
ಮೈಸೂರು: ದೇಶದಲ್ಲಿ ಮೊದಲ ಆಕಾಶವಾಣಿ ಎಂಬ ಕೀರ್ತಿಗೆ ಭಾಜನವಾಗಿರುವ ಮೈಸೂರು ಆಕಾಶವಾಣಿಯ ನೂತನ ಕಾರ್ಯಕ್ರಮ ಮುಖ್ಯಸ್ಥರಾಗಿ ಎನ್ ಕೇಶವಮೂರ್ತಿ ಅವರು ಅಧಿಕಾರವನ್ನು ಇದೇ ಜೂನ್ 1 ರಂದು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಕಾರ್ಯಕ್ರಮ ಸಹಾಯಕ ನಿರ್ದೇಶಕ ಬೇದ್ರೆ ಎನ್ ಮಂಜುನಾಥ್, ಅಲ್ಲದೆ ಕಾರ್ಯಕ್ರಮ ಸಮನ್ವಯಾಧಿಕಾರಿ ದಿಗ್ವಿಜಯ್ ಬಿ, ಕಾರ್ಯಕ್ರಮ ನಿರ್ವಾಹಕ ಜಿ ಶಾಂತಕುಮಾರ್, ಮತ್ತು ಹಿರಿಯ ಉದ್ಘೋಷಕ ಮೈಸೂರು ಉಮೇಶ್ ಹಾಜರಿದ್ದರು.
ಮೈಸೂರು ಆಕಾಶವಾಣಿ ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಕೂಡ ಕೇಶವಮೂರ್ತಿಯವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಶವಮೂರ್ತಿಯವರು ಆಕಾಶವಾಣಿ ಎಂದರೆ ಕಾರ್ಯಕ್ರಮಗಳ ಸುಗ್ಗಿ. ವರ್ಷ ವರ್ಷವೂ ವಿನೂತನ ಕಾರ್ಯಕ್ರಮಗಳು ಪ್ರಸಾರವಾಗುತ್ತಲೇ ಇವೆ. ಅವುಗಳ ಜೊತೆಗೆ ಮತ್ತಷ್ಟು ಕಾರ್ಯಕ್ರಮಗಳ ಸೇರ್ಪಡೆ ಆಗಲಿದೆ ಎಂದರು.
ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೇಳುಗರು ಕೇಳುವಂತಾಗಬೇಕು. ಕಾರ್ಯಕ್ರಮವನ್ನು ಕೇಳಿ ಪತ್ರದ ಮೂಲಕ, ವ್ಯಾಟ್ಸಪ್ ಮೂಲಕ, ಮೇಲ್ ಮೂಲಕವೂ ಕೂಡ ವಿಮರ್ಶೆ ಮಾಡಬಹುದು. ಮತ್ತೆ ಯಾವ ಯಾವ ಕಾರ್ಯಕ್ರಮಗಳು ಬೇಕು ಎನ್ನುವುದನ್ನು ಕೂಡ ತಿಳಿಸಿದರೆ ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವರದಿ: ಕಾಳಿಹುಂಡಿ ಶಿವಕುಮಾರ್








