LatestMysore

ಡಿ.ಕೆ.ಶಿವಕುಮಾರ್‌ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ಉತ್ತಮ ಅನುದಾನದ ನಿರೀಕ್ಷೆ: ಜಿ.ಡಿ.ಹರೀಶ್‌ ಗೌಡ

 ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): ಹುಣಸೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ಸರ್ಕಾರದಲ್ಲಿ ಉತ್ತಮ ಅನುದಾನ ಸಿಗುವ ನಿರೀಕ್ಷೆ ಮತ್ತು ವಿಶ್ವಾಸವಿದೆ ಎಂದು ಶಾಸಕ ಜಿ.ಡಿ.ಹರೀಶ್‌ ಗೌಡ ಹೇಳಿದರು.

ನಗರದಲ್ಲಿ ₹ 7 ಕೋಟಿ ಅನುದಾನದಲ್ಲಿ ಹಳೆ ಬಿ.ಎಂ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾಧ್ಯಮಕ್ಕೆ ಮಾತನಾಡಿ, ನಗರದ ಹಳೆ ಬಿ.ಎಂ. ರಸ್ತೆಯನ್ನು  ದೇವರಾಜ ಅರಸು ಪುತ್ಥಳಿಯಿಂದ ಸಂವಿಧಾನ ವೃತ್ತದವರಗೆ 2 ಕಿ.ಮಿ. ಮೇಲ್ದರ್ಜೆಗೇರಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆ ಎರಡೂ ಭಾಗದಲ್ಲಿ ಸಿಸಿ ಚರಂಡಿ ನಿರ್ಮಾಣವಾಗಲಿದೆ ಎಂದರು.

ಹಳೆ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಹೂವು ಮಾರಾಟಗಾರರಿಗೆ ಶಾಶ್ವತ ಅಂಗಡಿ ಮಳಿಗೆ ನಿರ್ಮಿಸಲು ಶಾಸಕರ ಅನುದಾನದಲ್ಲಿ ₹ 10 ಲಕ್ಷ ನೀಡಲಾಗಿದೆ. ಮಾರುತಿ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್.ಟಿ.ಪಿ ಯೋಜನೆಯಲ್ಲಿ ₹ 1 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು. ಗೋವಿಂದನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ,  ಗಾಣಿಗ ಸಮುದಾಯದ ಸಮುದಾಯ ಭವನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಭಾ ಸದಸ್ಯರ ನಿಧಿಯಿಂದ  ₹ 20 ಲಕ್ಷ ಅನುದಾನದಲ್ಲಿ ಸಮುದಾಯ ಭವನ ಕಾಮಗಾರಿ ಕೈಗೆತ್ತುಕೊಳ್ಳಲಾಗಿದೆ ಎಂದರು.

ಸಿ.ಆರ್.ಎಫ್‌ ಅನುದಾನ: ಕೇಂದ್ರ ಸರ್ಕಾರ ಸಿ.ಆರ್.ಎಫ್  ಯೋಜನೆಯಲ್ಲಿ ಕ್ಷೇತ್ರಕ್ಕೆ ₹ 6 ಕೋಟಿ ಅನುದಾನ ಕಾದಿಟ್ಟಿದ್ದು, ಈ ಅನುದಾನವನ್ನು ನಗರದ ಉಪವಿಭಾಗಾಧಿಕಾರಿ ಕಚೇರಿ ಸಂಪರ್ಕಿಸುವ ರಸ್ತೆಯಿಂದ ಗುರುಪುರ ಗ್ರಾಮ ಸಂಪರ್ಕಿಸುವ ರಸ್ತೆ ನಾಲ್ಕು ಪಥ ರಸ್ತೆ ಹಾಗೂ ದೀಪ ಅಳವಡಿಸಿ ಸಾರ್ವಜನಿಕರ ಸಂಚಾರಕ್ಕೆ ಉತ್ತಮ ಸಂಪರ್ಕ ಕಲ್ಪಿಸಲು ಬಳಸಲಾಗುವುದು ಎಂದರು.

ಹೊಸ ಸರ್ಕಾರ ಅನುದಾನ ನಿರೀಕ್ಷೆ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಎರಡನೇ ಅಧ್ಯಾಯ  ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಮೇ 3 ರಿಂದ ಆರಂಭವಾಗಿದೆ. ಈ ಹಿಂದಿನ ಮುಖ್ಯಮಂತ್ರಿಗಳ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅನುದಾನ ಅಭಿವೃದ್ಧಿ ಯೋಜನೆಗಳಿಗೆ ಖೋತಾ ಆಗಿತ್ತು. ಡಿ.ಕೆ.ಶಿವಕುಮಾರ್‌ ಗ್ಯಾರಂಟಿ ಯೋಜನೆಗಳೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

110 ಕೋಟಿ ಯೋಜನೆ: ಕ್ಷೇತ್ರದಲ್ಲಿ ಮುಂದಿನ ಜೂನ್‌ ತಿಂಗಳಲ್ಲಿ ನಿತ್ಯ ಒಂದೊಂದು ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಅಭಿವೃದ್ಧಿ ಪರ್ವ ಹರಿಯಲಿದ್ದು, ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರ ಇಲಾಖೆಯಿಂದ ಕ್ಷೇತ್ರಕ್ಕೆ₹ 110 ಕೋಟಿ ಅನುದಾನ ಬಿಡುಗಡೆಯಾಗಿದ್ದು ಈ ಅನುದಾನದಲ್ಲಿ ಕಟ್ಟೆಮಳಲವಾಡಿ ಅಣೆಕಟ್ಟೆಯಿಂದ ನಾಲಾ ಅಭಿವೃದ್ಧಿಗೆ ₹ 38 ಕೋಟಿ, ಮರೂರು ಬ್ರಾಂಚ್‌ ಹೊಡಿಕೆ ಕಟ್ಟೆ ನಾಲಾಭಿವೃದ್ಧಿಗೆ ₹ 92 ಕೋಟಿ ಅನುದಾನ ಕಾದಿಡಲಾಗಿದ್ದು ಮುಂದಿನ ತಿಂಗಳು ಈ ಯೋಜನೆಗಳಿಗೆ ಚಾಲನೆ ಸಿಗಲಿದೆ ಎಂದರು.

ಹೊಸ ಯೋಜನೆ: ತಾಲ್ಲೂಕಿನ ಜೀವ ನದಿ ಲಕ್ಷ್ಮಣತೀರ್ಥ ನದಿ ಶುದ್ಧಿಕರಣ ಮತ್ತು ಒಳಚರಂಡಿ ಯೋಜನೆ ಬಹುದೊಡ್ಡ ಸವಾಲಾಗಿದ್ದು, ಈ ಎರಡು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಎರಡೂ ಕಾಮಗಾರಿ ಈ ಅವಧಿಯಲ್ಲಿ ಪೂರ್ಣಗೊಳಿಸುವ ಬಯಕೆ ಇದೆ ಎಂದರು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಮಾನಸ, ಜೆಡಿಎಸ್‌ ಅಧ್ಯಕ್ಷ ಸುರೇಂದ್ರ, ಪ್ರೇಮಕುಮಾರ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಫಜಲುಲ್ಲಾ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ  ವೇಕಟೇಶ್‌, ಮುಖಂಡರಾದ ಗೋವಿಂದರಾಜ್‌, ಕೃಷ್ಣರಾಜಗುಪ್ತ, ಹರೀಶ್‌, ದೇವನಾಯಕ ಮತ್ತು ಇತರರಿದ್ದರು.

admin
the authoradmin

Leave a Reply