ಆದರ್ಶ ವಿದ್ಯಾಲಯದಲ್ಲಿ ಮಕ್ಕಳಿಗೆ ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ ನೀಡದ ಆರೋಪ: ಕ್ರಮಕ್ಕೆ ಆಗ್ರಹ

ಕೆ.ಆರ್.ನಗರ: ಪಟ್ಟಣಕ್ಕೆ ಸಮೀಪದ ಕಾಳೇನಹಳ್ಳಿ ಬಿ.ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಕಳೆದ 10ವರ್ಷಗಳಿಂದ ಮಕ್ಕಳಿಗೆ ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ ನೀಡುತ್ತಿಲ್ಲ ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ಕೃಪಾಂಕ ಸಿಗದೆ ಸರಕಾರಿ ಕೆಲಸ ಪಡೆಯಲು ಅನರ್ಹರಾಗುವಂತಾಗಿದೆ ಎಂದು ಪೋಷಕ ಗ್ಯಾಸ್ ಸುಬ್ಬೇಗೌಡ ಆರೋಪಿಸಿದರು.
ಪಟ್ಟಣದ ಖಾಸಗಿ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 10ವರ್ಷಗಳಿಂದ ಆದರ್ಶವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ ನೀಡದ ಕಾರಣ ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ಕೃಪಾಂಕ ಸಿಗದೆ ಸರಕಾರಿ ಕೆಲಸ ಹಾಗೂ ಇತರೆ ಸರಕಾರದ ಸವಲತ್ತುಗಳು ಸಿಗದೆ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.
ಶಾಲಾ ಮುಖ್ಯಶಿಕ್ಷಕರನ್ನು ಕೇಳಿದರೆ ಈ ಶಾಲೆಯು ಗ್ರಾಮೀಣ ಪ್ರದೇಶಕ್ಕೆ ಬರುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಆದರೆ ಆದರ್ಶ ವಿದ್ಯಾಲಯವು ಪಟ್ಟಣದ ಸಮೀಪದ ಕಾಳೇನಹಳ್ಳಿ ಬಿ. ಗ್ರಾಮದಲ್ಲಿದ್ದು ಈ ಶಾಲೆಯ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಯವರು ಗ್ರಾಮೀಣ ಪ್ರದೇಶ ಎಂದು ಧೃಢೀಕರಣ ನೀಡಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಶಾಲಾ ಮುಖ್ಯಶಿಕ್ಷಕರು, ಕ್ಷೇತ್ರಶಿಕ್ಷಣಾಧಿಕಾರಿ, ಡಿಡಿಪಿಐರವರಿಗೆ ಪತ್ರ ಬರೆದು ದೂರುನೀಡಿ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿ ಈ ಬಗ್ಗೆ ಸೂಕ್ತಕ್ರಮ ಕೈಗೊಂಡು ವಿದ್ಯಾರ್ಥಿಗಳ ಜೀವನದಲ್ಲಿ ಚಲ್ಲಾಟವಾಡದೆ ಅನುಕೂಲ ಕಲ್ಪಿಸಲು ಮುಂದಾಗದಿದ್ದರೆ ಶೀಘ್ರ ಪೋಷಕರ ಸಭೆ ಕರೆದು ಚರ್ಚಿಸಿ ಪಟ್ಟಣದ ಬಿಇಒ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.







