LatestMysore

ಡಾ. ರಾಜ್ ಕುಮಾರ್ ಅವರ ಸೇವೆ, ತ್ಯಾಗ, ಸಾಧನೆ ಪರಿಗಣಿಸಿ ‘ಭಾರತ ರತ್ನ ಪ್ರಶಸ್ತಿ’ ನೀಡಲು ಒತ್ತಾಯ

 ಮೈಸೂರು: ಕಲಾ ಜೀವನದ ಮೂಲಕ ನಾಡಿಗಾಗಿ, ನುಡಿಗಾಗಿ, ಒಟ್ಟು ಕನ್ನಡಕ್ಕಾಗಿ ದುಡಿದಿರುವ ಡಾ. ರಾಜ್ ಕುಮಾರ್ ಅವರ ಸೇವೆ, ತ್ಯಾಗ, ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ‘ಭಾರತ ರತ್ನ ಪ್ರಶಸ್ತಿ’ ನೀಡಬೇಕೆಂದು ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರಥಮ ಅಧ್ಯಕ್ಷ ಎಂ. ರಾಮೇಗೌಡ ಒತ್ತಾಯಿಸಿದರು.

ನಗರದ ಜಯನಗರದಲ್ಲಿರುವ ಎಂ. ರಾಮೇಗೌಡರ ನಿವಾಸದಲ್ಲಿ ರಾಮನಗರದ ಸಂಸ್ಕೃತಿ ಸೌರಭ ಟ್ರಸ್ಟ್ ವತಿಯಿಂದ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ‘ಡಾ. ರಾಜ್ ಅಭಿಮಾನಿ ರತ್ನ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.

ಗೋಕಾಕ್ ಚಳವಳಿಯ ಮೂಲಕ ಕನ್ನಡಿಗರಲ್ಲಿ ಕನ್ನಡಾಭಿಮಾನ ಕೆಚ್ಚು ಹೆಚ್ಚಿಸಿದ ಡಾ. ರಾಜ್ ಅವರ ಕೊಡುಗೆ ಅನನ್ಯವಾದುದು. ಅವರ ಇಡೀ ಮನೆತನ ಇಂದಿಗೂ ಸಿನಿಮಾ ಕ್ಷೇತ್ರದಲ್ಲಿ ದುಡಿಯುತ್ತಿದೆ. ಇಂತಹ ಮಹಾನ್ ಕಲಾವಿದನಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳು ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.

ಪ್ರಶಸ್ತಿ ಪ್ರದಾನ ಮಾಡಿದ ಡಾ. ರಾಜ್ ಕಲಾಸಂಘದ (1976 ರಲ್ಲಿ ಸ್ಥಾಪಿತ) ಅಧ್ಯಕ್ಷ ಮಳವಳ್ಳಿ ದೊಡ್ಡಯ್ಯ ಮಾತನಾಡಿ, ಡಾ. ರಾಜ್ ಅವರು ಕಲೆಗಳ ರಾಜ. ಎಲ್ಲಾ ರೀತಿಯ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದವರು. ಜೊತೆಗೆ ತಮ್ಮ ಸಿನಿಮಾದ ಪಾತ್ರಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದವರು‌ ಎಂದು ಬಣ್ಣಿಸಿದರು.

ಡಾ. ರಾಜಕುಮಾರ್ ಅವರ ಕನ್ನಡ ನಿಲುವು ಶ್ಲಾಘನೀಯವಾದುದು. ಸುದೀರ್ಘ ಕಾಲ ಕನ್ನಡ ಚಲನಚಿತ್ರ ರಂಗದಲ್ಲಿ ಸೇವೆ ಸಲ್ಲಿಸಿರುವ ಅವರಿಗೆ ಅಮೆರಿಕದ ‘ಕೆಂಟಕಿ ಕರ್ನಲ್’ ಪ್ರಶಸ್ತಿ ದೊರೆತಿದೆ. ಆದರೆ, ನಮ್ಮದೇ ದೇಶದ ‘ಭಾರತ ರತ್ನ’ ಪ್ರಶಸ್ತಿ ದೊರೆತಿಲ್ಲ. ಆದ್ದರಿಂದ, ಡಾ. ರಾಜ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಎಂ. ರಾಮೇಗೌಡರ ಅಭಿಮತಕ್ಕೆ ದನಿಗೂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಡಾ. ರಾಜಕುಮಾರ್ ಅವರು ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಅಭಿಮಾನಿಗಳನ್ನು ಅಪಾರ ಗೌರವದಿಂದ ಕಂಡವರು. ಅವರ ಅಪ್ಪಟ ಅಭಿಮಾನಿಯಾದ ಎಂ. ರಾಮೇಗೌಡರು ಅಭಿಮಾನಿಗಳ ಸಂಘ ಹುಟ್ಟು ಹಾಕಿ ಕನ್ನಡ ನಾಡು ಮತ್ತು ನುಡಿ ಪರವಾಗಿ ದುಡಿದವರು. ಅವರಿಗೆ ಡಾ. ರಾಜ್ ಅಭಿಮಾನಿ ರತ್ನ ಪುರಸ್ಕಾರ ಲಭಿಸಿರುವುದು ಸೂಕ್ತವಾಗಿದೆ ಎಂದರು.

ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಶಕ್ತಿ ತುಂಬಿದ ಡಾ. ರಾಜ್ ಅವರು ಕನ್ನಡ ಸಂಸ್ಕೃತಿಯನ್ನು ಕಟ್ಡಿ ಬೆಳೆಸಿದರು. ಕನ್ನಡ ಭಾಷೆಯ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರು, ಕನ್ನಡದ ಮನಸ್ಸುಗಳನ್ನು ಬೆಸೆಯುತ್ತಲೇ ಜನಮಾನಸದಲ್ಲಿ ಕನ್ನಡ ಅಭಿಮಾನವನ್ನು ಬಿತ್ತಿದರು ಎಂದು ಸ್ಮರಿಸಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಡಾ. ರಾಜ್ ಅವರ ವ್ಯಕ್ತಿತ್ವ ಕುರಿತು ಬಣ್ಣಿಸಿದರು. ವೇದಿಕೆಯಲ್ಲಿ ಚಲನಚಿತ್ರ ಹಿರಿಯ ಕಲಾವಿದ ಶಿವಕುಮಾರ್ ಆರಾಧ್ಯ, ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ರಾ.ಬಿ. ನಾಗರಾಜ್, ಕಾರ್ಯದರ್ಶಿ ಹೆಚ್.ಪಿ. ಸಿದ್ದರಾಜು, ಖಜಾಂಚಿ ಶಾಮಸುಂದರ್, ಹಿರಿಯ ಗಾಯಕ ಎಸ್. ರಘುನಾಥ್ ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want