LatestState

ನಮ್ಮ ನಾಡಿನ ಹಿರಿಮೆ ಬಗ್ಗೆ ನಮಗೆ ಅಭಿಮಾನ ಇರಬೇಕೇ ಹೊರತು ಬೇರೆಯವರಿಗಲ್ಲ: ಎಲ್.ಎನ್.ಮುಕುಂದರಾಜು

ಬೆಂಗಳೂರು: ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಸ್ವತಃ ಕನ್ನಡಿಗರೇ ಅಭಿಮಾನ ಶೂನ್ಯರಾಗಿದ್ದಾರೆ. ನಮ್ಮ ನಾಡಿನ ಹಿರಿಮೆ ಬಗ್ಗೆ ನಮಗೆ ಅಭಿಮಾನ ಇರಬೇಕೇ ಹೊರತು ಬೇರೆಯವರಿಗಲ್ಲ  ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಹೇಳಿದರು.

ಅಕಾಡೆಮಿ ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ತಾಲ್ಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು ಕುರಿತ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಕ್ಕೆ ಬಂದಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಬೂಕರ್ ಪ್ರಶಸ್ತಿ ಬಂದಿರುವುದು ಈ ನಾಡಿನ ಸಾಹಿತ್ಯದ ಹಿರಿಮೆಗೆ ಸಾಕ್ಷಿ. ಅದರ ಬಗ್ಗೆ ಎಲ್ಲರೂ ಅಭಿಮಾನಪಟ್ಟುಕೊಂಡು ನಮ್ಮ ಸಾಹಿತ್ಯದ ಕಂಪನ್ನು ಪಸರಿಸಬೇಕು. ಸಾಹಿತ್ಯವು ನಮ್ಮನ್ನು ಜಾತಿ, ಧರ್ಮ ಸೇರಿದಂತೆ ಮನುಷ್ಯ ವಿರೋಧಿ ಸಂಕೋಲೆಗಳಿAದ ಬಿಡುಗಡೆಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ ಅಕಾಡೆಮಿ ಇದುವರೆಗೆ ವಿದ್ವತ್ ಲೋಕವನ್ನು ಮಾತ್ರ ಸ್ಪರ್ಶಿಸಿದೆ. ನನ್ನ ಗುರುಗಳಾದ ಜಿ.ಎಸ್. ಶಿವರುದ್ರಪ್ಪ ಸೇರಿದಂತೆ ಎಲ್ಲರೂ ಅದಕ್ಕೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ನನಗೆ ಸಿಕ್ಕಿರುವ ಅವಕಾಶದಲ್ಲಿ ವಿದ್ವತ್ ಲೋಕ ಮೀರಿದ ಲೋಕವನ್ನು ಅಕಾಡೆಮಿ ತಲುಪಬೇಕೆಂಬ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಮೊದಲು ಅಕಾಡೆಮಿಗೆ ಒಂದೂವರೆ ಕೋಟಿ ಅನುದಾನ ಕೊಡುತ್ತಿದ್ದರು. ಅದಕ್ಕೆ ಕೆಲವರು, ಈ ಸಾಹಿತಿಗಳು ನಮ್ಮಿಂದ ಅನುದಾನ ಪಡೆದು ನಮಗೇ ಬೈದುಕೊಂಡು ತಿರುಗುತ್ತಾರೆ ಎಂದು ಅನುದಾನವನ್ನು ರೂ. 80 ಲಕ್ಷಕ್ಕೆ ಇಳಿಸಿದರು. ಸಿದ್ದರಾಮಯ್ಯ ಕಾಲದಲ್ಲೂ ಅದು ಬದಲಾಗಿಲ್ಲ ಎಂದು ಮುಕುಂದರಾಜ್ ವಿವರಿಸಿದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ರೈತ ಹೋರಾಟಗಾರ್ತಿ ಅನಸೂಯಮ್ಮ, ರೈತರ ಬದುಕಿಗೆ ಸಾಹಿತ್ಯ ಆಹ್ಲಾದಕರವಾಗಿ ಬಂದಿರಬಹುದೇ ಹೊರತು ಅನುಕೂಲಕರವಾಗಿ ಅಲ್ಲ. ಕುವೆಂಪು ಅವರ ಕಾಲಘಟ್ಟದಲ್ಲಿ ಸಾಹಿತ್ಯದಲ್ಲಿ ಕೃಷಿಯು ಆದ್ಯತೆಯಾಗಿ ಕಂಡಿತು. ಮುಂದೆ ಅದರ ಜಾಡಿನಲ್ಲಿ ಮತ್ತಷ್ಟು ಕೃತಿಗಳು ಬಂದಿವೆ ಎಂದು ಹೇಳಿದರು.

ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣವು ದೇಶದ ಕೃಷಿ ಮತ್ತು ಕೃಷಿಕರ ಬದುಕಿನ ಚಿತ್ರಣವನ್ನೇ ಬದಲಿಸಿವೆ. ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಪ್ರಭುತ್ವವೇ ಕಸಿದುಕೊಂಡು ರೈತರನ್ನು ಬೀದಿಗೆ ತಳ್ಳುತ್ತಿದೆ. ‘ಕುವೆಂಪು ಅವರು ರೈತನನ್ನು ನೇಗಿಲಯೋಗಿ ಎಂದು ಕರೆದು ರಚಿಸಿದ ಕವಿತೆ ರೈತಗೀತೆ ಎಂದೇ ಜನಪ್ರಿಯವಾಗಿದೆ. ರೈತ ಈ ದೇಶದ ಚೊಚ್ಚಿಲಮಗ ಎಂದು ದ.ರಾ. ಬೇಂದ್ರೆ ಕರೆದರು. ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ಬೇಸಾಯದಲ್ಲೇ ಬದುಕು ಕಟ್ಟಿಕೊಂಡು ಸಾಹಿತ್ಯ ರಚಿಸಿದರು. ಇದೆಲ್ಲವೂ ಸಾಹಿತ್ಯ ಮತ್ತು ಕೃಷಿ ನಡುವೆ ಪರಸ್ಪರ ಸಂಬಂಧ ಬೆಸೆದಿವೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಮಂಜುನಾಥಸ್ವಾಮಿ ಮಾತನಾಡಿ, ಅನಾಗರಿಕನಾಗಿದ್ದ ಮನುಷ್ಯ ಬೇಸಾಯ ಕಂಡುಕೊAಡ ಬಳಿಕ ನಾಗರಿಕನಾದ. ಹಿಂದಿನ, ಇಂದಿನ ಹಾಗೂ ಭವಿಷ್ಯದ ಬೇಸಾಯದ ಬದುಕನ್ನು ಅರಿಯಲು ಈ ಕಾರ್ಯಾಗಾರ ಏಣಿಯಾಗಬೇಕು. ಶಿಬಿರಾರ್ಥಿಗಳಿಗೆ ಹೊಸ ಅನುಭವ ಸಿಗುವಂತಾಗಬೇಕು ಎಂದರು.

ಕನ್ನಡ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಕೃಷಿಯ ಸ್ವರೂಪ ವಿಷಯ ಕುರಿತು ಡಾ. ಚಂದ್ರಶೇಖರ ನಂಗಲಿ, ‘ಕನ್ನಡ ಜಾನಪದ ಸಾಹಿತ್ಯ ಮತ್ತುಉ ಕೃಷಿ ಸಂಸ್ಕೃತಿ  ಕುರಿತು ಡಾ. ಟಿ. ಗೋವಿಂದರಾಜು, ‘ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಕೃಷಿ ಸಂಸ್ಕೃತಿ  ಕುರಿತು ಚನ್ನಪ್ಪ ಅಂಗಡಿ ಉಪನ್ಯಾಸ ನೀಡಿದರು.

ಕೃಷಿಯಲ್ಲಿ ಖುಷಿಪಡಬೇಕು. ದೇಶ ಕಟ್ಟುವ ಪ್ರಕ್ರಿಯೆಯ ಮುಖ್ಯ ಭಾಗವಾಗಿ ಕೃಷಿಯನ್ನು ನೋಡಬೇಕು. ಈ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಬಗೆಹರಿಸಿ, ರೈತರನ್ನು ಸ್ವಾಬಲಂಬಿಗಳನ್ನಾಗಿ ಮಾಡಬೇಕು ಎಂದು ಮುಖ್ಯ ಅಥಿತಿಗಳಾಗಿ ವೇದಿಕೆಯಲ್ಲಿದ್ದ ಸಾಹಿತಿ ಪ್ರೊ. ಶಿವರಾಮಯ್ಯ ಹೇಳಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅತಿಥಿಗಳನ್ನು ಸ್ವಾಗತಿಸಿದರು. ಅಕಾಡೆಮಿ ಸದಸ್ಯ ರವಿಕುಮಾರ್ ಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಡಾ. ಎಂ. ಬೈರೇಗೌಡ, ಬೆಂಗಳೂರು ದಕ್ಷಿಣ ಜಿಲ್ಲೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಲೇಖಕ ಡಾ. ನೂರ್ ಸಮದ್ ಅಬ್ಬಲಗೆರೆ ಹಾಗೂ ಇತರರು ಇದ್ದರು. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು.

admin
the authoradmin

Leave a Reply

Translate to any language you want