ರಾಯಲ್ ಬುಲೆಟ್ ಮೆಣಸಿಕಾಯಿ ಬೆಳೆದ ರೈತರಿಗೆ ಸಂಕಷ್ಟ…ರೈತರಿಂದಲೇ ಫಸಲು ನಾಶ!
ಹುಣಸೂರು ರೈತರ ಮೇಲೆ ಯುದ್ಧದ ಕಾರ್ಮೋಡ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ದೇಶ, ವಿಶ್ವದಲ್ಲಿ ಏನೇ ಘಟನೆ ನಡೆದರೂ ಅದರ ಪರಿಣಾಮಗಳು ಮಾತ್ರ ರೈತನ ಮೇಲೆಯೇ ಆಗುತ್ತವೆ. ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಅದರ ಪರಿಣಾಮ ನಮ್ಮ ಹುಣಸೂರಿನ ರೈತರ ಮೇಲೆ ಬೀರಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ.. ಈಗ ಅಂಗೈನಲ್ಲಿಯೇ ವಿಶ್ವವಿರುವುದರಿಂದ ಎಲ್ಲಿ ಏನೇ ಸಮಸ್ಯೆಗಳಾದರೂ ಪರಿಣಾಮಗಳು ನಮ್ಮ ಮೇಲೆ ಆಗುತ್ತಿವೆ. ಇದಕ್ಕೆ ಹುಣಸೂರು ತಾಲೂಕಿನಲ್ಲಿ ರಾಯಲ್ ಬುಲೆಟ್ ಮೆಣಸಿನಕಾಯಿ ಬೆಳೆದ ರೈತ ಸಾಕ್ಷಿಯಾಗಿದ್ದಾನೆ… ಇದೀಗ ಫಸಲಿಗೆ ಬಂದಿದ್ದ ಗಿಡಗಳನ್ನೇ ನಾಶ ಮಾಡುವ ಮಟ್ಟಕ್ಕೆ ಹೋಗಿದ್ದಾನೆ… ಇಷ್ಟಕ್ಕೂ ಆಗಿರುವುದೇನು?

ನಿಜ ಹೇಳಬೇಕೆಂದರೆ ಯುದ್ಧ ನಡೆಯದೆ ಹೋಗಿದ್ದರೆ ರೈತರು ತಾವು ಬೆಳೆದ ಬೆಳೆಗಳನ್ನು ಮಾರಿ ಅಷ್ಟೋ ಇಷ್ಟೋ ಹಣವನ್ನು ಸಂಪಾದಿಸಿಕೊಳ್ಳುತ್ತಿದ್ದರು. ಹೇಳಿಕೊಳ್ಳುವಂತಹ ಲಾಭ ಬಾರದೆ ಹೋದರೂ ನಷ್ಟದ ಹೊಡೆತದಿಂದ ಪಾರಾಗುತ್ತಿದ್ದರು. ಆದರೆ ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದಿಂದ ನಮ್ಮ ರೈತರು ಸಂಕಷ್ಟ ಪಡುವಂತಾಗಿದೆ.
ಇರಾನ್ ಅಮೇರಿಕಾ ಮೇಲಿನ ಸೇಡು ತೀರಿಸಿಕೊಳ್ಳುವ ಸಲುವಾಗಿ ಕೊಲ್ಲಿ ರಾಷ್ಟ್ರಗಳ ಅಮೇರಿಕಾ ವಾಯುನೆಲೆಗಳ ಮೇಲೆ ದಾಳಿ ಮಾಡಿದೆ. ಹೀಗಾಗಿ ಅರಬ್ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ಅಲ್ಲಿಗೆ ಸದ್ಯಕ್ಕೆ ಯಾವುದೂ ರಫ್ತಾಗುತ್ತಿಲ್ಲ. ಇದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಎಲ್ಲವೂ ಸರಿಯಿದ್ದಿದ್ದರೆ ಇಲ್ಲಿನ ರೈತರು ಬೆಳೆದ ಮೆಣಸಿನಕಾಯಿ, ಸೇರಿದಂತೆ ತರಕಾರಿಗಳು ಕೇರಳದ ಮೂಲಕ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಹೀಗಾಗಿ ರೈತರಿಗೂ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಯುದ್ಧದಿಂದಾಗಿ ಅದ್ಯಾವುದೂ ನಡೆಯುತ್ತಿಲ್ಲ.

ರೈತರಿಗೆ ತಾವು ಬೆಳೆದ ಬೆಳೆಗೆ ಕೊಯ್ಲು ಮಾಡಿದ ಖರ್ಚು ಕೂಡ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಯ್ಲು ಮಾಡುವ ಬದಲಿಗೆ ನಾಶ ಮಾಡುವ ಸ್ಥಿತಿಗೆ ಬಂದಿರುವುದು ಮಾತ್ರ ಬೇಸರದ ಸಂಗತಿಯಾಗಿದ್ದು, ಕಣ್ಣೀರು ತರಿಸುವ ದೃಶ್ಯಗಳು ನಿರ್ಮಾಣವಾಗಿವೆ. ಇಲ್ಲಿ ಮುಖ್ಯವಾಗಿ ಯುದ್ಧ ನಡೆಯುತ್ತಿರುವುದರಿಂದ ಭಾರತದಿಂದ ಚಿಲ್ಲಿ ಪೌಡರ್ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತಿಲ್ಲ. ಹೀಗಾಗಿ ಪ್ರತಿವರ್ಷದಂತೆ ರಾಯಲ್ ಬುಲೆಟ್ ಮೆಣಸಿನ ಕಾಯಿ, ಸೇರಿದಂತೆ ತರಕಾರಿಗಳನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಮೆಣಸಿಕಾಯಿ ಬೆಳೆದ ರೈತರ ಗೋಳು ಕೇಳುವವರು ಇಲ್ಲದಾಗಿದೆ.
ಹುಣಸೂರು ತಾಲೂಕಿನಲ್ಲಿ ಬಹುತೇಕ ರೈತರು ಮುಂಗಾರು ಬೆಳೆಯಾಗಿ ಜೋಳ, ತಂಬಾಕು, ಶುಂಠಿ ಬೆಳೆಯುತ್ತಾರೆ. ಆ ನಂತರ ಮುಂಗಾರು ಆರಂಭದ ನಡುವಿನ ಬೇಸಿಗೆ ದಿನಗಳಲ್ಲಿ ಮೆಣಸಿನ ಕಾಯಿ ಬೆಳೆದು ಒಂದಷ್ಟು ಸಂಪಾದನೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಈ ಮೆಣಸು ಪೌಡರ್ ಆಗಿ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದರಿಂದ ಬೇಡಿಕೆಯಿತ್ತು. ಜತೆಗೆ ತಾಜಾ ತರಕಾರಿಗಳಿಗೂ ಉತ್ತಮ ಬೆಲೆ ದೊರೆಯುತ್ತಿತ್ತು. ಆದರೀಗ ರೈತರ ಕನಸುಗಳಿಗೆ ತಣ್ಣೀರು ಎರಚಿದಂತಾಗಿದ್ದು, ದರ ಕುಸಿತದ ಕಾರಣದಿಂದ ಆರ್ಥಿಕ ನಷ್ಟ ಹೆಗಲೇರಿದೆ.

ಸದ್ಯ ಕೆ.ಜಿ.ಗೆ 50 ರಿಂದ 60ರೂ.ಗಳಿದ್ದ ಹಸಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ ಕಂಡಿದ್ದು, 20-25ರೂ.ಗೆ ಇಳಿಕೆಯಾಗಿದೆ. ಮೆಣಸಿನಕಾಯಿ ಕೊಯ್ಲು ಮಾಡುವ ವೆಚ್ಚವೂ ಬಾರದಂತಾಗಿದೆ. ಇದರಿಂದ ರೈತರು ಬೆಳೆಯನ್ನೇ ಕಿತ್ತು ನಾಶ ಮಾಡುತ್ತಿದ್ದಾರೆ. ತಾಲೂಕಿನ ಕಾಳೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮೆಣಸಿನ ಬೆಳೆಯನ್ನು ನಾಶಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಸಾಮಾನ್ಯವಾಗಿ ಮೆಣಸಿನಕಾಯಿ ಹಣ್ಣಾಗಲು ಬಿಟ್ಟಲ್ಲಿ ಅಥವಾ ಹಣ್ಣಾದ ನಂತರ ಕೊಯ್ಲು ಮಾಡಿ ಒಣಗಿಸಿದಲ್ಲಿ ಕೆಂಪಗೆ ಒಣಗಿ ಒಣ ಮೆಣಸಿನಕಾಯಿಯಾಗುತ್ತೆ, ಉತ್ತಮ ಬೆಲೆಯೂ ಸಿಗುತ್ತದೆ. ಆದರೆ ಈ ರಾಯಲ್ ಬುಲೆಟ್ ತಳಿ ಹಸಿರಿರುವಾಗಲೇ ಕೊಯ್ಲು ಮಾಡಿ ಮಾರಾಟ ಮಾಡಬೇಕು. ಇಲ್ಲದಿದ್ದರೆ ಕೊಳೆತು ಸಂಪೂರ್ಣ ಹಾಳಾಗುತ್ತದೆ. ಹೀಗಾಗಿ ಅದನ್ನು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದು, ಗಿಡದಲ್ಲಿ ಬಿಡುವಂತೆಯೂ ಇಲ್ಲ.. ಕೊಯ್ಲು ಮಾಡುವಂತೆಯೂ ಇಲ್ಲ. ಹೀಗೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿರುವ ಕೆಲವು ರೈತರು ಬೇರೆ ದಾರಿ ಕಾಣದೆ ಗಿಡಗಳನ್ನೇ ಕಿತ್ತು ನಾಶ ಮಾಡುತ್ತಿದ್ದಾರೆ..
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹೊಸೂರು ಕೊಡಗು ಕಾಲೋನಿ, ಕಾಳೇನಹಳ್ಳಿ, ಚೌಡಿಕಟ್ಟೆ, ರತ್ನಪುರಿ, ಸಿಂಗರಮಾರನಹಳ್ಳಿ, ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ, ಬೀಚನಹಳ್ಳಿ, ತಾರಕ ಸುತ್ತಮುತ್ತ, ಪಿರಿಯಾಪಟ್ಟಣ, ಕೆ.ಆರ್.ನಗರ ತಾಲೂಕಿನ ಹೆಬ್ಬಾಳ, ಚಂಚನಕಟ್ಟೆ, ಹೊಸೂರು ಸುತ್ತಮುತ್ತ ರೈತರು ರಾಯಲ್ ಬುಲೆಟ್ ಮೆಣಸಿನಕಾಯಿ ತಳಿಯ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಾ ಬಂದಿದ್ದಾರೆ.

ಇಲ್ಲಿನ ರೈತರು ಕೊಯ್ಲು ಮಾಡಿದ ಮೆಣಸಿನ ಕಾಯಿಯನ್ನು ನಂತರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ತೆರಕಣಾಂಬಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದರು. ಮಾರುಕಟ್ಟೆಯಲ್ಲಿ ರೈತರಿಂದ ನೇರವಾಗಿ ಕೇರಳ ಮೂಲದವರು ಖರೀದಿಸಿ ಕೇರಳದ ಕಾರ್ಖಾನೆಗಳಲ್ಲಿ ಚಿಲ್ಲಿ ಪೌಡರ್ ತಯಾರಿಸಿ ಅರಬ್ ರಾಷ್ಟ್ರಗಳಿಗೆ ರಪ್ತು ಮಾಡುತ್ತಿದ್ದರು. ಯುದ್ದ ಪರಿಣಾಮ ರಫ್ತಾಗದೆ ಇರುವುದರಿಂದ ಬೇಡಿಕೆ ಇಲ್ಲದೆ ಮೆಣಸಿನಕಾಯಿ ದರ ಪಾತಾಳಕ್ಕಿಳಿದಿದೆ. ಕೊಯ್ಲು ಮಾಡಿದ ಖರ್ಚು ಕೂಡ ಬಾರದಂತಾಗಿದೆ. ಹೀಗಾಗಿ ಕೆಲವರು ಬೆಳೆಯನ್ನೇ ನಾಶ ಮಾಡುವ ತೀರ್ಮಾನ ಮಾಡುತ್ತಿದ್ದಾರೆ.
ಇನ್ನು ತರಕಾರಿ ಬೆಲೆಯೂ ಕುಸಿತವಾಗಿದೆ. ಗಗನಕ್ಕೇರಿದ್ದ ನುಗ್ಗೆಕಾಯಿ ಬೆಲೆ ಕೆಜಿಗೆ 30ರೂ, ಕುಂಬಳಕಾಯಿ ಕೆ.ಜಿ.ಗೆ 20ರೂ ನಿಂದ 8ರೂ.ಗೆ, ಕೋಸು 20ರೂ ನಿಂದ 6ರೂಗೆ, ಟಮಾಟೋ 30ರೂ ನಿಂದ 10-12ರೂ.ಗೆ, ಸೋರೆಕಾಯಿ 20 ರಿಂದ 12ಕ್ಕೆ ಹೀಗೆ ಅನೇಕ ತರಕಾರಿಗಳ ಬೆಲೆ ಸಾಕಷ್ಟು ಇಳಿಮುಖವಾಗಿದೆ. ಬಹುತೇಕ ರೈತರು ಬೇಸಿಗೆಯಲ್ಲಿ ತರಕಾರಿ ಬೆಳೆದು ಹಣ ಮಾಡಿಕೊಳ್ಳುತ್ತಿದ್ದವರು ಇದೀಗ ಖರ್ಚು ಮಾಡಿರುವ ಹಣವೂ ಸಿಗದಂತಾಗಿದ್ದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಹುಣಸೂರು ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆದಿರುವ ರೈತ ಗಣೇಶ್ ಅವರು ಈ ಬಗ್ಗೆ ಮಾತನಾಡಿ, ಅನೇಕ ವರ್ಷಗಳಿಂದ ಬೇಸಿಗೆಯಲ್ಲಿ ಈ ಭಾಗದಲ್ಲಿ ರಾಯಲ್ ಬುಲೆಟ್ ಮೆಣಸಿನಕಾಯಿ ಬೆಳೆದು ಐದಾರು ಬಾರಿ ಕೊಯ್ಲು ಮಾಡುತ್ತಿದ್ದೆವು. ಸುಮಾರು 8ರಿಂದ 10ಟನ್ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದೆವು. ಒಬ್ಬ ಮಹಿಳೆ ದಿನಕ್ಕೆ 40ಕೆ.ಜಿಯಷ್ಟು ಮಾತ್ರ ಮೆಣಸಿನ ಕಾಯಿ ಬಿಡಿಸಲು ಸಾಧ್ಯ, ಹೆಣ್ಣಾಳಿನ ಕೂಲಿ 400ರೂ ಇದ್ದು, ತೆರಕಣಾಂಬಿ, ಗುಂಡ್ಲುಪೇಟೆ ಮಾರುಕಟ್ಟೆಗೆ ತೆರಳಲು ವಾಹನ ಬಾಡಿಗೆ ಮೂರು ಸಾವಿರ, ವಾರಕ್ಕೊಮ್ಮೆ ಕ್ರಿಮಿನಾಶಕ ಸಿಂಪಡಿಸಬೇಕಿದ್ದು, ಖರ್ಚುಮಾಡಿದ್ದ ವೆಚ್ಚವೂ ಬಾರದ್ದರಿಂದ ಮೆಣಸಿನಕಾಯಿ ಗಿಡಗಳನ್ನು ಕಿತ್ತು ಹಾಕಲಾಗುತ್ತಿದೆ. ಸರಕಾರ ಇನ್ನಾದರೂ ರೈತರ ನೆರವಿಗೆ ಬರಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ ರೈತರು ಮಾತ್ರ ಕಷ್ಟ ಪಟ್ಟು ಸಾಲ ಮಾಡಿ ಬೆಳೆ ಬೆಳೆದರೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.







