ಮೈಸೂರು: ಮನೆಯೊಳಗೆ ನುಗ್ಗಿದ ಚಿರತೆ ವಯೋ ಸಹಜ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಮಹಿಳೆಯ ಮಂಚದಡಿಯಲ್ಲಿ ಕೆಲವು ಗಂಟೆಗಳ ಕಾಲ ಮಲಗಿ ವಿಶ್ರಾಂತಿ ಪಡೆದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಅಪಾಯವಿಲ್ಲದಂತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಮೈಸೂರಿನ ಸಿದ್ಧಾರ್ಥನಗರದ ವಿನಯ ಮಾರ್ಗದಲ್ಲಿನ ಮನೆಯೊಂದರಲ್ಲಿ ನಡೆದಿದೆ. ಸದ್ಯ ಸೆರೆ ಸಿಕ್ಕ ನಾಲ್ಕು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಯ ಮೂಲಕ ಸುರಕ್ಷಿತವಾಗಿ ಕೂರ್ಗಳ್ಳಿಯಲ್ಲಿರುವ ಮೃಗಾಲಯದ ಪುನರ್ವಸತಿ ಕೇಂದ್ರ ತಲುಪಿದೆ.
ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಸಿದ್ಧಾರ್ಥನಗರದ ವಿನಯ ಮಾರ್ಗದ ಸುರೇಶ್ ಎಂಬುವರ ಮನೆಗೆ ನುಗ್ಗಿದ ಚಿರತೆ ಕೊಠಡಿಯ ಮಂಚದ ಕೆಳಗೆ ಮಲಗಿದ್ದ ಚಿರತೆಯನ್ನು ಅವರಳಿಕೆ ಮದ್ದು ನೀಡಿ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಮೈಸೂರಿನ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ಧಾರ್ಥನಗರದಲ್ಲಿ ಚಿರತೆ ಮನೆಗೆ ನುಗ್ಗಿರುವುದು ಸ್ಥಳೀಯರಲ್ಲಿ ಆತಂಕದೊಂದಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಮಹಾನಗರ ಪಾಲಿಕೆ ನಿವೃತ್ತ ಇಂಜಿನಿಯರ್ ಆಗಿರುವ ಸುರೇಶ್, ಪತ್ನಿ ಸುಜಾತ ಹಾಗೂ ತಾಯಿ ಶೈಲಜಾ ರುದ್ರಪ್ಪ ಅವರೊಂದಿಗೆ ವಾಸಿಸುತ್ತಿದ್ದಾರೆ. ಶೈಲಜಾ ರುದ್ರಪ್ಪ ಅವರು ವಯೋ ಸಹಜ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದು, ವ್ಹೀಲ್ ಚೇರ್ ಸಹಾಯದಿಂದ ಓಡಾಡಲಿದ್ದಾರೆ. ಎಂದಿನಂತೆ ಬೆಳಗ್ಗೆ ಉಪಹಾರ ಸೇವಿಸಿ ಶೈಲಜಾ ಅವರು ರೂಮ್‌ನಲ್ಲಿ ಮಂಚದ ಮೇಲೆ ಮಲಗಿದ್ದಾಗ ಬೆಳಗ್ಗೆ 10.30ರಲ್ಲಿ ಸದ್ದಿಲ್ಲದೆ ಮನೆ ಪ್ರವೇಶಿಸಿರುವ ಚಿರತೆ ಗಾಬರಿಯಿಂದ ಮಂಚದ ಕೆಳಗೆ ಅವಿತುಕೊಂಡಿದೆ. ಚಿರತೆ ಮನೆಯೊಳಗೆ ನುಸುಳಿರುವುದು ಯಾರ ಗಮನಕ್ಕೂ ಬಂದಿಲ್ಲ. ಚಿರತೆ ರೂಮ್‌ನಲ್ಲಿರುವಾಗಲೇ ಸುಜಾತ ಅವರು ಅತ್ತೆ ಶೈಲಜಾ ಅವರನ್ನು 2-3 ಬಾರಿ ಬಂದು ಮಾತನಾಡಿಸಿ ಹೋಗಿದ್ದಾರೆ. ಆದರೂ ಚಿರತೆ ಇರುವಿಕೆ ಯಾರಿಗೂ ಗೊತ್ತಾಗಿಲ್ಲ.
ಬೆಳಗ್ಗೆ 11.30ಕ್ಕೆ ಸುರೇಶ್ ಅವರ ಮನೆಗೆ ಬಂದ ಮನೆ ಕೆಲಸದಾಕೆ ಕಸ ಗುಡಿಸಲು ಶೈಲಜಾ ಅವರು ಮಲಗಿದ್ದ ರೂಮ್‌ಗೆ ಬಂದಿದ್ದಾರೆ. ಕಸ ಗುಡಿಸುತ್ತಿದ್ದಾಗ ಮಂಚದ ಕೆಳಗೆ ಗೋಡೆ ಮೂಲೆಗೆ ಮುಖ ಮಾಡಿಕೊಂಡು ಮಲಗಿದ್ದ ಚಿರತೆಯನ್ನು ನೋಡಿದ್ದಾರೆ. ಕೂಡಲೆ ಕೊಠಡಿಯಿಂದ ಹೊರಗೆ ಬಂದು ಹಾಲ್‌ನಲ್ಲಿದ್ದ ಸುಜಾತ ಅವರಿಗೆ ಮಂಚದ ಕೆಳಗೆ ಯಾವುದೋ ಪ್ರಾಣಿ ಇರುವುದಾಗಿ ಹೇಳಿದ್ದಾರೆ. ಸುಜಾತ ಅವರು ಬಂದು ನೋಡಿದಾಗ ಚಿರತೆ ಇರುವುದು ಗೊತ್ತಾಗಿದೆ.

ಕೂಡಲೆ ಮಂಚದ ಮೇಲೆ ಮಲಗಿದ್ದ ಅತ್ತೆ ಶೈಲಜಾ ಅವರನ್ನು ತಬ್ಬಿ ಎತ್ತಿಕೊಂಡು ರೂಮ್‌ನಿಂದ ಹೊರಗೆ ಕರೆ ತಂದಿದ್ದಾರೆ. ಚಿರತೆ ನೋಡಿ ಗಾಬರಿಗೊಳಗಾಗಿದ್ದ ಸುಜಾತ ಅವರು ಅತ್ತೆಯೊಂದಿಗೆ ಹಾಲ್‌ನಲ್ಲಿ ಎಡವಿ ಬಿದ್ದಿದ್ದಾರೆ. ನಂತರ ಕೆಲಸದಾಕೆ ಸಹಾಯದಿಂದ ಇಬ್ಬರು ಮೇಲೆದ್ದು ಸುರಕ್ಷಿತವಾಗಿ ಮನೆಯಿಂದ ಹೊರ ಬಂದಿದ್ದಾರೆ. ಬಳಿಕ ಸುಜಾತ ಅವರು ಮತ್ತೆ ಕೊಠಡಿಯೊಳಗೆ ಹೋಗಿ ಬಾಗಿಲ ಬಳಿ ನಿಂತುಕೊಂಡು ಮಂಚದ ಕೆಳಗೆ ನೋಡಿದಾಗ ಚಿರತೆ ತಲೆ ಆಡಿಸಿದ ದೃಶ್ಯ ಕಂಡು ಬಂದಿದೆ. ಕೂಡಲೆ ರೂಮ್ ಬಾಗಿಲು ಹಾಕಿ ಚಿರತೆಗೆ ದಿಗ್ಭಂದನ ಹೇರಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಮನೆಯೊಳಗೆ ಬಂದ ಚಿರತೆ ಕೊಠಡಿ ಸೇರುತ್ತಿದ್ದಂತೆ ಫ್ಯಾನ್ ಗಾಳಿ ಹಾಗೂ ತಂಪಾದ ನೆಲದಿಂದಾಗಿ ನಿದ್ರೆಗೆ ಜಾರಿದೆ. ಹೊರಗೆ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ರೂಮ್‌ನಲ್ಲಿದ್ದ ತಂಪಾದ ವಾತಾವರಣಕ್ಕೆ ಮನಸೋತ ಚಿರತೆ, ಕೊಠಡಿಯೊಳಗೆ ಬಂಧಿಯಾಗುವ ಆತಂಕವಿಲ್ಲದೆ ನಿದ್ರೆ ಮಾಡಿ ವಿರಮಿಸತೊಡಗಿದೆ. ಇದರಿಂದ ರೂಮ್‌ನಲ್ಲಿ ಕೆಲಸದಾಕೆ ಸೇರಿದಂತೆ ಮನೆ ಮಾಲೀಕರಾದ ಸುಜಾತ 3-4ಬಾರಿ ಓಡಾಡಿದರೂ ಚಿರತೆ ಗಮನಕ್ಕೆ ಬಂದಿಲ್ಲ. ಅಲ್ಲದೆ, ಮಂಚದ ಮೇಲೆ ವೃದ್ಧೆ ಶೈಲಜಾ ಮಲಗಿದ್ದರೂ, ಅವರ ತಂಟೆಗೆ ಹೋಗದೆ ನಿದ್ರೆಗೆ ಜಾರಿದೆ.
ಮನೆಯೊಳಗೆ ಚಿರತೆ ಕೂಡಿ ಹಾಕಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಕೊಠಡಿ ಬಾಗಿಲು ತೆರೆಯದೇ ಹಿಂಭಾಗದ ಕಿಟಿಕಿ ಮೂಲಕ ಪರಿಶೀಲಿಸಿದರೂ ಚಿರತೆ ಮಂಚದ ಕೆಳಗಿರುವುದು ಗೊತ್ತಾಗಲಿಲ್ಲ. ಇದರಿಂದ ಅರಣ್ಯ ಸಿಬ್ಬಂದಿಗೆ ಅನುಮಾನ ಮೂಡಿತ್ತು. ಮಂಚದ ಕೆಳಗೆ ಏನಿದೆ ಎಂದು ಪರಿಶೀಲಿಸಲು ಸಿಬ್ಬಂದಿ ಕಡ್ಡಿಯೊಂದಕ್ಕೆ ಮೊಬೈಲ್‌ವೊಂದನ್ನು ಕಟ್ಟಿ, ಕಿಟಕಿಯಿಂದ ಮಂಚದ ಕೆಳಗ್ಗೆ ಇಟ್ಟು ವಿಡಿಯೋ ಮಾಡಿದರು. ಎರಡು ನಿಮಿಷ ವಿಡಿಯೋ ಮಾಡಿದ ಮೇಲೆ ಕಡ್ಡಿಯನ್ನು ಹೊರಗೆ ತಂದು ಮೊಬೈಲ್ ಪರಿಶೀಲಿಸಿದಾಗ ವಿಡಿಯೋದಲ್ಲಿ ಚಿರತೆ ಇರುವುದು ಖಚಿತವಾಯಿತು.
ಮೃಗಾಲಯದ ವೈದ್ಯರಿಂದ ಅರವಳಿಕೆ: ಚಿರತೆ ಇರುವಿಕೆ ಖಚಿತವಾಗುತ್ತಿದ್ದಂತೆ ಮೃಗಾಲಯದ ಪಶುವೈದ್ಯ ಶಶಿಧರ್ ಚಿರತೆಗೆ ಅರವಳಿಕೆ ಚುಚ್ಚುಮದ್ದು ಡಾರ್ಟ್ ಮಾಡುವಲ್ಲಿ ಯಶಸ್ವಿಯಾದರು. ಮಂಚದ ಕೆಳಗೆ ಮಲಗಿದ್ದ ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ ಕೆಲ ನಿಮಿಷದ ಬಳಿಕ ಚಿರತೆ ಮಂಪರಿಗೆ ಜಾರಿತು. ಕೂಡಲೆ ಚಿರತೆ ಕಾರ್ಯಪಡೆ ಸಿಬ್ಬಂದಿ ರೂಮ್ ಪ್ರವೇಶಿಸಿ ಚಿರತೆಯನ್ನು ಹೊರಗೆ ತಂದು ಬಲೆಯಲ್ಲಿ ಸುತ್ತಿದರು. ನಂತರ ಮನೆ ಹೊರಗೆ ತಂದು ವಾಹನದಲ್ಲಿದ್ದ ಬೋನ್ ಒಳಗೆ ಇಟ್ಟರು. ನಂತರ ಮಂಪರಿನಿಂದ ಚಿರತೆಯನ್ನು ಹೊರಗೆ ತರಲು ಮತ್ತೊಂದು ಚುಚ್ಚು ಮದ್ದು ನೀಡಿ, ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು.
ಡಿಸಿಎಫ್‌ಗಳಾದ ಕೆ.ಪರಮೇಶ್, ಡಾ.ಐ.ಬಿ.ಪ್ರಭುಗೌಡ ಮಾರ್ಗದರ್ಶನಲ್ಲಿ ನಡೆದ ಕಾಯಾಚರಣೆಯಲ್ಲಿ ಎಸಿಎಫ್ ರವೀಂದ್ರ, ಎಲ್‌ಟಿಎಫ್ ಆರ್‌ಎಫ್‌ಓ ಹೆಚ್.ಪುಟ್ಟಸ್ವಾಮಿ ಸೇರಿದಂತೆ 30ಕ್ಕೂ ಹೆಚ್ಚು ಎಲ್‌ಟಿಎಫ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.








