CinemaLatest

ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಮಿಂಚಿ, ಕನ್ನಡಿಗರ ಮನಗೆದ್ದ ಚಿಂದೋಡಿಲೀಲಾ

ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ದಾಖಲೆ ಬರೆದ ಚಿಂದೋಡಿಲೀಲಾ ಸದಾ ನೆನಪಿನಲ್ಲಿ ಉಳಿಯುವ ನಟಿ… ಅವರ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಬದುಕಿನ ಕುರಿತಂತೆ ಒಂದಷ್ಟು ವಿಚಾರಗಳನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…
1928ರ ಕಾಲದ ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಶ್ರೀಗುರು ಕರಿಬಸವ ರಾಜೇಂದ್ರ ನಾಟಕ ಮಂಡಳಿ (ಕೆ.ಬಿ.ಆರ್.ಡ್ರಾಮ ಕಂಪನಿ) ಮಾಲೀಕನೂ, ಖ್ಯಾತ ನಟ-ಗಾಯಕನೂ ಆಗಿದ್ದ ಚಿಂದೋಡಿ ವೀರಪ್ಪ ಮತ್ತು ಶ್ರೀಮತಿ ಶಾಂತಮ್ಮ ಎಂಬ  ದಂಪತಿಗೆ ಕಟ್ಟಕಡೆಯ ಸಂತಾನವಾಗಿದ್ದ ಚಿಂದೋಡಿಲೀಲಾ 1942ನೇ ಇಸವಿ ಆಸುಪಾಸಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಬಾಲ್ಯದಿಂದಲೂ ತುಂಟ ಹುಡುಗಿಯಾಗಿದ್ದ ಈಕೆಗೆ ಐವರು ಸೋದರಿಯರು ಮತ್ತು ಮೂವರು ಸೋದರರು. ಎಲ್ಲರ ಮುದ್ದಿನ ಮಗುವಾಗಿದ್ದ ಲೀಲಾ ಒಂದುರೀತಿ ಗಂಡು ಬೀರಿಯಂತೆ ಬೆಳೆದರು.

ಓದಿನ ಕಡೆಗೆ ಆಸಕ್ತಿ ತೋರದ ಕಾರಣ ಈಕೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಕೇವಲ 8ನೇ ವಯಸ್ಸಿನಲ್ಲಿ ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲಕ ಸಿದ್ಧರಾಮ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿ ಕೊಂಡರು. ನಂತರ ರಂಗಭೂಮಿಯನ್ನೆ ತಮ್ಮ ಕರ್ಮಭೂಮಿ ಆಗಿಸಿಕೊಂಡು ಸಂಪೂರ್ಣ ರಾಮಾಯಣ, ಶ್ರೀಕೃಷ್ಣಗಾರುಡಿ, ಗುಲೇಬ ಕಾವಲಿ, ಕಾಳಿದಾಸ, ಗುಣಸಾಗರಿ, ಹೇಮರೆಡ್ಡಿ ಮಲ್ಲಮ್ಮ, ಶಕುಂತಲಾ, ಬಭ್ರುವಾಹನ, ಲಂಕಾದಹನ, ಮಾತಂಗಕನ್ಯೆ, ಬೆಳ್ಳಿಬಂಗಾರ, ಮುಂತಾದ ನೂರಾರು ನಾಟಕ ದೇಶಾದ್ಯಂತ ಪ್ರದರ್ಶನ ಗೊಂಡವು.

ಇದನ್ನೂ ಓದಿ: ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ… ಬದುಕು ಹೇಗಿತ್ತು?

“ಹಳ್ಳಿಹುಡುಗಿ” ನಾಟಕವು ಹತ್ತು ಸಾವಿರಕ್ಕು ಹೆಚ್ಚು ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತು. “ಪೊಲೀಸನ ಮಗಳು” ನಾಟಕವು ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರ ಒಂದರಲ್ಲೆ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡು ಗಿನ್ನಿಸ್ ದಾಖಲೆ ಪುಸ್ತಕ ಸೇರಿತು. ಬಹುಕಾಲದವರೆಗೂ ಇವರಿಗೆ ಸಂತಾನಭಾಗ್ಯ ಇಲ್ಲವಾದಾಗ ಮೂವರು ಬಡಮಕ್ಕಳನ್ನು ದತ್ತು ಪಡೆದು ಇವರೆಲ್ಲರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿದ ಕೀರ್ತಿ ಇವರದು. ಬೆವರು ಸುರಿಸಿ ಸಂಪಾದಿಸಿದ ಸ್ವಯಾರ್ಜಿತ ಸಂಪತ್ತು ಸೇರಿದಂತೆ ತಮ್ಮ ತನುಮನ ಧನಕನಕ ನಟನಕಲೆ ಎಲ್ಲವನ್ನೂ ರಂಗಭೂಮಿಗೆ ಧಾರೆಯೆರೆದ ತ್ಯಾಗಮೂರ್ತಿ ಇವರು.

ಇದನ್ನೂ ಓದಿ: ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
ಮಕ್ಕಳಿಗಾಗಿ ಮಕ್ಕಳಿಂದಲೇ ಪಾತ್ರ ಮಾಡಿಸುವ ಜವಾಬ್ಧಾರಿ ಹೊತ್ತು ಪುಟಾಣಿಗಳಿಗೆ ಹಗಲಿರುಳು ತರಬೇತಿ ನೀಡಿ, ತಾವೇ ರಚಿಸಿದ “ಹಾಸ್ಯ ಕಲಹ”ಎಂಬ ಮಕ್ಕಳ ನಾಟಕದ ನೂರಾರು ಪ್ರದರ್ಶನ ಕಾಣಲು ಪ್ರಮುಖ ರೂವಾರಿ ಯಾದರು. ಕನ್ನಡ ನಾಟಕಗಳ ಪ್ರದರ್ಶನಕ್ಕಾಗಿಯೇ ಮೀಸಲಾದ ರಂಗಮಂದಿರವನ್ನು ಬೆಳಗಾವಿಯಲ್ಲಿ ಮತ್ತು ಚಿಂದೋಡಿಲೀಲಾ ಕಲಾಕ್ಷೇತ್ರವನ್ನು ದಾವಣಗೆರೆಯಲ್ಲಿ ಸ್ಥಾಪಿಸಿದರು. ಇವರ ಸಾಧನೆಯ ಪ್ರತೀಕವಾಗಿ ಭಾರತದಲ್ಲೇ ಮೊಟ್ಟಮೊದಲು ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರ ತರಬೇತಿ ಕೇಂದ್ರ “ಚಿಂದೋಡಿ ರಂಗಲೋಕ” ಎಂಬ ಗ್ರೀನ್‍ ಪಾರ್ಕನ್ನು ದಾವಣಗೆರೆ ಬಳಿ ಸ್ಥಾಪಿಸಿ ಇದರ ನಟ್ಟನಡುವೆ ಲೀಲಾರವರ ಬೃಹತ್ ಪ್ರತಿಮೆ ಸ್ಥಾಪಿಸಲಾಗಿದೆ.

30 ವರ್ಷ ಸಿನಿಮಾ ರಂಗದಲ್ಲಿ, 40 ವರ್ಷ ನಾಟಕ ರಂಗದಲ್ಲ್ಲಿ ಅಮೋಘ ಸೇವೆ ಸಲ್ಲಿಸಿದರು. ಅಮೆರಿಕ, ಬ್ರಿಟನ್, ಸೇರಿದಂತೆ ಹಲವು ವಿದೇಶಗಳಲ್ಲು ನಾಟಕ ಪ್ರದರ್ಶನ ನೀಡಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದರು. ಕರ್ನಾಟಕ ರಾಜ್ಯ ನಾಟಕ ಅಕ್ಯಾಡೆಮಿ ಅಧ್ಯಕ್ಷರಾಗಿ 3 ದಶಕ ಕಾರ್ಯ ನಿರ್ವಹಿಸಿದ್ದ ಸೇವೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರವು ಕರ್ನಾಟಕ ವಿಧಾನ ಪರಿಷತ್ ಸದಸ್ಯತ್ವ ನೀಡಿ ಗೌರವಿಸಿತ್ತು.

ಇದನ್ನೂ ಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ…  ಮೊದಲ ನಿರ್ಮಾಪಕಿ!
ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯ ನಟ, ನಿರ್ಮಾಪಕ-ನಿರ್ದೇಶಕ ಬಿ.ಆರ್.ಪಂತುಲು ಕೃಪಾಕಟಾಕ್ಷದಿಂದ 1961ರಲ್ಲಿ ತೆರೆಕಂಡ ರಾಜಕುಮಾರ್, ಸರೋಜಾದೇವಿ ತಾರಾಗಣದ ಕಿತ್ತೂರುಚೆನ್ನಮ್ಮ ಸಿನಿಮಾದಲ್ಲಿ ಪ್ರಥಮ ಬಾರಿ ನಟಿಸುವ ಸುವರ್ಣಾವಕಾಶ ದೊರಕಿ ತನ್ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯೂ ಸಿಕ್ಕಿತು. ಚಂದನವನದ ಪ್ರಮುಖ ನಟ-ನಟಿಯರೊಡನೆ ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಅದೃಷ್ಟವೂ ಲಭಿಸಿ ಇಪ್ಪತ್ತು ವರ್ಷದ ಅವಧಿಯಲ್ಲಿ 25ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ… 
ತಮ್ಮ ಮಹದಾಸೆಯಂತೆ “ಹಂಸಲೇಖಾ” ಎಂಬ ಒಂದೇ ಒಂದು ಕನ್ನಡ ಸಿನಿಮವನ್ನೂ ನಿರ್ಮಿಸಿದರು. ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ವಿಷ್ಣುವರ್ಧನ, ಅಂಬರೀಷ, ಅನಂತನಾಗ್, ಶಂಖರನಾಗ್, ಶ್ರೀನಾಥ್, ಮುಂತಾದ ದಿಗ್ಗಜರ ಚಿತ್ರಗಳಲ್ಲಿ ನಟಿಸಿದರು. ಹಲವಾರು ಚಿತ್ರಗಳ ಉತ್ತಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿ ಬಹುಮಾನ ದೊರಕಿದೆ.

ಚಿಂದೋಡಿಲೀಲಾ ನಟಿಸಿದ ಚಿತ್ರಗಳು… ಕಿತ್ತೂರುಚೆನ್ನಮ್ಮ, ತೇಜಸ್ವಿನಿ, ಗಾಳಿಗೋಪುರ, ತುಂಬಿದಕೊಡ, ಪೋಸ್ಟ್ ಮಾಸ್ಟರ್, ನವಜೀವನ, ಮಣ್ಣಿನಮಗ, ಶ್ರೀಕೃಷ್ಣ ದೇವರಾಯ, ಅಳಿಯಗೆಳೆಯ, ಮುಕ್ತಿ, ಶರಪಂಜರ, ಮಧು ರಸಂಗಮ, ಸ್ನೇಹಸೇಡು, ಭಲೇಹುಡುಗ, ಪ್ರೇಮಜ್ವಾಲೆ, ಒಂದುಹೆಣ್ಣುಆರುಕಣ್ಣು, ರೈತನಮಕ್ಕಳು, ಮದರ್, ಹಂಸಲೇಖಾ, ಬನ್ನಿ ಒಂದ್ಸಲನೋಡಿ, ಗಾನಯೋಗಿ ಪಂಚಾಕ್ಷರ ಗವಾಯಿ, ಮುಂತಾದವು.

ಇದನ್ನೂ ಓದಿ: ಚಂದನವನದ  ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?
ಕೊನೆಗೂ ವಿಧಿಯ ಕರೆಯಂತೆ ಪದ್ಮಶ್ರೀ ಚಿಂದೋಡಿ ಲೀಲಾ ತಮ್ಮ 69ನೇ ವಯಸ್ಸಲ್ಲಿ ಅನಾರೋಗ್ಯಕ್ಕೆ ಬಲಿಯಾಗಿ 21ನೇ ಜನವರಿ 2010ರಂದು ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಬಳಿಕ 23.1.2010ರಂದು ಇವರ ಅಂತಿಮ ಇಚ್ಚೆಯಂತೆ ತಮ್ಮ ಜನ್ಮಭೂಮಿ ದಾವಣಗೆರೆಯಲ್ಲಿ ಸಮಾಧಿ ಮಾಡಲಾಯಿತು.

ಇವರಿಗೆ ದೊರೆತ ಪ್ರಶಸ್ತಿ-ಬಿರುದುಗಳು… ಭಾರತ ಸರ್ಕಾರದ ಪದ್ಮಶ್ರೀ, ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ, ತೆಲುಗುವಿಜ್ಞಾನ ಸಮಿತಿ ಶ್ರೀಕೃಷ್ಣದೇವರಾಯ ಪ್ರಶಸ್ತಿ, ನಾಡೋಜ ಪ್ರತಿಷ್ಠಾನ ಕಾತ್ಯಾಯಿನಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕ್ಯಾಡೆಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ರಂಗಭೂಮಿಸರಸ್ವತಿ, ಚಿತ್ತಾಕರ್ಷಕ ಅಭಿನೇತ್ರಿ, ಅಭಿನಯ ಸಮ್ರಾಜ್ಞಿ, ಪ್ರತಿಭಾಪರಿಪೂರ್ಣೆ, ಕಲಾಪ್ರವೀಣೆ, ಕೆ.ವಿ.ಶಂಕರೇಗೌಡ ಪ್ರಶಸ್ತಿ, ಇಂದಿರಾಪ್ರಿಯದರ್ಶಿನಿ ಪ್ರಶಸ್ತಿ, ಶ್ರೇಷ್ಠನಟಿ ರಾಜ್ಯಪ್ರಶಸ್ತಿ, ಅಭಿನಯವೀರಮಹಿಳೆ, ಕಲಾತಪಸ್ವಿನಿ, ಕೆಳದಿಚೆನ್ನಮ್ಮ ಪ್ರಶಸ್ತಿ, ಕಿತ್ತೂರುಚೆನ್ನಮ್ಮ ಪ್ರಶಸ್ತಿ, ಅಖಿಲಭಾರತ ಶರಣಸಾಹಿತ್ಯ ಪ್ರಶಸ್ತಿ ಇತ್ಯಾದಿಗಳು ಸಂದಿವೆ..

admin
the authoradmin

10 ಪ್ರತಿಕ್ರಿಯೆಗಳು

  • ಚಿಂದೋಡಿಲೀಲಾ ಚಿತ್ರದುರ್ಗ ಮೂಲದವರು ಅಂದುಕೊಂಡಿದ್ದ ನನಗೆ ಕುಮಾರಕವಿಯವರ ಈ ಲೇಖನದಿಂದ ಸರಿಯಾದ ಮಾಹಿತಿ ದೊರಕಿ ಸಂತಸವಾಯ್ತು ಧನ್ಯವಾದ. ರೇವಣ್ಣಸಿದ್ಧಯ್ಯ, ರಂಗಭೂಮಿ ಕಲಾವಿದ, ಹೊಸದುರ್ಗ.

  • ಕರ್ನಾಟಕದ ನಾಟಕ ಪ್ರಪಂಚದ ಹಿರಿಯ ನಟಿ ಚಿಂದೋಡಿಲೀಲಾ ಖಂಡಿತವಾಗಿ ಅಮೋಘ ಕಲಾವಿದೆ. ಇಂಥವರು ಕನ್ನಡ ಚಿತ್ರರಂಗದಲ್ಲಿ ಮೂರು ದಶಕದವರೆಗೆ
    ಸೇವೆ ಸಲ್ಲಿಸಿದರೂ ಸಹ ತುಂಬ ಕಡಿಮೆ ಚಿತ್ರಗಳಲ್ಲಿ ನಟಿಸಿದ್ದು ಸಮಾಧಾನ ತಂದಿಲ್ಲ, ಎಲ್ಲವೂ ವಿಧಿವಿಲಾಸ ಅಷ್ಟೆ. ಇವರ ಬಗ್ಗೆ ವಿವರವಾದ ಉತ್ತಮ ಲೇಖನ ಬರೆದ ಕವಿ ನಟರಾಜರಿಗೆ ಮತ್ತು ಪ್ರಕಟಿಸಿದ ತಮಗೂ ಮನಃಪೂರ್ವಕ ಧನ್ಯವಾದ ಸರ್. ಸತ್ಯನಾರಾಯಣ, ಮೈಸೂರು

  • ಕರ್ನಾಟಕದ ನಾಟಕ ಪ್ರಪಂಚದ ಹಿರಿಯ ನಟಿ ಚಿಂದೋಡಿಲೀಲಾ ಖಂಡಿತವಾಗಿ ಅಮೋಘ ಕಲಾವಿದೆ. ಇಂಥವರು ಕನ್ನಡ ಚಿತ್ರರಂಗದಲ್ಲಿ ಮೂರು ದಶಕದವರೆಗೆ ಸೇವೆ ಸಲ್ಲಿಸಿದರೂ ತುಂಬ ಕಡಿಮೆ ಚಿತ್ರಗಳಲ್ಲಿ ನಟಿಸಿದ್ದು ಸಮಾಧಾನ ತಂದಿಲ್ಲ, ಎಲ್ಲವೂ ವಿಧಿವಿಲಾಸ ಅಷ್ಟೆ. ಇವರ ಬಗ್ಗೆ ವಿವರವಾದ ಉತ್ತಮ ಲೇಖನ ಬರೆದ ಕವಿ ನಟರಾಜರಿಗೆ ಮತ್ತು ಪ್ರಕಟಿಸಿದ ತಮಗೂ ಮನಃಪೂರ್ವಕ ಧನ್ಯವಾದ ಸರ್. ಸತ್ಯನಾರಾಯಣ, ಮೈಸೂರು

  • ಕನ್ನಡ ಚಿತ್ರರಂಗದಲ್ಲಿ ಚಿಂದೋಡಿಲೀಲ ರವರೂ ಸಹ ಸುಮಾರು ಸಿನಿಮಾದಲ್ಲಿ ನಟಿಸಿದ್ದರು ಎಂಬ ವಿಷಯ ಗೊತ್ತೇಇರಲಿಲ್ಲ ಧನ್ಯವಾದ ಸರ್. ಯಶೋಧಮ್ಮ, ಬೆಂಗಳೂರು.

  • ನನಗೆ ನೆನಪಿರುವಂತೆ ಚಿಂದೋಡಿ ಲೀಲಾರವರ ಒಂದೆರಡು ಸಿನಿಮ ನೋಡಿದ್ದೇನೆ. ಬಹುಶಃ ಶ್ರೀಕೃಷ್ಣದೇವರಾಯ ಮತ್ತು ಶರಪಂಜರ. ಇವರೊಬ್ಬ ಉತ್ತಮ ನಟಿ. ಆದರೆ ಕಡಿಮೆ ಸಂಖ್ಯೆಯ ಸಿನಿಮ ನಟಿಯಾದರೂ, ಇಂಥವರ ಬಗ್ಗೆಯೂ ತಮ್ಮ ಲೇಖನದ ಮೂಲಕ ಕನ್ನಡ ಸಿನಿಮ ಪ್ರಿಯರಿಗೆ ಅವಶ್ಯಕ ಮಾಹಿತಿ ನೀಡಿರುವ ಕುಮಾರಕವಿಯವರಿಗೆ ಧನ್ಯವಾದಗಳು. ಪ್ರೇಮಲತ, ಹಾಸನ

ನಿಮ್ಮದೊಂದು ಉತ್ತರ