LatestMysore

ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

ಹುಣಸೂರು,(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ನೂತನ ಪಿಡಿಒ ಸರಿತಾರವರು ಗ್ರಂಥಾಲಯದ ಪಿತಾಮಹ ಎಸ್ ಆರ್ ರಂಗನಾಥ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ  ಗ್ರಂಥಪಾಲಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ನೀಡುವುದರ ಜೊತೆಗೆ ಉತ್ತಮ ಭವಿಷ್ಯದ ಕಡೆಗೆ ಹೋಗಲು ಸೇವೆ ನೀಡುತ್ತಿದ್ದಾರೆ ಜೊತೆಗೆ ಮನೆ ವಾತಾವರಣಕ್ಕಿಂತ ಉತ್ತಮವಾದ ವಾತಾವರಣವನ್ನು ನಿರ್ಮಿಸಿಕೊಂಡು ಸ್ವಚ್ಛತೆಯಿಂದ ಗ್ರಂಥಾಲಯವನ್ನು ದೇವಸ್ಥಾನದಂತೆ ನೋಡಿಕೊಳ್ಳುತ್ತಿರುವ ಗ್ರಂಥಪಾಲಕರಿಗೆ ಗ್ರಂಥಪಾಲಕರ ದಿನದ ಶುಭಾಶಯ ತಿಳಿಸಿದರು.

ಗ್ರಂಥಾಲಯದಲ್ಲಿ ಬಹಳಷ್ಟು ಕಲಿಕೆಯ ಪುಸ್ತಕಗಳಿದ್ದು ಅವುಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕಾದದ್ದು ಯುವಕರ ಜವಾಬ್ದಾರಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಎಳೆ ವಯಸ್ಸಿನಲ್ಲಿ ಗ್ರಂಥಾಲಯಗೆ ಭೇಟಿ ನೀಡುವ ಮತ್ತು ಪುಸ್ತಕವನ್ನು ಬಳಸಿಕೊಳ್ಳುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು, ಸಾರ್ವಜನಿಕರು ಕೂಡ ಪ್ರತಿದಿನ ಕನಿಷ್ಠ  ಒಂದು ಘಂಟೆಯಾದರೂ  ಗ್ರಂಥಾಲಯಕ್ಕೆ ಭೇಟಿ ನೀಡಿ ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಮಾಡಿಕೊಂಡರೆ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜೊತೆಗೆ ರಾಜ್ಯದ ಆಗುಹೋಗುಗಳನ್ನು ತಿಳಿದುಕೊಳ್ಳಬಹುದು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಆರ್.ಸುರೇಶ್ ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಪಾಲಕರು ಕಳೆದ 30 -40 ವರ್ಷಗಳಿಂದ 300 ರೂ ಗಳಿಂದ ಕೆಲಸ ಮಾಡಿ ಗೌರವ ಧನ  ಪಡೆಯುತ್ತಿದ್ದರು. ಇತ್ತೀಚೆಗೆ  ಉತ್ತಮ ಗೌರವಧನ  ಬರುವಾಗ ನಿವೃತ್ತಿ ಹೊಂದುತ್ತಿರುವುದು ವಿಷಾದನೀಯ.

ನಿವೃತ್ತಿ ಹೊಂದುತ್ತಿರುವ ಕುಟುಂಬಸ್ಥರ ಮಕ್ಕಳಿಗೆ ಗ್ರಂಥಾಲಯದಲ್ಲಿ ಕೆಲಸ ನೀಡಿದಾಗ ಗ್ರಂಥಪಾಲಕರ ದಿನ ಆಚರಣೆಗೆ ಅರ್ಥ ಬರುತ್ತದೆ. ಗ್ರಂಥ ಪಾಲಕರಿಗೆ ಕನಿಷ್ಠ ವೇತನ  ಮಾಡಿದಾಗ ಗ್ರಂಥಪಾಲಕರು ಕುಟುಂಬ ನಿರ್ವಹಣೆ ಮಾಡಲು ಸಾಧ್ಯ ಆದ್ದರಿಂದ  ಸರ್ಕಾರ ಇತ್ತ ಗಮನಹರಿಸಿ ಕುಟುಂಬಗಳಿಗೆ ಸಹಾಯವಾಗುವಂತಹ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕ ಲಕ್ಷ್ಮಣ್ ಗೌಡ,ವೇಣುಗೋಪಾಲ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ವೇಣುಗೋಪಾಲ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸ್ವಾಮಿಗೌಡ, ಗೌರವರಾಜಶೆಟ್ಟಿ, ಓದುಗರಾದ ಅಶೋಕ, ರವಿ, ಪ್ರೌಢಶಾಲೆಯ  ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಹರೀಶ್, ಗ್ರಂಥಾಲಯ ಮೇಲ್ವಿಚಾರಕಿ, ಶೀಲಾ ಎಸ್ ಗೌಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ವೇಣುಗೋಪಾಲ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ಹಾಜರಿದ್ದರು.

admin
the authoradmin

Leave a Reply