ಕುಶಾಲನಗರ(ಆರ್ ಹೆಚ್): ಕಾವೇರಿ ಕಣಿವೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ನಾಲ್ಕು ಕ್ರೆಸ್ಟ್ ಗೇಟ್ ಗಳ ಮೂಲಕ ಶನಿವಾರ ಸಂಜೆ ನದಿಗೆ 4 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಯಿತು.
ಜಲಾಶಯ ಗರಿಷ್ಠ ಮಟ್ಟ 2859 ಅಡಿ ಇದ್ದು, ಶನಿವಾರ ಸಂಜೆ 5 ಗಂಟೆಗೆ 2857.48 ಅಡಿಗಳಷ್ಟು ಇತ್ತು. ಜಲಾಶಯಕ್ಕೆ ಒಳ ಹರಿವು 4 ಕ್ಯೂಸೆಕ್ಸ್ ಇದ್ದು, ಜಲಾಶಯದಲ್ಲಿ 7.9 ಟಿಎಂಸಿ ನೀರು ಸಂಗ್ರಹಗೊಂಡಿತ್ತು. ನೀರಾವರಿ ಇಲಾಖೆಯ ಅಣೆಕಟ್ಟೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಜಲಾಶಯಕ್ಕೆ ಪೂಜೆ ಸಲ್ಲಿಸಿ ನಾಲ್ಕು ಗೇಟ್ ಗಳಿಂದ ನೀರನ್ನು ನದಿಗೆ ಹರಿಸಲಾಯಿತು.
ಜಲಾಶಯದ ಕ್ರೆಸ್ಟ್ ಗೇಟ್ ಗಳ ಮೂಲಕ ಹಾಲಿನ ನೊರೆಯಂತೆ ಧುಮ್ಮಿಕ್ಕುವ ನೀರಿನ ದೃಶ್ಯ ನಯನ ಮನೋಹರವಾಗಿತ್ತು. ಜಲಾಶಯದಿಂದ ನೀರು ಹರಿಸುವ ಮುನ್ನ ತಗ್ಗುಪ್ರದೇಶದ ಜನರಿಗೆ ಮೀನುಗಾರರಿಗೆ, ನದಿಯ ಅಸುಪಾಸಿನಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲು ಮೂರು ಭಾರಿ ಸೈರನ್ ಮೋಳಗಿಸಲಾಯಿತು. ಜಲಾಶಯದಿಂದ ನೀರು ಬಿಟ್ಟ ವಿಷಯ ತಿಳಿದ ಸುತ್ತಮುತ್ತಲಿನ ಜನರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಸಂಭ್ರಮಿಸಿದರು.

ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಹರ್ಷ ಚಿತ್ತರಾಗಿದ್ದಾರೆ. ಹಾರಂಗಿ ಜಲಾಶಯದಿಂದ ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ,ಹುಣಸೂರು, ಮತ್ತು ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಸೇರಿದಂತೆ 1.5 ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿದೆ. ಹಾರಂಗಿ ಜಲಾಶಯದಿಂದ ಹರಿಯುವ ನೀರು ಕೂಡಿಗೆ ಬಳಿ ಹಾರಂಗಿ ನದಿ ಮೂಲಕ ಕಾವೇರಿ ನದಿ ಸೇರಿ ನಂತರ ಕೃಷ್ಣರಾಜ ಸಾಗರವನ್ನು ಸೇರಲಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜಲಾಶಯದಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು.ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಆಧರಿಸಿ ನದಿಗೆ ನೀರು ಹರಿಸಲಾಗುತ್ತದೆ.

ಈ ವೇಳೆ ಎಇಇ ಪುಟ್ಟಸ್ವಾಮಿ ಮಾತನಾಡಿ, ಹಾರಂಗಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.ಜಲಾಶಯದ ಭದ್ರತೆಯನ್ನು ಕಾಯ್ದಿರಿಸಿ ಜಲಾಶಯ ಭರ್ತಿಗೆ ಇನ್ನೂ ಒಂದು ಅಡಿ ಬಾಕಿ ಇರುವಾಗಲೇ 2858 ಅಡಿಗೆ ಕಾಯ್ದುಕೊಂಡು ಒಳ ಹರಿವು 4 ಕ್ಯುಸೆಕ್ಸ್ ಸಾವಿರ ಇದ್ದು,ನದಿಗೂ ಕೂಡ ಅಷ್ಟೇ ಪ್ರಮಾಣದಲ್ಲಿ ಅಂದರೆ 4 ಸಾವಿರ ಕ್ಯುಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದೆ ಎಂದರು.
ಒಳಹರಿವು ಏರಿಕೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ನದಿಯಂಚಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು.ಹಾಗೂ ಮೀನುಗಾರರು ನದಿಗೆ ಇಳಿಯಬಾರದು ಎಂದು ಮಹೇಶ್ ಮನವಿ ಮಾಡಿದರು. ಈ ಸಂದರ್ಭ ತಹಶೀಲ್ದಾರ್ ಕೃಷ್ಣಮೂರ್ತಿ, ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಕಿರಣ್ ದೇವಯ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.








