ಮುನ್ನೆಚ್ಚರಿಕೆ ಮತ್ತು ಆರಂಭಿಕ ಪತ್ತೆಯಿಂದ ಕ್ಯಾನ್ಸರ್ ಗುಣಪಡಿಸಲು ಸಾಧ್ಯ: ಡಾ.ವಿನಯ ಕುಮಾರ್ ಮುತ್ತಗಿ

ಮೈಸೂರು: ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂದು ಎಂದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ವಿಕಿರಣ ಕ್ಯಾನ್ಸರ್ ತಜ್ಞರಾದ ಡಾ. ವಿನಯಕುಮಾರ್ ಮುತ್ತಗಿರವರು ಹೇಳಿದರು.
ಜೆಎಸ್ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಜಾಗೃತಿ ಮಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುನ್ನೆಚ್ಚರಿಕೆ ಮತ್ತು ಆರಂಭಿಕ ಪತ್ತೆಯೇ ಪ್ರಾಣರಕ್ಷೆಗೆ ದಾರಿ ಮೈಸಿಗರೇಟ್, ಬೀಡಿ, ಗುಟ್ಕಾ ಮತ್ತು ತಂಬಾಕು ಅಗಿಯುವುದು ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿದ್ದು, ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ,
ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಜನರು ತಂಬಾಕು ಮತ್ತು ಮದ್ಯಪಾನದಂತಹ ವ್ಯಸನಗಳಿಂದ ದೂರವಿರಬೇಕು ಮತ್ತು ಸಮರ್ಪಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು, ಯಾವುದೇ ಅಸಹಜ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.
ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಪಿ.ಮಧುರವರು ಮಾತನಾಡಿ ಪ್ರತಿವರ್ಷ ಏಪ್ರಿಲ್ 3ನೇ ವಾರ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ ಈ ವರ್ಷದ ಅಭಿಯಾನವು ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಜೀವ ಉಳಿಸುತ್ತದೆ ಎಂಬ ಆಶಯದೊಂದಿಗೆ ನಡೆಯುತ್ತಿದೆ ಎಂದರು, ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಗೆ ಉತ್ತಮ ಔಷಧಿಗಳು ಲಭ್ಯವಿದೆ ಕ್ಯಾನ್ಸರ್ ಎಂದರೆ ಭಯಭೀತರಾಗುವ ಅವಶ್ಯಕತೆ ಇಲ್ಲ ಚಿಕಿತ್ಸೆ ಪಡೆದು ಸಾಮಾನ್ಯರಂತೆ ಜೀವಿಸಬಹುದು ಹಾಗೂ ಜೆಎಸ್ಎಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಉತ್ತಮ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ಜೆಎಸ್ಎಸ್ ಆಸ್ಪತ್ರೆಯ ವೈದ್ಯಕೀಯ ಆಂಕಾಲಾಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಕಿರಣ್.ಪಿ.ಕೆ ರವರು ಮಾತನಾಡಿ ಈ ದಿನದ ಕಾರ್ಯಕ್ರಮದ ಉದ್ದೇಶ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು, ಇವತ್ತಿನ ದಿನಗಳಲ್ಲಿ ದೇಹದಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದರೆ ಉದಾಹರಣೆಗೆ ಬಾಯಲ್ಲಿ ಹುಣ್ಣು, ಗಂಟಲು ನೋವು, ಧ್ವನಿಯಲ್ಲಿ ಅಸಹಜ ಬದಲಾವಣೆ ಅಥವಾ ಕರ್ಕಶ ಇದ್ದರೆ ಅದನ್ನು ನಿರ್ಲಕ್ಷಿಸದೆ ಬೇಗ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಅನ್ನು ಸೋಲಿಸಬಹುದು ಎಂದರು.
ಜೆಎಸ್ಎಸ್ ಆಸ್ಪತ್ರೆಯ ಕಿವಿ,ಮೂಗು ಮತ್ತು ಗಂಟಲು ವಿಭಾಗದ ಹಿರಿಯ ವೈದ್ಯರಾದ ಡಾ. ಭಾರತಿ ಎಂ.ಬಿ.ರವರು ಮಾತನಾಡಿ ಗುಟ್ಕಾ, ತಂಬಾಕು, ಎಲೆ ಅಡಿಕೆ, ಬೀಡಿ ಸೇವನೆಗಳಿಂದ ದೂರ ಇರಬೇಕು ಹಾಗೂ ಆಹಾರ ನುಂಗಲು ತೊಂದರೆ ಅಥವಾ ಗಂಟಲಿನಲ್ಲಿ ನೋವು, ಕುತ್ತಿಗೆ ಅಥವಾ ಮುಖದ ಭಾಗದಲ್ಲಿ ನೋವುರಹಿತ ಗಡ್ಡೆ ಅಥವಾ ಊತ ಈ ಲಕ್ಷಣಗಳು ಕಂಡುಬಂದರೆ ಅದಕ್ಕೆ ಬೇಗ ಚಿಕಿತ್ಸೆ ಪಡೆದುಕೊಳ್ಳಬೇಕು ನಮ್ಮ ಆರೋಗ್ಯ ನಮ್ಮ ಕೈಯಲ್ಲೆ ಇದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ನಾರಾಯಣಪ್ಪ, ಸರ್ಜಿಕಲ್ ಆಂಕಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ರವಿ ಕೃಷ್ಣಪ್ಪ, ಇಎನ್ಟಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಸಂದೀಪ್ ಎಸ್, ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಮಂಜುಳ ಬಿ.ಪಿ., ಆಂಕಾಲಜಿ ವಿಭಾಗದ ಡಾ. ಸುಮಿತ್, ಇಎನ್ಟಿ ವಿಭಾಗದ ಡಾ.ಅಮೃತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.







