CinemaLatest

ಡಾ.ರಾಜ್ ಕುಮಾರ್ ಅವರ ಸಿನಿ ಬದುಕಿನ ಅಳಿಸಲಾಗದ ಸಾಧನೆ ಮತ್ತು ದಾಖಲೆಗಳು…!

ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರು ತಮ್ಮ ವೃತ್ತಿ ಬದುಕಿನ ಸಿನಿ ಪಯಣದುದ್ದಕ್ಕೂ ಸಾಧನೆ ಮತ್ತು ದಾಖಲೆಗಳನ್ನು ಮಾಡುತ್ತಲೇ ಸಾಗಿದ್ದಾರೆ. ಅವರ ಇನ್ನಷ್ಟು ಸಾಧನೆ ಮತ್ತು ದಾಖಲೆಯನ್ನು ಮುಂದುವರೆದ ಭಾಗವಾಗಿ ಇಲ್ಲಿ ಹಿರಿಯಬರಹಗಾರರಾದ  ಕುಮಾರಕವಿ ನಟರಾಜ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ.

ಸಿನಿಮ ನಟನೊಬ್ಬನ ಅಭಿಮಾನಿಗಳು ಸೇರಿಕೊಂಡು ಬೈ-ಲಾ ತಯಾರಿಸುವ ಮೂಲಕ ಸಬ್ ರಿಜಿಸ್ಟ್ರಾರ್ ಆಫ್ ಕೊಆಪರೇಟಿವ್ ಸೊಸೈಟಿ ಕಚೇರಿಯಲ್ಲಿ ನೋಂದಣಿಯಾದ ಇಡೀ ಪ್ರಪಂಚದ ಏಕೈಕ ಸಂಘ-ಸಂಸ್ಥೆ “ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ(ರಿ)” 1976 ರಿಂದ ಜಾರಿಗೆ ಬಂದಂತೆ ಅಧಿಕೃತವಾಗಿ ಮೊಟ್ಟ ಮೊದಲು ಮೈಸೂರಿನಲ್ಲಿ ಸ್ಥಾಪನೆ ಗೊಂಡಿತು. ಮೈಸೂರಿನ ಡಾ.ಮಳಲಿ ವಸಂತಕುಮಾರ್ ಮಾರ್ಗದರ್ಶನದಲ್ಲಿ ಬೆಂಗಳೂರು ವಿಜಯ ಕಾಲೇಜಿನ ಉಪನ್ಯಾಸಕ ಗುರುಮೂರ್ತಿ ಹಾರೋಹಳ್ಳಿರವರು “ಕನ್ನಡ ರಂಗಭೂಮಿ ಮತ್ತು ಸಿನಿಮಾಕ್ಕೆ ಡಾ.ರಾಜ್ ಕೊಡುಗೆ” ಕುರಿತ ಸಂಶೋಧನಾತ್ಮಕ ಪ್ರೌಢಪ್ರಬಂಧ (ಥೀಸಿಸ್) ಮಂಡಿಸಿ 2001ರಲ್ಲಿ ಮೈ.ವಿ.ವಿ.ಇಂದ ಪಿ.ಹೆಚ್.ಡಿ.(ಡಾಕ್ಟರೇಟ್)ಪದವಿ ಪಡೆದರು.

ಡಾ.ರಾಜಕುಮಾರ್ ಸಂಗತಿಗಳನ್ನು ಅನಾವರಣಗೊಳಿಸುವ, ಅ.ನಾ.ಪ್ರಹ್ಲಾದ ರಾವ್ ಬರೆದ 120 ಪುಟಗಳ ವಿಶಿಷ್ಟ ಪುಸ್ತಕ ‘ಪ್ರಾಣಪದಕ’. ಈ ಪುಸ್ತಕದ ಲೇಖನಗಳು ಮಂಗಳ ವಾರಪತ್ರಿಕೆಯಲ್ಲಿ ಪ್ರಕಟ ಗೊಂಡಿತ್ತು. ಈ ಪುಸ್ತಕವು ಇಂಗ್ಲಿಷ್ ಭಾಷೆಗೆ ಡಾ.ರಾಜಕುಮಾರ್ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ ಹೆಸರಿನಲ್ಲಿ ಭಾಷಾಂತರಗೊಂಡು ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ  ಬಿಡುಗಡೆಗೊಂಡಿತು. ಕನ್ನಡದ ನಟರೊಬ್ಬರನ್ನ ಕುರಿತ ಇಂಗ್ಲಿಷ್ ಪುಸ್ತಕ ವೊಂದು ಭಾರತದ ಹೊರಗಡೆ ಬಿಡುಗಡೆ ಗೊಂಡ ಮೊದಲ ಪುಸ್ತಕವೆಂಬ ದಾಖಲೆ ಯನ್ನೂ ಮಾಡಿತು.

ಡಾ.ರಾಜ್‌ಕುಮಾರ್ ನಟಿಸಿದ 40 ಸಿನಿಮಾ ಬೇರೆ, ಬೇರೆ ಭಾಷೆಗೆ ರೀಮೇಕ್ ಆಗಿದ್ದೇ ವಿಶ್ವದಾಖಲೆ!

220 ಪುಟಗಳ ಇದು ರಾಜಕುಮಾರ್ ಕುರಿತಾದ ಮೊದಲ ಇಂಗ್ಲಿಷ್ ಪುಸ್ತಕವಷ್ಟೇ ಅಲ್ಲದೆ ದೇಶದ ಹೊರಗಡೆ ಬಿಡುಗಡೆ ಆದ ಡಾ.ರಾಜಕುಮಾರ್ ಕುರಿತಾದ ಮೊದಲ ಪುಸ್ತಕವೂ ಹೌದು. ಇದೇ ಪುಸ್ತಕ 2006ರಲ್ಲಿ ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ 2006ರ ಕುವ್ಯೆತ್ ಕನ್ನಡ ಸಮ್ಮೇಳನದಲ್ಲೂ ಬಿಡುಗಡೆ ಗೊಂಡಿತು. ಇಂಗ್ಲಿಷ್ ಪುಸ್ತಕವು ಲಂಡನ್ ನಗರದಲ್ಲಿ 2008ರ ಆಗಸ್ಟ್ ತಿಂಗಳಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಅಲ್ಲಿನ ಸೆನೆಟರ್ ಬಿಡುಗಡೆ ಮಾಡಿದರು. ಇದೂ ಸಹ ವಿಶ್ವದಾಖಲೆ!

ನಟಸಾರ್ವಭೌಮ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರನ್ನು ನರಹಂತಕ ಕಾಡುಗಳ್ಳ ವೀರಪ್ಪನ್ ದೊಡ್ಡಗಾಜನೂರು ಗ್ರಾಮದ ಮನೆಯಿಂದ ಅಪಹರಿಸಿದನು. ಸತತ108 ದಿನಗಳ ಧೀರ್ಘಕಾಲ ದಟ್ಟಕಾಡಿನಲ್ಲಿ ಅಲೆದಾಡಿದ ಕಾರಣ ನೊಂದುಬೆಂದು ಬಸವಳಿದ ರಾಜಣ್ಣ ನಿತ್ರಾಣಗೊಂಡರು. ಆದರೆ ದೇವರ ಕೃಪೆಯಿಂದ ಹಾಗೂ ಕನ್ನಡನಾಡಿನ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯಿಂದ ಅಣ್ಣಾವ್ರು ಬದುಕುಳಿದು ಹಿಂದಿರುಗಿದ ದುರಂತ ಘಟನೆ ಜಗತ್ತಿನ ಇತಿಹಾಸದ ಪುಟ ಸೇರಿತು. ಇಂತಹ ಏಕೈಕ ಅದ್ಭುತ ಕಲಾವಿದನ ಸಾಧನೆಯ ಹಾದಿಯಲ್ಲಿ ವಿಶ್ವದ, ರಾಷ್ಟ್ರದ, ರಾಜ್ಯದ, ಚಂದನವನದ, ಚರಿತ್ರೆಯಲ್ಲಿ ಆಚಂದ್ರಾರ್ಕ ಅಮರವಾಗಿರುವ ರೋಮಾಂಚಕ ನಿತ್ಯನೂತನ ಸತ್ಯಪೂರ್ಣ ವಿಶ್ವದಾಖಲೆ ಇದು.

ಇಡೀ ಪ್ರಪಂಚದಲ್ಲೆ ಅಮೆರಿಕ ದೇಶದ ಪ್ರತಿಷ್ಠಿತ ಕೆಂಟುಕಿ ಕರ್ನಲ್ ಗೌರವ ಪಡೆದ ಭಾರತದ ಮೊದಲ ಮತ್ತು ಏಕೈಕ ಸಿನಿಮಾನಟ. ಘನತೆವೆತ್ತ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಅತಿ ಹೆಚ್ಚು ಫಿಲಂಫೇರ್ ಅವಾರ್ಡ್, ಭಾರತ ಸರ್ಕಾರದ ಪದ್ಮಭೂಷಣ, ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ-ಸನ್ಮಾನ ಕರ್ನಾಟಕರತ್ನ, ವರನಟ, ಕನ್ನಡಕಂಠೀರವ, ಗಾನಗಂಧರ್ವ, ರಸಿಕರರಾಜ, ನಟಸಾರ್ವಭೌಮ, ಮ್ಯಾಟ್ನಿಐಡಲ್, ಅಣ್ಣಾವ್ರು, ಕೆಂಚುಕಿಕರ್ನಲ್, ರಾಜಣ್ಣ, ಕನ್ನಡಕಣ್ಮಣಿ, ನಾಡೋಜ, ಮ್ಯೂಸಿಕಲ್ ನೈಟ್ ಮಾಸ್ಟರ್ ಪೀಸ್, ಕಲಾತಪಸ್ವಿ, ಭಕ್ತಿಕಲಾರತ್ನ, ಇನ್ನೂ ಮುಂತಾದ ಪ್ರಶಸ್ತಿ ಬಿರುದು ಸನ್ಮಾನ ಪುರಸ್ಕೃತರಾದ ದೇಶದ ಪ್ರಪ್ರಥಮ ಕಲಾವಿದ.

ಈ ಮೇಲ್ಕಂಡ ಓರ್ವ ಮಹಾನ್ ಕಲಾವಿದ ಮೇರು ನಟ ಇಡೀ ಪ್ರಪಂಚದಲ್ಲೆ ಅತಿ ಹೆಚ್ಚು ಪ್ರಸಿದ್ಧರಾದ ಹಾಗೂ ಜನಪ್ರಿಯತೆ ಗಳಿಸಿದ ಏಕೈಕ ನಟ-ಹಿನ್ನಲೆಗಾಯಕ ಡಾ.ರಾಜ್‌ಕುಮಾರ್ ರವರ ಪತ್ನಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್, ಮತ್ತು ಇವರ ಪುತ್ರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜ್ ಕುಮಾರ್, ಬಾಮೈದುನರಾದ ಎಸ್.ಎ.ಚಿನ್ನೇಗೌಡ,  ಎಸ್.ಎ. ಗೋವಿಂದರಾಜ್, ಭರತರಾಜ್, ಕುಟುಂಬದ ಆಪ್ತರಾದ ಸಾ.ರಾ.ಗೋವಿಂದು ಇವರೆಲ್ಲರಿಗೂ ಸೇರಿದ ಸಿನಿಮಾ ನಿರ್ಮಾಣ ಸಂಸ್ಥೆ ಮತ್ತು ಸಿನಿಮ ಹಂಚಿಕೆ ಸಂಸ್ಥೆಗಳು:-

1.ಅನ್ನಪೂರ್ಣೇಶ್ವರಿ ಪಿಕ್ಚರ್ಸ್‌, 2.ದಾಕ್ಷಾಯಿಣಿ ಸಿನಿ ಕಂಬೈನ್ಸ್, 3.ವಜ್ರೇಶ್ವರಿ ಕಂಬೈನ್ಸ್ 4.ಚಂದ್ರಿಕಾ ಮೂವೀಸ್, 5.ಪೂರ್ಣಿಮಾ ಎಂಟರ್ ಪ್ರೈಸಸ್, 6.ನಾರಾಯಣೀ ಸಿನಿ ಕಂಬೈನ್ಸ್, 7.ಅಶ್ವಿನಿ ಫಿಲಂಸ್  8.ತನು ಚಿತ್ರ ಅರ್ಪಿಸುವ(ಬ್ಯಾನರ್)

ಇನ್ನು ಡಾ.ರಾಜ್‍ಕುಮಾರ್ ರವರ ಸಾಧನೆಯ ಹಾದಿಯಲ್ಲಿ ಇಡೀ ಪ್ರಪಂಚ,ದೇಶ/ಚಂದನವನ ಇತಿಹಾಸದಲ್ಲಿ ಜರುಗಿದ ಅತ್ಯಂತ ರೋಚಕ ರೆಕಾರ್ಡ್ಸ್ ವಿವರ. ಡಾ.ರಾಜ್‍ಕುಮಾರ್ ರವರ ಪ್ರಪ್ರಥಮ/ಮೊಟ್ಟಮೊದಲ ಸಿನಿಮಾ (ಬಾಲನಟ ಮುತ್ತುರಾಜ): ಭಕ್ತಪ್ರಹ್ಲಾದ/1942

ಇವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನಟಿಸಿದ ಏಕೈಕ ಸಿನಿಮ: ಜೀವನ ನಾಟಕ/1942, ಏಕೈಕ ಪರಭಾಷೆ (ತೆಲುಗು)ಚಿತ್ರ: ಕಾಳಹಸ್ತಿಮಹಾತ್ಯಂ/1954, ನಟ-ಹಿನ್ನೆಲೆ ಗಾಯಕನಾಗಿದ್ದ ಚಿತ್ರ: ಓಹಿಲೇಶ್ವರ/1956, ಸೆನ್ಸಾರಾದ್ರೂ ರಿಲೀಸಾಗದ ಚಿತ್ರ: ಬೆಟ್ಟದಚಾಮರಾಜ/1957, ಒಂದೇ ಹಾಡಿನ ಮೂಲಕ ಇಡೀ ರಾಮಾಯಣದ ಕಥೆ ಹೇಳುವ ಏಕೈಕ ಸಿನಿಮಾ: ಭೂಕೈಲಾಸ/1958, ಅತಿಥಿ(ಗೌರವ)ನಟ ಚಿತ್ರ: ಜಗಜ್ಯೋತಿಬಸವೇಶ್ವರ/1959, ಐತಿಹಾಸಿಕ ಚಿತ್ರ: ರಣಧೀರಕಂಠೀರವ/1960, ಕನಕದಾಸರ ಬಗೆಗಿನ ಚಿತ್ರ: ಭಕ್ತಕನಕದಾಸ/1960, ಶ್ರೀಶೈಲಕ್ಷೇತ್ರದ ಬಗ್ಗೆ ತೆಗೆದ ಚಿತ್ರ: ಶ್ರೀಶೈಲಮಹಾತ್ಮೆ/1961, ಕೈವಾರತಾತಯ್ಯನ ಬಗ್ಗೆ ತೆಗೆದ ಚಿತ್ರ: ಕೈವಾರಮಹಾತ್ಮೆ/1961

ಕಾದಂಬರಿಆಧಾರಿತಚಿತ್ರ:ಕರುಣೆಯೇ ಕುಟುಂಬದ ಕಣ್ಣು/1962, (ಕೃಷ್ಣಮೂರ್ತಿಪುರಾಣಿಕ್ ಬರೆದ ಕಾದಂಬರಿ”ಧರ್ಮದೇವತೆ”), ಕಬೀರದಾಸ್ ಬಗೆಗಿನ ಚಿತ್ರ: ಮಹಾತ್ಮಕಬೀರ್/1962,  ವಿನೋಬಭಾವೆ ಭೂಹಿಡುವಳಿಪದ್ಧತಿಚಿತ್ರ: ಭೂದಾನ/1962,  ದ್ವಿಪಾತ್ರ ಅಭಿನಯದ ಸಿನಿಮ : ಮಲ್ಲಿಮದುವೆ/1963, ಭಾಗಶಃ(ಕಲರ್ ಫಿಲಂ)ವರ್ಣ ಚಿತ್ರ: ವೀರಕೇಸರಿ/1963, ವಿಲನ್-ಹೀರೋ ಪಾತ್ರ ನಿರ್ವಹಿಸಿದ ಚಿತ್ರ: ಸತಿಶಕ್ತಿ/1963, ವಿದೇಶೀ ಚಿತ್ರೋತ್ಸವದಲ್ಲಿ ಪ್ರದರ್ಶಿತ ಚಿತ್ರ: ನಾಂದಿ/1964, ನಾರದ ಪಾತ್ರದ ಏಕೈಕಚಿತ್ರ: ಮಹಾಸತಿ ಅನಸೂಯ/1965, ಸರ್ವಜ್ಞರ ಬಗೆಗಿನ ಏಕೈಕ ಚಿತ್ರ: ಸರ್ವಜ್ಞಮೂರ್ತಿ/1965, ಅ.ನ.ಕೃ. ಕಾದಂಬರಿ ಆಧಾರಿತ ಸಂಪೂರ್ಣ ಸಂಗೀತಮಯ ನೈಜ ವಿದ್ವಾಂಸರ ಸಿನಿಮ : ಸಂಧ್ಯಾರಾಗ/1966,

ವಾಸವೀ ಅವತಾರದ ಚಿತ್ರ: ಶ್ರೀಕನ್ಯಕಾಪರಮೇಶ್ವರಿ ಕಥೆ/1966, ಗುರುರಾಘವೇಂದ್ರ ಸ್ವಾಮಿ ಚಿತ್ರ: ಮಂತ್ರಾಲಯ ಮಹಾತ್ಮೆ/1966, ಗಾಳಿಪಟ ಕಟ್ಟಿಕೊಂಡು ಹಾರಾಡಿದ ಚಿತ್ರ:ಕಠಾರಿವೀರ/1966, ಕುಷ್ಠರೋಗ ಜಾಗೃತಿಯ ಚಿತ್ರ: ಬಂಗಾರದ ಹೂವು/1967, ಸಿಐಡಿ 999 ಸೀರಿಯಲ್ ಚಿತ್ರ: ಜೇಡರಬಲೆ/1967, ಟಿ.ಎಂ.ಸೌಂದರ್ಯ ರಾಜನ್ ಹಾಡಿದ ಚಿತ್ರ: ಸಿಂಹಸ್ವಪ್ನ /1968, ಅಧಿಕೃತ ರೈಲ್ ಹೆಸರಿನ ಚಿತ್ರ: ಬೆಂಗಳೂರ್ ಮೈಲ್ /1968,  ಗೋವದಲ್ಲಿ ಚಿತ್ರೀಕರಿಸಿದ್ದು: ಗೋವಾದಲ್ಲಿ ಸಿಐಡಿ 999/1968, ರೇಖಾ ನಟಿಸಿದ ಏಕೈಕ ಚಿತ್ರ: ಆಪರೇಶನ್ ಜಾಕ್ಪಾಟ್/1969, ಪೂರ್ಣಕಲರ್ ಐತಿಹಾಸಿಕ ಚಿತ್ರ:ಶ್ರೀಕೃಷ್ಣದೇವರಾಯ/1969,  ಪೂರ್ಣಕಲರ್ ಸಾಮಾಜಿಕ ಚಿತ್ರ: ಮಿ.ರಾಜ್‍ಕುಮಾರ್/1970,

ಡಾ.ರಾಜ್ ಕುಮಾರ್… ಸಾಧನೆ, ದಾಖಲೆಗಳ ಧ್ರುವತಾರೆ… ನಾವು ಅರಿಯದ ಅದೆಷ್ಟು ವಿಷಯಗಳಿವೆ ಗೊತ್ತಾ?

ಒಂಭತ್ತು ಪಾತ್ರಗಳಲ್ಲಿ ನಟಿಸಿದ ಚಿತ್ರ: ಸಿಐಡಿ ರಾಜಣ್ಣ/ 1970, 77 ಅಡಿ ಎತ್ತರದ ಜೋಡಿ ಕಟೌಟ್ ಚಿತ್ರ: ಭಲೇಜೋಡಿ/1970, ತ್ರಿಪಾತ್ರ ಅಭಿನಯದ ಫಿಲಂ: ಕುಲಗೌರವ/1971, ಮರಣ ಹೊಂದುವ ಫಿಲಂ: ಕಸ್ತೂರಿನಿವಾಸ/1971, ಕೌಬಾಯ್ ಚಿತ್ರ: ಪ್ರತಿಧ್ವನಿ/1971,  ಪೃಥ್ವಿರಾಜಕಪೂರ್ ನಟಿಸಿದ ಏಕೈಕಚಿತ್ರ: ಸಾಕ್ಷಾತ್ಕಾರ/1971, ಚಂಬಲ್ ಕಣಿವೆಯಲ್ಲಿ ಚಿತ್ರೀಕರಣ, ರುಮ್ಕೀ+ ಮಧುಮತಿ ಜೋಡಿ ನೃತ್ಯದ ಏಕೈಕ ಫಿಲಂ ಸಿಪಾಯಿರಾಮು/1972,

ಹೆಲನ್ ನೃತ್ಯಇರುವ ಏಕೈಕಚಿತ್ರ: ಭಲೇ ಹುಚ್ಚ/1972, 2ವರ್ಷ ಪ್ರದರ್ಶಿತವಾದ ಚಿತ್ರ: ಬಂಗಾರದಮನುಷ್ಯ/1972,  ಕಾಮನ(ಹೋಳಿ) ಹಬ್ಬದ ದೃಶ್ಯ ಹಾಗೂ ಆಶಾಭೋಸ್ಲೆ ಹಿನ್ನೆಲೆ ಗಾಯನವುಳ್ಳ ಏಕೈಕಚಿತ್ರ : ದೂರದಬೆಟ್ಟ/1973, ರಾಜ್ಯದಾದ್ಯಂತ ಪ್ರದರ್ಶನಗೊಳ್ಳುವಾಗ ಬದಲಿಸಿದ ಕ್ಲೈಮ್ಯಾಕ್ಸ್ ರೀಶೂಟ್ ರೀಲ್ ಸೇರಿಸಿದ ನಂತರ ರೀ- ಸೆನ್ಸಾರಾದ ಏಕೈಕ ಚಿತ್ರ: ಬಿಡುಗಡೆ/1973, ಅರಣ್ಯಸಂಪತ್ತು, ಕಾಡುಪ್ರಾಣಿಸಂರಕ್ಷಣೆ, ಅಭಯಾರಣ್ಯ ಯೋಜನೆ ಬಗ್ಗೆ ಏಕೈಕ ಚಿತ್ರ ಗಂಧದಗುಡಿ/1973, ಬಿಂದು ನಟಿಸಿದ ಏಕೈಕಚಿತ್ರ: ಬಂಗಾರದಪಂಜರ/1974,

ಡಾ.ರಾಜ್ ಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ.. ಏಕೆ ಗೊತ್ತಾ?

ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಚಿತ್ರೀಕರಿಸಿದ ಏಕೈಕ ಫಿಲಂ ಮಯೂರ/1975, ಬಿಸ್ಮಿಲ್ಲಖಾನ್ ಶಹನಾಯ್ ಸಿನಿಮ: ಸನಾದಿಅಪ್ಪಣ್ಣ/1977, ದೂರದರ್ಶನದಲ್ಲಿ ಪ್ರಸಾರವಾದ ಚಿತ್ರ: ಶಂಕರ್‌ಗುರು/1978,  ಯೋಗಾಭ್ಯಾಸ ದೃಶ್ಯಗಳಿಂದ ಕೂಡಿದ ಚಿತ್ರ: ಕಾಮನಬಿಲ್ಲು/1983, ಕಪಾಲಿ ಚಿತ್ರಮಂದಿರದ ಮೇಲೆ ಗಂಗಾರಾಂ ಬಿಲ್ಡಿಂಗ್ ಕುಸಿದುಬಿದ್ದಾಗ ಪ್ರದರ್ಶನ ವಾಗುತ್ತಿದ್ದ ಚಿತ್ರ: ಭಕ್ತಪ್ರಹ್ಲಾದ /1983,

ಮಾಸ್ಕ್ ಲೆಸ್ ಅಂಡರ್ ವಾಟರ್ ಫಿಲಂಗಳು ಒಂದು ಮುತ್ತಿನ ಕಥೆ/1987, ಅಖಿಲ ಭಾರತ ಶ್ರೇಷ್ಠ ಹಿನ್ನಲೆಗಾಯಕ ರಾಷ್ಟ್ರ ಪ್ರಶಸ್ತಿ, ಗಳಿಸಿದ ನಟ- ಗಾಯಕನ ಚಿತ್ರ: ಜೀವನಚೈತ್ರ/ 1992, ಒಂದು ಡಝನ್ ಚಿತ್ರಗಳ ನಿರ್ಮಾಣಕ್ಕೆ ಮುಹೂರ್ತ ನಿಗಧಿ ಪಡಿಸಿ ಎಲ್ಲ ಅಣಿಗೊಳಿಸಿದರೂ ಕಾರಣಾಂತರದಿಂದ ಚಿತ್ರೀಕರಣ ಆಗದೇ ಬಾಕಿ ಉಳಿದುಹೋದ (ಡಾ.ರಾಜ್‍) ಸಿನಿಮಾಗಳು ಹೀಗಿವೆ.. 1.ಚೆಲ್ಲಿದರಕ್ತ,  2.ಶಿವಗಂಗಾ, 3. ಶ್ರೀಮಾನ್ ರಾಜಕುಮಾರ್, 4.ಗಂಡುಗಲಿ ಕುಮಾರರಾಮ, 5.ಸಾಮ್ರಾಟ್ ಅಶೋಕ,  6.ಬೆಂಗಳೂರು ಕೆಂಪೇಗೌಡ, 7.ಪೈಲ್ವಾನ್ ಪಾಪಣ್ಣ, 8.ಭಕ್ತ ಅಂಬರೀಷ, 9.ಬೆವರಿನಬೆಲೆ, 10.ಭರತೇಶ ವೈಭವ (ಭರತ- ಬಾಹುಬಲಿ) 11. ನಾಟ್ಯರಾಣಿ ಶಾಂತಲಾ, ಹಾಗೂ  12. ನಿನ್ನೆ ಇಂದು ಮತ್ತು ನಾಳೆ (ಪೃಥ್ವಿರಾಜ್  ಕಪೂರ್ ಸಲಹೆ ಸೂಚನೆ ಮೇರೆಗೆ) ಪೃಥ್ವಿರಾಜ್, ರಾಜ್‌ಕಪೂರ್ ಮತ್ತು ರಣಧೀರ ಕಪೂರ್ ನಟಿಸಿದ್ದ ಹಿಂದಿಯ “ಕಲ್ ಆಜ್ ಔರ್ ಕಲ್” ಚಿತ್ರದ ಕನ್ನಡ ರೀಮೇಕ್?!

admin
the authoradmin

Leave a Reply

Translate to any language you want