ಕುಮಾರಕವಿ ನಟರಾಜ್ ಅವರ ಪುಸ್ತಕ ವಿಮರ್ಶೆಗಳ ಅವಲೋಕನ ಅಂಕಣಕ್ಕೆ ಓದುಗರಿಂದ ಉತ್ತಮ ಅಭಿಪ್ರಾಯಗಳು ಬಂದಿದ್ದು, ಓದುಗರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಮುಂದುವರೆದ ಭಾಗವನ್ನು ಇಲ್ಲಿ ಪ್ರಕಟಿಸಲಾಗುತ್ತಿದ್ದು, ಈ ಬಾರಿ ನಾಲ್ಕು ಕೃತಿಗಳ ಪರಿಚಯ ಇರಲಿದೆ.. ತಪ್ಪದೆ ಓದಿ…
1-ಕಾದಂಬರಿ: ಬಿಂದಿಯಾ
ಲೇಖಕಿ: ಅಶ್ವಿನಿ
ಖ್ಯಾತ ಲೇಖಕಿ ಅಶ್ವಿನಿ ಬರೆದ ‘ಬಿಂದಿಯಾ’ ಕಾದಂಬರಿಯು ಪುಸ್ತಕ ರೂಪದಲ್ಲಿ ಬೆಳಕಿಗೆ ಬರುವ ಮುನ್ನವೇ ಕನ್ನಡದ ನಂ.1 ಜನಪ್ರಿಯ ವಾರಪತ್ರಿಕೆ ‘ಸುಧಾ’ ನಿಯತಕಾಲಿಕದಲ್ಲಿ ಈ ಮೊದಲೇ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕಾದಂಬರಿ ಲೋಕದಲ್ಲಿ ಹೊಸತನ ನೀಡುವ ಪ್ರಯತ್ನದಿಂದ ಅಸಾಮಾನ್ಯ ಕತೆಯನ್ನು ಆರಿಸಿಕೊಂಡಿದ್ದಾರೆ. ಕ್ಯಾನ್ಸರ್ ರೋಗಿಯೊಬ್ಬಳ ಸುತ್ತಲು ಹೆಣೆದ ಸಾಧಾರಣವಲ್ಲದ ಕಾದಂಬರಿ. ಇದರಲ್ಲಿ ಮಾನವ ಸಹಜ ಭಾವನೆಯನ್ನು ಕೆರಳಿಸುವಂತೆ ಬರೆದಿರುವುದಲ್ಲದೇ ಓದುಗರ ಕಣ್ಣಲ್ಲಿನೀರು ತರಿಸುವಂತೆ ಅತಿಯಾಗಿ ವರ್ಣಿಸಿದ್ದಾರೆ.
“ಕ್ಯಾನ್ಸರ್” ಎಂಬ ಭಯಾನಕ ರೋಗವನ್ನು ತೊಲಗಿಸಲು ರೋಗಿಯಾಗಲೀ, ರೋಗಿಯ ಪೋಷಕರಾಗಲೀ, ಬಂಧು-ಬಳಗ ವಾಗಲೀ, ಅಗತ್ಯವಿರುವ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು, ವೈದ್ಯಕೀಯ ವಿಜ್ಞಾನ ಆಧಾರದ ಮೇಲೆ ತಕ್ಕ ಉಪಶಮನ ಔಷಧ ಪಡೆಯುವುದಕ್ಕೆ ಪ್ರಯತ್ನವನ್ನೆ ಮಾಡಿಲ್ಲ. ಇವತ್ತಿನ ಆಧುನಿಕ ಪ್ರಪಂಚದಲ್ಲಿ ಇಂತಹ ಘೋರ ಖಾಯಿಲೆಗೆ ಸೂಕ್ತ ಪರಿಹಾರ ದೊರಕುವಂಥ ಅಥವ ಸರಿಯಾದ ಮಾಹಿತಿ ಇರುವಂಥ ಅಥವಾ ಉತ್ತಮ ಮಾರ್ಗದರ್ಶನ ನೀಡುವಂತಹ ರೀತಿಯಲ್ಲಿ ಈ ಕಾದಂಬರಿಯನ್ನ ಬರೆದಿಲ್ಲ?
ಇಷ್ಟಾದರೂ ಅಶ್ವಿನಿಯವರನ್ನು ಸದುದ್ದೇಶ ಕಾಳಜಿ ಇರುವ ಸಾಮಾಜಿಕ ಸಂದೇಶ ಸಾರುವ ಪ್ರಾಮಾಣಿಕ ಲೇಖಕಿ ಎನ್ನಬಹುದು! ಏಕೆಂದರೆ ಕ್ಯಾನ್ಸರ್ ರೋಗಿಯಲ್ಲೂ ಸಹಜ ಸದ್ಗುಣ ಮತ್ತು ಸುಶೀಲತೆ ಎದ್ದುಕಾಣುವಂತೆ ಬಣ್ಣಿಸಿದ್ದಾರೆ. ಇದರಲ್ಲಿನ ಮೂರು ಪ್ರಮುಖ ಪಾತ್ರಗಳು; ಬಿಂದು, ವಸುಧ ಹಾಗೂ ಸತ್ಯನ್. ಕಥಾನಾಯಕ ಸತ್ಯನ್, ಒಬ್ಬ ಅಪ್ಪಟ ಪ್ರೇಮಾರಾಧಕ. ಕಥಾನಾಯಕಿ ವಸುಧಾ, ತನ್ನ ಸಹೃದಯತೆಯಿಂದ ಎಲ್ಲವನ್ನು ಗೆದ್ದು ಶ್ರೇಷ್ಠ ಮಟ್ಟಕ್ಕೆ ತಲುಪುವ ನಿಷ್ಕಳಂಕ ತ್ಯಾಗಮಯಿ. ಬಿಂದು, ಓರ್ವ ಅಪ್ರತಿಮ ಪುತ್ಥಳಿಯಂತೆ ಇದ್ದರೂ ಹಲವು ಸಂದರ್ಭಗಳಲ್ಲಿ ಕೆಲವು ಘಳಿಗೆ ಅವಳೊಳಗೂ ಅಸೂಯೆ ಮನೆ ಮಾಡುತ್ತದೆ. ಈ ಎಲ್ಲವನ್ನೂ ಲೇಖಕಿಯು ಸೊಗಸಾಗಿ ವರ್ಣಿಸಿದ್ದಾರೆ. ಒಟ್ಟಾರೆ, ಕಾದಂಬರಿಪ್ರಿಯರಿಗೆ ಇದೊಂದು “ಟೈಮ್ ಪಾಸ್” ಪುಸ್ತಕ ಎನ್ನುವುದರಲ್ಲಿ ಲವಲೇಶವೂ ಸಂಶಯವಿಲ್ಲ.
(ಜುಲೈ1978 ‘ಪುಸ್ತಕಪುರವಣಿ’ ಮಾಸಪತ್ರಿಕೆ ಯಲ್ಲಿ ಪ್ರಕಟಿತ)
2-ಕೃತಿ: ಶರೀರ ಶಿಕ್ಷಣ ತತ್ವಜ್ಞಾನ ಮತ್ತು ತತ್ವದರ್ಶನ
ಕರ್ತೃ: ಕೆ.ಜಿ.ನಾಡಗೀರ & ಆನಂದ ನಾಡಗೀರ
ದೈಹಿಕ ಶಿಕ್ಷಣ ಅಧ್ಯಯನ-ಸಂಶೋಧನೆ ಮಾಡುವಂಥ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅಥವ ಕನ್ನಡ ಭಾಷೆ ಮೂಲಕ ಪರೀಕ್ಷೆ ಬರೆಯಲಿಚ್ಚಿಸುವ ಅವಕಾಶ ವಂಚಿತರಿಗೆ ಕನ್ನಡ ಭಾಷೆಯಲ್ಲಿ “ಶರೀರ ಶಿಕ್ಷಣ” ಬಗ್ಗೆ ದೊರಕುವ ಕೃತಿಗಳು ಬೆರಳೆಣಿಕೆಯಷ್ಟು ಮಾತ್ರ. ಕಳೆದ 20-30 ವರ್ಷದಿಂದಲೂ ದೈಹಿಕ ಶಿಕ್ಷಣ (ಫಿಸಿಕಲ್ ಎಜುಕೇಶನ್) ವಿಭಾಗಕ್ಕೆ ಸಂಬಂಧಿಸಿದ (ಪಠ್ಯ)ಪುಸ್ತಕಗಳನ್ನು ಕನ್ನಡದಲ್ಲಿ ಬರೆಯುವವರು ವಿರಳ. ಒಂದು ವೇಳೆ ಬರೆದರೂ ಸಹ ಪ್ರಕಟಗೊಳಿಸುವ ಪ್ರಕಾಶಕರು ಅಲಭ್ಯ. ಇಂತಹ ತುಟ್ಟಿ ಸಂದರ್ಭದಲ್ಲಿ ಕೆ.ಜಿ.ನಾಡಗೀರ ಮತ್ತು ಆನಂದ ನಾಡಗೀರ ಎಂಬ ಜೋಡಿ ಬರಹಗಾರರು ಈ ಒಂದು ಉಪಯುಕ್ತ ಸಾಹಿತ್ಯ ಕೃಷಿಯನ್ನು ಉತ್ತಮವಾಗಿ ಮಾಡಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.
“ಶರೀರ ಶಿಕ್ಷಣ ತತ್ವಜ್ಞಾನ ಮತ್ತು ತತ್ವದರ್ಶನ” ಎಂಬ ಪುಸ್ತಕ ಬಹಳ ಹಿಂದೆಯೆ ಒಮ್ಮೆ ಪ್ರಕಟವಾಗಿತ್ತು. ಈಗ ಬಹುಶಃ ಪರಿಷ್ಕರಣೆಗೊಂಡ ವಿಸ್ತೃತ ಆವೃತ್ತಿಯಲ್ಲಿ ಮತ್ತೊಮ್ಮೆ ಲೋಕಾರ್ಪಣೆ ಆಗಿರುವುದು ನಿಜಕ್ಕೂ ಅಭಿನಂದನಾರ್ಹ! ಟೀಕೆ ಟಿಪ್ಪಣಿ ಮಾಡುವವರಿಗೆ ಮಾತ್ರ, ಗಹನವಾಗಿ ಹುಡುಕಿದರಷ್ಟೇ ಕಾಣಸಿಗುವ ಕೆಲವು ಗೌಣ ಎನ್ನುವ ತಪ್ಪುಗಳನ್ನು ಒತ್ತಟ್ಟಿಗಿಟ್ಟು ಈ ಬಗೆಯ ಕೃತಿಗಳನ್ನು ಸ್ವಾಗತಿಸಲೇಬೇಕು. ಶರೀರ(ದೈಹಿಕ) ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬರೆಯುವವರೂ ಪ್ರಕಟಿಸುವವರೂ ಇವತ್ತಿನಕಾಲಕ್ಕೆ ಅಗತ್ಯವಾಗಿ ಬೇಕಾಗುತ್ತಾರೆ.
ಕೆಲವು ವರ್ಷಗಳಿಂದೀಚೆಗೆ ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಡಿಮಾಂಡ್/ರೆಕ್ರೂಟ್ಮೆಂಟ್ ಹೆಚ್ಚುತ್ತಿರುವ ಕಾರಣ ದೈಹಿಕ(ಶರೀರ)ಶಿಕ್ಷಣ ಅಧ್ಯಯನ ವಿಭಾಗದ ಅಭ್ಯರ್ಥಿಗಳ/ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ವ್ಯಾಯಾಮ ಶಿಕ್ಷಕನಿಗೆ ಮತ್ತು ಬಿ.ಪಿಎಡ್.ವಿದ್ಯಾರ್ಥಿಗೆ ಈ ಪುಸ್ತಕವು ಸಕಲ ರೀತಿಯಲ್ಲಿ ಅವಶ್ಯಕ ಮತ್ತು ಸಹಾಯಕ, ಎನಿಸುವಂತಿದೆ.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು, ಜುಲೈ 1982 ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)
3-ಕೃತಿ: ಜಂಗಮ
ಕರ್ತೃ: ಪಂ.ನಾಗಭೂಷಣಶಾಸ್ತ್ರಿ
ಕರ್ನಾಟಕದ ವೀರಶೈವ ಪಂಡಿತೋತ್ತಮರಲ್ಲಿ ಒಬ್ಬರಾದ ಲೇಖಕ ನಾಗಭೂಷಣಶಾಸ್ತ್ರಿಯು ಸಾಂಸ್ಕೃತಿಕ ಪ್ರಸಾರ ಉಪನ್ಯಾಸ ಗ್ರಂಥಮಾಲೆಯ ೫೦ನೇ ಸಾಹಿತ್ಯ ಕಾಣಿಕೆಯಾಗಿ ‘ಜಂಗಮ’ ಪುಸ್ತಕ ನೀಡುವ ಮೂಲಕ ಜಂಗಮ ತತ್ವದ ಬಗ್ಗೆ ಚಿಕ್ಕದಾದರೂ ಚೊಕ್ಕವಾಗಿ ನಿರೂಪಿಸಿದ್ದಾರೆ. ‘ತತ್ವದ ಬಗ್ಗೆ ಬರೆಯಬೇಕಾದ್ದು ಬಹಳಷ್ಟಿದೆ’ ಎಂದು ಲೇಖಕರೇ ಹೇಳಿರುವಂಥ ನುಡಿಯು ಅಕ್ಷರಶಃ ನಿಜವೆಂದು ಈ ಕೃತಿಯನ್ನು ವಾಚಿಸಿದವರಿಗೆಲ್ಲ ಅನಿಸುತ್ತದೆ.
ಅರ್ಧದಷ್ಟು ಗದ್ಯರೂಪವೂ ಇನ್ನರ್ಧದಷ್ಟು ಪದ್ಯರೂಪವೂ ಇರುವ ಈ ಕಿರುಗ್ರಂಥವು ವೀರಶೈವ ಮತದ ಬಗ್ಗೆ ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜರುಗಿದ ಉಪನ್ಯಾಸ ಕಾರ್ಯಕ್ರಮದ ಒಂದು ತುಣುಕು ಅಷ್ಟೆ? ಇದರಲ್ಲಿ ಇಳಕಲ್ಲಿನ ವಿಜಯ ಮಹಾಂತೇಶ ಮಠದಲ್ಲಿ ಜರುಗಲ್ಪಟ್ಟ ಜಗದ್ಗುರು ಗಂಗಾಧರ ಧರ್ಮ ಪ್ರಚಾರಕ ಮಂಡಳದ ಸಂಸ್ಕೃತಿ ಪ್ರಸಾರೋಪನ್ಯಾಸ ಶಿಬಿರದಲ್ಲಿ ಮಾಡಿದಂಥ ಭಾಷಣದ, ಪ್ರವಚನದ ಸಾರಾಂಶ. ಬಹಳ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಇಂಥ ಆಧ್ಯಾತ್ಮಿಕ ಪುಸ್ತಕಗಳು ಖಂಡಿತವಾಗಿ ಕೊಂಡು ಓದುವ ಎಲ್ಲರಿಗು ಇಷ್ಟವಾಗುತ್ತವೆ.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು ಜುಲೈ1982)ರ ‘ಗ್ರಂಥಲೋಕ’ ಮಾಸಪತ್ರಿಕೆಯಲ್ಲಿ ಪ್ರಕಟಿತ)
4-ಕೃತಿ: ಹೊನ್ನಾಪುರ ಮಠದ ಗದಿಗಯ್ಯ
ಕರ್ತೃ: ಡಾ.ಬಿ.ಕೆ.ಹೊಸಮಠ
ಕನ್ನಡ ಭಾಷೆಯ ಬೆಳವಣಿಗೆಗೆ ಮತ್ತು ಕನ್ನಡ ಭೂಮಿಯ ಅಭಿವೃದ್ಧಿಗಾಗಿ ಕಾಯಾ ವಾಚಾ ಮನಸಾ ತ್ರಿಕರಣ ಶುದ್ಧಿಯಿಂದ ದುಡಿದ ಅಸಂಖ್ಯಾತರಲ್ಲಿ ಮತ್ತೊಬ್ಬ ಪುಣ್ಯ ಪುರುಷ ಹೊನ್ನಾಪುರ ಮಠದ ಶ್ರೀಗದಿಗಯ್ಯ. ಇವರ ಜೀವನ ಚರಿತ್ರೆಯನ್ನು ಒಂದು ಕೃತಿಯನ್ನಾಗಿ ಬೆಳಕಿಗೆ ತಂದಿದ್ದಾರೆ ಲೇಖಕ ಡಾ.ಬಿ.ಕೆ.ಹೊಸಮಠ. ಗದಿಗಯ್ಯನವರ ವಂಶವೃಕ್ಷದ ಪಟ್ಟಿಯೊಡನೆ ಆಸಕ್ತರ ವಾಚನೆಗೆ ತಕ್ಕಂತೆ ಅರ್ಹ ರೀತಿಯಲ್ಲಿ ಪುಸ್ತಕವನ್ನು ಬರೆದಿರುವ ಹೊಸಮಠ, ಹಲವು ಮಾಹಿತಿಗಾಗಿ ಕೆಲವಾರು ಕಡೆಯಿಂದ ಇತರರ ನೆರವನ್ನೂ ಪಡೆದುಕೊಂಡಿದ್ದಾರೆ.
ಅಷ್ಟೇ ಮುತುವರ್ಜಿಯಿಂದ ಯಾವುದಕ್ಕೂ ಕುಂದುಕೊರತೆ ಬಾರದಂತೆ ಸಾಧ್ಯವಾದಷ್ಟು ಅಚ್ಚುಕಟ್ಟಾಗಿ ಪ್ರಕಟಪಡಿಸಿರುವ ಪ್ರಕಾಶಕರು, ಲೇಖಕರಷ್ಟೇ ಅಭಿನಂದನಾರ್ಹರು. ಇಂತಹ ಪುಸ್ತಕಗಳು ಮಾನವನ ಬಾಳಹಾದಿಯಲ್ಲಿ ದಾರಿದೀಪಗಳಿದ್ದಂತೆ. ಸಂಕ್ಷಿಪ್ತ ವಿವರಣೆ ಇದ್ದು ಕೈಗೆಟಕುವ ಬೆಲೆಯ ಈ ಪುಸ್ತಕವನ್ನು ಕೊಂಡು ಓದುವ ಉತ್ತಮ ಕಾರ್ಯವನ್ನು ಕನ್ನಡಿಗರು, ವಿಶೇಷವಾಗಿ ಸಂಶೋಧನಾರ್ಥಿಗಳು ಮಾಡಬೇಕು.
ಸನ್ಮಾನ್ಯ ಗದಿಗಯ್ಯನವರು ತಮ್ಮ ಹುಟ್ಟಿದಂದಿನಿಂದಲೇ ಪರಮ ದೈವಾಂಶ ಸಂಭೂತರಾಗಿದ್ದು ಸಾಕ್ಷಾತ್ ಸರಸ್ವತಿಯನ್ನು ಒಲಿಸಿಕೊಂಡಿದ್ದರು ಎಂದನಿಸುತ್ತದೆ. ಬದುಕಿದ್ದಷ್ಟು ದಿನವೂ ಕನ್ನಡ ನಾಡು-ನುಡಿಗೆ ದಣಿವಿಲ್ಲದಂತೆ ದುಡಿದು ನಿಸ್ವಾರ್ಥದ ನಿಸ್ಪೃಹ ಸೇವೆ ಸಲ್ಲಿಸಿದ್ದರು. ಕನ್ನಡ ಸಾರಸ್ವತ ಲೋಕದ ಗದ್ಯ ಪ್ರಾಕಾರದಲ್ಲಿ ಅಸಾಮಾನ್ಯ ಮಹಾಪುರುಷನಾಗಿ ಮೆರೆದರು. ಈ ಬಗೆಯ ಅಪರೂಪದ ವ್ಯಕ್ತಿಶಕ್ತಿಗಳ ಜೀವನ ಸಾಧನೆಗಳು ಜನ ಸಾಮಾನ್ಯರಿಗೆ ಮಾದರಿ ಎನಿಸುತ್ತವೆ, ಬಹುಕಾಲ ಗಟ್ಟಿಯಾಗಿ ನಿಲ್ಲುತ್ತವೆ..!
(ಮೈವಿವಿ, ಮಾನಸಗಂಗೋತ್ರಿ, ಮೈಸೂರು, ಏಪ್ರಿಲ್ 1982 ಗ್ರಂಥಲೋಕ, ಮಾಸಿಕದಲ್ಲಿ ಪ್ರಕಟಿತ)

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಆರು ಕೃತಿಗಳ ಪರಿಚಯ








