ಹುಣಸೂರಿನ ರೆಸಾರ್ಟ್ ನಲ್ಲಿದ್ದ ಪ್ರೇಮಿಗಳನ್ನು ಬೆದರಿಸಿ ಬೈಕ್ ಕಿತ್ತುಕೊಂಡಿದ್ದ ಪುಂಡರು ಅರೆಸ್ಟ್

ಮೈಸೂರು: ಪ್ರೇಮಿಗಳಿದ್ದ ರೆಸಾರ್ಟ್ ಗೆ ನುಗ್ಗಿ ಅವರನ್ನು ಬೆದರಿಸಿ, ಕೊಲೆ ಮಾಡುವುದಾಗಿ ಹೆದರಿಸಿ ಅವರ ಬಳಿಯಿದ್ದ ಬೈಕ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಣಸೂರು ನಗರದ ವೀಲ್ ವಾಸಿಂ, ಶೋಯೆಬ್, ಅಜರ್ ಹಾಗೂ ತಾಲೂಕಿನ ಕೊಳವಿಗೆಯ ಶ್ರೀಕಾಂತ್ ಅಲಿಯಾಸ್ ಸಿರಿ ಬಂಧಿತ ಆರೋಪಿಗಳು.
ಘಟನೆ ಏನು ಎಂಬುದನ್ನು ನೋಡುವುದಾದರೆ ಮೈಸೂರಿನ ಅಸ್ಲಂ ಎಂಬಾತ ತನ್ನ ಪ್ರೇಯಸಿಯೊಂದಿಗೆ ಹುಣಸೂರಿನ ರೆಸಾರ್ಟ್ ಗೆ ಬಂದಿದ್ದನು. ಇದನ್ನು ಅರಿತ ಆರೋಪಿಗಳಾದ ಹುಣಸೂರು ನಗರದ ವೀಲ್ ವಾಸಿಂ, ಶೋಯೆಬ್, ಅಜರ್ ಎಂಬುವರು ರೆಸಾರ್ಟ್ ಗೆ ನುಗ್ಗಿ ಅಲ್ಲಿದ್ದ ಅಸ್ಲಂಗೆ ಬೆದರಿಕೆ ಹಾಕಿ ಆತನ ಬಳಿಯಿದ್ದ ಬೈಕ್‌ನ್ನು ಕಿತ್ತುಕೊಂಡು ವಿಚಾರ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದರು.
ಆ ನಂತರ ಆರೋಪಿಗಳು ಬೈಕನ್ನು ಕೊಳವಿಗೆಯ ಶ್ರೀಕಾಂತ್ ಬಳಿ ಅಡವಿಟ್ಟು 30ಸಾವಿರ ರೂ ಪಡೆದುಕೊಂಡಿದ್ದರು. ಈ ಸಂಬಂಧ ಅಸ್ಲಂ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಕಾರ್ಯಾಚರಣೆಗಿಳಿದ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೈಕ್ ಅಡವಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ. ಗಂಭೀರ ಹಲ್ಲೆ ನಡೆಸಿದ್ದನ್ನು ಪರಿಗಣಿಸಿ, ನಾಲ್ವರು ಆರೋಪಿಗಳ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಇತ್ತೀಚೆಗೆ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ ಅವರನ್ನು ಹೆದರಿಸಿ ಅವರಿಂದ ಹಣ, ಮೊಬೈಲ್ ಹೀಗೆ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಳ್ಳುವುದು ಗುಟ್ಟಾಗಿ ಉಳಿದಿಲ್ಲ. ಕೆಲವರು ಭಯದಿಂದ ಪೊಲೀಸ್ ಠಾಣೆಗೆ ದೂರು ನೀಡಲ್ಲ ಎಂಬ ಉದ್ದೇಶದಿಂದಲೇ ಕೃತ್ಯ ಎಸಗುತ್ತಾರೆ. ಇನ್ನಾದರೂ ಇಂತಹ ಪುಂಡಪೋಕರಿಗಳಿಗೆ ಬಿಸಿಮುಟ್ಟಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.







