ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ )ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.
ಈ ಅವಲೋಕನ ಅಂಕಣ ಇವತ್ತಿನ ಕಾಲದ ಓದುಗರಿಗೆ ಇಷ್ಟವಾಗುವುದಲ್ಲದೆ. ಕೃತಿಗಳ ಪರಿಚಯವೂ ಆಗಲಿದೆ. ಜತೆಗೆ ಕನ್ನಡ ಲಿಟರೇಚರ್ ಪದವಿ ವಿದ್ಯಾರ್ಥಿಗಳಿಗೂ ನೆರವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಓದುಗರ ಅಭಿಪ್ರಾಯಗಳ ನಿರೀಕ್ಷೆಯಲ್ಲಿ…
1) ಕೃತಿ: ಪ್ರಿಯದರ್ಶಿ ಮತ್ತು ಕಿಸಾಗೋತಮಿ
ಕರ್ತೃ: ಜಾನಕೀತನಯ
ಬೋಧಿವೃಕ್ಷದ ನೆರಳಲ್ಲಿ ತನ್ನ ಅಖಂಡ ತಪದ ಅನುಭವದ ಜ್ಞಾನದಿಂದ ಭಗವಾನ್ ಬುದ್ಧನಾದ ರಾಜಕುಮಾರ ಸಿದ್ಧಾರ್ಥನ ಜೀವನದ ಘಟನೆಗಳನ್ನು ಸಾರುವಂತಹ ಎರಡು ಬೇರೆಬೇರೆ ನೀಳ್ಗತೆಗಳ ಈ ಕೃತಿಯು ಎರಡು ವಿಭಾಗಗಳಲ್ಲಿ ಸಾಕಾರಗೊಂಡಿದೆ. ಜಾನಕೀತನಯ ರವರು ಬರೆದಿರುವ ಎರಡನೇ ಕಥಾಸಂಕಲನ.
ಇದರಲ್ಲಿರುವ ಮೊದಲನೆ ಕಥೆ ಪ್ರಿಯದರ್ಶಿ ಈಗಾಗಲೇ ಉಡುಪಿಯ ವಾರಪತ್ರಿಕೆ ಒಂದರಲ್ಲಿ ಬೆಳಕು ಕಂಡಿದೆಯಂತೆ. ಇನ್ನು ಎರಡನೇಯದ್ದು ಕಿಸಾಗೋತಮಿ ಕತೆಯು ಮೈಸೂರು ವಿಶ್ವ ವಿದ್ಯಾನಿಲಯದ ಪ್ರಬುದ್ಧ ಕರ್ನಾಟಕ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಪ್ರಸ್ತುತ ಕಥಾಸಂಕಲನದಲ್ಲಿ ಲೇಖಕರ ಶ್ರಮ ಖಂಡಿತ ಎದ್ದು ಕಾಣುತ್ತದೆ.
‘ಪ್ರಿಯದರ್ಶಿ’ ಕಥಾವಿಭಾಗದಲ್ಲಿ ಚಕ್ರವರ್ತಿ ಅಶೋಕನು ಕಳಿಂಗ ಯುದ್ಧ ಮಾಡಿದ ಬಗ್ಗೆ ಮತ್ತು ಬುದ್ಧ-ಅಶೋಕ ಇವರಿಬ್ಬರ ಮುಖಾಮುಖಿ ಬಗ್ಗೆ 10ಅಧ್ಯಾಯಗಳಲ್ಲಿ 240 ಪದ್ಯಗಳು ಚಿತ್ರಣವಾಗಿದೆ. ಈ ಪೈಕಿ ಹೆಸರಿಸ ಬಹುದಾದ ಪದ್ಯಗಳು ಕೇವಲ 50 ಇವುಗಳಲ್ಲಿ 17ಮಾತ್ರ ಓದುಗರಲ್ಲಿ ಮತಿ ಮತ್ತು ಮತೀಯವಾಗಿ ಹೊಸ ಆಯಾಮ ಸೃಷ್ಟಿಸಿ ಉನ್ನತ ಮಟ್ಟಕ್ಕೆ ನಿಂತರೆ ಮಿಕ್ಕಿದ್ದೆಲ್ಲವು ನೀರಸ ಎನಿಸುತ್ತವೆ!
‘ಕಿಸಾಗೋತಮಿ’ ಕಥಾವಿಭಾಗದಲ್ಲಿ ಒಟ್ಟಾರೆ 58 ಪದ್ಯಗಳ 2 ಅಧ್ಯಾಯಗಳು ವ್ಯವಸ್ಥಿತ ಅಡಕವಾಗಿದೆ. ಒಂದನೇ ಅಧ್ಯಾಯದಲ್ಲಿ ಪುತ್ರಶೋಕದ ತಾಯಿಯ ವರ್ಣನೆಇದ್ದು, ಮತ್ತೊಂದರಲ್ಲಿ ‘ಸಾವಿಲ್ಲದ ಮನೆಯ ಸಾಸುವೆಕಾಳು’ ಎಂಬ ಕತೆಯಿದೆ. ಈ ಎರಡು ಘಟನೆಯನ್ನು ವಿವರಿಸುವಂಥ ಬಹುಪಾಲು ಪದ್ಯಗಳು ಸರಳವಾಗಿ, ವಾಚನಾರ್ಹ ಆಗುವಂತೆ ರಚಿಸಲಾಗಿದೆ.
ಲೇಖಕ ಜಾನಕೀತನಯ ಹಾಗೂ ಪ್ರಕಾಶಕ? ಬಹಳ ಎಚ್ಚರವಹಿಸಿ ಪ್ರಿಯದರ್ಶಿ ಮತ್ತು ಕಿಸಾಗೋತಮಿ ಕೃತಿಯನ್ನು ಬೆಳಕಿಗೆ ತಂದಿದ್ದಾರೆ. ವಾಸ್ತವ ಹೀಗಿರುವಾಗ ಸದರಿ ಪುಸ್ತಕವು ಕೇವಲ ಬೌದ್ಧ ಧರ್ಮೀಯರಿಗೂ ಅಥವ ಬುದ್ಧನನ್ನು ಇಷ್ಟಪಟ್ಟವರಿಗೂ ಮಾತ್ರವಲ್ಲದೆ ಪ್ರತಿಯೊಬ್ಬ ಓದುಗನಿಗೂ ಇಷ್ಟವಾಗುವಂತಿದೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತ ಅಲ್ಲಲ್ಲಿ ತುಸು ತಿಳುವಳಿಕೆ ನೀಡುತ್ತದೆ. ಆದ್ದರಿಂದ ಯಾರು ಬೇಕಾದರೂ ಇದನ್ನು ಕೊಂಡು ಓದಬಹುದು.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು ಪ್ರಸಾರಾಂಗ ಉಪನಿರ್ದೇಶಕ ಆರ್.ಎಲ್.ಅನಂತರಾಮಯ್ಯ ನವರ ಸಂಪಾದಕತ್ವದ “ಗ್ರಂಥಲೋಕ” ಮಾಸಿಕದಲ್ಲಿ ಪ್ರಕಟಿತ, ಸೆಪ್ಟೆಂಬರ್ 1982)
2) ಕಾದಂಬರಿ: ಅಂತರ್ಗೀತ
ಲೇಖಕಿ: ಈಚನೂರು ಜಯಲಕ್ಷ್ಮಿ
ಕನ್ನಡ ಕಾದಂಬರಿ ಲೋಕದಲ್ಲಿ ಈಚನೂರು ಜಯಲಕ್ಷ್ಮಿ ಹೆಸರು ತಿಳಿಯದಿರುವ ಕಾದಂಬರಿ ಪ್ರಿಯರು ಇಲ್ಲ?! ಪ್ರಸ್ತುತ ಕಾದಂಬರಿಯ ಹೀರೋನ ಸ್ವಭಾವ ಬಲು ವಿಚಿತ್ರ ಬಹಳ ವಿಭಿನ್ನ, ಇದೇ ಇಲ್ಲಿನ ರಹಸ್ಯ! ತನ್ನ ಯೌವ್ವನದ ಬಹಳಷ್ಟು ದಿನಗಳನ್ನು ಸಕಾರಣವಿಲ್ಲದೆ ವ್ಯರ್ಥವಾಗಿ ಕಳೆಯುತ್ತ ಅರ್ಥವಿಲ್ಲದ ಸಮಸ್ಯೆಗಳ ಜಂಜಾಟಕ್ಕೆ ಸಿಲುಕುತ್ತಾನೆ.
ಕಾದಂಬರಿಯ ನಾಯಕನು ಓರ್ವ ವಿಭಿನ್ನ ಸ್ವಭಾವದ ವ್ಯಕ್ತಿ. ತನ್ನನ್ನ ಪ್ರೀತಿಸಿದವರನ್ನು ಸ್ವಾರ್ಥಿ ಎಂದೂ ತೀರ್ಮಾನಿಸುತ್ತಾನೆ, ತನ್ನಬಗ್ಗೆ ಉಡಾಫೆ ಮಾಡಿದವರನ್ನು ದುರಹಂಕಾರಿ ಎಂದೂ ನಿರ್ಧರಿಸಿಬಿಡುತ್ತಾನೆ. ತನ್ನ ಸುತ್ತಮುತ್ತಲಿನ ಎಲ್ಲರನ್ನೂ ಸಹ ಅಷ್ಟೇಏಕೆ ಪರಿಸರವನ್ನೂ ತನ್ನದೇ ದೃಷ್ಟಿಕೋನದಲ್ಲಿ ಅಥವಾ ಕೇವಲ ತನ್ನ ಮೂಗಿನ ನೇರಕ್ಕೆ ಮಾತ್ರ ತೆಗೆದುಕೊಂಡು ಅಳೆದು ಸುರಿಯುವಂಥ ವಿಚಿತ್ರ ಗುಣದವನು?!
ಇಂತಹ ಅಸಹಜ ಮಾನಸಿಕ ಒತ್ತಡವುಳ್ಳ ಕಾದಂಬರಿಯ ಕಥಾನಾಯಕ ಓರ್ವ ಬಾಲವಿಧವೆಯನ್ನ ತಾನುಮಾತ್ರ ಪ್ರೀತಿಸುತ್ತಾನೆ. ಒನ್ ವೇ ಲವ್ ಇರಬಹುದೇನೋ, ಆಕೆಯಿಂದಲೂ ತಿರಸ್ಕೃತನಾಗಿ ತನ್ನ ಬಾಳನ್ನು ತಾನೇ ದುರಂತ ಆಗಿಸಿಕೊಳ್ಳುತ್ತಾನೆ. ಇದು ಸ್ವಯಂಕೃತ ಅಪರಾಧವೋ, ಮೂರ್ಖತನವೋ ಅಥವ ವಿಧಿವಿಲಾಸವೋ ತಿಳಿಯದೇ ತನ್ನ ಜೇಡರಬಲೆಗೆ ತಾನೇ ಸಿಲುಕಿ ಯೌವ್ವನದ ಹಂತದಲ್ಲೇ ಜೀವನ ಅವನತಿ ಹೊಂದುತ್ತಾನೆ! ಈತನ ಅಲ್ಪಾಯುಷ್ಯ ಬದುಕಿನ ಪ್ರತಿಯೊಂದು ಸಂದರ್ಭ ಸನ್ನಿವೇಶ ಮಹಿಳಾ ಓದುಗರ ತನುಮನ ಕಲಕುವಂತೆ ಬರೆಯಲಾಗಿದೆ. ವಿನಾಕಾರಣ ಓದುಗರಿಗೆ ಭ್ರಮನಿರಸನ ಉಂಟುಮಾಡುತ್ತದೆ. ಆದ್ದರಿಂದ ಜಾಣರಾದವರು ಕಾದಂಬರಿಯನ್ನು ಗಂಭೀರವಾಗಿ ಅವಲೋಕನ ಮಾಡದಿರುವುದು ಸೂಕ್ತ.
ಈಚನೂರು ಜಯಲಕ್ಷ್ಮಿಯವರ “ಅಂತರ್ಗೀತ” ಟೋಟಲ್ ಕನ್ಪ್ಯೂಷನ್ಗೆ ಅವಕಾಶ ನೀಡದಿದ್ದರು ಅರ್ಥಪೂರ್ಣ ಎನಿಸುವಲ್ಲಿ ಸಮಗ್ರತೆಯ ಕೊರತೆ ಕಂಡುಬರುತ್ತದೆ. ಆದರೂ ಲೇಖಕಿಯು ಅವಶ್ಯಕ ಲಿಮಿಟೆಡ್ ಪಾತ್ರಗಳನ್ನು ಸೃಷ್ಟಿಸಿ ಕಾದಂಬರಿ ಮೂಲಕ ಓದುಗರಿಗೆ ಹೇಳಬಯಸಿದ್ದು ಬಹುಶಃ,”ತಾನು ಪ್ರೀತಿಸಿದವರಿಗಿಂತಲೂ ತನ್ನನ್ನ ಪ್ರೀತಿಸುವವರೇ ಮಿಗಿಲು”ಎಂದು ಇರಬಹುದೇನೋ..?!
(ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ, ಮೈವಿವಿ ಮಾನಸಗಂಗೋತ್ರಿ, ಮೈಸೂರು-570006, ಚೇತನ ಕನ್ನಡ ಸಂಘದ ಪ್ರಕಾಶನ, ಸ.ರ. ಸುದರ್ಶನ ಸಂಪಾದಕತ್ವದ ಮಾಸಪತ್ರಿಕೆ “ಪುಸ್ತಕ ಪುರವಣಿ”ಯಲ್ಲಿ ಪ್ರಕಟಿತ ಜುಲೈ 1978)
3)ಕಾದಂಬರಿ: ಸೌಭಾಗ್ಯಸಂಪದ
ಲೇಖಕಿ: ಹೆಚ್.ಜಿ.ರಾಧಾದೇವಿ
“ದೇವರೇ ಇಲ್ಲ, ಅದು ಕೇವಲ ಮೂಢನಂಬಿಕೆ” ಮುಂತಾದ ಹತ್ತುಹಲವು ಒಡಂಬಡಿಕೆ ಇರುವ ಇವತ್ತಿನ ದಿನಗಳಲ್ಲಿ “ದೇವರಿದ್ದಾನೆ, ದೇವರನ್ನು ನಂಬಿಕೆಟ್ಟವರಿಲ್ಲ” ಎಂಬ ಗಾಢನಂಬಿಕೆಯನ್ನು ಪುಷ್ಟೀಕರಿಸುವ ಕಾದಂಬರಿ. ದೇವರಿಲ್ಲ ಅಥವ ದೇವರಿದ್ದಾನೆ ಎಂಬ ಎರಡೇ ವಿಷಯವನ್ನು ಪ್ರತಿಪಾದಿಸುತ್ತದೆ. ಅಲ್ಪಾವಧಿಯಲ್ಲಿ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಹೆಚ್.ಜಿ. ರಾಧಾದೇವಿಯವರ ಮತ್ತೊಂದು ಕೃತಿಇದು. ಅಗ್ರ ಮಹಿಳಾ ಲೇಖಕಿಯರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಇವರೂಸಹ ಈ ಮೂಲಕ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.
ಓರ್ವ ಸಂಪ್ರದಾಯಸ್ಥ ಹಿಂದೂ ಮಹಿಳೆಯ ಅಚಲ ವಿಶ್ವಾಸದ ಅಭಿಪ್ರಾಯವನ್ನು ‘ರತ್ನ’ ಎಂಬ ಸ್ತ್ರೀ ಪಾತ್ರದ ಮೂಲಕ ಪ್ರತಿನಿಧಿಸಿ ಕೇಂದ್ರೀಕರಿಸಿದ್ದಾರೆ. ಆಡಂಭರ ಇಲ್ಲದಂತೆ ಡೌಲು ಡಂಭಾಚಾರಕ್ಕೆ ಒತ್ತು ಕೊಡದಂತೆ ಇತಿಮಿತಿಯಲ್ಲಿ ಪಾತ್ರಗಳನ್ನ ಸೃಷ್ಟಿಸಿ ಸರಳವಾದ ಸುಂದರ ಶೈಲಿಯಲ್ಲಿ ಹೆಣೆದಿದ್ದರೂ “ಹೊಸ ಶೀಶೆಯಲ್ಲಿ ಹಳೆಯ ಪಾನಕ ತುಂಬಿದಂತೆ” ಇದೆ. ಆದರೆ ಹೆಂಗರುಳಿನ ಪುರುಷರ ಮತ್ತು ಮುಗ್ಧ ಮಹಿಳಾ ಓದುಗರ ಮನ ಮಿಡಿಯುವಂತೆ ರಚಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಅಷ್ಟೇನೂ ದೊಡ್ಡಗಾತ್ರ ಅಲ್ಲದ ದುಬಾರಿಬೆಲೆ ಇಲ್ಲದ ಆಧ್ಯಾತ್ಮಿಕ ಅಂಶಉಳ್ಳ ಈ ಕಾದಂಬರಿಯನ್ನು ಇಷ್ಟಪಟ್ಟವರು ಖರೀದಿಸಿ ಓದಬಹುದು.
(ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-6, ಚೇತನ ಕನ್ನಡ ಸಂಘದ ಪ್ರಕಾಶನ ಮತ್ತು ಸ.ರ.ಸುದರ್ಶನ ರವರ ಸಂಪಾದಕತ್ವದ “ಪುಸ್ತಕ ಪುರವಣಿ” ಮಾಸಪತ್ರಿಕೆಯಲ್ಲಿ ಪ್ರಕಟಿತ, ಜುಲೈ 1978)
4) ಪುಸ್ತಕ ವಿಮರ್ಶೆ : ಕಥಾಸಂಕಲನ
ಮಲಯಾಳಂ ಮೂಲಕೃತಿ : ಬಂಜೆ ಅನುವಾದಕ : ಡಾ.ಬಿ.ಕೆ.ತಿಮ್ಮಪ್ಪ
ಗಡಿನಾಡು ಕನ್ನಡಿಗರಲ್ಲಿ, ವಿಶೇಷವಾಗಿ ಕೇರಳ-ಕರ್ನಾಟಕ ಗಡಿನಾಡು ಕನ್ನಡ ಸಾಹಿತಿಗಳಲ್ಲಿ ಕಯ್ಯಾರ ಕಿಜ್ಞಣ್ಣರೈ ಅಗ್ರಗಣ್ಯ. ಇವರ ನಂತರ ಪ್ರೊ.ಬಿ.ಕೆ.ತಿಮ್ಮಪ್ಪ ಅಗ್ರಸ್ಥಾನ ಪಡೆದಿದ್ದಾರೆ. ಈ ಇಬ್ಬರಿಗೆ ಮಾ(ಪಿ)ತೃಭಾಷೆ ಇದ್ದಂತೆ ಕನ್ನಡ-ಮಲಯಾಳಂ. ಹೀಗಾಗಿ ಎರಡೂ ಭಾಷೆಗಳ ಪರಸ್ಪರ ಅನುವಾದ ಕೈಂಕರ್ಯದಿಂದ ಕನ್ನಡ ಮತ್ತು ಮಲಯಾಳಂ ಸಾಹಿತ್ಯ ಭಂಡಾರ ಹಿಗ್ಗುತ್ತಿದೆ. ಕಳೆದ 15ವರ್ಷದಿಂದೀಚೆಗೆ, ಕನ್ನಡ ಸಾಹಿತ್ಯಕ್ಕೆ ಪ್ರತಿಯೊಬ್ಬ ಅನುವಾದ ಸಾಹಿತಿಯ ಕಾಣಿಕೆ ಗಣನೀಯ. ಅದರಲ್ಲೂ ವಿಶೇಷವಾಗಿ ಡಾ.ಬಿ.ಕೆ.ತಿಮ್ಮಪ್ಪನವರ ಕೊಡುಗೆಯಂತೂ ಅಪಾರ.
‘ಬಂಜೆ’ ಪುಸ್ತಕದಲ್ಲಿ ಕಾಸರಗೋಡು ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿರುವ ತಿಮ್ಮಪ್ಪನವರು ಎಂದಿನಂತೆ ಮಲಯಾಳಂ ಮೂಲದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿ ಓದುಗರಿಗೆ ಅರ್ಥವಾಗುವಂತೆ ಅಚ್ಚುಕಟ್ಟಾದ ಶೈಲಿಯಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿರುವ ಬಹುತೇಕ ಕತೆಗಳು ಎಲ್ರಿಗು ಇಷ್ಟವಾಗುವಂತೆ ಕುತೂಹಲ ಕೆರಳಿಸಿ ವಾಚಕರನ್ನು ಸುಲಭವಾಗಿ ಹಿಡಿದಿಡುತ್ತವೆ. ಸರಳ ಅನುವಾದವು ವಾಚನಾರ್ಹವಾಗಿದ್ದು ಎಲ್ಲ ವರ್ಗದವರನ್ನು ಓದಿಸಿಕೊಂಡು ಹೋಗುತ್ತದೆ.
ರೈಲ್ವೆ ಸ್ಟೇಶನ್, ಬಸ್ ನಿಲ್ದಾಣದ ಅಂಗಡಿಗಳಲ್ಲೂ ಕೊಂಡು ಓದುವ ಬೆಲೆಗೆ ಸಿಗುತ್ತದೆ. ವಿದ್ಯಾರ್ಥಿಗೆ, ಗೃಹಿಣಿಯರಿಗೆ, ಸುಲಭವಾಗಿ ಅರ್ಥವಾಗುವಂತಿದೆ. ಈ ಕಾರಣಕ್ಕೆ ಕೃತಿಯು ಸ್ವಾಗತಾರ್ಹ ಮತ್ತು ಕರ್ತೃವು ಅಭಿನಂದನಾರ್ಹ. ಮಲಯಾಳಂನ ವಿವಿಧ ಲೇಖಕರ ಕತೆಗಳನ್ನು ಈ ಕಥಾ ಸಂಕಲನದಲ್ಲಿ ಅಡಕಗೊಳಿಸಿರುವುದು ಓದುಗರ ದೃಷ್ಟಿಯಿಂದ ಗಮನಾರ್ಹ ಅಂಶ.
(ಅಂಚೆ ತೆರಪಿನ ಶಿಕ್ಷಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-6, ಆಗಸ್ಟ್ 1978 ‘ಪುಸ್ತಕ ಪುರವಣಿ’ ಮಾಸಪತ್ರಿಕೆಯಲ್ಲಿ ಪ್ರಕಟಿತ, ಸ.ರ.ಸುದರ್ಶನ, ಸಂಪಾದಕ, ಮೈಸೂರು ಚೇತನ ಕನ್ನಡ ಸಂಘ)
5)ಕಾದಂಬರಿ: ಒಲಿದುಬಂದಅಪ್ಸರೆ
ಲೇಖಕಿ: ಹೆಚ್.ಜಿ.ರಾಧಾದೇವಿ
ರಾಜಲಕ್ಷ್ಮಿ ಪ್ರಕಾಶನ, ಬಳೇಪೇಟೆ, ಬೆಂಗಳೂರು
‘ಒಲಿದು ಬಂದ ಅಪ್ಸರೆ’ ಎಂಬ ಈ ಕಾದಂಬರಿಯಲ್ಲಿ ಮೂರು ಬೇರೆಬೇರೆ ಗುಣವುಳ್ಳ ಪಡ್ಡೆ ಹುಡ್ಗರಾದ ಅಶೋಕ, ರಾಜೇಶ, ಹಾಗೂ ಹರ್ಷ ಎಂಬ ಮೂರು ಪಾತ್ರಗಳನ್ನು ಸೃಷ್ಟಿಸಲಾಗಿದೆ. ಈ ಮೂವರು ತರುಣರ ಸುತ್ತ ನಡೆಯುವಂಥ ಅವರವರದ್ದೆ ಆದ ಪ್ರತ್ಯೇಕ ಆಂತರಿಕ ಹೋರಾಟ.
ವೈಯಕ್ತಿಕವಾಗಿ ಒಬ್ಬೊಬ್ಬರ ಒಳಮನಸ್ಸಿನ ತುಮುಲ, ಇತ್ಯಾದಿಗಳನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ಜತೆಗೇ ಮನುಷ್ಯನ ಜೀವನದ ಹಲವು ಮುಖಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ ಕರ್ನಾಟಕದ ಖ್ಯಾತ ಕಾದಂಬರಿಗಾರ್ತಿ ಎನಿಸಿ ಪ್ರಸ್ತುತ ಚಾಲ್ತಿಯಲ್ಲಿರುವ ಹೆಚ್.ಜಿ.ರಾಧಾದೇವಿ.
ಮಾನವನ ವಿದ್ಯೆ, ಬಲ, ರೂಪ, ಗುಣ, ನಡತೆ, ಹಣ, ಮುಂತಾದ ಎಲ್ಲದಕ್ಕಿಂತಲೂ ಹೆಚ್ಚು ಶಕ್ತಿಯುತವಾದ್ದು ಮತ್ತು ಮುಖ್ಯವಾದ್ದು ‘ದೈವಬಲ’. ಈ ಜಗತ್ತಿನ ಅತ್ಯಂತ ಪ್ರಬಲವಾದ ಪ್ರಮುಖ ಶಕ್ತಿಯೇ ದೇವರು ಎಂಬುದನ್ನು ಎತ್ತಿ ಹಿಡಿಯಲಾಗಿದೆ. ದೈವಬಲವನ್ನು ರುಜುವಾತು ಪಡಿಸುವುದೆ ಕಾದಂಬರಿ ಸಾರಾಂಶ. ಬಹುತೇಕ ಎಲ್ಲ ಪಾತ್ರಗಳು ಜೀವಂತ ಇರುವಂತೆ ಸಹಜ ಶೈಲಿಯಲ್ಲಿ ಬರೆಯಲಾಗಿದೆ ಎಂಬುದೇ ವೈಶಿಷ್ಟ್ಯ. ಯಾರದರೂ ಸರಿ, ಒಮ್ಮೆ ಓದಬಹುದಾಗಿದೆ.
(ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ, ಮೈವಿವಿ, ಮಾನಸಗಂಗೋತ್ರಿ, ಮೈಸೂರು-6, ಜುಲೈ 1978ರ ‘ಪುಸ್ತಕ ಪುರವಣಿ’ ಮಾಸಿಕದಲ್ಲಿ ಪ್ರಕಟಿತ)
6) ಕಾದಂಬರಿ: ಗುರುತುಸಿಗಲಿಲ್ಲ
ಮೂಲಕರ್ತೃ : ಜಿ.ಕೆ.ಮಿತ್ರ ಅನುವಾದಕ : ಡಿ.ಎನ್.ಶ್ರೀನಾಥ್
ಅರವಿಂದ ಮತ್ತು ದಮಯಂತಿ ಎಂಬುವ ಯುವ ಜೋಡಿ ಮದುವೆಯಾಗದೆಯೂ ಗಂಡ-ಹೆಂಡ್ತಿಯರಂತೆ ಒಟ್ಟಿಗೆ ಜೀವಿಸುವಾಗ ವಿನಾಕಾರಣದಿಂದ ತಮಗೇ ಅರಿವಿಲ್ಲದಂತೆ ಬೇರ್ಪಡುತ್ತಾರೆ. ತನ್ನಿಂದ ದೂರವಾಗಿ ಬೇರೆವೊಂದು ಹೆಣ್ಣಿನ ಕೈ ಹಿಡಿದ ತನ್ನವನ ವಿರುದ್ಧ ಸೇಡಿಗೆ ಮನಸು ಮಾಡದ ದಮಯಂತಿ, ತನ್ನಪಾಡಿಗೆ ತಾನಿರಲು ಅನಿವಾರ್ಯವಾಗಿ ನರ್ಸ್ ಹುದ್ದೆ ಆರಿಸಿಕೊಂಡು ರೋಗಿಗಳ ಸೇವೆ ಮಾಡುತ್ತ ಜೀವನ ಸಾಗಿಸುವಲ್ಲಿ ಮಗ್ನಳಾಗುವಳು.
ಕೆಲವು ವರ್ಷದ ನಂತರ ಅರವಿಂದ ತನ್ನ ಹೆಂಡತಿಯನ್ನು ದಮಯಂತಿ ಕ್ಲಿನಿಕ್ಗೆ ಚಿಕಿತ್ಸೆಗೆ ಕರೆತಂದಾಗ ಆಗುವ ಅನಿರೀಕ್ಷಿತ ಭೇಟಿಯಿಂದಾಗಿ ಆತ ಮತ್ತೊಮ್ಮೆ ದಮಯಂತಿಯನ್ನೆ ಅಪೇಕ್ಷಿಸುವನು. ಅರವಿಂದನ ಈ ಆಸೆಯು ಮುಂದುವರೆಯುವಾಗಲೇ ದಮಯಂತಿಯು ಜಿಗುಪ್ಸೆಯಿಂದ ಅಥವ ತ್ಯಾಗ ಜೀವನದ ಬಯಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವಳು, ಇಲ್ಲಿಗೆ ಇಡೀ ಕಾದಂಬರಿ ಮುಕ್ತಾಯಗೊಳ್ಳುತ್ತದೆ!
ಖ್ಯಾತ ಕಾದಂಬರಿಕಾರ ಜಿ.ಕೆ.ಮಿತ್ರ ಬರೆದ ಮೂಲ ಹಿಂದಿ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಜನಪ್ರಿಯ ಲೇಖಕ-ಅನುವಾದಕ ಡಿ.ಎನ್. ಶ್ರೀನಾಥ್. ಯಾವುದೆ ಕೃತಿಯಲ್ಲಾಗಲಿ ಮೂಲದಷ್ಟು ಪಕ್ವತೆ ಪರಿಣಾಮ ಪರಿಮಾಣವನ್ನು ಅನುವಾದ ಕೃತಿಯಲ್ಲಿ ನಿರೀಕ್ಷಿಸಲು ಅಸಾಧ್ಯ. ‘ಗುರುತು ಸಿಗಲಿಲ್ಲ’ ಕಾದಂಬರಿಯನ್ನು ಓದುಗರಿಗೆ ನಿರಾಸೆಯಾಗದ ರೀತಿಯಲ್ಲಿ ಅನುವಾದಿಸಿ, ಒಪ್ಪವಾಗಿ ಲೋಕಾರ್ಪಣೆ ಮಾಡಿದ್ದಾರೆ. ಆದ್ದರಿಂದ ಲೇಖಕ ಮತ್ತು ಪ್ರಕಾಶಕ ಈರ್ವರಿಗೂ ಮೆಚ್ಚುಗೆ ನೀಡಬಹುದು.
(ಮೈವಿವಿ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ಸ.ರ.ಸುದರ್ಶನ ಸಂಪಾದಕತ್ವದ ಚೇತನ ಕನ್ನಡ ಸಂಘದ, ಆಗಸ್ಟ್ 1978ರ ಪುಸ್ತಕ ಪುರವಣಿ ಮಾಸಿಕದಲ್ಲಿ ಪ್ರಕಟಿತ)










ನಮಸ್ಕಾರ ಜನಮನ ಕನ್ನಡ, ನಾನು ಬಿ.ಎ.3ನೇ ಸೆಮಿಸ್ಟರ್ ಕನ್ನಡ ಲಿಟ್ರೇಚರ್ ವಿದ್ಯಾರ್ಥಿ. ಈ ನಿಮ್ಮ “ಅವಲೋಕನ” ಎಂಬ ಪುಸ್ತಕ ವಿಮರ್ಶೆಯ ಪುಟವನ್ನು ಓದಿದ ನಂತರ ರೋಮಾಂಚಕ ಅನುಭವದ ಆನಂದಬಾಷ್ಪದಿಂದ ಈ ನನ್ನ ಕಾಮಂಟ್ಸು…ಕ್ಷಮಿಸಿ… ಕಾಂಪ್ಲಿಮೆಂಟ್ಸ ಮಾಡಿದ್ದೇನೆ ತಪ್ಪಾಗಿದ್ದರೆ ಕ್ಷಮಿಸಿ ಸರ್.
ಈ ಲೇಖನವನ್ನು ನನಗೆ ನಮ್ಮತಾಯಿ (ನಿವೃತ್ತ ಕನ್ನಡ ಪ್ರಾಧ್ಯಾಪಕರು, ಶೇಷಾದ್ರಿ ಪುರಂ ಕಾಲೇಜು, ಬೆಂಗಳೂರು) ಈಗಷ್ಟೇ ವಾಟ್ಸಪ್ ಮೂಲಕ ಕಳಿಸಿದರು. ನಿಮ್ಮ ಪತ್ರಿಕೆಯ ಸಹಾಯದಿಂದ ಯಾವುದೇ ಒಂದು ಪುಸ್ತಕದ ಅಥವ ಕೃತಿಯ ಬಗ್ಗೆ ಹೇಗೆಲ್ಲ”ವಿಮರ್ಶೆ” ಅಥವ “ಟಿಪ್ಪಣಿ”ಬರೆಯಬಹುದು ಎಂಬುದರ ಬಗ್ಗೆ ಒಂದು ಸರಿಯಾದ ಚೌಕಟ್ಟು ಅಥವ ಮಾರ್ಗದರ್ಶನ ಕಂಡುಕೊಅಂಡೆ. ಇದು ನನ್ನ ಅಂತಿಮ(ವರ್ಷದ)5-6ನೇ ಸೆಮಿಸ್ಟರ್ ಮಾಡುವಾಗ ಆಂತರಿಕ ಮೌಲ್ಯ ಮಾಪನ ಪ್ರಾಜೆಕ್ಟ್ ವರ್ಕ್ ಅಸೈನ್ಮೆಅಂಟ್ (internal assignment project works) ಅಧ್ಯಯನಕ್ಕೆ ಹೆಚ್ಚು ಅನುಕೂಲ ಸಿಂಧು ಆಗಲಿದೆ. ನಾನು ಓದುತ್ತಿರುವಾಗ ನನ್ನ ಇಬ್ಬರು ಸಹಪಾಠಿಗಳು ಹಾಗೇ ಸುಮ್ಮನೆ ಇಣುಕಿ ನೋಡಿದವರು, ನನ್ನ ಮೊಬೈಲ್ ಕಿತ್ತುಕೊಂಡು ಓದಲು ಶುರುಮಾಡಿದವರು, ಕಡೇವರೆಗೂ ಓದಿ ಮುಗಿಸಿದ ನಂತರ ಹಿಂದಿರುಗಿಸಿದರು. ಎಲ್ಲರ ಮುಖದಲ್ಲಿ ಸಂತಸ ನೆಮ್ಮದಿ. ಏಕೆಂದರೆ ನಾವು ಒಟ್ಟು 28 ವಿದ್ಯಾರ್ಥಿ ಪೈಕಿ 12 ವಿದ್ಯಾರ್ಥಿ “ವಿಮರ್ಶೆ” ಯನ್ನೇ ನಮ್ಮ 3ನೇ ಅಂತಿಮ ವರ್ಷದ ಸ್ಪೆಶಲೈಸೇಶನ್ ಆಗಿ ಆಯ್ಕೆ ಮಾಡುವವರಿದ್ದೇವೇ. ನಮ್ಮೆಲ್ಲರಿಗೂ ಇದು ಮೃಷ್ಟಾನ್ನ ಭೋಜನ ಇದ್ದಂತೆ. ದಯವಿಟ್ಟು ಕರ್ನಾಟಕದ ಅಥವ ಕನ್ನಡದ ಯಾವ ಪತ್ರಿಕೆಯಲ್ಲೂ ನಮ್ಮಂಥ ಐಚ್ಛಿಕ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುವಂಥ ಅದರಲ್ಲೂ ಕವನ,ಕಥೆ,ಕಾದಂಬರಿ,ಅನುವಾದಸಾಹಿತ್ಯ,ಕಾವ್ಯಮೀಮಾಂಸೆ ವಿಭಾಗಗಳಲ್ಲಿ ವಿಮರ್ಶೆಯ ಬಗ್ಗೆ ವಾರಕ್ಕೆ ಅಥವ ತಿಂಗಳಿಗೆ ಒಂದೇಒಂದು ಲೇಖನವೂ ಪ್ರಕಟ ಆಗುತ್ತಿಲ್ಲ. ಇಂಥ ದುರ್ಭಿಕ್ಷದ ಬರಗಾಲದಲ್ಲಿ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗು ತ್ತಿರುವ ಇಂಥ ಸೊಬಗಿನ ಸ್ವರ್ಣಅವಕಾಶ ನಮಗೆಲ್ಲ ತುಂಬ ತುಂಬ ತುಂಬ ಹೇಳಲಾರದಷ್ಟು ಉಪಯುಕ್ತ ಮಾಹಿತಿಯು ಮರಳುಗಾಡಿನಲ್ಲಿ ಓಯಸಿಸ್ ಕಂಡಂತೆ ಆಗಿದೆ. ಇನ್ನೂ ಬರೆಯಲು ನಮಗೆ ಬಹಳ ಇದ್ದರೂ ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇವೆ. ನಿಮ್ಮ ಪ್ರೀತಿಯ : ಸಂದೇಶ್, ಕಾರಂತ್, ಸುದರ್ಶನಭಟ್, ಸಂಸ್ಕೃತಿರಾವ್, ರಮೇಶಕಾಮತ್, ಶರಣ್, ದೀಪಾಶರ್ಮ, ಗೀತಾಂಜಲಿ, ಅರವಿಂದ್,ಸುಘೋಶ್,ಜಗದೀಶ್,ಸುಭಾಷ್.ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನ ಕನ್ನಡ ಸಾಹಿತ್ಯದ ವಿದ್ಯಾರ್ಥಿ ಬಳಗ. ಮರೆತಿದ್ದವು ದಯವಿಟ್ಟು ಈ ರೀತಿಯ ಇನ್ನೂಹೆಚ್ಚಿನ ವಿಮರ್ಶಾ ಲೇಖನ ಪ್ರಕಟಿಸಬೇಕೆಂದು ವಿನಂತಿಸುತ್ತೇವೆ. ಇದನ್ನು ಬೇರೆ ಕಾಲೇಜಿನ ವಿದ್ಯಾರ್ಥಿವೃಂದಕ್ಕೂ ಕಳಿಸುತ್ತೇವೆ. ಲೇಖಕರಾದ ಕುಮಾರಕವಿ ನಟರಾಜ ಅವರಿಗೆ ನಮ್ಮೆಲ್ಲರ ಕೃತಜ್ಞತಾಪೂರ್ಣ ಧನ್ಯವಾದಗಳು.
ನಮಸ್ಕಾರ ಜನಮನ ಕನ್ನಡ, ನಾನು ಬಿ.ಎ.3ನೇ ಸೆಮಿಸ್ಟರ್ ಕನ್ನಡ ಲಿಟ್ರೇಚರ್ ವಿದ್ಯಾರ್ಥಿ. ಈ ನಿಮ್ಮ “ಅವಲೋಕನ” ಎಂಬ ಪುಸ್ತಕ ವಿಮರ್ಶೆಯ ಪುಟವನ್ನು ಓದಿದ ನಂತರ ರೋಮಾಂಚಕ ಅನುಭವದ ಆನಂದಬಾಷ್ಪದಿಂದ ಈ ನನ್ನ ಕಾಮಂಟ್ಸು…ಕ್ಷಮಿಸಿ… ಕಾಂಪ್ಲಿಮೆಂಟ್ಸ ಮಾಡಿದ್ದೇನೆ ತಪ್ಪಾಗಿದ್ದರೆ ಕ್ಷಮಿಸಿ ಸರ್.
ಈ ಲೇಖನವನ್ನು ನನಗೆ ನಮ್ಮತಾಯಿ (ನಿವೃತ್ತ ಕನ್ನಡ ಪ್ರಾಧ್ಯಾಪಕರು, ಶೇಷಾದ್ರಿ ಪುರಂ ಕಾಲೇಜು, ಬೆಂಗಳೂರು) ಈಗಷ್ಟೇ ವಾಟ್ಸಪ್ ಮೂಲಕ ಕಳಿಸಿದರು. ನಿಮ್ಮ ಪತ್ರಿಕೆಯ ಸಹಾಯದಿಂದ ಯಾವುದೇ ಒಂದು ಪುಸ್ತಕದ ಅಥವ ಕೃತಿಯ ಬಗ್ಗೆ ಹೇಗೆಲ್ಲ”ವಿಮರ್ಶೆ” ಅಥವ “ಟಿಪ್ಪಣಿ” ಬರೆಯಬಹುದು ಎಂಬುದರ ಬಗ್ಗೆ ಒಂದು ಸರಿಯಾದ ಚೌಕಟ್ಟು ಅಥವ ಮಾರ್ಗದರ್ಶನ ಕಂಡುಕೊಅಂಡೆ. ಇದು ನನ್ನ ಅಂತಿಮ(ವರ್ಷದ)5-6ನೇ ಸೆಮಿಸ್ಟರ್ ಮಾಡುವಾಗ ಆಂತರಿಕ ಮೌಲ್ಯ ಮಾಪನ ಪ್ರಾಜೆಕ್ಟ್ ವರ್ಕ್ ಅಸೈನ್ಮೆಅಂಟ್ (internal assignment project works) ಅಧ್ಯಯನಕ್ಕೆ ಹೆಚ್ಚು ಅನುಕೂಲ ಸಿಂಧು ಆಗಲಿದೆ. ನಾನು ಓದುತ್ತಿರುವಾಗ ನನ್ನ ಇಬ್ಬರು ಸಹಪಾಠಿಗಳು ಹಾಗೇ ಸುಮ್ಮನೆ ಇಣುಕಿ ನೋಡಿದವರು, ನನ್ನ ಮೊಬೈಲ್ ಕಿತ್ತುಕೊಂಡು ಓದಲು ಶುರುಮಾಡಿದವರು, ಕಡೇವರೆಗೂ ಓದಿ ಮುಗಿಸಿದ ನಂತರ ಹಿಂದಿರುಗಿಸಿದರು. ಎಲ್ಲರ ಮುಖದಲ್ಲಿ ಸಂತಸ ನೆಮ್ಮದಿ. ಏಕೆಂದರೆ ನಾವು ಒಟ್ಟು 28 ವಿದ್ಯಾರ್ಥಿ ಪೈಕಿ 12 ವಿದ್ಯಾರ್ಥಿ “ವಿಮರ್ಶೆ” ಯನ್ನೇ ನಮ್ಮ 3ನೇ ಅಂತಿಮ ವರ್ಷದ ಸ್ಪೆಶಲೈಸೇಶನ್ ಆಗಿ ಆಯ್ಕೆ ಮಾಡುವವರಿದ್ದೇವೇ. ನಮ್ಮೆಲ್ಲರಿಗೂ ಇದು ಮೃಷ್ಟಾನ್ನ ಭೋಜನ ಇದ್ದಂತೆ. ದಯವಿಟ್ಟು ಕರ್ನಾಟಕದ ಅಥವ ಕನ್ನಡದ ಯಾವ ಪತ್ರಿಕೆಯಲ್ಲೂ ನಮ್ಮಂಥ ಐಚ್ಛಿಕ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುವಂಥ ಅದರಲ್ಲೂ ಕವನ,ಕಥೆ,ಕಾದಂಬರಿ,ಅನುವಾದಸಾಹಿತ್ಯ,ಕಾವ್ಯಮೀಮಾಂಸೆ ವಿಭಾಗಗಳಲ್ಲಿ ವಿಮರ್ಶೆಯ ಬಗ್ಗೆ ವಾರಕ್ಕೆ ಅಥವ ತಿಂಗಳಿಗೆ ಒಂದೇಒಂದು ಲೇಖನವೂ ಪ್ರಕಟ ಆಗುತ್ತಿಲ್ಲ. ಇಂಥ ದುರ್ಭಿಕ್ಷದ ಬರಗಾಲದಲ್ಲಿ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗು ತ್ತಿರುವ ಇಂಥ ಸೊಬಗಿನ ಸ್ವರ್ಣಅವಕಾಶ ನಮಗೆಲ್ಲ ತುಂಬ ತುಂಬ ತುಂಬ ಹೇಳಲಾರದಷ್ಟು ಉಪಯುಕ್ತ ಮಾಹಿತಿಯು ಮರಳುಗಾಡಿನಲ್ಲಿ ಓಯಸಿಸ್ ಕಂಡಂತೆ ಆಗಿದೆ. ಇನ್ನೂ ಬರೆಯಲು ನಮಗೆ ಬಹಳ ಇದ್ದರೂ ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇವೆ. ನಿಮ್ಮ ಪ್ರೀತಿಯ : ಸಂದೇಶ್, ಕಾರಂತ್, ಸುದರ್ಶನಭಟ್, ಸಂಸ್ಕೃತಿರಾವ್, ರಮೇಶಕಾಮತ್, ಶರಣ್, ದೀಪಾಶರ್ಮ, ಗೀತಾಂಜಲಿ, ಅರವಿಂದ್,ಸುಘೋಶ್,ಜಗದೀಶ್,ಸುಭಾಷ್.ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನ ಕನ್ನಡ ಸಾಹಿತ್ಯದ ವಿದ್ಯಾರ್ಥಿ ಬಳಗ. ಮರೆತಿದ್ದವು ದಯವಿಟ್ಟು ಈ ರೀತಿಯ ಇನ್ನೂಹೆಚ್ಚಿನ ವಿಮರ್ಶಾ ಲೇಖನ ಪ್ರಕಟಿಸಬೇಕೆಂದು ವಿನಂತಿಸುತ್ತೇವೆ. ಇದನ್ನು ಬೇರೆ ಕಾಲೇಜಿನ ವಿದ್ಯಾರ್ಥಿವೃಂದಕ್ಕೂ ಕಳಿಸುತ್ತೇವೆ. ಲೇಖಕರಾದ ಕುಮಾರಕವಿ ನಟರಾಜ ಅವರಿಗೆ ನಮ್ಮೆಲ್ಲರ ಕೃತಜ್ಞತಾಪೂರ್ಣ ಧನ್ಯವಾದಗಳು.