CrimeLatest

ಹುಣಸೂರಲ್ಲಿ ಪ್ರಿಯಕರನಿಗಾಗಿ ಗಂಡನ ಉಸಿರು ನಿಲ್ಲಿಸಿದಳು.. ಹೆಂಡತಿ ಕಟ್ಟಿದ ಕಥೆ ಹೇಗಿತ್ತು?

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯೊಬ್ಬಳು ದತ್ತೂರಿ ಬೀಜದ ಪುಡಿ ಬೆರೆಸಿ ಇಡ್ಲಿಮಾಡಿ ತಿನ್ನಿಸಿದಲ್ಲದೆ, ಆತ ಅಸ್ವಸ್ಥಗೊಂಡು ನರಳುತ್ತಿದ್ದಾಗ ಗೆಣೆಕಾರನ ಜತೆಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಮೊಸರನ್ನ ತಿಂದು ಮಲಗಿದ ಗಂಡ ಮೇಲೇಳುತ್ತಿಲ್ಲವೆಂದು ನಾಟಕವಾಡಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದ್ದು, ಇದೀಗ ತಾಟಕಿ ಮಹಿಳೆ ಪ್ರಿಯಕರ ಸಹಿತ ಜೈಲ್ ಸೇರಿ ಕಂಬಿ ಎಣಿಸುತ್ತಿದ್ದಾಳೆ… ಆದರೆ ಬೇಸರದ ಸಂಗತಿ ಅಂದ್ರೆ ಏನೂ ಅರಿಯದ ಮಕ್ಕಳಿಬ್ಬರು ಅತ್ತ ತಂದೆಯೂ ಇಲ್ಲದೆ, ತಾಯಿಯೂ ಇಲ್ಲದೆ ಅನಾಥರಾಗಿದ್ದಾರೆ.

ಅನೈತಿಕ ಸಂಬಂಧದಿಂದ ಉದ್ದಾರವಾದ ಉದಾಹರಣೆ ಕಡಿಮೆಯೇ.. ಆದರೂ ಕೆಲವು ಹೆಂಗಸರು ಮದುವೆಯಾಗಿ ಗಂಡ, ಮಕ್ಕಳು ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ  ವಯಸ್ಸಿನಲ್ಲಿ ಯಾವನೋ ತರಕಲಾಂಡಿಯ ಸಹವಾಸ ಮಾಡಿ ಅವನನ್ನು ಹಾಸಿಗೆ  ತನಕ ಬಿಟ್ಟುಕೊಂಡು ಆತನೊಂದಿಗೆ ಸುಖಿಸಿಕೊಂಡು ಗಂಡ ಮತ್ತು ಮಕ್ಕಳಿಗೆ ದ್ರೋಹ ಮಾಡುತ್ತಾರೆ. ಒಂದಷ್ಟು ದಿನ ಕದ್ದು ಮುಚ್ಚಿ ನಡೆಯುವ ಈ ಕಳ್ಳಾಟ ಮುಂದೊಂದು ದಿನ ಗಂಡನಿಗೆ ಗೊತ್ತಾದಾಗ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳಗಳು ಶುರುವಾಗುತ್ತವೆ.

ಗಂಡ ಹೆಂಡತಿ ನಡುವಿನ ಜಗಳ ಮುಂದುವರೆದು ಕೊಲೆಯಲ್ಲಿ ಕೊನೆಗೊಳ್ಳುವ ಸಂಭವಗಳೇ ಜಾಸ್ತಿ. ಇತ್ತೀಚೆಗೆ ನಡೆಯುತ್ತಿರುವ ಬಹುತೇಕ ಕೊಲೆ ಪ್ರಕರಣಗಳಲ್ಲಿ ಅನೈತಿಕ ಸಂಬಂಧದ ವಾಸನೆ ಜಾಸ್ತಿ ಬರುತ್ತಿದೆ. ಕೊಲೆಯ ನಂತರ ಹೆಂಡತಿ ನಾಟಕವಾಡಿ ಮುಚ್ಚಿಹಾಕುವ ಪ್ರಯತ್ನ ಮಾಡಿದರೂ ಕೊನೆಗೆ ಸಿಕ್ಕಿಬಿದ್ದು ಜೈಲು ಸೇರಿದ ಘಟನೆಗಳು ಬೇಕಾದಷ್ಟು ನಡೆದಿವೆ. ಆದರೆ ಅನೈತಿಕ ಸಂಬಂಧ ಬೆಳೆಸುವವರು ಇದನ್ನುಅರ್ಥ ಮಾಡಿಕೊಳ್ಳುತ್ತಿಲ್ಲ. ಕ್ಷಣಿಕ ಸುಖದ ಮತ್ತಿನಲ್ಲಿ ಪರಪುರುಷನ ತೆಕ್ಕೆಯಲ್ಲಿ ಬೀಳುವ ಹೆಂಗಸರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತಿಸದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಕೆಲವು ಸಮಯಗಳ ಹಿಂದೆಯಷ್ಟೆ ಹುಣಸೂರು ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳು ಅನೈತಿಕ ಸಂಬಂಧದ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಹೆಂಡತಿಯೇ ಗಂಡನ ಮುಗಿಸಿ ಪ್ರಿಯಕರನ ಜೊತೆ ಹಾಯಾಗಿರಬೇಕೆಂದು ಬಯಸಿದ್ದಳು. ಆದರೆ ಆಕೆಯ ಪ್ಲಾನ್ ಪ್ಲಾಪ್ ಆಗಿ ಜೈಲ್ ಸೇರಿ ಮುದ್ದೆ ಮುರಿಯುವಂತಾಗಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡುತ್ತಾ ಹೋದರೆ ಗಂಡ, ಮಕ್ಕಳು ಎಲ್ಲ ಇದ್ದರೂ ಈಕೆಗೇನು ಬಂದಿತ್ತು ಅಬ್ಬೆಪಾರಿಯ ಸಹವಾಸ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.

ಗಂಡನಿಗೆ ಗತಿ ಕಾಣಿಸಿ ಗೆಣೆಕಾರನ ಜೊತೆ ಡಿಂಗ್ ಡಾಂಗ್ ಆಡಿಕೊಂಡು ನೆಮ್ಮದಿಯಾಗಿರಬೇಕೆಂದು ಬಯಸಿದವಳ ಹೆಸರು ಪವಿತ್ರಾ(30). ಈಕೆ ಮೈಸೂರಿನ ಕೆಸರೆಯ ರವಣಯ್ಯ ಅವರ ಪುತ್ರಿಯಾಗಿದ್ದು, ಹನ್ನೆರಡು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲನಿಯ ನಾಗಯ್ಯರ ಪುತ್ರ ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ ಎಂಬಾತನನ್ನು ಮದುವೆಯಾಗಿದ್ದಳು. ಇವರ ದಾಂಪತ್ಯದ ಫಲವಾಗಿ 11 ವರ್ಷದ ಪುತ್ರ ಮತ್ತು 9 ವರ್ಷದ ಪುತ್ರಿಯಿದ್ದಾಳೆ.

ಗಂಡ ರಾಮಪ್ರಸಾದ್ ಗಾರೆಕೆಲಸ ಮಾಡಿ ಸಂಸಾರ ಸಾಗಿಸುತ್ತಿದ್ದನು. ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದು ಶಾಲೆಗೆ ಹೋಗುತ್ತಿದ್ದರು. ಬಹುಶಃ ಎಲ್ಲ ಹೆಣ್ಮಕ್ಕಳಂತೆ ಗಂಡ ಮಕ್ಕಳು ಸಂಸಾರವೆಂದು ಬದುಕಿನ ಬಗ್ಗೆ ನಿಗಾವಹಿಸಿಕೊಂಡು ಮುಂದುವರೆದಿದ್ದರೆ ಇವತ್ತು ಪವಿತ್ರಾಗೆ ಜೈಲ್ ಸೇರುವ ಪ್ರಮೇಯ ಬರುತ್ತಿರಲಿಲ್ಲ. ಆದರೆ ಜವಬ್ದಾರಿ ನಿರ್ವಹಿಸುವ ವಯಸ್ಸಿಗೆ ಆಕೆಗೆ ಅದೇನಾಯಿತೋ ಗೊತ್ತಿಲ್ಲ. ಆಕೆಯಲ್ಲಿ ಕಾಮನೆಗಳು ಅರಳಲಾರಂಭಿಸಿದವು.

ಈ ನಡುವೆ ರಾಮಪ್ರಸಾದ್ ನ ಸಂಬಂಧಿ ಅದೇ ಊರಿನವನಾದ ಸುನಿಲ್ ಎಂಬಾತ ಇವರ ಮನೆಗೆ ಬರುತ್ತಿದ್ದನು. ಈತನಿಗೆ ಏನೂ ಕೆಲಸವಿರಲಿಲ್ಲ ಕೆಲಸ ಮಾಡಿದರೆ ಅದರಲ್ಲಿ ಕುಡಿದು ಸುತ್ತಾಡಿಕೊಂಡಿದ್ದನು. ಆತನಿಗೂ ಮದುವೆಯಾಗುವ ವಯಸ್ಸು ಆದರೆ ಅಬ್ಬೆಪಾರಿಯಂತೆ ಕೆಲಸವಿಲ್ಲದೆ ಸುತ್ತಾಡುವ ಆತನಿಗೆ ಹೆಣ್ಣುಕೊಟ್ಟು ಮದುವೆ ಮಾಡುವವರು ಯಾರು? ಹೀಗಾಗಿ ಆತ ಸಂಬಂಧಿಕನಾಗಿದ್ದ ರಾಮಪ್ರಸಾದ್ ಮನೆಗೆ ಬರುತ್ತಿದ್ದನು. ಹಾಗೆ ಬಂದವನಿಗೆ ಪವಿತ್ರಾಳ ಮೇಲೆ ಕಣ್ಣು ಬಿದ್ದಿತ್ತು.

ಆತನ ಕಾಮದ ನೋಟ ಪವಿತ್ರಾಳಿಗೆ ಗೊತ್ತಿಲ್ಲದೆ ಇರಲಿಲ್ಲ. ಆಗಲೇ ಅವನಿಗೆ ಉಗಿದು ಅಟ್ಟಿದ್ದರೆ ಇವತ್ತು ಜೈಲ್ ಸೇರಬೇಕಾಗುತ್ತಿರಲಿಲ್ಲ. ಆದರೆ ಆಕೆ ಅವನಿಗೆ ಕಣ್ಣಲ್ಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಳು ಹೀಗಾಗಿ ಅವನು ಮತ್ತು ಅವಳ ಒಡನಾಟ ಜಾಸ್ತಿಯಾಯಿತು. ಇದು ಎಲ್ಲಿ ತನಕ ಹೋಯಿತೆಂದರೆ ರಾಮಪ್ರಸಾದ್ ಇಲ್ಲದ ಸಮಯದಲ್ಲಿಯೂ ಮನೆಗೆ ಬರಲು ಆರಂಭಿಸಿದ್ದನು.

ಪವಿತ್ರಾ ಕೂಡ ಆತನನ್ನು ಬೆಡ್ ರೂಂ ತನಕ ಬಿಟ್ಟುಕೊಂಡಿದ್ದಳು. ಈ ವಿಚಾರ ಒಂದಷ್ಟು ದಿನ ಗುಪ್ತವಾಗಿಯೇ ಉಳಿದಿತ್ತಾದರೂ ಬಳಿಕ ರಟ್ಟಾಗಿತ್ತು. ಹೀಗಾಗಿ ಗಂಡ ರಾಮಪ್ರಸಾದ್ ಮತ್ತು ಪವಿತ್ರಾಳ ನಡುವೆ ಜಗಳಗಳಾಗಿದ್ದವು. ಮನೆಯಲ್ಲಿ ನೆಮ್ಮದಿ ಹಾಳಾಗಿತ್ತು. ಅದಾಗಲೇ ಸುನಿಲ್ ನ ಮೋಹದಲ್ಲಿ ಬಿದ್ದಿದ್ದ ಪವಿತ್ರಾ ಗಂಡ ಮಕ್ಕಳನ್ನು ಬೇಕಾದರು ಬಿಡ್ತೀನಿ ಸುನಿಲ್ ನನ್ನು ಬಿಡಲ್ಲ ಮಟ್ಟಕ್ಕೆ ಹೋಗಿ ಬಿಟ್ಟಿದ್ದಳು. ಹೀಗಾಗಿ ಗಂಡನಿಗೆ ಗೊತ್ತಾಗದಂತೆ ಆತನನ್ನು ಭೇಟಿ ಮಾಡುತ್ತಿದ್ದ ಆಕೆ ನಮ್ಮಿಬ್ಬರ ವಿಚಾರದಲ್ಲಿ ಮನೆಯಲ್ಲಿ ಗಲಾಟೆಯಾಗುತ್ತಿದೆ.

ಅವನು ಜೀವಂತವಾಗಿರುವ ತನಕ ನಾವು ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಳು. ಸುನಿಲ್ ಕೂಡ ದೈಹಿಕ ಸುಖದ ರುಚಿ ಕಂಡಿದ್ದರಿಂದ ಪವಿತ್ರಾಳನ್ನು ದೂರ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಅಲ್ಲದೆ ರಾಮಪ್ರಸಾದ್ ನನ್ನು ಮುಗಿಸಿದರೆ ಪವಿತ್ರಾಳಿಗೆ ಕಾಟ ತಪ್ಪುತ್ತೆ. ನನಗೆ ಅವಳೊಂದಿಗೆ ಸೇರಲು ಯಾವುದೇ ಅಡ್ಡಿ ಆತಂಕ ಇರಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದನು.

ಹೀಗಾಗಿ ಸುನಿಲ್ ಮತ್ತು ಪವಿತ್ರಾ ಸೇರಿ ರಾಮಪ್ರಸಾದ್ ನನ್ನು ಮುಗಿಸುವುದು ಹೇಗೆ ಎಂದು ಯೋಚಿಸಲಾರಂಭಿಸಿದರು. ಯಾರಿಗೂ ಸಂಶಯ ಬಾರದಂತೆ ಕೆಲಸ ಮಾಡಿ ಮುಗಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಅವರಿಬ್ಬರು ಸೇರಿ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದರು. ಅಲ್ಲದೆ ದತ್ತೂರಿ ಬೀಜದಲ್ಲಿ ವಿಷಕಾರಿ ಅಂಶವಿದೆ ಎಂಬುದನ್ನು ತಿಳಿದಿದ್ದ ಅವರು ಆ ಬಗ್ಗೆ ಯೂಟ್ಯೂಬ್ ನಲ್ಲಿ ಹುಡುಕಾಟ ನಡೆಸಿದ್ದರು. ಗೂಗಲ್ ನಲ್ಲಿ ಸರ್ಚ್ ಮಾಡಿದ್ದರು. ದತ್ತೂರಿ ಬೀಜ ತಿಂದರೆ ಅಸ್ವಸ್ಥರಾಗುತ್ತಾರೆ ಎಂಬುದು ಗೊತ್ತಾದ ತಕ್ಷಣ ಅದನ್ನು ಸಂಗ್ರಹಿಸಿ ತಂದು ಅಕ್ಕಿ ಜತೆಗೆ ಬೆರೆಸಿ ಇಡ್ಲಿಮಾಡಿ ರಾಮಪ್ರಸಾದ್ ಗೆ ಕೊಡಲು ತೀರ್ಮಾನಿಸಿದರು.

ಹಗಲೆಲ್ಲ ಬಿಸಿಲಲ್ಲಿ ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ ರಾತ್ರಿಯಾಗುತ್ತಿದ್ದಂತೆಯೇ ಪೆಗ್ ಏರಿಸಿ ಮನೆಗೆ ಬರುತ್ತಿದ್ದನು. ಮನೆಯಲ್ಲಿ ಹೆಂಡತಿ ಪವಿತ್ರಾ ಮಾಡಿಟ್ಟ ಅಡುಗೆಯನ್ನು ತಿಂದು ಮಲಗಿ ಬಿಡುತ್ತಿದ್ದನು. ಹೆಂಡತಿ ದಾರಿ ತಪ್ಪಿದ್ದಾಳೆ ಎಂಬುದು ಗೊತ್ತಾದ ಮೇಲೆ ಆತ ಕುಡಿಯುವುದನ್ನು ಸ್ವಲ್ಪ ಜಾಸ್ತಿ ಮಾಡಿಕೊಂಡಿದ್ದನು. ಹೀಗಾಗಿ ಅವನು ಸಿಕ್ಕಿದನ್ನು ತಿಂದು ಮಲಗುತ್ತಾನೆ ಎಂಬುದು ಪವಿತ್ರಾಳಿಗೆ ಗೊತ್ತಾಗಿತ್ತು. ಹೀಗಾಗಿ ಪಕ್ಕಾ ಪ್ಲಾನ್ ನ್ನು ಮಾಡಿದ್ದರು.

ಅವತ್ತು ಅಕ್ಟೋಬರ್ 11 ಮನೆಯಲ್ಲಿದ್ದ ಪವಿತ್ರಾ ಮೊದಲೇ ಪ್ಲಾನ್ ಮಾಡಿಕೊಂಡಂತೆ ದತ್ತೂರಿ ಬೀಜ ಬೆರೆಸಿ ಇಡ್ಲಿ ಮಾಡಿಟ್ಟಿದ್ದಳು. ಕೆಲಸ ಮುಗಿಸಿ ಪೆಗ್ ಏರಿಸಿ ಮನೆಗೆ ಬಂದಿದ್ದ ರಾಮಪ್ರಸಾದ್ ಗೆ ದತ್ತೂರಿ ಬೀಜ ಬೆರೆಸಿದ ವಿಷಕಾರಿ ಇಡ್ಲಿಯನ್ನು ಪವಿತ್ರಾ ಖುಷಿ ಖುಷಿಯಾಗಿ ಹೊಟ್ಟೆ ತುಂಬ ಬಡಿಸಿದ್ದಳು. ಅದನ್ನು ತಿಂದ ರಾಮಪ್ರಸಾದ್ ಸ್ವಲ್ಪ ಹೊತ್ತು ಕಳೆದ ಬಳಿಕ ಒದ್ದಾಡಿದ್ದನು. ಒಂದು ವೇಳೆ ಆತ ಸಾಯದೆ ಹೋದರೆ ತಾವು ವಿಷ ಬೆರೆಸಿದ ವಿಚಾರ ಗೊತ್ತಾಗಿಬಿಟ್ಟರೆ ನನ್ನ ಕತೆ ಮುಗಿದಂತೆ ಎಂದು ಭಯಗೊಂಡ ಪವಿತ್ರಾ ತಡಮಾಡದೆ ಸುನಿಲ್ ಗೆ ಫೋನ್ ಮಾಡಿದ್ದಾಳೆ.

ರಾತ್ರಿ 9.30ರ ವೇಳೆಗೆ ಸುನಿಲ್ ಓಡೋಡಿ ಅಲ್ಲಿಗೆ ಬಂದಿದ್ದಾನೆ. ಅವನು ಅಲ್ಲಿಗೆ ಹೋಗೋದನ್ನು ಕೆಲವರು ನೋಡಿದ್ದಾರೆ. ಆದರೆ ಬೆಕ್ಕು ಕಣ್ಮಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗಲ್ಲ ಎಂಬ ಮನಸ್ಥಿತಿಯಲ್ಲಿದ್ದ ಆತ ರಾಮಪ್ರಸಾದ್ ಒದ್ದಾಡುತ್ತಿದ್ದುದನ್ನು ನೋಡಿದ್ದು, ಇಬ್ಬರು ಸೇರಿ ಅವನ ಕತ್ತು ಹಿಸುಕಿದ್ದಾರೆ. ಅವನ ಉಸಿರು ನಿಂತ ಮೇಲೆ ಸುನಿಲ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಆ ನಂತರ ಪವಿತ್ರಾ ಮಹಾಪತಿವ್ರತೆಯಂತೆ ಕಣ್ಣೀರು ಹಾಕುತ್ತಾ ನಾಟಕವಾಡಿದ್ದಾಳೆ.

ಸುಮಾರು 11 ಗಂಟೆ ರಾತ್ರಿಯಲ್ಲಿ ಗಂಡ ರಾಮಪ್ರಸಾದ್ ನ ಸಹೋದರ  ಬಾವ ಚಂದ್ರಹಾಸನಿಗೆ ಫೋನ್ ಮಾಡಿ ಗಂಡ ರಾಮಪ್ರಸಾದ್ ಮೊಸರನ್ನ ತಿಂದು ಮಲಗಿದವರು ಮೇಲೇಳುತ್ತಿಲ್ಲ. ಅರ್ಜೆಂಟ್ ಬರುವಂತೆ ಹೇಳಿದ್ದಾಳೆ. ಅವರು ಅಲ್ಲಿಗೆ ಬಂದಿದ್ದು ತೀವ್ರ ಅಸ್ವಸ್ಥಗೊಂಡಿದ್ದ ರಾಮಪ್ರಸಾದ್‌ನನ್ನು ಹುಣಸೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿದ್ದಾರೆಂದು ಮಾಹಿತಿ ನೀಡಿದ್ದಲ್ಲದೆ, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಆ ನಂತರ  ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಅ.17ರಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವವನ್ನು ಹಸ್ತಾಂತರಿಸಿದ ಮೇರೆಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ನಡುವೆ ಪೊಲೀಸರು ಎಫ್.ಎಸ್.ಎಲ್. ವರದಿ ನಿರೀಕ್ಷೆಯಲ್ಲಿದ್ದರು.   ಆದರೆ ಅಷ್ಟರಲ್ಲಾಗಲೇ ರಾಮಪ್ರಸಾದ್ ಸಾವಿನ ಬಗ್ಗೆ ಗ್ರಾಮದಲ್ಲಿ ಚರ್ಚೆ ಶುರುವಾಗಿತ್ತು.

ಮೊದಲೇ ಸುನಿಲ್ ಮತ್ತು ಪವಿತ್ರಾ ನಡುವಿನ ಸಂಬಂಧ ಕೆಲವರಿಗೆ ಗೊತ್ತಾಗಿತ್ತು. ಜತೆಗೆ ಅವತ್ತು ರಾತ್ರಿ ಪವಿತ್ರಾ ಮನೆಗೆ ಆತ ಬಂದು ಹೋಗಿದ್ದನ್ನು ಹಲವರು ನೋಡಿದ್ದರು. ಅದೇ ದಿನ ರಾಮಪ್ರಸಾದ್ ಸತ್ತಿದ್ದಾನೆ ಎಂದರೆ ನಂಬಲಿಕ್ಕೆ ಆಗಲ್ಲ ಹೀಗಾಗಿ ಪವಿತ್ರಾ ಮತ್ತು ಸುನೀಲ್ ಸೇರಿ ಕೊಲೆ ಮಾಡಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು.

ಈ ಬಗ್ಗೆ ವಿಷಯ ತಿಳಿದ   ಸಹೋದರ ಚಂದ್ರಹಾಸ ತನ್ನ ತಮ್ಮ ರಾಮಪ್ರಸಾದ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ  ನಾದಿನಿ ಪವಿತ್ರ ಹಾಗೂ ಪ್ರಿಯಕರ ಸುನಿಲ್ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಪವಿತ್ರಾ ಮತ್ತು ಸುನಿಲ್ ನನ್ನು ಬಂಧಿಸಿ  ಠಾಣೆಗೆ ಕರೆದೊಯ್ದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾವು ಏನೆಲ್ಲ ಮಾಡಿದೆವು? ಹೇಗೆ ಕೊಲೆ ಮಾಡಿದೆವು ಎಂಬಿತ್ಯಾದಿ ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ. ಹೀಗಾಗಿ  ಸ್ಥಳಕ್ಕೆ ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿ  ಭೇಟಿ ನೀಡಿ ಮಹಜರ್ ನಡೆಸಿದ್ದರು.

ಇನ್ನು ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ಮೇರೆಗೆ ಆರೋಪಿಗಳಾದ ಪವಿತ್ರಾ ಮತ್ತು ಸುನಿಲ್ ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ರಾಮಪ್ರಸಾದ್ ನನ್ನು ಕೊಲೆ ಮಾಡಿ ತಾವು ಸುಖವಾಗಿರಬಹುದೆಂದು ಆಲೋಚಿಸಿದ್ದ ಪವಿತ್ರಾ ಮತ್ತು ಸುನಿಲ್ ಜೈಲ್ ನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಆದರೆ ಮಕ್ಕಳಿಬ್ಬರು ಅಪ್ಪ ಅಮ್ಮ ಇಲ್ಲದೆ ತಬ್ಬಲಿಯಾಗಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ