ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ: ಆರ್.ಕೆ.ಬಾಲಚಂದ್ರ
ಕುಶಾಲನಗರ ತಾಲ್ಲೂಕು ಪತ್ರಕರ್ತ ಸಂಘದಿಂದ ನೇಗಿಲ ಯೋಗಿ ಪ್ರಶಸ್ತಿ ಪ್ರದಾನ

ಕುಶಾಲನಗರ(ರಘು ಹೆಬ್ಬಾಲೆ) : ಕೊಡಗಿನಲ್ಲಿ ಭತ್ತ, ಕಾಫಿ, ಏಲಕ್ಕಿ, ಕಾಳು ಮೆಣಸು ಸೇರಿದಂತೆ ಪ್ರಮುಖ ಕೖಷಿ ಇಂದು ತೀವ್ರ ಸಂಕಷ್ಟದಲ್ಲಿದ್ದು, ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮದ ಮೂಲಕ ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ ಮತ್ತು ಪ್ರವಾಸಿಗರಿಗೆ ಅದ್ಭುತ ಅನುಭವ ಹಲವಾರು ಅವಕಾಶಗಳಿವೆ ಎಂದು ಸಂಪನ್ಮೂಲ ವ್ಯಕ್ತಿ ಆರ್.ಕೆ.ಬಾಲಚಂದ್ರ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಪತ್ರಕರ್ತರ ಸಂಘ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಗೌಡ ಸಮಾಜದಲ್ಲಿ ಆಯೋಜಿಸಿದ್ದ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಕೊಡಗಿನಲ್ಲಿ ಕೃಷಿ ಪ್ರವಾಸೋದ್ಯಮ-ಹಲವು ಆಯಾಮಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕೊಡಗಿನಲ್ಲಿ ಸುಮಾರು 1.05 ಲಕ್ಷ ಹೆಕ್ಟೇರ್ ಕಾಫಿ ತೋಟವಿದೆ. ಭಾರತದ ಒಟ್ಟು ಕಾಫಿ ಉತ್ಪಾದನೆಯ ಸುಮಾರು ಶೇ.30ರಷ್ಟು ಇಲ್ಲೇ ಬೆಳೆಯುತ್ತದೆ. ಆದರೆ ಕಳೆದ ಎರಡು ದಶಕಗಳಲ್ಲಿ ಕಾಫಿ ಬೆಲೆಯ ಏರಿಳಿತ, ಹವಾಮಾನ ಬದಲಾವಣೆ, ಕೂಲಿ ಕಾರ್ಮಿಕರ ಕೊರತೆ, ಕಾಡಾನೆ ಹಾವಳಿ ಇವೆಲ್ಲ ರೈತರ ನಿದ್ದೆ ಕೆಡಿಸಿವೆ. 2018ರ ಭೀಕರ ಪ್ರವಾಹ ಮತ್ತು ಭೂಕುಸಿತ ಕೊಡಗಿನ ಕೃಷಿಕರನ್ನು ಹೈರಾಣಾಗಿಸಿದೆ. ಇದರಿಂದಾಗಿ ಯುವ ತಲೆಮಾರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ತೋಟ ಉಳಿಸಿಕೊಳ್ಳಲು ದಾರಿ ಕಾಣದೆ ಕಾಫಿ ಬೆಳೆಗಾರರ ಮಕ್ಕಳು ಬೆಂಗಳೂರಿನಲ್ಲಿ ಕಾಫಿ ಮಾರುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಅವರು ಹೇಳಿದರು.
ಆದರೆ ಕೊಡಗಿನ ರೈತರು ಮನಸ್ಸು ಮಾಡಿದರೆ ಕೃಷಿ ಪ್ರವಾಸೋದ್ಯಮದ ಮೂಲಕ ಬೆಂಗಳೂರಿಗರೇ ಇಲ್ಲಿನ ರೈತರ ಬಳಿ ಬರುವಂತೆ ಮಾಡಬಹುದು ಎಂದ ಅವರು, ಕೃಷಿ ಪ್ರವಾಸೋದ್ಯಮ ಎಂಬುದು ಒಂದು ದಾಶ೯ನಿಕ ಕಲ್ಪನೆಯಾಗಿದೆ. ಸರಳವಾಗಿ ಹೇಳಬೇಕೆಂದರೆ ಕೃಷಿ ಚಟುವಟಿಕೆಗಳಲ್ಲಿ ಪ್ರವಾಸಿಗರನ್ನು ಭಾಗಿಯಾಗಿಸಿ, ರೈತರಿಗೆ ಹೆಚ್ಚುವರಿ ಆದಾಯ ಒದಗಿಸುವ, ಮತ್ತು ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುವ ವ್ಯವಸ್ಥೆ. ಇದು ಪ್ರಸಕ್ತ ಕೊಡಗಿನಲ್ಲಿರುವ ಕೇವಲ ತೋಟ ನೋಡಿ ಹೋಗುವುದಲ್ಲ. ತೋಟದ ನಡಿಗೆ ಕೊಯ್ಲು ಚಟುವಟಿಕೆ ಸಾವಯವ ಕೃಷಿ ತರಬೇತಿ, ತಳಿ ಸಂರಕ್ಷಣೆ ಮತ್ತು ಜೀವ ವೈವಿಧ್ಯ ಪ್ರವಾಸ ,ಗ್ರಾಮೀಣ ಆಹಾರ ಪದ್ದತಿಯ ಅನುಭವ ಸ್ಥಳೀಯ ಸಂಸ್ಕೃತಿ, ಕಲೆ, ಆಚಾರ-ವಿಚಾರ ಇವೆಲ್ಲವೂ ಸೇರಿದೆ.
ಇದು ಪ್ರವಾಸಿಗನಿಗೆ ಕೇವಲ ಕಣ್ಣಿನ ಸಂತೋಷ ನೀಡುವುದಲ್ಲದೆ, ಆತ್ಮದ ತೃಪ್ತಿಯೂ ನೀಡುತ್ತದೆ ಎಂದು ಬಾಲಚಂದ್ರ ವಿವರಿಸಿದರು. ಈ ಸಂಬಂಧ ಅವರು ಇಂದಿನ ಸ್ಥಿತಿ, ಸಮಸ್ಯೆ ಮತ್ತು ಅವಕಾಶಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಕಾರ್ಮಿಕರ ಕೊರತೆಗೆ ಪರಿಹಾರ: ಕೊಯ್ಲು ಸಮಯದಲ್ಲಿ ಕಾರ್ಮಿಕರ ಅಭಾವ ತೀವ್ರ. ಈ ಸಮಸ್ಯೆಗೆ ಕೃಷಿ ಪ್ರವಾಸೋದ್ಯಮ ಒಂದು ಆಸಕ್ತಿಕರ ಉತ್ತರ ಕೊಡಬಲ್ಲದು. ಪ್ರವಾಸಿಗರು ಸ್ವ-ಇಚ್ಛೆಯಿಂದ ಕೊಯ್ಲಿನಲ್ಲಿ ಭಾಗಿಯಾಗಿ ಪಾವತಿ ಮಾಡುತ್ತಾರೆ! ಅವರು ರೈತನಿಗೆ ಪಾವತಿ ಮಾಡಿ ಕೆಲಸ ಮಾಡುವುದರಿಂದ ಇದು ರೈತರಿಗೆ ಲಾಭದಾಯಕವಾಗಬಲ್ಲದು. ಮಳೆ ಅನಿಶ್ಚಿತತೆ ತಾಪಮಾನ ಏರಿಕೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೂ ಪ್ರವಾಸೋದ್ಯಮ ಒಂದು ಪ್ರಬಲ ಮಾಧ್ಯಮವಾಗಬಲ್ಲದು ಎಂದರು.
ಕೊಡಗು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ನೇಗಿಲಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಬೆನ್ನೆಲುಬರಾಗಿರುವ ರೈತರಿಲ್ಲದ ನಾಡನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯವಾಗಿದೆ. ಎಷ್ಟೇ ಆಧುನಿಕ ಸೌಲಭ್ಯಗಳಿದ್ದರೂ ಮನುಷ್ಯನಾದವನಿಗೆ ಅನ್ನ, ಆಹಾರಗಳಿಲ್ಲದೆ ಜೀವಿಸಲು ಸಾಧ್ಯವಿಲ್ಲ. ಇಂತಹ ಆಹಾರವನ್ನು ತನ್ನ ಶ್ರಮದ ಮೂಲಕ ಕಲ್ಪಿಸುವ ಕೖಷಿಕರಿಗೆ ಸಮಾಜ ಸದಾ ಕೖತಜ್ಞವಾಗಿರಬೇಕು ಮತ್ತು ಸರಕಾರಗಳು ನೆರವಿಗೆ ನಿಲ್ಲಬೇಕು ಎಂದು ಕೇಶವ ಕಾಮತ್ ಹೇಳಿದರು.
ನಗರ ಪ್ರದೇಶಗಳಿಗೆ ಯುವಜನರ ವಲಸೆ ಹೆಚ್ಚಾಗುತ್ತಿರುವುದರಿಂದಾಗಿ ಗ್ರಾಮೀಣ ಪ್ರದೇಶಗಳು ಹಿರಿಯರಿಗೆ ಮಾತ್ರ ಸೀಮಿತವಾಗಿ ವೃದ್ದಾಶ್ರಮಗಳಾಗುತ್ತಿದೆ ಎಂದು ವಿಷಾದಿಸಿದ ಅವರು, ಯುವಪೀಳಿಗೆ ತಮಗೆ ತಿಳಿದಿರುವ ಆಧುನಿಕ ಮಾಧ್ಯಮಗಳ ಉಪಯೋಗವನ್ನು ಕೖಷಿ ವಲಯದ ಪ್ರಗತಿಗೂ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಕೊಡಗು ಪತ್ರಕರ್ತ ಸಂಘದ ಅಧ್ಯಕ್ಷ ಹೆಚ್.ಟಿ.ಅನಿಲ್ ಮಾತನಾಡಿ, ಕೋವಿಡ್ ಕಾಲಘಟ್ಟದಲ್ಲಿ ಜರುಗಿದ ಕೆಲವು ಉತ್ತಮ ಸಂಗತಿಗಳಲ್ಲಿ, ನಗರದಿಂದ ಸ್ವಗ್ರಾಮಗಳಿಗೆ ಅನಿವಾರ್ಯವಾಗಿ ಮರಳಿ ಬಂದ ಯುವಪೀಳಿಗೆ ನಂತರದ ದಿನಗಳಲ್ಲಿ ಕೖಷಿಯತ್ತ ಆಸಕ್ತಿ ವಹಿಸಿರುವುದೂ ಒಂದಾಗಿದೆ. ಇಂದಿಗೂ ವರ್ಕ್ ಫ್ರಂ ಹೋಂನಿಂದಾಗಿ ಅನೇಕರು ತೋಟಗಳಲ್ಲಿಯೇ ಇದ್ದುಕೊಂಡು ಉದ್ಯೋಗ ಮತ್ತು ಕೖಷಿಯನ್ನು ನಿರ್ವಹಿಸುತ್ತಿರುವುದು ಆಶಾದಾಯಕವಾಗಿದೆ ಎಂದರು.
ಕೇರಳದಂತಹ ರಾಜ್ಯದಲ್ಲಿ ಕೖಷಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಆದ್ಯತೆ ನೀಡಲಾಗಿದೆ. ಎಲ್ಲಾ ರೀತಿಯಲ್ಲಿಯೂ ಕೊಡಗು ಕೃಷಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು, ಈ ನಿಟ್ಟಿನಲ್ಲಿ ಕೖಷಿಕರು ಮತ್ತು ಪ್ರವಾಸೋದ್ಯಮಿಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದೂ ಅನಿಲ್ ನುಡಿದರು.
ಸುಂಟಿಕೊಪ್ಪದ ಉದ್ಯಮಿ ಎಸ್.ಜಿ. ಶ್ರೀನಿವಾಸ್ ಮಾತನಾಡಿ, ಕೃಷಿ ಎನ್ನವುದು ಬಹಳ ದೊಡ್ಡ ತತ್ವವಾಗಿದೆ. ಕೃಷಿಯಲ್ಲಿ ಕೆಲಸ ಮಾಡುತ್ತಲೇ ಕೆಲಸ ಕಲಿಯಲಾಗುತ್ತದೆ. ಹೀಗಾಗಿಯೇ ಕೃಷಿಕರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ ಎಂದರು.

ಗುಡ್ಡೆಹೊಸೂರಿನ ಉದ್ಯಮಿ ಮಂಡೆಪಂಡ ಚಿಮ್ಮ ಉತ್ತಪ್ಪ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಕುಶಾಲನಗರ ಪತ್ರರ‍್ತರ ಸಂಘ ರೈತರಿಗಾಗಿ ರೂಪಿಸಿರುವ ನೇಗಿಲಯೋಗಿ ದತ್ತಿ ಪ್ರಶಸ್ತಿಗೆ ತಾನು ಕೂಡಾ 25 ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಚಿಕ್ಕಬೆಟ್ಟಗೇರಿಯ ಉದ್ಯಮಿ, ದಾನಿ ಎಂ.ಎಸ್.ರಂಜಿತ್, ಸಂಘದ ಸಲಹೆಗಾರ ಕೆ.ತಿಮ್ಮಪ್ಪ, ಖಜಾಂಚಿ ಕೆ.ಎಸ್. ಅನಿಲ್ ಕುಮಾರ್, ನಿರ್ದೇಶಕ ಸಿಲ್ವೆಸ್ಟರ್ , ವಿಶ್ವಕುಮಾರ್, ರವಿಕುಮಾರ್, ಆಲ್‌ಫ್ರೆಡ್,
ಉಪಾಧ್ಯಕ್ಷ ನವೀನ್ ಚಿಣ್ಣಪ್ಪ, ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್, ನಿರ್ದೇಶಕ ಶಿವಣ್ಣ, ಜಿ.ಕೆ.ಬಾಲಕೃಷ್ಣ, ಎಂ.ಎಸ್.ಸುನಿಲ್, ಸೋನ್ಸ್, ವಿರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುದೋಷ್ ಪೂವಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಸಂತಾಪ : ಗೌಡ ಸಮುದಾಯದ ಮುಖಂಡ, ಹಿರಿಯ ಲೇಖಕ ಅನಂತ ರಾಜೇಗೌಡ ಅವರ ನಿಧನಕ್ಕೆ ಪತ್ರಕರ್ತರ ಸಂಘದ ವತಿಯಿಂದ ಮೌನಾಚರಣೆ ಮೂಲಕ ಶೖದ್ದಾಂಜಲಿ ಸಲ್ಲಿಸಲಾಯಿತು.
ನೇಗಿಲ ಯೋಗಿಗಳು: ನೇಗಿಲಯೋಗಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಪಿ. ಉದಯಕುಮಾರ್, ಕೃಷಿ ಮತ್ತು ಹೈನುಗಾರಿಕೆಗಾಗಿ ಮಳ್ಳೂರಿನ ಶಂಕರನಾರಾಯಣ, ಪ್ರಗತಿಪರ ಮಹಿಳಾ ಕೃಷಿಕರಾದ ಮಣಜೂರಿನ ಭವಾನಿ ಎಂ.ಜಿ.ಕುಮಾರಸ್ವಾಮಿ, ಬಾಳುಗೋಡುವಿನ ಸಮಗ್ರ ಕೃಷಿಕ ನಂಗಾರು ಜಗ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳು ಗೌರವಿಸಿದರು.







