LatestMysore

ಸಾಹಿತ್ಯಾತ್ಮಕ ಪುಸ್ತಕ, ಸುದ್ದಿ ಪತ್ರಿಕೆ, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ಜ್ಞಾನದ ಮೂಲ

ಎಸ್.ಎಸ್.ಎಲ್.ಸಿ. ನಂತರ ಮುಂದೇನು?' ಉಚಿತ ಶೈಕ್ಷಣಿಕ ಮಾರ್ಗದರ್ಶನ ಶಿಬಿರ

 ಮೈಸೂರು: ಸಾಹಿತ್ಯಾತ್ಮಕ ಪುಸ್ತಕಗಳು, ಸುದ್ದಿ ಪತ್ರಿಕೆಗಳು, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಜ್ಞಾನದ ಅಮೂಲ್ಯ ಮೂಲವಾಗಿವೆ. ಇವುಗಳಿಂದ ಸಿಗುವ ಜ್ಞಾನ ಅನನ್ಯವಾದುದು. ಇಂತಹ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವುದರಿಂದ, ಅದು ದ್ವಿಗುಣವಾಗುತ್ತದೆ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆ.ಎಸ್.ಎಸ್. ಬಡಾವಣೆಯ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಉಚಿತ ‘ವೈದ್ಯಕೀಯ ಚಿಕಿತ್ಸ ಶಿಬಿರ ಹಾಗೂ ಎಸ್.ಎಸ್.ಎಲ್.ಸಿ. ನಂತರ ಮುಂದೇನು?’ ಉಚಿತ ಶೈಕ್ಷಣಿಕ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಕ್ಷರ, ಅರಿವು ಮತ್ತು ಆರೋಗ್ಯ ತುಂಬಾ ಮುಖ್ಯ. ಅಕ್ಷರದಿಂದ ಜ್ಞಾನವೂ, ಅರಿವಿನಿಂದ ಅನುಭವವೂ, ಆರೋಗ್ಯದಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವೂ ಲಭಿಸುತ್ತದೆ. ಆದ್ದರಿಂದ, ಈ ಮೂರು ವಿಚಾರಗಳನ್ನು ಕಡೆಗಣಿಸದೆ, ಅವುಗಳನ್ನು ತಮ್ಮದಾಗಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಜನಪರವಾದ ಕೆಲಸಗಳಿಗೆ ಕೈ ಜೋಡುಸುವವರು ವಿರಳವಾಗುತ್ತಿದ್ದಾರೆ. ಸಮಾಜಮುಖಿಯಾಗಿ ಸೇವೆ ಮಾಡುವವರೂ ಇಲ್ಲವಾಗಿದ್ದಾರೆ. ಕೊಳ್ಳುಬಾಕ ಸಂಸ್ಕೃತಿಗೆ ಎಲ್ಲರೂ ತುತ್ತಾಗಿದ್ದಾರೆ. ಮನುಷ್ಯ ಸ್ವಾರ್ಥ ಕೇಂದ್ರಿತವಾಗಿ ಆಲೋಚಿಸುತ್ತಿದ್ದಾನೆ.  ಸಹಬಾಳ್ವೆ ಕಲಿಸುವ ಪ್ರಕೃತಿ ಮತ್ತು ಸಂಸ್ಕೃತಿಯಿಂದ ಮನುಕುಲ ದೂರವಾಗುತ್ತಿದೆ ಎಂದು ವಿಷಾದಿಸಿದರು.

ತಲಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್. ರವಿಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಒತ್ತಡ ಹೇರಬಾರದು. ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ಕೊಡಿಸಬೇಕು. ಹಾಗೆ, ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಕೊಡಿಸಿದರೆ ಸಾಲದು, ಮಕ್ಕಳಿಗೆ ಉತ್ತಮ‌ ಸಂಸ್ಕಾರವೂ ದೊರೆಯುವಂತಹ ವಾತಾವರಣ ಕಲ್ಪಿಸಬೇಕು ಎಂದರು.

ಬಿಜೆಪಿಯ ನಗರ ಘಟಕದ ಕಾರ್ಯದರ್ಶಿ ಎನ್. ಶ್ರೀಕಂಠಮೂರ್ತಿ ಮಾತನಾಡಿದರು. ಕನ್ನಡ ವೃತ್ತಿಪರ ಬಳಗದ ಅಧ್ಯಕ್ಷ ಎಂ.ಸಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ವಿಶ್ರಾಂತ ವಿಷಯ ಪರಿವೀಕ್ಷಕ ಶಾಂತರಾಜು, ನಾಗರತ್ನ ಜ್ಯೂವೆಲ್ಲರಿ ಮಾಲೀಕ ಎನ್. ರಮೇಶ್, ಬಳಗದ ಉಪಾಧ್ಯಕ್ಷ ಎಸ್. ರಂಗಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಳಗದ ಸಹಯೋಗದಲ್ಲಿ ಆಲ್ಫಾ ಆಸ್ಪತ್ರೆಯ ವತಿಯಿಂದ ಉಚಿತ ವೈದ್ಯಕೀಯ ತಪಸಣಾ ಶಿಬಿರ ನಡೆಯಿತು. ಅಕ್ಕಪಕ್ಕದ ಬಡಾವಣೆಯ ನೂರಾರು ಮಂದಿ ನಿವಾಸಿಗಳು ಸದುಪಯೋಗಪಡಿಸಿಕೊಂಡರು. ಲಕ್ಕಿ ಕೂಪನ್ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

admin
the authoradmin

Leave a Reply

Translate to any language you want