ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ… ಐದು ಕೃತಿಗಳ ಪರಿಚಯ.. ಭಾಗ-12

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ    ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

  1. ಕೃತಿ : ಅಮರಶಿಲ್ಪಿ ವೀರಕಲ್ಕುಡ

ಕರ್ತೃ : ಅಮೃತ ಸೋಮೇಶ್ವರ

ಕರ್ನಾಟಕ ರಾಜ್ಯದ ಪ್ರಮುಖ ಸಾಂಸ್ಕೃತಿಕ ಕಲೆಗಳಲ್ಲಿ ‘ಯಕ್ಷಗಾನ’ ನಾಟಕ ವಿಭಾಗವು ತನ್ನದೇ ಆದ ವೈಶಿಷ್ಟ್ಯಪೂರ್ಣ ಸ್ಥಾನಮಾನ ಹೊಂದಿದೆ. ಕರಾವಳಿ ಕಲೆಯನ್ನು ಪುನರುತ್ಥಾನ ಗೊಳಿಸಿದವರು ಜ್ಞಾನಪೀಠ ಪುರಸ್ಕೃತ ಕಡಲ ಭಾರ್ಗವ ಡಾ.ಶಿವರಾಮಕಾರಂತ ಪುಣ್ಯಾತ್ಮ. ಯಕ್ಷಗಾನ ಬಗೆಗಿನ ಸಾಹಿತ್ಯಗಳು ವಿರಳವಾಗಿರುವ ಇಂದಿನ ದಿನಗಳಲ್ಲಿ ಅಮೃತ ಸೋಮೇಶ್ವರ ಬರೆದ ಅಮರಶಿಲ್ಪಿ ವೀರಕಲ್ಕುಡ ಕೃತಿಯು ಕನ್ನಡ ನಾಡಿನ ಕಲಾಪ್ರತೀಕದ ಮೈಲಿಗಲ್ಲು. ಪ್ರತಿಯೊಬ್ಬ ಕನ್ನಡಿಗರನ್ನು ಅದರಲ್ಲೂ ವಿಶೇಷವಾಗಿ ಯಕ್ಷಗಾನ ಪ್ರಿಯರನ್ನು ಅತ್ಯಂತ ಸಂತಸ ಪಡಿಸುವಲ್ಲಿ ಸಂಶಯವಿಲ್ಲ. ಕಥೆ ಕವನ ಕಾದಂಬರಿ ವಿಮರ್ಶೆ ಇತ್ಯಾದಿ ಮೂಲಕ ಬಹುಮುಖ ಪ್ರತಿಭೆ ಹರಡಿರುವಂಥ ಜನಪ್ರಿಯ ಲೇಖಕರಿಂದ ರಚಿಸಲ್ಪಟ್ಟ ಐತಿಹ್ಯವ್ಯಕ್ತಿ ಬಗೆಗಿನ ಮುಖ್ಯಪ್ರಸಂಗದ ಯಕ್ಷಗಾನ ನಾಟಕವಿದು.

ಶ್ರೀಕ್ಷೇತ್ರ ಶ್ರವಣಬೆಳಗೊಳದ ಗೊಮ್ಮಟಗಿರಿಯ ಭವ್ಯ ಕಲಾವೈಭವ ಬಾಹುಬಲಿ ಏಕಶಿಲಾ ಮೂರ್ತಿಯ ನಿರ್ಮಾತ ಮಹಾಶಿಲ್ಪಿ ಕಲ್ಕುಡನ ಮೂಲ ಕಥೆಗೆ ಹಲವಾರು ಪೌರಾಣಿಕ ಮತ್ತು ಐತಿಹಾಸಿಕ ಸಾರಾಂಶಗಳನ್ನು ಸೇರಿಸಿ ಯಕ್ಷಗಾನ ನಾಟಕ ಪ್ರಾಕಾರಕ್ಕೆ ತಕ್ಕಂತೆ ಸಕಲ ರೀತಿ ಅಳವಡಿಸಿದ್ದಾರೆ. ಇಲ್ಲಿನ ಘಟನೆಗಳನ್ನು ಸಂಪೂರ್ಣ ಚಾರಿತ್ರಿಕ ನಿಟ್ಟಿನಲ್ಲಿ ಮಾತ್ರ ನೋಡದೆ ಕಲಾತ್ಮಕ ದೃಷ್ಟಿಯಿಂದಲೂ ಕಂಡು ಪರಿಗಣಿಸಿದ ಲೇಖಕ ತಮ್ಮ ಅನುಭವದಂತೆ ಅಪ್ರತಿಮವಾದ ದೃಶ್ಯ-ಪಾತ್ರಗಳನ್ನು ಸುಂದರವಾಗಿ ಸೃಷ್ಟಿಸಿರುವುದರಿಂದ ಯಕ್ಷಗಾನ ನಾಟಕದ ಪ್ರಮುಖ ಕೃತಿಯಾಗಿ ಅಮರಶಿಲ್ಪಿ ವೀರಕಲ್ಕುಡ ಸಕ್ಸಸ್ ಆಗುತ್ತದೆ.

(ಆಗಸ್ಟ್ 1982ಗ್ರಂಥಲೋಕ ಮಾಸಿಕದಲ್ಲಿ ಪ್ರಕಟ)

  1. ಕೃತಿ : ಜಗದೀಶ್ ಚಂದ್ರ ಬೋಸ್

ಬಂಗಾಳಿ ಮೂಲ:ಡಾ.ಎಚ್.ಎನ್.ಬಸು

ಕನ್ನಡಾನುವಾದ:ಹೆಚ್.ನಾರಾಯಣಸಿಂಗ್

ಪ್ರಪಂಚದ ಮಾನವ ಕುಲದಲ್ಲಿ ಭಾರತದ  ಪುರುಷೋತ್ತಮ ಜೋಡಿಯಾದ ‘ಬೋಸ್’ ಹೆಸರಿನ ಇಬ್ಬರು ಇಡೀ ವಿಶ್ವದ 2 ಉತ್ತುಂಗ ಶಿಖರಗಳು. ಇವರಲ್ಲಿ ಒಬ್ಬರು ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಬೋಸ್, ಮತ್ತೊಬ್ಬರು ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್. ಜಗದೀಶ್ ಚಂದ್ರಬೋಸ್ ಬಗ್ಗೆ ತಿಳಿಯದವರು ವಿರಳ. ಇವರ ಜೀವನದ ಬಗ್ಗೆ ಇವರ ನಿಕಟವರ್ತಿಯಾಗಿದ್ದ ಇನ್ನೋರ್ವ ವಿಜ್ಞಾನಿ ಡಾ.ಎಚ್.ಎನ್.ಬಸು, ಬಂಗಾಳಿ ಭಾಷೆಯಲ್ಲಿ ಬರೆದ ಪುಸ್ತಕವನ್ನು ಕನ್ನಡಕ್ಕೆ ಸುಲಲಿತವಾಗಿ ಸುಂದರವಾಗಿ ಭಾಷಾಂತರ ಮಾಡಿದ ಕೀರ್ತಿಗೆ ಹೆಚ್.ನಾರಾಯಣಸಿಂಗ್ ಪಾತ್ರರಾಗಿದ್ದಾರೆ.

1858 ನವೆಂಬರ್ 30ರಂದು ಪಶ್ಚಿಮ ಬಂಗಾಳದ ಮೈಮೆನ್ಸಿಂಗ್ ನಗರದಲ್ಲಿ ಮಧ್ಯಮ ವರ್ಗ ಕುಟುಂಬದ ಓರ್ವ ಮುಖ್ಯೋಪಾಧ್ಯಾಯನ ಪುತ್ರನಾಗಿ ಜಗದೀಶ್ ಚಂದ್ರಬೋಸ್ ಜನನ. ಬಾಲ್ಯದಿಂದಲು ಉತ್ತಮ ಪರಿಸರದಲ್ಲಿ ಬೆಳೆದು ಶ್ರೇಷ್ಠ ಶಿಕ್ಷಣ ಪಡೆದು ಉನ್ನತ ವಿದ್ಯಾವಂತರಾದರು. ನಂತರ ಅಧ್ಯಾಪಕನಾಗಿ ವೃತ್ತಿ ಜೀವನ ಪ್ರಾರಂಭಿಸಿ, ಕ್ರಮೇಣ ಪ್ರಾಧ್ಯಾಪಕನಾಗಿ ನಿವೃತ್ತರಾದರು.

1887 ಜನವರಿಯಲ್ಲಿ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿ, ಸಂಸಾರಿಯಾದ ನಂತರವೂ ಗುರಿ ಸಾಧನೆ ಕಾರ್ಯವನ್ನು ಉತ್ಸಾಹದಿಂದ ಮುಂದುವರೆಸಿದರು. ವಿಜ್ಞಾನ ವಿಭಾಗದಲ್ಲಿ ನಿರಂತರ ಅಧ್ಯಯನ ಸಂಶೋಧನೆ ಜ್ಞಾನತಪಸ್ಸಿನಿಂದ ಮಹಾವಿಜ್ಞಾನಿಯಾಗಿ ಪ್ರಖ್ಯಾತರಾದರು. ಭೌತವಿಜ್ಞಾನದಲ್ಲಿ ದೊರಕಬೇಕಿದ್ದ ನೊಬೆಲ್ ಪ್ರಶಸ್ತಿ ಮಾರ್ಕೋನಿಗೆ ಲಭಿಸಿದ್ದರಿಂದ ದುರದೃಷ್ಟವಂತ ಎನಿಸಿದರು?!

ಬಂಗಾಳಿ ಭಾಷೆಯ ಕನ್ನಡಾನುವಾದ ಆದ ಈ ಪುಸ್ತಕದಲ್ಲಿ ವೈಜ್ಞಾನಿಕ ವ್ಯಕ್ತಿಶಕ್ತಿ ಜಗದೀಶ್ ಚಂದ್ರಬೋಸ್ ರವರ ಬಾಲ್ಯ ಯೌವ್ವನ ವಿವಾಹ ವಿದ್ಯಾಭ್ಯಾಸ ಉದ್ಯೋಗ ವಿದೇಶ ಯಾತ್ರೆ ಮುಂತಾದ ವಿಚಾರ ಬರೆಯಲಾಗಿದೆ. ಭೌತಶಾಸ್ತ್ರ ಸಸ್ಯಶಾಸ್ತ್ರದ ಜೀವ-ನಿರ್ಜೀವ ವಸ್ತುಗಳ ಬಗ್ಗೆ ಸಂಶೋಧನೆ ಮಾಡಿದ ಬೋಸ್ ತಮ್ಮದೇ ಆದ ಹೊಸ ತತ್ವ ಕಂಡು ಹಿಡಿವ ಮೂಲಕ ವಿಜ್ಞಾನ ಜಗತ್ತಿಗೆ ಒಂದು ಅದ್ಭುತ ಜ್ಞಾನ ತೋರಿಸಿಕೊಟ್ಟ ಬಗ್ಗೆ ಮಾಹಿತಿ ಇದೆ. ಉಪಯುಕ್ತ ಪ್ರಯೋಗಗಳ ಪಿತಾಮಹ, ವಿಜ್ಞಾನ ತತ್ವಗಳ ನವಸಿದ್ಧಾಂತಿ ಎಂದು ಇವರನ್ನು ಗುರ್ತಿಸಲಾಯಿತು. ಈತನ ಅಸಾಮಾನ್ಯ ಸಾಧನೆಗೆ ಅನೇಕ(ವಿ)ದೇಶಗಳು (ಅಂತಾ)ರಾಷ್ಟ್ರೀಯ ಬಹುಮಾನ ಪ್ರಶಸ್ತಿ ನೀಡಿ ಗೌರವಿಸಿದವು. ರಾಜ್ಯಸರ್ಕಾರ, ಕೇಂದ್ರಸರ್ಕಾರ, ಅನ್ಯದೇಶ, ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳು ನೀಡಿದ ಗೌರವ ಪ್ರಶಸ್ತಿ ಪದಕಗಳ ಪಟ್ಟಿಯೂ ಇದರಲ್ಲಿದೆ.

ಇಂತಹ ಅಪ್ರತಿಮ ಅಪ್ಪಟ ಭಾರತೀಯ ವಿಜ್ಞಾನಿ ಬಗ್ಗೆ ಇನ್ನೂ ಹಲವಾರು ವಿಶಾಲವಾದ ವಿಚಾರ ವೈವಿಧ್ಯಗಳನ್ನು ವಿಸ್ತಾರವಾಗಿ ಬರೆಯಲಾಗಿದೆ. ಬೋಸ್ ಜೀವನದ ಅಂತ್ಯದ ವರೆಗಿನ ವಿವರವನ್ನು ಕೂಲಂಕಷವಾಗಿ ಚಿತ್ರಿಸುವ 6 ಅಧ್ಯಾಯದ 89 ಪುಟಗಳ ಈ ಪುಸ್ತಕವು ಎಲ್ಲವರ್ಗದ ಓದುಗರಿಗೂ ಹಿತ ಎನಿಸುವಂತಿದೆ. ಕನ್ನಡ ಸಾಹಿತ್ಯ ಭಂಡಾರಕ್ಕೆ ಲೇಖಕರು ನೀಡಿದ ಉತ್ತಮ ಕೊಡುಗೆ. “ರಾಷ್ಟ್ರೀಯ ಜೀವನಚರಿತ್ರೆ ಮಾಲೆ” ಸರಣಿಗೆ ಸೇರ್ಪಡೆಯಾದ ಮಹಾಕೃತಿ, ಭಾರತದ ವ್ಯಕ್ತಿಚಿತ್ರ ಸಾಹಿತ್ಯಸಾಗರದ ಮುತ್ತು, ಗ್ರಂಥಾಲಯಕ್ಕೆ ಪುಸ್ತಕಆಸ್ತಿ. ವಿಶೇಷವಾಗಿ ವಿಜ್ಞಾನ ವಿದ್ಯಾರ್ಥಿಗಳಿಗೆ ಹೊಸಜ್ಞಾನದ ಆಯಾಮ ನೀಡುವಲ್ಲಿ ಯಶಸ್ವಿಯಾಗುತ್ತದೆ.

(ಆಗಸ್ಟ್ 1982 ಗ್ರಂಥಲೋಕ ಮಾಸಿಕದಲ್ಲಿ ಪ್ರಕಟಿತ)

  1. ಕೃತಿ: ಬೈಸಿಕಲ್ ಥೀವ್ಸ್

ಇಟಾಲಿಯನ್ ಮೂಲ: ಲೂಯಿಗಿ ಬಾರ್ಟೋಲಿನಿ

ಕನ್ನಡಕ್ಕೆ: ಕೆ.ವಿ.ಸುಬ್ಬಣ್ಣ (1932-2005)

ಶ್ರೀ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಸಂಸ್ಥಾಪಕ, ರಂಗಕರ್ಮಿ, ಪ್ರಸಿದ್ಧ ಲೇಖಕ, ಅನುವಾದಕ, ನಟ-ನಿರ್ಮಾಪಕ-ನಿರ್ದೇಶಕ-ಸಂಗೀತ ನಿರ್ದೇಶಕ ಕೆ.ವಿ.ಸುಬ್ಬಣ್ಣ. ತಾವು ಬದುಕಿದ್ದ ೭೩ ವರ್ಷಗಳ ಜೀವನದಲ್ಲಿ ೪೦ ವರ್ಷಕಾಲ ರಂಗಭೂಮಿ ಸೇವಕನಾಗಿ ದುಡಿದವರು, ತಮ್ಮ ಕಂಪನಿ/ಶಿಕ್ಷಣಸಂಸ್ಥೆ ಬೆಳೆಸುವುದರ ಜತೆಗೆ ಇತರರನ್ನು ಬೆಳೆಸಿ ಬೆಳಕು ನೀಡಿದರು. ಸಾವಿರಾರು ನಟ ನಟಿಯರ, ತೆರೆಮರೆ ಕಲಾವಿದರ, ಬಾಳಿಗೆ ಜ್ಯೋತಿ ಬೆಳಗಿದ್ದಲ್ಲದೆ ಕನ್ನಡ ರಂಗಭೂಮಿಯನ್ನು ಪ್ರಪಂಚದಾದ್ಯಂತ ಪಸರಿಸಿ ಖ್ಯಾತರಾದರು. ಕೆ.ವಿ.ಸುಬ್ಬಣ್ಣನವರ ಹೆಸರು ಕೇಳಿರದ ಕನ್ನಡಿಗರು, ಕನ್ನಡಕಲಾವಿದರು ವಿರಳ. ಇಂತಹ ರಂಗ ಸಾಮ್ರಾಟನಿಂದ ಕನ್ನಡಕ್ಕೆ ಭಾಷಾಂತರಗೊಂಡ ಕೃತಿ ಇದು.

ಮೂಲತಃ ಲುಯಿಗಿಬಾರ್ಟೋಲಿನಿ ಬರೆದ ಇಟಾಲಿಯನ್ ಭಾಷೆಯ ಬೈಸಿಕಲ್ ಥೀವ್ಸ್ ಕಥೆ ಆಧಾರದಿಂದ 1948ರಲ್ಲಿ ವಿಖ್ಯಾತ ಚಲನಚಿತ್ರ ನಿರ್ದೇಶಕ ವಿಟ್ಟೋರಿಯ.ಡಿ.ಸಿಕ ಚಿತ್ರಕಥೆ ಬರೆದು ನಿರ್ದೇಶಿಸಿದ “ಲಾದ್ರಿಡಿಬೈಸಿಕ್ಲೆಟ್ಟಿ” ಟೈಟಲ್ನ ಸಿನಿಮ ಇಟಲಿ ಭಾಷೆಯಲ್ಲಿ ಬಿಡುಗಡೆಯಾಗಿ ನೂತನ ದಾಖಲೆ ನಿರ್ಮಿಸಿತು ಬೈಸಿಕಲ್ ಥೀವ್ಸ್ ಕಥೆ ಸಾರಾಂಶ ಹೀಗಿದೆ: ವಿಶ್ವದ ಎರಡು ಮಹಾಯುದ್ಧಗಳ ನಂತರ ಯುರೋಪಿನಾದ್ಯಂತ ನಿರುದ್ಯೋಗ-ಬಡತನ ಆವರಿಸಿಹ ದಿನಗಳಲ್ಲಿ ಒಬ್ಬ ನಿರುದ್ಯೋಗಿ ಯುವಕನಿಗೆ ಪೋಸ್ಟರ್ ಅಂಟಿಸುವ ಕೆಲಸ ಸಿಗುತ್ತದೆ. ಕೆಲಸಕ್ಕೆ ಸೇರುವವ ಸೈಕಲ್ ಹೊಂದಿರಬೇಕೆಂಬ ನಿಬಂಧನೆ ಇರುತ್ತದೆ. ಆದರೆ ಇವನ ಬಳಿ ಸೈಕಲ್ ಇರುವುದಿಲ್ಲ, ತನ್ನ ಮನೆಯ ಹಲವು ವಸ್ತುಗಳನ್ನು ಮಾರಿ, ಅಡವಿಟ್ಟಿದ್ದ ಸೈಕಲ್ಲನ್ನು ಬಿಡಿಸಿ ತರುತ್ತಾನೆ. ಒಂದಿನ ಅವನ ಕಣ್ಣೆದುರಲ್ಲೇ ಸೈಕಲ್ ಕಳುವಾಗುತ್ತದೆ. ಸೈಕಲ್ ಅನ್ವೇಷಣೆಯಲ್ಲಿ ಕಳ್ಳನ ಜಾಡು ಕಂಡರೂ ಸಾಕ್ಷಿಯನ್ನು ಒದಗಿಸಲಾಗದೆ ಸುಮ್ಮನೆ ಇರಬೇಕಾಗುತ್ತದೆ. ಹತಾಶೆಯ ಅಂಚಿನಲ್ಲಿದ್ದ ಆತ ತಾನೂ ಒಂದು ಸೈಕಲ್ ಕದ್ದು, ಸ್ವತಃ ತನ್ನ ಮಗನ ಎದುರೇ ಸಿಕ್ಕಿಬೀಳುತ್ತಾನೆ. ಅಲ್ಲಿಗೆ ‘ದಿ ಎಂಡ್’ (ಸಿನಿಮ ಮುಗಿಯುತ್ತದೆ).

ಸಿನಿಮ ಚಿತ್ರಕಥೆಯ ಮೊದಲರ್ಧದ ಪ್ರಸ್ತಾವನೆ ಉಪಯುಕ್ತವಾಗಿದೆ. ಮಹಾಯುದ್ಧ ನಂತರದ ದುರ್ದಿನಗಳಲ್ಲಿ ಸಾಮಾಜಿಕ, ಆರ್ಥಿಕವಾಗಿ ಕುಸಿದುಹೋದ ಜನರು ಮನುಷ್ಯತ್ವವನ್ನೇ ಮರೆಯುವ ಕ್ರೂರ ವಾಸ್ತವತೆಯ ಚಿತ್ರಣವಿರುವ ಅಮೋಘ ಕೃತಿಯಿದು. ಕನ್ನಡಾನುವಾದವು ಸಹ ಚೆನ್ನಾಗಿಯೇ ಇದೆ.

(ಜನವರಿ 1980 ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟ)

  1. ಕೃತಿ: ನಾಟಕ ಮತ್ತು ಸಿನೇಮಾ

ಕರ್ತೃ: ಕೆ.ವಿ.ಸುಬ್ಬಣ್ಣ

ಶ್ರೀ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಸಂಸ್ಥಾಪಕ, ರಂಗಕರ್ಮಿ, ಅನುವಾದಕ, ಲೇಖಕ, ನಟ, ನಿರ್ಮಾಪಕ, ನಿರ್ದೇಶಕ, ಹಾಗೂ ಸಂಗೀತ ನಿರ್ದೇಶಕ ಕೆ.ವಿ.ಸುಬ್ಬಣ್ಣ. ತಾವು ಬದುಕಿದ್ದ 73 ವರ್ಷಗಳ ಜೀವನದಲ್ಲಿ 40ವರ್ಷಕಾಲ ರಂಗಭೂಮಿ ಸೇವಕನಾಗಿ ದುಡಿದವರು, ತಮ್ಮ ಕಂಪನಿ-ಶಿಕ್ಷಣಸಂಸ್ಥೆ ಬೆಳೆಸುವುದರ ಜತೆಗೆ ಇತರರನ್ನು ಬೆಳೆಸಿ ಬೆಳಕು ನೀಡಿದರು. ಸಾವಿರಾರು ನಟನಟಿಯರ, ತೆರೆಮರೆಕಲಾವಿದರ, ಬಾಳಿಗೆ ಜ್ಯೋತಿ ಬೆಳಗಿದ್ದಲ್ಲದೆ ಕನ್ನಡ ರಂಗಭೂಮಿಯನ್ನು ಪ್ರಪಂಚದಾದ್ಯಂತ ಪಸರಿಸಿ ಖ್ಯಾತರಾದರು. ಕೆ.ವಿ.ಸುಬ್ಬಣ್ಣನವರ ಹೆಸರು ಕೇಳಿರದ ಕನ್ನಡ ಕಲಾವಿದರು ವಿರಳ.

ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಂಡುಬರುವ ವಾಸ್ತವದ ಬಗ್ಗೆ ಒಂದು ತುಲನಾತ್ಮಕ ವಿವೇಚನಾ ಪುಸ್ತಕ. ಸೈದ್ಧಾಂತಿಕವಾಗಿ ಹೊರನೋಟಕ್ಕೆ ಇವೆರಡೂ ಕ್ಷೇತ್ರಗಳು ಒಂದೇ ಎನಿಸಿದರೂ ತಾಂತ್ರಿಕವಾಗಿ ಪ್ರಾಯೋಗಿಕವಾಗಿ ಈ ಎರಡು ವಿಭಾಗಗಳು ಬೇರೆ ಬೇರೆಯೇ ಆಗಿರುತ್ತವೆ. ಸಿನಿಮಾ ರಂಗ ಪ್ರಾರಂಭವಾದ ಅಂದಿನಿಂದ ಮೊದಲ್ಗೊಂಡು ಬಹು ಕಾಲದವರೆಗೆ ಉನ್ನತ ಪ್ರಗತಿ ಸಾಧಿಸಿದ್ದ ನಾಟಕ ರಂಗದ ಹಿಡಿತವು ಸಿನಿಮಾ ರಂಗದ ಮೇಲೆ ಇದ್ದೇಯಿದೆ. ಇವೆರಡಕ್ಕು ಯಾವುದೆ ಭೇದ ಇಲ್ಲವೆಂಬ ಸಾಮಾನ್ಯ ಸರಳ ಗ್ರಹಿಕೆ ಕೂಡ ಇದೆ. ಅಭಿನಯ ಕ್ರಮ ಪ್ರದರ್ಶನಾ ಕ್ರಮ ಭಾಷೆ ಸಂಭಾಷಣೆ ಮುಂತಾದ ಎಲ್ಲ ಅಂಶಗಳನ್ನು ಚರ್ಚಿಸಿದ ನಂತರ ‘ನಾಟಕಕ್ಕಿಂತಲೂ ಸಿನಿಮಾ ಪ್ರತ್ಯೇಕ ಹೇಗೆ?’ ಎಂಬುದನ್ನು ಕೂಲಂಕಷವಾಗಿ ತಿಳಿಸಿದ್ದಾರೆ.

ನಾಟಕ ಮತ್ತು ಸಿನೇಮಾ ಪುಸ್ತಕದ ಮೂಲಕ ಕೆ.ವಿ.ಸುಬ್ಬಣ್ಣನವರ ಅನಿಸಿಕೆ ಅಭಿಪ್ರಾಯ ಅಭಿವ್ಯಕ್ತ ಸ್ವಾತಂತ್ರ್ಯ ಇತ್ಯಾದಿಗಳ ಪರಿಚಯ ಆಗುತ್ತದೆ ಓದುಗರಿಗೆ. ರಂಗ ಸಾಮ್ರಾಟನು ರಚಿಸಿದ ಅಮೋಘ ಕೃತಿ. ಅಪರೂಪಕ್ಕೆ ಪ್ರಕಟವಾಗುವ ಈಬಗೆಯ ತೌಲನಿಕ ಕೃತಿಗಳನ್ನು ಕನ್ನಡ ಕಲಾವಿದರು ತುಂಬು ಹೃದಯದಿಂದ ಪ್ರೋತ್ಸಾಹಿಸಬೇಕು.

(ಜನವರಿ 1980 ಗ್ರಂಥಲೋಕ ಮಾಸಿಕದಲ್ಲಿ ಪ್ರಕಟ)

ಕೃತಿ : ಅಭಿವೃದ್ದಿಗಾಗಿ ಸಿನೇಮಾ

ಕರ್ತೃ : ಕೆ.ವಿ.ಸುಬ್ಬಣ್ಣ

ಶ್ರೀ ‘ನೀಲಕಂಠೇಶ್ವರ ನಾಟ್ಯಸೇವಾ ಸಂಘ’ (ನೀನಾಸಂ) ಸಂಸ್ಥಾಪಕ, ರಂಗಕರ್ಮಿ ಹಾಗು ಪ್ರಸಿದ್ಧ ಅನುವಾದ ಲೇಖಕ, ನಟ-ನಿರ್ಮಾಪಕ-ನಿರ್ದೇಶಕ-ಪುಸ್ತಕ ಪ್ರಕಾಶಕ ಕೆ.ವಿ.ಸುಬ್ಬಣ್ಣ. ತಾವು ಬದುಕಿದ್ದ 73ವರ್ಷಗಳ ಜೀವನದಲ್ಲಿ 40ವರ್ಷಕಾಲ ರಂಗಭೂಮಿ ಸೇವಕನಾಗಿ ದುಡಿದವರು, ತಮ್ಮ ಕಂಪನಿ/ಶಿಕ್ಷಣಸಂಸ್ಥೆ ಬೆಳೆಸುವುದರ ಜತೆಗೆ ಇತರರನ್ನು ಬೆಳೆಸಿ ಬೆಳಕು ನೀಡಿದರು. ಸಾವಿರಾರು ನಟನಟಿ, ತೆರೆಮರೆ ಕಲಾವಿದರ ಬಾಳಜ್ಯೋತಿ ಬೆಳಗಿದ್ದಲ್ಲದೆ ಪ್ರಪಂಚದಾದ್ಯಂತ ಕನ್ನಡ ರಂಗಭೂಮಿಯ ಸುಗಂಧವನ್ನು ಪಸರಿಸಿದರು. ವಿಖ್ಯಾತ ರಂಗಕರ್ಮಿ ಸುಬ್ಬಣ್ಣನವರ ಹೆಸರು ಕೇಳಿರದ ಕಲಾವಿದರು ವಿರಳ. ಇಂತಹ ರಂಗಸಾಮ್ರಾಟ ರಚಿಸಿದ ಕೃತಿಗಳಲ್ಲಿ ಇದೂ ಒಂದು.

ಜನಮಾನಸ ಸಂಪರ್ಕದ ಸಾಧನವಾಗಿರುವ ಚಿತ್ರರಂಗದ ಸಾಧ್ಯ ಅಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ ಇಲ್ಲಿ ನಡೆದಿದೆ. ಖಾಸಗಿ ವಾಣಿಜ್ಯೋದ್ಯಮದ ಮನರಂಜನೆ ಸಿನಿಮಾಗಳು ಮತ್ತು ಸರ್ಕಾರದ ನೀರಸ ಜಾಹೀರಾತು-ಪ್ರಚಾರಗಳು ಎಂಬ ಎರಡು ವಿಚಾರಗಳನ್ನು ಮುಖ್ಯವಾಗಿ ಉಲ್ಲೇಖಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಇನ್ನಿತರ ಉಪಯುಕ್ತ ರೀತಿಯನ್ನೂ ಲಾಭದಾಯಕ ಮಾರ್ಗವನ್ನೂ ಚಿತ್ರೋದ್ಯಮಿಗಳು ಪಡೆದಿಲ್ಲ ಎಂಬುದು ಮತ್ತೊಂದು ಮುಖ್ಯಅಂಶ. ಜನಸಾಮಾನ್ಯರಿಗೆ ಪ್ರಿಯವಾದ ಸಿನಿಮ ಮಾಧ್ಯಮವನ್ನು ಸರಿಯಾದ ರೀತಿಯಲ್ಲಿ ಚೆನ್ನಾಗಿ ದುಡಿಸಿಕೊಳ್ಳ ಬಹುದಾದ ಹಲವಾರು ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಈ ಪುಸ್ತಕ ಬರೆಯಲಾಗಿದೆ. ಅಭಿವೃದ್ಧಿ ಪಥದಲ್ಲಿ ನಡೆವಾಗ ಕೆಲವು (ಹಿತ)ಶತ್ರುಗಳಿಂದಾಗಿ ಎದುರಾಗುವ ಸೂಕ್ಷ್ಮವಿಚಾರದೆಡೆಗೂ ಒಂದು ಕಿರುನೋಟ ಹರಿಸಲಾಗಿದೆ. ನಾಟಕ-ಸಿನಿಮ ಎರಡೂ ಕ್ಷೇತ್ರದಲ್ಲಿ ಅನುಭವ ಇರುವ ಕೆ.ವಿ.ಸುಬ್ಬಣ್ಣನವರು ಬರೆದಿರುವ ಪುಸ್ತಕ ಸಿನಿಮಾರಂಗದ ಆಸಕ್ತರಿಗೆ ಹಾಗೂ ಚಿತ್ರೋದ್ಯಮಿಗಳಿಗೆ ಸ್ವಲ್ಪಮಟ್ಟಿಗೆ ಸಮಾಧಾನ ತರಿಸುವ ಮಾರ್ಗದರ್ಶನ ನೀಡಬಹುದು.

(ಜನವರಿ 1980’ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-11

admin
the authoradmin

1 Comment

  • ಕನ್ನಡ ಸಾಹಿತ್ಯ ಸಾಗರದಲ್ಲಿ ಅಡಗಿರುವ ಕನ್ನಡ ಪುಸ್ತಕ ಮುತ್ತುಗಳ ಸಂಕ್ಷಿಪ್ತ ಪರಿಚಯ ಹವಳಗಳೇ ಈ ಅವಲೋಕನ ಎಂಬ ಪುಸ್ತಕ ವಿಮರ್ಶೆಗಳ ಶ್ರೇಷ್ಠ ಅಂಕಣ. ಇದರ ಪಿತಾಮಹ ಕುಮಾರಕವಿಯವರಿಗೆ ಅನಂತಾನಂತ ಧನ್ಯವಾದಗಳು. ಇಂತಹ ಉಪಯುಕ್ತ ಸ್ಥಿರಶೀರ್ಷಿಕೆಗಳು ನಮ್ಮ ಹೆಮ್ಮೆಯ ಜನಮನ ಕನ್ನಡ ಪತ್ರಿಕೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಲಿ ಎಂದು ಬಯಸುತ್ತೇವೆ. 50ಕ್ಕೂ ಹೆಚ್ಚಿನ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ 12 ಸಮಗ್ರ ಕನ್ನಡ ಸಾಹಿತ್ಯ ಸಂಶೋಧನಾ ಅಭ್ಯರ್ಥಿಗಳ (Ph.D. research scholars) ಪರವಾಗಿ, ಸಂತೋಷ್ ಬಳ್ಳುಳ್ಳಿ, SRF(UGC), ಕಲಬುರ್ಗಿ ವಿಶ್ವವಿದ್ಯಾಲಯ, ಕಲ್ಬುರ್ಗಿ.

Leave a Reply