ಮೈಸೂರು(ಕಾಳಿಹುಂಡಿ ಶಿವಕುಮಾರ್): ವರ ನಟ, ಗಾನಗಂಧರ್ವ, ಕರ್ನಾಟಕ ರತ್ನ ಡಾ ರಾಜಕುಮಾರ್ ಅವರ ಯಾವುದೇ ಕಾರ್ಯಕ್ರಮಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮೈ-ಮನಗಳಿಗೆ ರೋಮಾಂಚನವನ್ನುಂಟು ಮಾಡುತ್ತವೆ!. ಬದುಕಿದ್ದಾಗಲೇ ದಂತಕತೆಯಾಗಿ ನಿಧನದ ನಂತರವೂ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಶಾಶ್ವತವಾಗಿ ಕನ್ನಡಿಗರ ಪ್ರತಿಯೊಬ್ಬರ ಹೃದಯದಲ್ಲೂ ಬದುಕಿದ್ದಾರೆ. ಜೊತೆಗೆ ಅನೇಕ ಸವಿ ಸವಿ ನೆನಪಿನ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.
ಏಪ್ರಿಲ್ ತಿಂಗಳು ಅವರ ಹುಟ್ಟು ಹಬ್ಬ ಮತ್ತು ನಿಧನದ ಮಾಸ ಕೂಡಾ ಆಗಿದೆ. ಏಪ್ರಿಲ್ ತಿಂಗಳು ಕಳೆದಿದ್ದರೂ ಕೂಡ ಡಾ ರಾಜಕುಮಾರ್ ಕುರಿತಾದ ಒಂದಲ್ಲ ಒಂದು ರೀತಿಯ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಹೀಗೊಂದು ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾದ ಪುಣ್ಯ ನನ್ನದಾಯಿತು! ಎಂದು ಮೈಸೂರಿನ ಲೇಖಕ, ಗಾಯಕ ಕಾಳಿಹುಂಡಿ ಶಿವಕುಮಾರ್ ಅಭಿಪ್ರಾಯಪಟ್ಟರು.

ಡಾ ರಾಜ್ ಸವಿ ನೆನಪಿನ ರಸಮಂಜರಿ ಕಾರ್ಯಕ್ರಮ” 12.05.2026 ರ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಭವನ, ವಿಜಯನಗರ, ಈ ಸಭಾಂಗಣದಲ್ಲಿ ನಡೆಯಿತು. ಮೈಸೂರಿನ ಚಿಗುರು ಸಾಹಿತ್ಯ ಬಳಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಗಾಯಕ, ಸಂಘಟಕ, ಯೋಗ ಪಟು, ಎನ್ ಅನಂತ್, ಕಾಳಿಹುಂಡಿ ಶಿವಕುಮಾರ್, ಮೈ ನಾ ಲೋಕೇಶ್, ಪಶುಪತಿ, ಮತ್ತು ಸಾಂಬಮೂರ್ತಿ ಹಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಈ ಒಂದು ಸಂದರ್ಭದಲ್ಲಿ ಡಾ ರಾಜಕುಮಾರ್ ನಟಿಸಿರುವ ಅವರದೇ ದನಿಯಲ್ಲಿರುವ “ನಾನೊಬ್ಬ ಕಳ್ಳ”- ಚಿತ್ರದ “ಕೋಪವೇತಕೆ….?!” ಈ ಹಾಡನ್ನು ಗಾಯಕ ಕಾಳಿಹುಂಡಿ ಶಿವಕುಮಾರ್ ಹಾಡಿ ಎಲ್ಲರ ಗಮನ ಸೆಳೆದರು.

ಈ ಕಾರ್ಯಕ್ರಮ ಸಂಜೆ 5.30 ಕ್ಕೆ ಪ್ರಾರಂಭಗೊಂಡು, ರಾತ್ರಿ 8ರವರೆಗೂ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ವಿ ನಾಗರಾಜ ಭೈರಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಡಾ ಹೆಳವರ ಹುಂಡಿ ಸಿದ್ದಪ್ಪ, ದೇವರಾಜ್ ಪಿ ಚಿಕ್ಕಹಳ್ಳಿ, ಡಾ ಲೀಲಾ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್‌ಕುಮಾರ್ ರವರ ವರ್ಣ ರಂಜಿತ ವ್ಯಕ್ತಿತ್ವದ ಬಗ್ಗೆ ಎಳೆ ಎಳೆಯಾಗಿ ತಿಳಿಸಿದರು.
ಕಾರ್ಯಕ್ರಮದ ಮಧ್ಯಮಧ್ಯ ಹಾಡುಗಳು ಮುದ ನೀಡಿದವು. ಕೆಲಸದ ಒತ್ತಡದಿಂದ ಬಸವಳಿದಿದ್ದ ಮನಕ್ಕೆ……. ಜೊತೆಗೆ ಬೇಸಿಗೆಯ ಬೇಗೆಗೆ….. ನೆರೆದಿದ್ದ ಪ್ರೇಕ್ಷಕರ ಮನಸ್ಸುಗಳಿಗೊಂದಿಷ್ಟು ರಂಜನೆಯ ಜೊತೆಗೆ ತಂಪನ್ನೆರೆಯಿತು. ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಸನ್ಮಾನ….. ಹಾಡುಗಳು…… ಮಾತುಗಳು….. ಹೀಗೆ ಇಡೀ ಕಾರ್ಯಕ್ರಮ ರಾಜ್ ಮಯವಾಗಿತ್ತು!. ಇದೇ ಸಂದರ್ಭದಲ್ಲಿ “ಡಾ ರಾಜಕುಮಾರ್ ಕಲಾ ಕೌಸ್ತುಭ” ಪ್ರಶಸ್ತಿಗೆ 9 ಮಂದಿ ವಿವಿಧ ಕ್ಷೇತ್ರದ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಡಾ ಕೆ ಲೀಲಾ ಪ್ರಕಾಶ್ (ವಿದ್ವತ್), ಸಾಂಬ ಮೂರ್ತಿ (ಗಾಯನ), ಕೆ ಜಿ ದೇವರಾಜ್ (ಯೋಗ), ಎಸ್ ಕೃಷ್ಣಮೂರ್ತಿ (ಸಾರ್ವಜನಿಕ ಸೇವೆ), ಕೆ ಆರ್ ಯೋಗ ನರಸಿಂಹನ್ (ಧಾರ್ಮಿಕ), ನಾಗಮ್ಮ (ಸಾಹಿತ್ಯ), ಬಿ ಟಿ ಬಸವರಾಜ್ (ಸಮಾಜ ಸೇವೆ), ಎಲ್ ಜಗದೀಶ್ (ಸಮಾಜ ಸೇವೆ), ಮತ್ತು ಗಗನ್ ಗೌಡ (ಸಮಾಜ ಸೇವೆ) ಇವರೇ ಪ್ರಶಸ್ತಿಗೆ ಪಾತ್ರರಾದವರು.
ಅಚ್ಚುಕಟ್ಟಾಗಿ ಆಯೋಜನೆ ಮಾಡಿದ ಕಾರ್ಯಕ್ರಮವನ್ನು ಮೂರು ಸಂಸ್ಥೆಯ ಹಲವು ಸದಸ್ಯರು ನೆರವಾದರು. ಹರ್ಷವರ್ಧನ್ ವೇದಿಕೆಯಲ್ಲಿ ಪಾದರಸದಂತೆ ಓಡಾಡಿ ಕಾರ್ಯಕ್ರಮಕ್ಕೆ ನೆರವಾದರು. ನಾಗೇಂದ್ರ ಹೆಬ್ಬಾರ್ ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್ ಅನಂತ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.








