧಿಕಾರಿ ಸಿಗುವುದಿಲ್ಲ ಎಂಬ ಭಯದಿಂದ ಚುನಾವಣೆ ಮಾಡದೇ ಇದ್ದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಎಂಬ ಬದ್ಧತೆ ಇದ್ದರೆ ಕೂಡಲೇ ಚುನಾವಣೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಇನ್ನು ಇವತ್ತಿನ ಕಾರ್ಯಕ್ರಮ ಹೇಗಿರಲಿದೆ? ಕಾರ್ಯಕರ್ತರು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇದೀಗ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂಚೂಣಿಯಲ್ಲಿ ನಿಂತು ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತಿರುವುದು ಎದ್ದು ಕಾಣಿಸುತ್ತಿದೆ. ಮುಂದೇನು ಎಂಬುದನ್ನು ಕಾದು ನೋಡೋಣ..
B M Lavakumar







