ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವಿದ್ಯಾರ್ಥಿಗಳಿಂದ ಹಳ್ಳಿಗಳಲ್ಲಿ ಮರುಬಳಕೆ ವಸ್ತುಗಳನ್ನು ಬಳಸುವ ಹಾಗೂ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಹಾಗೂ ಸರಿಸರ ಸಂರಕ್ಷಣೆ, ಪ್ರಕೃತಿ ಉಳಿವಿಗೆ ಎಚ್ಚರವಹಿಸದಿದ್ದಲ್ಲಿ ಗಂಡಾಂತರ ಕಾದಿದೆ ಎಂದು ಔಟ್ ರಿಚ್ ಸಂಸ್ಥೆಯ ತರಬೇತಿ ಸಂಯೋಜಕ ಜಿ.ಎಸ್.ಜಗದೀಶ್ ಎಚ್ಚರಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ ಗಿರಿಜನ ಆಶ್ರಮ ಶಾಲೆಯಲ್ಲಿ ಬೆಂಗಳೂರಿನ ಆಚಾರ್ಯ ಪದವಿ ಅಧ್ಯಯನ ಸಂಸ್ಥೆ ವಾರ ಕಾಲ ಆಯೋಜಿಸಿದ್ದ ವಾರ್ಷಿಕ ಸಮಾಜ ಕಾರ್ಯ ಶಿಬಿರದಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಉಪನ್ಯಾಸ ನೀಡಿದ ಅವರು ದೇಶದಲ್ಲಿ ತ್ಯಾಜ್ಯ ಸಮಸ್ಯೆ ಎದುರಿಸುತ್ತಿದ್ದೇವೆ. ಅದರಲ್ಲೂ ಪ್ಲಾಸ್ಟಿಕ್ ಜೀವ ಸಂಕುಲಕ್ಕೆ ಮಾರಕವಾಗುತ್ತಿದೆ. ಸ್ಥಳೀಯ ಆಡಳಿತ ಹಾಗೂ ಸ್ವಯಂಸೇವಾ ಸಂಘಸಂಸ್ಥೆಗಳವರು ಪ್ಲಾಸ್ಟಿಕ್ ಮುಕ್ತವಾಗಿಸುವುದನ್ನು ಆದ್ಯತೆಯಾಗಿಸಿ ಕೊಂಡು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದರು.
ಇತ್ತೀಚೆಗೆ ಪ್ರಕೃತಿ ವಿಕೋಪ, ಭೂಕಂಪ, ಬರ, ಅತೀವೃಷ್ಟಿ ಹೀಗೆ ಅನೇಕ ಅವಘಡಗಳು ನಿರಂತರವಾಗಿ ಸಂಭವಿಸುತ್ತಲೇ ಇದೆ. ಪರಿಸರ, ವನ್ಯಜೀವಿ, ನದಿ, ಕೆರೆ-ಕಟ್ಟೆಗಳನ್ನು ಸಂರಕ್ಷಿಸುವುದು ದೇಶದ ಪ್ರತಿಯೊಬ್ಬರ ಮೊದಲ ಆದ್ಯತೆಯಾಗಬೇಕು. ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಸಲಹೆ ನೀಡಿದರು.
ತ್ಯಾಜ್ಯದಲ್ಲಿ ಘನ, ದ್ರವ, ಆಪಾಯಕಾರಿ, ಮೆಡಿಕಲ್ ಕಿಟ್, ಇ-ವೇಸ್ಟ್ ಗಳಾಗಿವೆ. ಇವುಗಳನ್ನು ಕೆಲವನ್ನು ಶುದ್ದೀಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಪ್ಲಾಸ್ಟಿಕ್‌ನಿಂದ ರಸ್ತೆ ನಿರ್ಮಾಣ, ಹಲವು ಬಗೆಯ ಬ್ಯಾಗ್, ಜರ್ಕಿನ್ ಹಾಗೂ ಶಾಲಾ ಡೆಸ್ಕ್ ನಿರ್ಮಾಣ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್‌ನಿಂದ ಸಿದ್ದಪಡಿಸಿದ ವಸ್ತುಗಳನ್ನು ಬಳಸಬಾರದು.
ಮರುಬಳಕೆ ವಸ್ತುಗಳನ್ನು ಬಳಸುವ ಹಾಗೂ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ವಾಗಬೇಕಾಗಿದೆ ಎಂದು ತಿಳಿಸಿದರಲ್ಲದೆ, ಈ ಬಗ್ಗೆ ಗಮನಹರಿಸದಿದ್ದಲ್ಲಿ ಮುಂದೆ ಜಾಗತಿಕ ತಾಪಮಾನ, ಅತಿವೃಷ್ಟಿ, ಅನಾವೃಷ್ಟಿಯಂತಹ ಗಂಭೀರ ಸಮಸ್ಯೆಗಳಿಗೆ ವಿಶ್ವವೇ ಬಲಿಯಾಗಬೇಕಿದೆ ಎಂದು ಎಚ್ಚರಿಸಿದರು.

ಆಹಾರ ಪದಾರ್ಥಗಳು, ತರಕಾರಿ ಇತ್ಯಾದಿ ಒಳಗೊಂಡ ಪ್ರಕೃತಿದತ್ತ ಹಸಿ ಕಸದ ತ್ಯಾಜ್ಯವಾಗಿದೆ. ಇದು ಮಣ್ಣಲ್ಲಿ ಸೇರಿ ಗೊಬ್ಬರವಾಗುತ್ತದೆ. ಆದರೆ ಮಾನವ ಸೃಷ್ಠಿಸುವ ತ್ಯಾಜ್ಯ ಅಪಾಯಕಾರಿಯಾಗಿದ್ದು, ಜೀವರಾಶಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಇಂದಿನ ಯುವ ಜನತೆ ಪರಿಸರ ಸಂರಕ್ಷಣೆ-ತ್ಯಾಜ್ಯ ನಿರ್ವಹಣೆ ಬಗ್ಗೆ ಕಾರ್ಯೊನ್ಮಖರಾಗಬೇಕೆಂದು ಆಶಿಸಿದರು.
ತ್ಯಾಜ್ಯದಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಗಳನ್ನು ಅರಿತು ಸ್ವಚ್ಚತೆ ಹೆಚ್ಚಿನ ಅಧ್ಯತೆ ನೀಡುತ್ತೇನೆ. ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ, ಈಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆಂದು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಾಗಾರದಲ್ಲಿ ಆಚಾರ್ಯ ಪದವಿ ಅಧ್ಯಯನ ಸಂಸ್ಥೆಯ ಪ್ರೊ. ಕುಮಾರಸ್ವಾಮಿ, ಎಚ್.ಒ.ಡಿ. ಡಾ.ಮರ್ಷಿದ್, ಔಟ್ ರೀಚ್ ಸಂಸ್ಥೆಯ ಯೋಜನ ಸಮನ್ವಯಾಧಿಕಾರಿ ಪ್ರಶಾಂತ್.ಸಿ. ತಾ.ಪಂ.ಮಾಜಿ ಸದಸ್ಯ ಗಣಪತಿ ಭಾಗವಹಿಸಿದ್ದರು. ಶಿಬಿರದಲ್ಲಿ ಸಂಸ್ಥೆಯ 41ವಿದ್ಯಾರ್ಥಿಗಳು ಭಾಗವಹಿಸಿದ್ದರು.








