ArticlesLatest

ಜಾತೀಯತೆಯಿಂದ ಹೊರಬರುತ್ತಿರುವ ಯುವ ಜನತೆ… ಇದೊಂದು ಒಳ್ಳೆಯ ಬೆಳವಣಿಗೆ!

ಇದು ಸಾಮಾಜಿಕ ಕಾಳಜಿಯ ಲೇಖನಗಳ ಸರಮಾಲೆ-47

ಜನ ಜಾತಿಯಿಂದ ಅಂತರ ಕಾಪಾಡಿಕೊಂಡು ಬದುಕಲು ಪ್ರಯತ್ನಿಸಿದರೂ ರಾಜಕೀಯ ವ್ಯವಸ್ಥೆ ಜಾತಿಯನ್ನು ಮತ್ತೆ ಮತ್ತೆ ಹೇರುತ್ತಿದೆ.. ಮತಕ್ಕಾಗಿ ಜಾತಿ ಓಲೈಕೆ ಹೆಚ್ಚುತ್ತಿದೆ.  ಆದರೆ ಯುವ ಸಮುದಾಯ ಅದಕ್ಕೆ ಗೋಲಿ ಹೊಡೆದು ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದಾರೆ… ಜಾತೀಯತೆಯಿಂದ ಹೊರಬಂದು ಜಾತ್ಯಾತೀತ ಬದುಕು ಕಟ್ಟಿಕೊಳ್ಳುವುದು ನಮ್ಮಿಂದಲೇ ಆಗಬೇಕಾಗಿದೆ. ಅದು ಆಗದ ಹೊರತು ನಮ್ಮ ಅಭಿವೃದ್ದಿ ಖಂಡಿತಾ ಸಾಧ್ಯವಿಲ್ಲ. ಈ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ತೆರೆದಿಟ್ಟಿದ್ದಾರೆ.

ಕೆಲವು ವರ್ಷಗಳ ಹಿಂದೆ ನಮ್ಮ ಊರುಗಳಲ್ಲಿ, ಹಳ್ಳಿಗಳಲ್ಲಿ ನಡೆಯುತ್ತಿದ್ದ ಮಾತುಕತೆಗಳೇ ಬೇರೆ. ಅಂಗಡಿ ಮುಂದೆ, ಬಸ್ ನಿಲ್ದಾಣದಲ್ಲಿ ಯಾರು ಯಾವ ಜಾತಿ, ಯಾರ ಓಟು ಯಾರಿಗೆ, ಯಾವ ಸಮುದಾಯದವರು ಎಲ್ಲಿ ಹೆಚ್ಚು ಇದ್ದಾರೆ ಎಂಬುದೇ ದೊಡ್ಡ ಚರ್ಚೆಯಾಗಿತ್ತು. ಆದರೆ ಇಂದು ಅದೇ ಜಾಗದಲ್ಲಿ ನಿಂತಿರುವ ಯುವಕರ ಗುಂಪಿನ ಮಾತುಕತೆ ಸಂಪೂರ್ಣ ಬದಲಾಗಿದೆ. ಅವರ ಚರ್ಚೆ ಈಗ ರಸ್ತೆ ಸರಿ ಇಲ್ಲ, ಕೆಲಸ ಸಿಗುತ್ತಿಲ್ಲ, ನೆಟ್ವರ್ಕ್ ಇಲ್ಲ, ಕೃಷಿಗೆ ಬೆಲೆ ಇಲ್ಲ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ ಎಂಬುದರ ಸುತ್ತ ಇದೆ. ಈ ಬದಲಾವಣೆ ಒಂದೇ ದಿನದಲ್ಲಿ ಆದದ್ದಲ್ಲ, ಇದು ನಿಧಾನವಾಗಿ ನಡೆಯುತ್ತಿರುವ ದೊಡ್ಡ ಸಾಮಾಜಿಕ ಪರಿವರ್ತನೆ.

ಈ ಪರಿವರ್ತನೆಗೆ ಮೊದಲ ಮತ್ತು ದೊಡ್ಡ ಕಾರಣ ಶಿಕ್ಷಣ. ಹಿಂದೆ ಮಕ್ಕಳು ತಮ್ಮ ಊರು, ತಮ್ಮ ಸಮುದಾಯದ ಮಧ್ಯೆ ಮಾತ್ರ ಬೆಳೆಯುತ್ತಿದ್ದರು. ಇಂದು ಅದೇ ಹುಡುಗ ಮೈಸೂರು, ಮಂಗಳೂರು, ಬೆಂಗಳೂರಿಗೆ ಹೋಗಿ ಓದುತ್ತಾನೆ. ಕಾಲೇಜಿನ ಹಾಸ್ಟೆಲ್ ನಲ್ಲಿ ಒಂದು ಕೋಣೆಯಲ್ಲಿ ನಾಲ್ಕು ಬೇರೆ ಬೇರೆ ಸಮುದಾಯದ ನಾಲ್ಕು ಹುಡುಗರು ಒಟ್ಟಿಗೆ ಇರುತ್ತಾರೆ. ಒಟ್ಟಿಗೆ ಊಟ ಮಾಡುತ್ತಾರೆ, ಒಬ್ಬರ ನೋವಿಗೆ ಇನ್ನೊಬ್ಬರು ಸ್ಪಂದಿಸುತ್ತಾರೆ, ಒಬ್ಬರ ಬಟ್ಟೆಯನ್ನು ಇನ್ನೊಬ್ಬರು ಹಾಕಿಕೊಳ್ಳುತ್ತಾರೆ. ಅಲ್ಲಿ ಅವನಿಗೆ ಜಾತಿ ಎಂಬುದು ಪುಸ್ತಕದ ಒಂದು ಪದವಾಗುತ್ತದೆ, ಜೀವನದ ಗೋಡೆಯಾಗಿ ಉಳಿಯುವುದಿಲ್ಲ. ಈ ಅನುಭವ ಅವನ ದೃಷ್ಟಿಕೋನವನ್ನು ಶಾಶ್ವತವಾಗಿ ಬದಲಾಯಿಸುತ್ತದೆ.

ಎರಡನೆಯ ಕಾರಣ ಉದ್ಯೋಗ. ಇಂದಿನ ಖಾಸಗಿ ಕಂಪನಿಗಳಲ್ಲಿ, ಕೃಷಿ ಆಧಾರಿತ ಹೊಸ ಉದ್ಯಮಗಳಲ್ಲಿ, ಹೊರದೇಶದ ಉದ್ಯೋಗಗಳಲ್ಲಿ ನಿಮ್ಮ ಜಾತಿಯನ್ನು ಯಾರೂ ಕೇಳುವುದಿಲ್ಲ. ನಿಮ್ಮಲ್ಲಿ ಪ್ರತಿಭೆ ಇದೆಯಾ, ನೀವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಾ, ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುತ್ತೀರಾ ಎಂಬುದನ್ನಷ್ಟೇ ನೋಡುತ್ತಾರೆ. ಒಬ್ಬ ಯುವಕನಿಗೆ ಬಡ್ತಿ ಸಿಗುವುದು ಅವನ ಜಾತಿಯಿಂದಲ್ಲ, ಅವನ ಸಾಮರ್ಥ್ಯದಿಂದ ಎಂದು ಗೊತ್ತಾದಾಗ ಸಹಜವಾಗಿಯೇ ಅವನಿಗೆ ಜಾತಿಯ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಅವನ ಬದುಕಿನ ಅಳತೆಗೋಲು ಬದಲಾಗುತ್ತದೆ.

ಮೂರನೆಯ ಪ್ರಮುಖ ಬದಲಾವಣೆ ತಂತ್ರಜ್ಞಾನ ತಂದಿರುವ ಹೊಸ ಪ್ರಪಂಚ. ಹಿಂದೆ ಮಾಹಿತಿ ಬರುತ್ತಿದ್ದುದು ಸಮುದಾಯದ ಹಿರಿಯರಿಂದ, ಮುಖಂಡರಿಂದ ಮಾತ್ರ. ಇಂದು ಯುವಕನ ಕೈಯಲ್ಲಿರುವ ಮೊಬೈಲ್ ಅವನನ್ನು ಇಡೀ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡಿದೆ. ಅವನು ಪ್ರಪಂಚದ ಬೇರೆ ಬೇರೆ ಸಮುದಾಯದ ಯುವಕರು ಹೇಗೆ ಯೋಚಿಸುತ್ತಾರೆ, ಹೇಗೆ ಬದುಕುತ್ತಾರೆ ಎಂದು ನೋಡುತ್ತಿದ್ದಾನೆ. ಅವನಿಗೆ ತನ್ನ ಸಮಸ್ಯೆ ಕೇವಲ ತನ್ನ ಸಮುದಾಯದ ಸಮಸ್ಯೆಯಲ್ಲ, ಅದು ಎಲ್ಲಾ ಯುವಕರ ಸಮಸ್ಯೆ ಎಂದು ಅರ್ಥವಾಗುತ್ತಿದೆ. ಈ ಅರಿವೇ ಅವನನ್ನು ದೊಡ್ಡದಾಗಿ ಯೋಚಿಸುವಂತೆ ಮಾಡಿದೆ.

ಈ ಎಲ್ಲಾ ಬದಲಾವಣೆಗಳ ನಡುವೆ ಇಂದು ಅತ್ಯಂತ ಗಮನಾರ್ಹವಾಗಿ ಕಾಣುತ್ತಿರುವುದು ಇನ್ನೊಂದು ಭಾವನೆ. ಅದುವೇ ನಾವೆಲ್ಲ ಒಂದೇ, ನಾವೆಲ್ಲ ಕೊಡಗಿನವರು, ನಾವೆಲ್ಲ ಮನುಷ್ಯರು ಎಂಬ ಭಾವನೆ ಪ್ರತಿಯೊಬ್ಬ ಯುವಕನಲ್ಲೂ ಮೂಡುತ್ತಿರುವುದು. ಹಿಂದೆ ನಾವು ಬೇರೆ ಬೇರೆ ಜಾತಿ ಎಂದು ಒಡೆದು ಹೋಗಿದ್ದವರು, ಇಂದು ನಾವು ಮೊದಲು ಒಂದೇ ಊರಿನವರು, ಒಂದೇ ನಾಡಿನವರು ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ. ಒಂದು ಹಬ್ಬ ನಡೆದರೆ, ಒಂದು ಸಾಮಾಜಿಕ ಕಾರ್ಯಕ್ರಮ ನಡೆದರೆ ಅಲ್ಲಿ ಎಲ್ಲಾ ಸಮುದಾಯದ ಯುವಕರು ಹೆಗಲು ಕೊಟ್ಟು ಕೆಲಸ ಮಾಡುತ್ತಾರೆ. ಇದು ಕೇವಲ ಭಾವನೆಯಲ್ಲ, ಇದು ಸಾಮಾಜಿಕ ಒಗ್ಗಟ್ಟು.

ಈ ಒಗ್ಗಟ್ಟಿನ ಭಾವನೆಯೇ ಜಾತಿಯ ಗೋಡೆಗಳನ್ನು ಒಡೆಯುತ್ತಿದೆ. ನಾವು ಒಂದೇ ಸಂಸ್ಕೃತಿಯ, ಒಂದೇ ಮಣ್ಣಿನ ಭಾಗ ಎಂಬ ಅರಿವು ಬಂದಾಗ ಸಹಜವಾಗಿಯೇ ಒಳಜಾತಿಯ ಕಚ್ಚಾಟಗಳು ಚಿಕ್ಕದಾಗಿ ಕಾಣುತ್ತವೆ. ನಾವೆಲ್ಲ ಒಂದು, ನಮ್ಮ ಸಮಸ್ಯೆಗಳು ಒಂದೇ, ನಮ್ಮ ಬದುಕು ಒಂದೇ ಎಂಬ ಸ್ಪಷ್ಟತೆ ಯುವಕರಲ್ಲಿ ಮೂಡುತ್ತಿದೆ. ಈ ಕಾರಣದಿಂದಲೇ ಯಾರೋ ಸ್ವಾರ್ಥಕ್ಕಾಗಿ ಜಾತಿ ವಿಷ ಬಿತ್ತಲು ಬಂದರೂ ಯುವಕರು ಅದನ್ನು ತಿರಸ್ಕರಿಸುತ್ತಿದ್ದಾರೆ. ಸಮಾಜವನ್ನು ಒಡೆಯುವ ಯಾವುದೇ ಪ್ರಯತ್ನವನ್ನು ಅವರು ಒಪ್ಪಿಕೊಳ್ಳುತ್ತಿಲ್ಲ.

ಸ್ನೇಹ ಸಂಬಂಧಗಳಲ್ಲೂ ಈ ಬದಲಾವಣೆ ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಇಂದಿನ ಯುವಕರ ಸ್ನೇಹಿತರ ಬಳಗದಲ್ಲಿ ಎಲ್ಲಾ ಸಮುದಾಯದ ಸ್ನೇಹಿತರಿದ್ದಾರೆ. ಅವರು ಜಾತಿ ನೋಡಿ ಸ್ನೇಹ ಮಾಡುವುದಿಲ್ಲ. ಹಬ್ಬಗಳಿಗೆ, ಮದುವೆಗಳಿಗೆ, ಕಷ್ಟ ಸುಖಗಳಿಗೆ ಒಬ್ಬರ ಮನೆಗೆ ಇನ್ನೊಬ್ಬರು ಮುಕ್ತವಾಗಿ ಹೋಗುತ್ತಾರೆ. ಒಟ್ಟಿಗೆ ಬೈಕ್ ನಲ್ಲಿ ಓಡಾಡುತ್ತಾರೆ, ಒಟ್ಟಿಗೆ ಕನಸು ಕಾಣುತ್ತಾರೆ. ಇದು ಅವರ ಪೋಷಕರ ಕಾಲದಲ್ಲಿ ಊಹಿಸಲೂ ಕಷ್ಟವಿದ್ದ ವಿಷಯ. ಸ್ನೇಹ ಎಂಬುದು ಜಾತಿಯನ್ನು ಮೀರಿ ಬೆಳೆದಾಗ ಸಮಾಜವೇ ಗಟ್ಟಿಯಾಗುತ್ತದೆ.

ಮದುವೆಯ ವಿಷಯದಲ್ಲೂ ನಿಧಾನವಾದರೂ ಖಚಿತವಾದ ಬದಲಾವಣೆ ಬರುತ್ತಿದೆ. ಇನ್ನೂ ಪೋಷಕರ ಒತ್ತಡ, ಸಮಾಜದ ಭಯ ಇದೆ ಎಂಬುದು ನಿಜ. ಆದರೆ ಹುಡುಗ ಒಳ್ಳೆಯವನಾಗಿರಬೇಕು, ಹುಡುಗಿ ಸಂಸ್ಕಾರವಂತಳಾಗಿರಬೇಕು, ಇಬ್ಬರಿಗೂ ಹೊಂದಾಣಿಕೆ ಇರಬೇಕು, ಜಾತಿ ಮುಖ್ಯವಲ್ಲ ಎಂದು ಹೇಳುವ ಧೈರ್ಯವನ್ನು ಇಂದಿನ ಯುವಕರು ತೋರಿಸುತ್ತಿದ್ದಾರೆ. ಸಮಾಜದೊಳಗೆ ನಾವು ಒಂದಾಗಬೇಕು ಎಂಬ ಯೋಚನೆ ಬಂದಾಗ ಅಂತರಜಾತಿ ವಿವಾಹಗಳನ್ನು ಬೆಂಬಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಸುಲಭದ ದಾರಿಯಲ್ಲ, ಆದರೆ ಸರಿಯಾದ ದಾರಿ.

ಈ ಬದಲಾವಣೆಯ ಅರ್ಥ ಜಾತಿ ಸಂಪೂರ್ಣವಾಗಿ ಹೋಗಿದೆ ಎಂದಲ್ಲ. ಚುನಾವಣೆ ಬಂದಾಗ ಈಗಲೂ ಕೆಲವು ಹಳೆಯ ಮನಸ್ಸುಗಳು, ಕೆಲವು ರಾಜಕೀಯ ಶಕ್ತಿಗಳು ಜಾತಿಯ ವಿಷವನ್ನು ಮತ್ತೆ ಬಿತ್ತಲು ಪ್ರಯತ್ನಿಸುತ್ತವೆ. ತಮ್ಮ ಸ್ವಾರ್ಥಕ್ಕಾಗಿ ಯುವಕರನ್ನು ಜಾತಿಯ ಹೆಸರಿನಲ್ಲಿ ಒಡೆಯಲು ನೋಡುತ್ತವೆ. ಆದರೆ ಆಶಾದಾಯಕ ವಿಷಯ ಏನೆಂದರೆ ಇಂದಿನ ಬಹುತೇಕ ಯುವಕರು ಈ ತಂತ್ರಕ್ಕೆ ಬಲಿಯಾಗುತ್ತಿಲ್ಲ. ಅವರು ನೇರವಾಗಿ ಹೇಳುತ್ತಾರೆ, ನಮ್ಮನ್ನು ಜಾತಿಯ ಹೆಸರಿನಲ್ಲಿ ಒಡೆಯಬೇಡಿ, ನಾವೆಲ್ಲ ಒಂದು ಎಂದು.

ಯುವ ಸಮುದಾಯಕ್ಕೆ ಇಂದು ಬೇಕಾಗಿರುವುದು ಜಾತಿ ನಾಯಕನಲ್ಲ, ಸಮಾಜವನ್ನು ಒಗ್ಗೂಡಿಸುವ, ಕೆಲಸ ಮಾಡುವ ನಾಯಕ. ಅವರಿಗೆ ಬೇಕಾಗಿರುವುದು ಜಾತಿ ಭವನವಲ್ಲ, ಒಳ್ಳೆಯ ಗ್ರಂಥಾಲಯ, ಒಳ್ಳೆಯ ಕ್ರೀಡಾಂಗಣ, ಒಳ್ಳೆಯ ಉದ್ಯೋಗಾವಕಾಶ, ನೊಂದವರಿಗೆ ಸ್ಪಂದಿಸುವ ಮನಸ್ಸು. ಅವರ ಮಾನದಂಡಗಳು ಬದಲಾಗಿವೆ. ಈ ಬದಲಾದ ಮಾನದಂಡವೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಜಾತಿಯ ಆಧಾರದ ಮೇಲೆ ಓಟು ಕೇಳುವ ರಾಜಕಾರಣ ಇನ್ನು ಹೆಚ್ಚು ದಿನ ನಡೆಯುವುದಿಲ್ಲ.

ಆದ್ದರಿಂದ ಈ ಬೆಳವಣಿಗೆ ಅತ್ಯಂತ ರಚನಾತ್ಮಕವಾದುದು ಮತ್ತು ಕ್ರಿಯಾತ್ಮಕವಾದುದು. ಇದು ಕೇವಲ ಮಾತಲ್ಲ, ಇದು ನೆಲದ ಮೇಲೆ ನಡೆಯುತ್ತಿರುವ ಬದಲಾವಣೆ. ಯುವಕರು ಕೇವಲ ಮಾತನಾಡುತ್ತಿಲ್ಲ, ಅವರು ಕೆಲಸ ಮಾಡುತ್ತಿದ್ದಾರೆ. ಅವರು ರಕ್ತದಾನ ಮಾಡುತ್ತಿದ್ದಾರೆ, ಶಾಲೆಗಳನ್ನು ಸ್ವಚ್ಛ ಮಾಡುತ್ತಿದ್ದಾರೆ, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ, ಪರಿಸರವನ್ನು ಉಳಿಸುತ್ತಿದ್ದಾರೆ. ಈ ಕೆಲಸಗಳಲ್ಲಿ ಯಾವ ಜಾತಿಯೂ ಇಲ್ಲ, ಮಾನವೀಯತೆ ಮಾತ್ರ ಇದೆ. ಮಾನವೀಯತೆಯೇ ಅವರ ಗುರುತಾಗಿದೆ.

ಈ ಬದಲಾವಣೆಯನ್ನು ನಾವು ಹಿರಿಯರು ಅರ್ಥಮಾಡಿಕೊಂಡು ಪ್ರೋತ್ಸಾಹಿಸಬೇಕು. ಯುವಕರನ್ನು ಮತ್ತೆ ಜಾತಿಯ ಕೊಳಕ್ಕೆ ಎಳೆಯುವ ಬದಲು ಅವರ ಬೆನ್ನಿಗೆ ನಿಲ್ಲಬೇಕು. ಅವರ ಕೈಯಲ್ಲಿ ಮೊಬೈಲ್ ಇದೆ ಎಂದು ಗೇಲಿ ಮಾಡುವ ಬದಲು, ಆ ಮೊಬೈಲ್ ನಿಂದ ಅವರು ಎಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ನೋಡಬೇಕು. ಜಾತಿಯ ಗೋಡೆಗಳನ್ನು ದಾಟಿ ನಾವೆಲ್ಲ ಒಂದು ಎಂದು ಅವರು ಕಟ್ಟುತ್ತಿರುವ ಹೊಸ ಸಮಾಜ ನಿಜವಾಗಿಯೂ ಸುಂದರವಾಗಿದೆ.

ಈ ಬದಲಾವಣೆ ನಿಧಾನವಾಗಿರಬಹುದು, ಆದರೆ ಇದು ಅತ್ಯಂತ ಖಚಿತವಾದ ಬದಲಾವಣೆ. ಇದು ಯಾವುದೇ ಪಕ್ಷದ, ಯಾವುದೇ ಸಂಘಟನೆಯ ಕೊಡುಗೆಯಲ್ಲ, ಇದು ಶಿಕ್ಷಣದ, ಅನುಭವದ ಮತ್ತು ನಾವೆಲ್ಲ ಒಂದು ಎಂಬ ಸತ್ಯದ ಅರಿವಿನಿಂದ ಬಂದಂತಹ ಸಹಜ ಬೆಳವಣಿಗೆ. ಈ ಯುವ ಸಮುದಾಯದ ಈ ನಡೆಯನ್ನು ನಾವೆಲ್ಲರೂ ಬೆಂಬಲಿಸೋಣ. ಜಾತಿ ಮುಕ್ತ, ಒಗ್ಗಟ್ಟಿನ, ಮಾನವೀಯ ಸಮಾಜವನ್ನು ಕಟ್ಟಲು ಅವರಿಗೆ ಶಕ್ತಿ ತುಂಬೋಣ. ಎಲ್ಲರಿಗೂ ಶುಭವಾಗಲಿ.

 

admin
the authoradmin

ನಿಮ್ಮದೊಂದು ಉತ್ತರ