ಬೆಂಗಳೂರು: ಹಿರಿಯ ನಾಗರಿಕರ ಸಮಗ್ರ ಶ್ರೇಯೋಭಿವೃದ್ಧಿ, ಆರೋಗ್ಯ ರಕ್ಷಣೆ ಹಾಗೂ ನಾಗರಿಕ ಹಕ್ಕುಗಳ ಬಲವರ್ಧನೆಗಾಗಿ ಕಾರ್ಯನಿರ್ವಹಿಸುತ್ತಿರುವ “ವಯಾ ವಿಕಾಸ್” ಸಂಸ್ಥೆಯ 5ನೇ ವಾರ್ಷಿಕೋತ್ಸವವನ್ನು ನಗರದ ವಿವಿಧ ಗಣ್ಯರ ಸಮ್ಮುಖದಲ್ಲಿ “ಹಿರಿಯರ ಹಬ್ಬ”ವಾಗಿ ಭವ್ಯವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕರ್ನಾಟಕ ಅಧ್ಯಾಯವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
ವಯಾ ವಿಕಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ಸಂಸ್ಥೆಯ ಸ್ಥಾಪಕ ಸದಸ್ಯರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಯಿತು.
ದೇಶಾದ್ಯಂತ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ “ವಯಾ ವಿಕಾಸ್” ಸಂಸ್ಥೆ ಈಗಾಗಲೇ 1.85 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಸದಸ್ಯತ್ವವನ್ನು 20 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಹಿರಿಯ ನಾಗರಿಕರಿಗೆ ಉಚಿತ ನೋಂದಣಿ ಸೌಲಭ್ಯ ಕಲ್ಪಿಸಲಾಗಿದ್ದು, ಎಲ್ಲ ವರ್ಗದ ಹಿರಿಯರಿಗೆ ಸಂಘಟನೆಯಲ್ಲಿ ಸೇರ್ಪಡೆಯಾಗಲು ಅವಕಾಶ ನೀಡಲಾಗಿದೆ.

ಕಾರ್ಯಕ್ರಮವನ್ನು ವಯಾ ವಿಕಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕ್ರಿಸ್ ಗೋಪಾಲಕೃಷ್ಣನ್, ಸ್ಥಾಪಕ ಸದಸ್ಯರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಡಾ. ಅಲೆಕ್ಸಾಂಡರ್ ಥಾಮಸ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಮುನಾ ರವಿ ಹಾಗೂ ಮುಖ್ಯ ಕಾರ್ಯಾಚರಣಾಧಿಕಾರಿ ಪವಿತ್ರಾ ರೆಡ್ಡಿ ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ “ವಯೋ ಲೈಫ್” ಹೆಸರಿನ ವಿಶೇಷ ಆರೋಗ್ಯ ಅಭಿಯಾನಕ್ಕೂ ಚಾಲನೆ ನೀಡಲಾಯಿತು. 1MG ಮತ್ತು AHPI ಸಹಯೋಗದಲ್ಲಿ 1 ಲಕ್ಷ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಫ್ಲೂ, ನ್ಯುಮೋನಿಯಾ ಮತ್ತು ಶಿಂಗಲ್ಸ್ ಸೇರಿದಂತೆ ತಡೆಗಟ್ಟುವ ಲಸಿಕೆಗಳನ್ನು ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಜೀವನ ನಿರ್ವಹಣೆ, ದೌರ್ಜನ್ಯದಿಂದ ರಕ್ಷಣೆ, ಆರೋಗ್ಯ ಶಿಬಿರಗಳ ವಿಸ್ತರಣೆ, ಡಿಜಿಟಲ್ ಸಾಕ್ಷರತೆ, ಸಮುದಾಯ ಆಧಾರಿತ ಕಾರ್ಯಕ್ರಮಗಳು ಹಾಗೂ ಉತ್ತಮ ಆರೋಗ್ಯ ಸೇವೆಗಳ ಲಭ್ಯತೆ ಕುರಿತಂತೆ ಸಮಗ್ರ ಚರ್ಚೆಗಳು ನಡೆದವು.
ಈ ವೇಳೆ ಮಾತನಾಡಿದ ಡಾ. ದೇವಿ ಪ್ರಸಾದ್ ಶೆಟ್ಟಿ, “ಮಾನವನ ಜೀವಿತಾವಧಿ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ ದೊಡ್ಡ ಸವಾಲಾಗಿದೆ. ತಡೆಗಟ್ಟುವ ಆರೋಗ್ಯ ಸೇವೆಗಳು ಮತ್ತು ಸೂಕ್ತ ಆರೋಗ್ಯ ನೀತಿಗಳು ಅತ್ಯಂತ ಅಗತ್ಯವಾಗಿವೆ. ಹಿರಿಯರಿಗೆ ಅಗತ್ಯವಾದ ಆರೋಗ್ಯ ಮಾರ್ಗದರ್ಶನವನ್ನು ವಯಾ ವಿಕಾಸ್ ಮೂಲಕ ನೀಡಲಾಗುತ್ತದೆ” ಎಂದು ಹೇಳಿದರು.

ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಿ, ವಯಾ ವಿಕಾಸ್ ಸಂಸ್ಥೆಯ ಉದ್ದೇಶ ಹಿರಿಯ ನಾಗರಿಕರ ಸಮಗ್ರ ಅಭಿವೃದ್ಧಿ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸುವುದು. ಸಂಘಟನೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ಅಧ್ಯಾಯ ಉದ್ಘಾಟನೆಯೊಂದಿಗೆ ಹಿರಿಯ ನಾಗರಿಕರೇ ಕಾರ್ಯಕಾರಿ ಸಮಿತಿಯ ಭಾಗವಾಗಿ ನಾಯಕತ್ವದ ಹೊಣೆ ಹೊತ್ತು ತಮ್ಮ ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ರೂಪಿಸುವ ಹೊಸ ಅಧ್ಯಾಯಕ್ಕೆ ಚಾಲನೆ ದೊರೆತಿದೆ.
ಕಾರ್ಯಕ್ರಮದಲ್ಲಿ ವಯಾ ವಿಕಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಮುನಾ ರವಿ, ಮುಖ್ಯ ಕಾರ್ಯಾಚರಣಾಧಿಕಾರಿ ಪವಿತ್ರಾ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.








