ArticlesLatest

ಬನ್ನೂರು ರಾಜು.. ಬರವಣಿಗೆಯಲ್ಲಿಯೇ ಬದುಕು ಕಂಡ ಅಪರೂಪದ ಅಕ್ಷರ ಜೀವಿ

ಏಪ್ರಿಲ್ 19, ಹುಟ್ಟು ಹಬ್ಬ… ಸಾಧನೆಗಳ ಮೆಲುಕು

ಸದಾ ಬರವಣಿಗೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯದ ಕೃಷಿಯೊಂದಿಗೆ ಪತ್ರಕರ್ತರಾಗಿ ವಿವಿಧ ಪತ್ರಿಕೆಗಳಿಗೆ ಸದಾ ಸಾಂದರ್ಭಿಕ ಲೇಖನಗಳನ್ನು ಬರೆಯುತ್ತಾ ಮನೆಮಾತಾದ ಬನ್ನೂರು ಕೆ. ರಾಜು ರವರು 62ರ ವಸಂತಕ್ಕೆ ಕಾಲಿಟ್ಟಿದ್ದಾರೆ.. ಇವರ ಬರಹದ ಬದುಕು ಮತ್ತು ಅದರಾಚೆಗಿನ ಸಾಧನೆಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನವನ್ನು ಮೈಸೂರಿನ ವಿಶ್ರಾಂತ ಪ್ರಾಂಶುಪಾಲರಾದ ಕಾಡ್ನೂರು ಶೀವೇಗೌಡ ರವರು ಮಾಡಿದ್ದಾರೆ…

“ಪತ್ರಕರ್ತ, ಅಂಕಣಕಾರ, ಸಾಹಿತಿ ಬನ್ನೂರು ಕೆ.ರಾಜು ಜ್ಞಾನವಂತ ಹೃದಯವಂತ ವಿದ್ವಾಂಸರು. ಪ್ರಸಿದ್ಧಿಗಾಗಿ ಹಪ ಹಪಿಸದ ಸರಳ ಸಜ್ಜನರು. ಇವರು ನಿಗಧಿತ ಪತ್ರಿಕೆಗೆ ಮಾತ್ರ ಸೀಮಿತರಾದವರಲ್ಲ. ರಾಜ್ಯದ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಅವರ ಬರಹಗಳು ಪ್ರಕಟವಾಗುತ್ತಿದ್ದು ಅವರಿಗೆ ಎಲ್ಲೆಯೂ ಇಲ್ಲ, ಮಿತಿಯೂ ಇಲ್ಲ. ಅವರ ಮಾಹಿತಿ ಸಂಗ್ರಹ ಅಚ್ಚರಿ ಉಂಟು ಮಾಡುತ್ತದೆ. ಯಾರ ಮನಸ್ಸಿಗೂ ನೋವಾಗದಂತೆ ಅವರು ಬರೆಯುವುದೇ ಒಂದು ವಿಶೇಷ. ಅಂಕಣಕಾರರಾಗಿ ಅವರು ಹೆಚ್ಚು ಹೆಸರಾಗಿದ್ದರೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ  ಆಸಕ್ತಿ ಹೊಂದಿದ್ದು, ದೊಡ್ಡವರಿಗೂ ಇಷ್ಟವಾಗುವ ಹಾಗೂ ಮಕ್ಕಳಿಗೆ ಹೆಚ್ಚು ಪ್ರಿಯವಾಗುವ ಕತೆಗಳನ್ನು ಬರೆದಿದ್ದಾರೆ.”

-ಇದು ಸಾಹಿತಿ ಬನ್ನೂರು ಕೆ.ರಾಜು ಅವರ 60ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಪೀಠಾಧೀಶರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬನ್ನೂರು ಕೆ.ರಾಜು ಅವರಿಗೆ ಆಶೀರ್ವಾದ ಮಾಡಿ  ಮಾತನಾಡಿದ ನುಡಿಮುತ್ತುಗಳು. ಇದರಲ್ಲಿ ಒಂದಿನಿತೂ ಉತ್ಪ್ರೇಕ್ಷೆಯಿಲ್ಲ. ಅಕ್ಷರಶಃ ಈ ನುಡಿ ಮುತ್ತುಗಳಿಗೆ ಅನ್ವರ್ಥವಾಗಿ ಬನ್ನೂರು ರಾಜು ಬರೆದು ಬದುಕುತ್ತಿದ್ದಾರೆ.

ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನ ‘ಬನ್ನೂರು’ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಐತಿಹಾಸಿಕ ವಾಗಿ, ಜಾನಪದವಾಗಿ, ಧಾರ್ಮಿಕವಾಗಿ, ಪೌರಾಣಿಕವಾಗಿ, ಶೈಕ್ಷಣಿಕವಾಗಿ, ಮುಂಚೂಣಿಯ ಕೃಷಿಕ್ಷೇತ್ರವಾಗಿಯೂ ನಾಡಿನ ಗಮನ ಸೆಳೆದಿದೆ. ಈ ಊರು ಖ್ಯಾತ ಚಲನ ಚಿತ್ರನಟ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಅವರ ತಾತ ವಿಶ್ವ ವಿಖ್ಯಾತ ಸಂಗೀತ ರತ್ನ ಪಿಟೀಲು ಚೌಡಯ್ಯನವರಿಗೂ ಅತ್ಯಂತ ಪ್ರಿಯವಾಗಿತ್ತು ಎಂಬುದೂ ಸಹ ಬನ್ನೂರಿನ ಗುಣ ವಿಶೇಷವಾಗಿದೆ. ಅಂಬರೀಶ್ ಅವರಂತೂ ಈ ಊರಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖುಷಿ ಪಟ್ಟಿರುವುದೂ ಉಂಟು.

ಇದು ಯತಿವರ್ಯ ವ್ಯಾಸರಾಯರ ಜನ್ಮ ಭೂಮಿಯೂ ಹೌದು. ರಾಯರ ಪ್ರಿಯ ಶಿಷ್ಯ ಸಂತಕವಿ ಕನಕದಾಸರು ನಡೆದಾಡಿದ ಪುಣ್ಯ ನೆಲವೂ ನಿಜ. ಇಂತಹ ಅನೇಕ ವಿಶಿಷ್ಟತೆಗಳಿಗೆ ಸತ್ಪಾತ್ರವಾಗಿರುವ ಬನ್ನೂರು ಬತ್ತದ ಕಣಜವೂ ಹೌದು. ಹಾಗೆಯೇ ನಾಡಿಗೆಲ್ಲ ಬೆಲ್ಲದ ಸವಿ ಸುಖ ನೀಡುವ ಸಿಹಿ ಕಬ್ಬಿನ ತಾಣವೂ ನಿಜ. ಇಂತಹ ಬನ್ನೂರಿನ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ನಿರಾಡಂಬರದ ಸರಳ ಜೀವಿ, ಸಜ್ಜನ ಸಾಹಿತಿ ಬನ್ನೂರು ರಾಜು ಅವರ ತವರೂರಿದು. ಕನ್ನಡ ಸಾಹಿತ್ಯಾಭಿಮಾನಿಯಷ್ಟೇ, ಕನ್ನಡ ಕರ್ಣ ಅಂಬರೀಶ್ ಅಭಿಮಾನಿಯೂ ಆದ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ. ಕನ್ನಡದ ಶಕ್ತಿಗಳಲ್ಲೊಬ್ಬರು. ನಾಡು ಕಟ್ಟುವ ಕೆಲಸದಲ್ಲಿ ಅವರದು ನಿಸ್ವಾರ್ಥ, ಪ್ರಾಮಾಣಿಕ ಸೇವೆ. ಇಂಥ ಆದರ್ಶ ಚೇತನಗಳಿಂದಲೇ ’ಸೇವೆ’ ಎಂಬ ಪದಕ್ಕೆ ಒಂದು ನಿಜವಾದ ಘನತೆ, ಮೌಲ್ಯ ಬರುವಂಥದು.

ರಾಜು ಅವರು ಯಾವ ಉದ್ಯೋಗವನ್ನೂ ಅರಸಿ ಕೊಂಡು ಹೋಗದೆ, ನಾಡು – ನುಡಿಗಾಗಿ ತಮ್ಮ ಬದುಕನ್ನೇ ಸಮರ್ಪಿಸಿ ಕೊಳ್ಳುತ್ತಿರುವ ತ್ಯಾಗಜೀವಿ. ಅವರದು ಬಹುಮುಖವಾದ ಕಾರ್ಯಕ್ಷೇತ್ರ. ಸಾಹಿತ್ಯ, ರಂಗಭೂಮಿ, ಚಿತ್ರರಂಗ, ಪತ್ರಿಕಾ ಕ್ಷೇತ್ರ, ಸಾಂಸ್ಕೃತಿಕ ಸಂಘಟನೆ, ಬಹುಮುಖವಾಗಿ ಸಮಾಜ ಸೇವೆ, ಕನ್ನಡಪರ ಹೋರಾಟಗಳು, ಯುವ ಪ್ರತಿಭೆಗಳಿಗೆ ಅಪರಿಮಿತ ಪ್ರೋತ್ಸಾಹ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅಂಬರೀಶ್ ಒಡನಾಡಿಯಾಗಿ ಅವರ ಹೆಸರಿನಲ್ಲಿ ಬನ್ನೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ‘ಅಂಬರೀಶ್ ಪ್ರಕಾಶನ’ ಸಂಸ್ಥೆಯನ್ನು ಸ್ಥಾಪಿಸಿ, ತನ್ಮೂಲಕ ’ಕನ್ನಡ ಪುತ್ರ’ ಮತ್ತು ‘ತಾಯಿ ಭಾರತಿ’ ಹಾಗೂ ’ಅಂಬರೀಶ್ ಪತ್ರಿಕೆ’ ಗಳನ್ನು ಪ್ರಾರಂಭಿಸಿ ಅವುಗಳ ಸಂಪಾದಕರಾಗಿ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ಮೌಲಿಕ ಕೊಡುಗೆ ನೀಡಿರುವುದು ಇವರ ಬಹುದೊಡ್ಡ ಸಾಧನೆ.

‘ಅಂಬರೀಶ್ ಪತ್ರಿಕೆ’ ಯನ್ನು ಸ್ವತಃ ಅಂಬರೀಶ್ ಅವರೇ ಬಿಡುಗಡೆ ಮಾಡಿರುವುದು ಒಂದು ವಿಶೇಷ. ಹಾಗೆಯೇ ‘ಕನ್ನಡ ಪುತ್ರ’ ಪತ್ರಿಕೆಯನ್ನು ನಟ ಕಲಾ ತಪಸ್ವಿ ರಾಜೇಶ್ ಅವರು ಬಿಡುಗಡೆ ಮಾಡಿದ್ದರು. ಇಂದಿನ ನಾಡಿನ ಬಹಳಷ್ಟು ಪ್ರಖ್ಯಾತ ಸಾಹಿತಿಗಳ, ವಿವಿಧ ಕ್ಷೇತ್ರಗಳ ಗಣ್ಯರ ಬರಹಗಳು ಕನ್ನಡ ಪುತ್ರ ಹಾಗೂ ಅಂಬರೀಶ್ ಪತ್ರಿಕೆಯಲ್ಲಿ ಬೆಳಕು ಕಂಡಿವೆ. ಬಹುಮುಖ್ಯವಾಗಿ ಉದಯೋನ್ಮುಖ ಲೇಖಕ- ಲೇಖಕಿಯರು ಸೇರಿದಂತೆ ಬಹಳಷ್ಟು ಸಾಹಿತಿಗಳ ಬರಹಗಳಿಗೆ ಅನುವು ಮಾಡಿಕೊಟ್ಟು ಪ್ರೋತ್ಸಾಹಿಸಿದ ಹೃದಯವಂತಿಕೆ ಬನ್ನೂರು ರಾಜು ಅವರದು. ಜಾತ್ಯತೀತ ಮನೋಧರ್ಮ ಅವರ ವ್ಯಕ್ತಿತ್ವಕ್ಕೆ ಭೂಷಣಪ್ರಾಯ. ವಿಶ್ವಕವಿ ಕುವೆಂಪು ಅವರ ಅಮೂಲ್ಯ ನುಡಿಗಳಂತೆ ’ಸರ್ವಜನಾಂಗದ ಶಾಂತಿಯ ತೋಟ’ ಅವರ ಮುಂದಿರುವ ಆದರ್ಶ.

’ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು’ ಅದಕ್ಕಾಗಿಯೇ ಅನವರತ ದಣಿವರಿಯದ ದುಡಿಮೆ. ಸಮಾಜಸೇವೆಯ ಕೈಂಕರ್ಯ, ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಪರಿಸರ ಜಾಗೃತಿಗಾಗಿ ನಿರಂತರ ಕ್ರಿಯಾಶೀಲ. ಸಾಮಾಜಿಕ ನ್ಯಾಯದ ಪರವಾಗಿ ಹೋರಾಟದಲ್ಲಿ ’ಖಂಡಿತವಾದಿ ಲೋಕ ವಿರೋಧಿ’ ಎಂಬ ನಾಣ್ನುಡಿಯಿದ್ದರೂ, ಅದನ್ನು ಲೆಖ್ಖಿಸದೆ ’ಸತ್ಯಮೇವ ಜಯತೆ’ ಎಂಬ ಗುರಿಯೊಡನೆ ಮುನ್ನಡೆಯುತ್ತಿರುವ ಆಶಾವಾದಿ. ಅವರಲ್ಲಿರುವ ಅದ್ಭುತ ಸಂಘಟನಾ ಶಕ್ತಿ, ಸಮಾಜದ ಎಲ್ಲ ವರ್ಗದವರೊಡನೆ ಗಳಿಸಿಕೊಂಡಿರುವ ಅಪರಿಮಿತ ಪ್ರೀತಿ, ಇದು ಅವರ ಸರಳತೆ, ಪ್ರಾಮಾಣಿಕತೆ, ಹೃದಯವಂತಿಕೆ, ಮಾನವೀಯತೆ, ಸ್ವಾಭಿಮಾನವೇ ಮೊದಲಾದ ಸದ್ಗುಣಗಳಿಗೆ ದೊರೆತಿರುವ ಪ್ರತಿಫಲ.

ತಾವೇ ಆರ್ಥಿಕ ಸಂಕಷ್ಟದಲ್ಲಿದ್ದರೂ, ನೆರವು ಬಯಸಲು ಬಂದವರಿಗೆ ಅವರ ಕಷ್ಟದಲ್ಲಿ ಸ್ಪಂದಿಸಿ, ಪತ್ರಿಕಾ ಸಂಭಾವನೆಯಿಂದ ಬಂದ ಹಣವನ್ನೂ ನೊಂದವರಿಗೆ ನೀಡಿ ಮಾನವೀಯತೆ ಮೆರೆದಿರುವ ಹಲವಾರು ಸನ್ನಿವೇಶಗಳು, ನಿದರ್ಶನಗಳೂ ಇವೆ. ಅವರದು ನೀಡುವ ಉದಾರ ಹಸ್ತ. ಬೇಡುವ ಹಸ್ತವಲ್ಲ.

ಬನ್ನೂರು ರಾಜು ಅವರ ಜನ್ಮಸ್ಥಳ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬನ್ನೂರು. ಜನ್ಮದಿನಾಂಕ 1964 ಏಪ್ರಿಲ್ 19. ಅವರು ಕೃಷಿಕ ಕುಟುಂಬದಿಂದ ಬಂದವರು. ತಾಯಿ ಕೆಂಪಮ್ಮ, ತಂದೆ ಕೆಂಪೇಗೌಡ. ವಿಷಕಂಠೇಗೌಡ ಎಂಬ ಓರ್ವ ಸೋದರ, ಶಿವಮ್ಮ, ಸರೋಜ ಹಾಗೂ ಪಾರ್ವತಿ ಎಂಬ ಮೂವರು ಸೋದರಿಯರು ಇವರ ಒಡಹುಟ್ಟಿದವರು. ನವೆಂಬರ್ 19, 2000ದಂದು ವಿವಾಹ. ಪತ್ನಿ ಪಿ. ಮಹಾಲಕ್ಷ್ಮಿ, ಪ್ರತಿಭಾವಂತನಾದ ಏಕೈಕ ಪುತ್ರ ಬಿ.ಆರ್. ಧನುಷ್. ಇದು ಇವರ ಪುಟ್ಟ ಕುಟುಂಬ. ಬನ್ನೂರು ರಾಜು ಅವರ ವಿವಾಹಕ್ಕೆ ಸ್ವತಃ ರೆಬಲ್ ಸ್ಟಾರ್ ಅಂಬರೀಶ್ ಅವರೇ ಆಗಮಿಸಿ ಪ್ರೀತಿಯಿಂದ ಅಭಿಮಾನಪೂರ್ವಕವಾಗಿ ಶುಭ ಹಾರೈಸಿದ್ದರು. ಆವತ್ತಿನ ಕಾಲದಲ್ಲಿ ಇದು ಸುತ್ತಮುತ್ತಲಿನ ಊರುಗಳಲ್ಲೆಲ್ಲಾ ಭಾರಿ ಸುದ್ದಿಯಾಗಿತ್ತು.

ಸೃಜನಶೀಲ ಸಾಹಿತ್ಯ ರಾಜು ಅವರ ಅಚ್ಚು ಮೆಚ್ಚಿನ ಕ್ಷೇತ್ರ. ಸೃಜನಶೀಲ ಸಾಹಿತ್ಯದಲ್ಲಿ ಲೀಲಾಜಾಲವಾಗಿ ಬರೆಯಬಲ್ಲರು. ಆಧುನಿಕ ವಚನ ಸಾಹಿತ್ಯ ರಚನೆಯಲ್ಲಿ ಹೆಗ್ಗುರುತು ಮೂಡಿಸುವುದರ ಜೊತೆಗೆ ಈ ಪ್ರಕಾರಕ್ಕೆ ಅಪಾರ ಕೊಡುಗೆ. ನೀಡಿದ್ದಾರೆ. 80ರ ದಶಕದಲ್ಲಿ ಒಮ್ಮೆಗೆ 25 ಮಿನಿ ಪತ್ತೇದಾರಿ ಕಾದಂಬರಿಗಳನ್ನು (ಪಾಕೆಟ್ ನಾವೆಲ್)ಬರೆದು ಪ್ರಕಟಿಸಿದ ದಾಖಲೆ ಇವರದು. ಕಾಡಿನಲ್ಲಿ ಕನ್ಯೆಯರು, ಪ್ರೇಮರಾಗ, ವಿದಾಯ, ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್, ಹೃದಯವಂತ, ಭಾವೈಕ್ಯಭಾರತ, ಕನ್ನಡಪುತ್ರ ರಾಜಕುಮಾರ, ಕಲಾಭಿಮನ್ಯು ಅಂಬರೀಶ್, ಕನ್ನಡ ಸಿರಿ, ಕನ್ನಡ ಭೂಷಣ, ವಿಷ್ಣುಪರ್ವ, ಮಹಾನದಿ,

ಮುತ್ತಿನತೆನೆ. ಸಿನಿಮಾ ಲೋಕದ ಸಿದ್ಧಿಸಾಧಕರು, ಅಕ್ಷರ ಗಂಗೆ, ಸಪ್ತವರ್ಣಗಳು, ಚಿರಮಲ್ಲಿಗೆ, ಪರಿಸರ ಗೀತೆಗಳು, ಗೌಡರ ಸೊಸೆ, ಸಿರಿಪರ್ವ, ಅವಲೋಕನ, ಬಂಗಾರದ ಪಂಜರ, ಮರಳಿನ ಮನೆ, ಪಂಚಾಮೃತ, ಹಬ್ಬಗಳು, ಕರುಳ ಕವಿತೆಗಳು, ಬೆವರಿನ ಬೆಲೆ, ಸಾವಿರದ ಪುಟಗಳು ಇವೇ ಮೊದಲಾದವು ಪ್ರಮುಖ ಕೃತಿಗಳಾಗಿವೆ.

ಕಲೆ, ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಸಂಗೀತ, ಶಿಕ್ಷಣ, ವಿಜ್ಞಾನ, ಕ್ರೀಡೆ, ಜನಪದ, ಹೋರಾಟ ಹೀಗೆ ಎಲ್ಲದರ ಬಗ್ಗೆ ನಿರಂತರವಾಗಿ ಬರೆಯುವ, ಹಾಗೆಯೇ ಈ ಎಲ್ಲಾ ವಿಚಾರಗಳ ಬಗ್ಗೆ ವಿದ್ವತ್ಪೂರ್ಣವಾಗಿ ನಿರರ್ಗಳವಾಗಿ ಮಾತನಾಡುವ ಬಹುಮುಖಿ ಚಿಂತಕರೂ ಆದ ಬನ್ನೂರು ಕೆ. ರಾಜು ಬರಹದಲ್ಲೆಂತೋ ಅಂತೆಯೇ ಭಾಷಣದಲ್ಲೂ ಬದ್ಧತೆ ಹೊಂದಿದ್ದು ಒಳ್ಳೆ ವಾಗ್ಮಿಗಳೆಂದು ತಮ್ಮ ಸದ್ವಿಚಾರ ಪೂರ್ಣ ಚಿಂತನೆಗಳಿಂದ ಖ್ಯಾತರಾಗಿದ್ದಾರೆ.

ವಿಶೇಷವಾಗಿ ಮಕ್ಕಳ ಬಗ್ಗೆ ಮತ್ತು ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿಯುಳ್ಳ ಇವರು ವಿವಿಧ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ನೂರಾರು ಭಾಷಣಗಳನ್ನು, ಉಪನ್ಯಾಸಗಳನ್ನು ಮಾಡಿದ್ದು ಇವುಗಳಲ್ಲಿ ಆಯ್ದ ಭಾಷಣಗಳ ಮೌಲಿಕ ಪುಸ್ತಕವೊಂದು ಪ್ರಕಟಣೆಗೆ ಸಿದ್ಧವಾಗಿದ್ದು ಇಷ್ಟರಲ್ಲೇ ಅದು ಲೋಕಾರ್ಪಣೆಗೊಳ್ಳಲಿದೆ. ಇದಕ್ಕೆಲ್ಲಾ ಸ್ಪೂರ್ತಿ, ಪ್ರೇರಣೆ, ಪೋಷಣೆ, ಎಲ್ಲವೂ ಅಂಬರೀಶ್ ಅವರೇ ಎಂದು ಪ್ರೀತಿಯಿಂದ, ಅಭಿಮಾನದಿಂದ ಅವರನ್ನು ನೆನೆಯುತ್ತಾರೆ.

ಸಾಹಿತ್ಯದ ಬಹುಮುಖ ಪ್ರಕಾರಗಳಲ್ಲಿ ಸುಮಾರು 150 ಕೃತಿಗಳನ್ನು ರಚಿಸಿರುವ ಹೆಗ್ಗಳಿಕೆ ಇವರದು. ಪತ್ರಿಕೋದ್ಯಮಿ ಮತ್ತು ಪುಸ್ತಕೋದ್ಯಮಿಯಾಗಿ ನಾಡಿನ ಬಹಳಷ್ಟು ಯುವ ಬರಹಗಾರರ ಪ್ರಾರಂಭದ ಕೃತಿಗಳನ್ನು ಪ್ರಕಟಿಸಿ, ಪ್ರೋತ್ಸಾಹಿಸಿದ ಸಾಹಸಿ. ರಾಷ್ಟ್ರ ಹಾಗೂ ರಾಜ್ಯಮಟ್ಟದ ಬಹುತೇಕ ಪತ್ರಿಕೆಗಳಲ್ಲಿ ವೈವಿದ್ಯಮಯ ಬರಹಗಳ ಮೂಲಕ ದಾಖಲೆ ನಿರ್ಮಿಸಿರುವುದರ ಜೊತೆಗೆ ಕನ್ನಡದಲ್ಲಿ ಅಂಕಣ ಸಾಹಿತ್ಯ ಪ್ರಕಾರಕ್ಕೆ ಹೊಸ ಆಯಾಮವನ್ನು ತಂದು ಕೊಟ್ಟಿದ್ದಾರೆ. ಡಾ. ಸಿ.ಪಿ.ಕೆ ಹೇಳುವಂತೆ ಇವರು ಅಂಕಣಬ್ರಹ್ಮ. ಇವರ ಅಂಕಣ ಬರಹಗಳ ವಿಶೇಷವೆಂದರೆ ಯಾವುದೇ ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ಸಮೃದ್ಧ ಮಾಹಿತಿ ಅಡಕವಾಗಿರುತ್ತದೆ.

ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಏಕಕಾಲದಲ್ಲಿ ವಿದ್ವಾಂಸರು ಹಾಗೂ ಸಹೃದಯರ ಪ್ರಶಂಸೆಗೆ ಪಾತ್ರರಾಗಿರುವುದು. ಆಳವಾದ ಅಧ್ಯಯನ, ಸಂಶೋಧನೆ, ಅಯಸ್ಕಾಂತದಂಥ ಶೈಲಿ, ಆಕರ್ಷಕ ಭಾಷೆ, ನಿರೂಪಣೆ ಇವರ ಅಂಕಣ ಬರಹಗಳ ಹೆಗ್ಗಳಿಕೆ. ಪ್ರಮುಖ ಪತ್ರಿಕೆಗಳಲ್ಲಿನ ಇವರ ಬರಹಗಳು ಜನಮನ ಸೂರೆಗೊಂಡಿವೆ. ಸಾಮಾನ್ಯ ವಾಗಿ ಪ್ರತಿನಿತ್ಯ ಒಂದಲ್ಲ ಒಂದು ಪತ್ರಿಕೆಯಲ್ಲಿ ಇವರ ಲೇಖನಗಳು ಇದ್ದೇ ಇರುತ್ತದೆ. ಇದನ್ನೇ ’ಬರೆದೇ ಬದುಕುವ ತಪಸ್ಸು’ ಎನ್ನುವುದು. ಇದು ನಾಡು-ನುಡಿಗೆ ವರ.

ಬನ್ನೂರಿನ ಅಂಬರೀಶ್ ಪ್ರಕಾಶನ ಪುಸ್ತಕ ಸಂಸ್ಥೆಯಿಂದ ಮೊದಲುಗೊಂಡ ಇವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನಾ ಕ್ಷೇತ್ರದ ಕಾರ್ಯ ವ್ಯಾಪ್ತಿ ಇಂದು ನಾಡಿನೆಲ್ಲೆಡೆ ಅದರ ಗಾಢವಾದ ಪ್ರಭಾವ. ಇವರು ರಾಜ್ಯದಲ್ಲಿಯೇ ಮೊಟ್ಟ ಮೊದಲಿಗೆ ಸಂಸ್ಥಾಪಿಸಿದ ಅಖಿಲ ಭಾರತ ಅಂಬರೀಶ್ ಅಭಿಮಾನಿಗಳ ಸಂಘದ ಮೂಲಕ ನಡೆಸಿರುವ ಬಹುಮುಖ ಸೇವಾಕಾರ್‍ಯ ಅತ್ಯಂತ ಪರಿಣಾಮಕಾರಿಯಾಗಿ ನಾಡಿನ ಜನಮನವನ್ನು ಮುಟ್ಟಿದೆ.

ಕನ್ನಡಿಗರ ಹೃದಯಾಂತರಾಳದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ವಿಶೇಷವೆಂದರೆ ಈ ಸಂಘ ವನ್ನು ಸ್ವತಃ ಅಂಬರೀಶ್ ಅವರೇ ಉದ್ಘಾಟನೆ ಮಾಡಿದ್ದರು. ರಾಷ್ಟ್ರಕವಿ ಕುವೆಂಪು ಮತ್ತು ಪುತಿನ ಅವರಂತಹ ಮಹಾಕವಿಗಳು ಅಂಬರೀಶ್ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬು ಹೃದಯದಿಂದ ಹರಸಿದ್ದಾರೆ. ಇಷ್ಟಲ್ಲದೆ ನಾಡಿನ ಅಸಂಖ್ಯಾತ ಸಂಘ ಸಂಸ್ಥೆಗಳ ಮಾರ್ಗದರ್ಶಕರೂ ಆಗಿ ಇವರ ನಿರಂತರ ಸೇವೆ ಪ್ರಶಂಸಾರ್ಹ.

ಬನ್ನೂರು ಕೆ. ರಾಜು ನೇತೃತ್ವ ದಲ್ಲಿ ನಡೆದಿರುವ ಸಾಹಿತ್ಯ ಸಮ್ಮೇಳನಗಳು, ಬೃಹತ್ ಸಾಂಸ್ಕೃತಿಕ ಕಾರ್‍ಯಕ್ರಮಗಳು, ಕಲಾಮೇಳಗಳು, ಕವಿಸಮ್ಮೇಳನಗಳು, ರಾಷ್ಟ್ರೀಯ ಭಾವೈಕ್ಯತಾ ವಿಚಾರ ಸಂಕಿರಣಗಳು ನಿರಂತರವಾಗಿ ಸ್ಮರಿಸುವುಂಥವು. ಹಾಗೆಯೇ ಸ್ವತಃ ರಾಷ್ಟ್ರದ ವಿವಿಧ ಕಡೆಗಳಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ನಡೆದ ಹಲವಾರು ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಸಮಾಜದ ಎಲ್ಲಾ ಕ್ಷೇತ್ರಗಳ ಗಣ್ಯಾತಿಗಣ್ಯರ ಪ್ರೀತಿ ಸಂಪಾದಿಸಿರುವ ಬನ್ನೂರು ಕೆ.ರಾಜು ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವಕವಿ ಕುವೆಂಪು ಅವರ ಪ್ರಭಾವಕ್ಕೆ ಒಳಗಾದವರು. ತೊಂಬತ್ತರ ದಶಕದಲ್ಲಿಯೇ ಕುವೆಂಪು ಅವರ ಸಾಹಿತ್ಯವನ್ನು ಕುರಿತಾದ ಅವರ ಗಮನಾರ್ಹ ಕೃತಿ ’ಮಹಾಕವಿ ಕುವೆಂಪು’ ಶೀರ್ಷಿಕೆಯಲ್ಲಿ ಪ್ರಕಟವಾಗಿತ್ತು. ಕುವೆಂಪು ಸಾಹಿತ್ಯ ಕುರಿತಾದ ಮತ್ತೊಂದು ಗಮನಾರ್ಹ ಕೃತಿ ಕುವೆಂಪು ಕಾವ್ಯ ಪೂಜನ, ’ಕರ್ನಾಟಕ ರತ್ನ’ ದೇಜಗೌ, ಸಾರಸ್ವತ ತಪಸ್ವಿ ಡಾ.ಸಿ.ಪಿ.ಕೆ ಅವರ ದಿವ್ಯ ಮಾರ್ಗದರ್ಶನದಲ್ಲಿ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡವರು. ಇವರ ಬಹುತೇಕ ಕಾರ್‍ಯಕ್ರಮಗಳಲ್ಲಿ ನಾಡೋಜ ದೇಜಗೌ ಆಚಾರ್‍ಯ ಸ್ಥಾನದಲ್ಲಿ ವಿರಾಜಮಾನರಾಗಿ, ಈ ಸಾಧಕನ ಬಹುಮುಖ ಸಾಧನೆಗೆ ಪ್ರಶಂಸೆಯ ಹೂಮಳೆಗರೆದು ಹೃದಯ ತುಂಬಿ ಆಶೀರ್ವದಿಸಿದ್ದಾರೆ.

ಬನ್ನೂರು ಕೆ. ರಾಜು ಅವರ ಐವತ್ತರ ಸಂಭ್ರಮವನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇಂಚರ ಸಾಂಸ್ಕೃತಿಕ ಪ್ರತಿಷ್ಠಾನ ವೈಭವದಿಂದ ಅಸಂಖ್ಯಾತ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿದೆ. ಬನ್ನೂರು ಕೆ.ರಾಜು ಅವರಿಗೆ ಅಮೆರಿಕನ್ ಬಯೊಗ್ರಾಫಿಕಲ್ ಇನ್‌ಸ್ಟಿಟ್ಯೂಟ್ (ಎಬಿಐ – ಯು ಎಸ್ ಎ) ನ 1999ನೆಯ ಸಾಲಿನ ಮ್ಯಾನ್ ಆಫ್ ದಿ ಇಯರ್ ಅಂತರರಾಷ್ಟ್ರೀಯ ಪ್ರಶಸ್ತಿ , 1992 ನೆ ಸಾಲಿನ ಭಾರತ ಸರ್ಕಾರದ ನೆಹರು ಯುವ ಕೇಂದ್ರದ ಶ್ರೇಷ್ಠ ಯುವಕ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸರ್ಕಾರದ ಬಹುಭಾಷಾ ದಸರಾ ಕವಿ ಸಮ್ಮೇಳನದ ಆಹ್ವಾನಿತ ಕವಿಯ ವಿಶೇಷ ಪುರಷ್ಕಾರ, 1997ರಲ್ಲಿ ಶ್ರೀ ಭುವನೇಶ್ವರಿ ಕನ್ನಡ ಬಳಗದ ರಾಜ್ಯೋತ್ಸವ ಪ್ರಶಸ್ತಿ, 1990ರಲ್ಲಿ ಯುವ ಸಾಹಿತ್ಯ ರತ್ನ ಪ್ರಶಸ್ತಿ, 1993ರ ಲ್ಲಿ ಯುವ ಚೇತನ ಪ್ರಶಸ್ತಿ, 1994ರಲ್ಲಿ ಡಾ.ಕೆ. ಶಿವರಾಮಕಾರಂತ ಪ್ರಶಸ್ತಿ, 1999ರಲ್ಲಿ ವಸಂತ ಪ್ರಕಾಶನದ ದಶಮಾನೋತ್ಸವ ಪುರಸ್ಕಾರ,

2000ದಲ್ಲಿ ಮೈಸೂರು ರತ್ನ ಪ್ರಶಸ್ತಿ, 2001ರಲ್ಲಿ ಮಾದಿಗಹಳ್ಳಿಯ ಜೈ ಭುವನೇಶ್ವರಿ ಕನ್ನಡ ಯುವ ಮಿತ್ರ ಬಳಗದ ರಾಜ್ಯೋತ್ಸವ ಪುರಸ್ಕಾರ, 2002ರಲ್ಲಿ ಗಾಂಧಿವಾದಿ ಎಸ್. ನಂಜುಂಡಯ್ಯ ಪ್ರಶಸ್ತಿ, 2003ರಲ್ಲಿ ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿ, 2005 ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, 2012ರಲ್ಲಿ ಎಚ್ಚೆಸ್ಕೆ ಸಾಹಿತ್ಯ ಪ್ರಶಸ್ತಿ, 2014ರಲ್ಲಿ ವಿಶ್ವಮಾನವ ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿ, ಮುಳ್ಳೂರು ನಾಗರಾಜು ಕಾವ್ಯಪ್ರಶಸ್ತಿ , ಕರ್ನಾಟಕ ಸರ್ಕಾರದ ಮೈಸೂರು ಜಿಲ್ಲಾಡಳಿತದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಕನ್ನಡ ವಿಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ಇವರ ಅದ್ವಿತೀಯ ಸಾಧನೆಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿದಂತೆ ಉನ್ನತೋನ್ನತ ಪ್ರಶಸ್ತಿಗಳು ಅರಸಿಕೊಂಡು ಬರಲಿ. ಹೋರಾಟದ ಬದುಕಿನಲ್ಲಿ ಸಾಗಿ ಬಂದಿರುವ ಇವರಿಗೆ ಸಮಾಜ, ಸರ್ಕಾರ ಆರ್ಥಿಕವಾಗಿ ನೆರವಿಗೆ ಬರಲಿ. ಇವರ ಸಾಹಿತ್ಯ ಸಾಧನೆಗೆ ಚೈತನ್ಯ ತುಂಬಲಿ ಎಂಬುದೇ ನಮ್ಮ ಆಶಯ ಹಾಗೂ ಹಾರೈಕೆ.

“ಬರಹ ಬ್ರಹ್ಮ ಬನ್ನೂರು ರಾಜು

ಸಹಸ್ರಾರು ಲೇಖನಗಳ ಹರಿಕಾರರು

ಸಾಗರದಷ್ಟು ಸುಜ್ಞಾನ ಮೂರ್ತಿ

ಬೆಳಗಲಿ ಕನ್ನಡದ ಕಂದ ರಾಜು

ನಿಂದನೆ ಇಲ್ಲದೆ ಸರ್ವರ ಸೇವಾಕೀರ್ತಿ

ಹೊರ ಹೊಮ್ಮಲಿ ಒಳಗಿನ ಅಕ್ಷರ ಮಣಿ

ಅಂತರಂಗದ ಕಕ್ಷೆಯೊಳಗಿಂದ

ಚಿಮ್ಮಲಿ

ಕನ್ನಡ ಸಾಹಿತ್ಯ ಬೇರು ಬೆಸೆಯಲಿ

ಕನ್ನಡಕ್ಕೆ ಕನ್ನಡಿಗರಿಗೆ ಬೆಳಕಾಗಲಿ

ಬೆಳೆಯುವ ಯುವಕರ ಕಣ್ಮಣಿಯಾಗಲಿ

ರಾಜು ನೂರಾರು ವರ್ಷಗಟ್ಟಲೆ ಬಾಳಲಿ!”

 

   -ಕಾಡ್ನೂರು ಶೀವೇಗೌಡ

      ವಿಶ್ರಾಂತ ಪ್ರಾಂಶುಪಾಲರು,     ಮೈಸೂರು

 

admin
the authoradmin

Leave a Reply

Translate to any language you want