ಪ್ರತಿಯೊಬ್ಬರೂ ಬಸವಾದಿ ಶರಣರ ತತ್ವ,ಆದರ್ಶ ಮೈಗೂಡಿಸಿಕೊಳ್ಳಬೇಕು : ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ
ವಿಜೃಂಭಣೆಯಿಂದ 6ನೇ ವರ್ಷದ ಬಸವ ಜಯಂತಿ ಆಚರಣೆ


ಕುಶಾಲನಗರ (ರಘುಹೆಬ್ಬಾಲೆ): ಜಗಜ್ಯೋತಿ ಶ್ರೀಬಸವೇಶ್ವರರ ಜೀವನ ಸಂದೇಶಗಳನ್ನು ಹಾಗೂ ಬದುಕಿನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ,ಕುಶಾಲನಗರ ತಾಲ್ಲೂಕು ಘಟಕ ಆಶ್ರಯದಲ್ಲಿ ಇಲ್ಲಿನ ಗಾಯಿತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಿದ್ದ 6ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿ, ಬಸವ ಜಯಂತಿಯಲ್ಲಿ ನಾವು ಬಸವಣ್ಣ ಅವರನ್ನು ಸ್ಮರಣೆಮಾಡುತ್ತೇವೆ, ಅವರ ಆಲೋಚನೆಗಳನ್ನು ಹಾಗೂ ಅವರು ಕೊಟ್ಟ ಜೀವನ ಸಂದೇಶಗಳನ್ನು ಹೇಳುತ್ತೇವೆ. ಆದರೆ ನಾವು ಎಷ್ಟು ಅವುಗಳನ್ನು ಅನುಸಂಧಾನ ಮಾಡುತ್ತೇವೆ ಎಂಬುದನ್ನು ಯೋಚಿಸಿದರೆ ನಿಜವಾಗಲು ನಾವು ಬಸವಣ್ಣ ಅವರನ್ನು ಕಳೆದುಕೊಂಡಿದ್ದೆವೆ ಎಂಬ ಭಾವನೆ ಭಾಸವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನವನ್ನು ಸ್ವೀಕಾರ ಮಾಡಿ 75ನೇ ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಭಾರತ ಸಂವಿಧಾನದ ಮೂಲ ಆಶಯದಂತೆ ರಾಷ್ಟ್ರವನ್ನು ಕಟ್ಟುವ ಸಂಕಲ್ಪ ಮಾಡಿದ್ದೇವೆ.ಸಂವಿಧಾನ ಎಲ್ಲಾ ಆಶಯಗಳನ್ನು ಒಂದು ಸಾವಿರ ವರ್ಷಗಳ ಹಿಂದೆಯೇ ಆಲೋಚನೆ ಮಾಡಿ ಕನ್ನಡದ ಮಣ್ಣಿನ ಸಂತ ಇಡೀ ಜಗತ್ತಿಗೆ ಬಿತ್ತರಿಸುತ್ತಾನೆ ಆತನೆ ಜಗಜ್ಯೋತಿ ಬಸವಣ್ಣ ಎಂದು ಬಣ್ಣಿಸಿದರು.
ಸಾಮಾಜಿಕ ನ್ಯಾಯ ಕೊಟ್ಟು, ಎಲ್ಲಾ ವರ್ಗದವರ ದನಿಯಾಗಿ ಹೊರಟು ಎಲ್ಲಾ ವರ್ಗಕ್ಕೆ ಯಾವುದೇ ಜಾತಿ,ವರ್ಗ,ವರ್ಣ ಬೇಧವಿಲ್ಲದ ಸಮಸಮಾಜವನ್ನು ಬಸವಣ್ಣ ಕಟ್ಟುತ್ತಾರೆ.ಹೆಣ್ಣು ಶಾಪ ಎಂಬ ಕಾಲಘಟ್ಟದಲ್ಲಿ ಹೆಣ್ಣನ್ನು ದೈವತ್ತ ಭಾವನೆ ನೀಡಿ ಸಮಾಜದಲ್ಲಿ ಸಮಾನತೆ ನೀಡಿ ಗೌರವಿಸಿದ ಬಸವಣ್ಣ ಅವರನ್ನು ಸ್ತ್ರೀ ಸಮೂಹ ಪೂಜಿಸಬೇಕಾಗಿದೆ ಎಂದರು.
ಇಂದು ವಿಜ್ಞಾನ ತಂತ್ರಜ್ಞಾನ ಇಡೀ ಜಗತ್ತನ್ನು ಅವರಿಸಿದೆ.ಆದರೆ ಮನಷ್ಯ ಆಂತರಿಕ ಸಂತೋಷ ಳೆದುಕೊಳ್ಳುತ್ತಿದ್ದಾನೆ.ನೆಮ್ಮದಿ ಇಲ್ಲದೆ ಬದುಕು ದುಸ್ತರವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಶರಣಾದಿ ಶರಣರ ವಚನಗಳನ್ನು ಹೇಳಿಕೊಡುವ ಮೂಲಕ ಬಸವಣ್ಣ ಹಾಗೂ ಶರಣ ವಿಚಾರಧಾರೆಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಆಶಯ ನುಡಿಗಳನ್ನಾಡಿ, 12ನೇ ಶತಮಾನದ ಬಸವಣ್ಣ ಹಾಗೂ ಇಂದು 21ನೇ ಶತಮಾನ ಸುಮಾರು ಸಾವಿರ ವರ್ಷಗಳ ಅಂತರದಲ್ಲಿ ನಾವು ಇದ್ದೇವೆ.ಪ್ರತಿಯೊಬ್ಬರಿಗೂ ಬಸವಾದಿ ಶರಣರ ತತ್ವ, ಆದರ್ಶಗಳು ದಾದಿ ದೀಪವಾಗಿವೆ. ಅವರ ಬದುಕು ಯಾವಾಗಲು ನಡೆ, ನುಡಿ ಒಂದಾಗಿತ್ತು.ಅವರ ಬದುಕು ಸರ್ವಕಾಲಿಕ, ಸಮಾಜಮುಖಿ ಆಗಿತ್ತು ಎಂದರು.
ಅವರ ತತ್ವಗಳನ್ನು ಹಾಗೂ ಆದರ್ಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕಿನಲ್ಲಿ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ ಎಂದರು. ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮಸಂಸ್ಕಾರ ಹಾಗೂ ಮೌಲ್ಯಗಳನ್ನು ಬೆಳೆಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿ,ಜಗಜ್ಯೋತಿ ಬಸವೇಶ್ವರರು ನಾಡಿಗೆ ನೀಡಿದ ಸಪ್ತಸೂತ್ರ ಹಾಗೂ ವಚನಗಳನ್ನು ತಾಯಾಂದಿರು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು.ಇದರಿಂದ ಸಮಾಜದಲ್ಲಿ ಅಂಕುಡೊಂಕು,ಮೇಲುಕೀಳು ಎಂಬ ಬೇಧಭಾವವನ್ನು ಹೊಗಲಾಡಿಸಿ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಬಸವಣ್ಣ ಅವರು ನಾಡಿಗೆ ಸೃಜನ ಸಾಹಿತ್ಯ ಕೊಟ್ಟಿದ್ದಾರೆ, ಶರಣರು ಸಮಾಜವನ್ನು ಉದ್ಧಾರ ಮಾಡುವ ವಚನ ಸಾಹಿತ್ಯಗಳನ್ನು ನೀಡಿದ್ದಾರೆ.ಇವುಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವ ಮೂಲಕ ಬಸವಾದಿಶರಣ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ಬಸವಜ್ಞಾನ ಮಂದಿರದ ಪೀಠಾಧ್ಯಕ್ಷೆ ಡಾ. ಮಾತೆ ಬಸವಾಂಜಲಿದೇವಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕುಶಾಲನಗರ ತಾಲ್ಲೂಕು ಘಟಕದ ಹೆಚ್.ಎಂ.ಮಧುಸೂದನ್. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೊಡ್ಲಿಪೇಟೆ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ವಿ. ಶಿವಪ್ಪ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕುಶಾಲನಗರ ತಾಲ್ಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಎಸ್. ಧರ್ಮೇಂದ್ರ, ಬಿ. ಬಿ. ಲೋಕೇಶ್,ಬಸವೇಶ್ವರ ಸೌಹಾರ್ದ ಸಹಕಾರ ಸಂಘ ಅಧ್ಯಕ್ಷ ಬಿ.ಎಸ್.ಶಾಂಭಶಿವಮೂರ್ತಿ, ಕರ್ನಾಟಕ ರಾಜ್ಯ ವೀರಶೈವ ನೌಕರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಸ್. ನಂದೀಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಮಹಿಳಾ ಘಟಕ ಅಧ್ಯಕ್ಷೆ ದೀಪಿಕಕರುಣ್, ಯುವ ಘಟಕದ ಅಧ್ಯಕ್ಷ ಮೋಕ್ಷತ್ ರಾಜ್, ಅಕ್ಕನ ಬಳಗ ಕಮಲ ಉದಯಕುಮಾರ್, ಹೇಮಲತಾ, ಎಸ್.ಕೆ.ಸೌಭಾಗ್ಯ ಪಾಲ್ಗೊಂಡಿದ್ದರು.

ವರ್ಣರಂಜಿತ ಮೆರವಣಿಗೆ : ಬಸವ ಜಯಂತಿ ಅಂಗವಾಗಿ ಪಟ್ಟಣದ ಬೈಚನಹಳ್ಳಿ ಮಾರಮ್ಮ ದೇವಸ್ಥಾನ ಬಳಿಯಿಂದ ಆರಂಭಗೊಂಡ ವರ್ಣರಂಜಿತ ಮೆರವಣಿಗೆಗೆ ತೊರೆನೂರ ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಚಾಲನೆ ನೀಡಿದರು.
ಅಲಂಕೃತ ವಾಹನದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರವನ್ನು ಇಟ್ಟು ವಾದ್ಯಗೋಷ್ಠಿ ಹಾಗೂ ಪೂರ್ಣಕುಂಭ ಕಳಶ ಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾತಂಡಗಳ ನೇತೃತ್ವದಲ್ಲಿ ಬಿಎಂ ರಸ್ತೆ ಮೂಲಕ ರಥಬೀದಿಯಿಂದ ಗಾಯಿತ್ರಿ ಕಲ್ಯಾಣ ಮಂಟಪದ ವರೆಗೆ ಮೆರವಣಿಗೆ ನಡೆಸಲಾಯಿತು.

ಚಿಕ್ಕಮಗಳೂರು ತರಿಕೇರೆಯ ಶ್ರೀ ಚಾಮುಂಡೇಶ್ವರಿ ಕಲಾ ತಂಡದ ಕಲಾವಿದೆ ಶೃತಿ ನೇತೃತ್ವದಲ್ಲಿ ಕಲಾವಿದರು ಪ್ರದರ್ಶಿಸಿ ನೃತ್ಯ ಹಾಗೂ ವೀರಭದ್ರೇಶ್ವರ ವೀರಗಾಸೆ ಕುಣಿತ ಮೆರವಣಿಗೆ ಮೆರಗು ನೀಡಿತು. ಮೆರವಣಿಗೆಯಲ್ಲಿ ವಿವಿಧ ಮಠಾಧೀಶರು, ಸಮಾಜದ ಮುಖಂಡರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲ್ಲೂಕು ಘಟಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು.







