LatestMysoreNational

ಮೈಸೂರು ಟ್ರಾವಲ್ ಮಾರ್ಟ್‌ಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಕಾವತ್‌ ಆಹ್ವಾನ… ಕ್ರಾರ್ಯಕ್ರಮ ಯಾವಾಗ?

ನವದೆಹಲಿ: ಜೂನ್‌ 5, 6, 7ರಂದು ಮೈಸೂರಿನ ಜಗನ್ನಾಥ ಸೆಂಟರ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರ್‌ನಲ್ಲಿ (ಜೆಸಿಎಸಿ) ಮೈಸೂರು ಟ್ರಾವಲ್ಸ್‌ ಅಸೋಸಿಯೇಶನ್‌ ವತಿಯಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಹೋಟೆಲ್‌ ಮಾಲೀಕರ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಐದನೆಯ ಆವೃತ್ತಿಯ ಮೈಸೂರು ಟ್ರಾವಲ್‌ ಮಾರ್ಟ್‌ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮದ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್‌ ಶೆಕಾವತ್‌ ಅವರನ್ನು ಮೈಸೂರು-ಕೊಡಗು ಸಂಸದರಾದ ಯದುವೀರ್‌ ಒಡೆಯರ್‌, ಮೈಸೂರು ಟ್ರಾವಲ್ಸ್‌ ಅಸೋಸಿಯೇಶನ್‌ ಅಧ್ಯಕ್ಷರಾದ ಬಿ.ಎಸ್‌.ಪ್ರಶಾಂತ್‌ ಹಾಗೂ ಸ್ಕಾಲ್‌ ಇಂಟರ್‌ನ್ಯಾಷನಲ್‌ ಅಧ್ಯಕ್ಷ ಸಿ.ಎ.ಜಯಕುಮಾರ್‌  ಅವರು ದೆಹಲಿ ಆಹ್ವಾನಿಸಿದ್ದಾರೆ.

ಇದೇ ವೇಳೆ ಸಂಸದರಾದ ಯದುವೀರ್‌, ಪ್ರವಾಸೋದ್ಯಮಿಗಳಾದ ಬಿ.ಎಸ್.ಪ್ರಶಾಂತ್‌ ಹಾಗೂ ಸಿ.ಎ.ಜಯಕುಮಾರ್‌ ಅವರು ಈ ಕಾರ್ಯಕ್ರಮ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಯಾವ ರೀತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರಿಗೆ ವಿವರಿಸಿದರು. ಕಾರ್ಯಕ್ರಮದ ವಿವರಗಳನ್ನು ಕೇಳಿ ತಿಳಿದ ಕೇಂದ್ರ ಸಚಿವರು ಇಂತಹ ಉಪಯುಕ್ತ ಸಮಾರಂಭಕ್ಕೆ ತಮ್ಮ ಸಂಪೂರ್ಣ ಸಹಕಾರ ಸದಾ ಇದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ರಾಜ್ಯ ಪ್ರವಾಸೋದ್ಯಮ ಸಚಿವರಾದ ಹೆಚ್‌.ಕೆ.ಪಾಟೀಲ್‌ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಅವರೂ ಕೂಡ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರ ಇರುವುದಾಗಿ ತಿಳಿಸಿದರು.

ಜೂನ್‌ 5, 6, 7ರಂದು ಮೈಸೂರಿನ ಜಗನ್ನಾಥ ಸೆಂಟರ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರ್‌ನಲ್ಲಿ (ಜೆಸಿಎಸಿ) ಮೈಸೂರು ಟ್ರಾವಲ್ಸ್‌ ಅಸೋಸಿಯೇಶನ್‌ ವತಿಯಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಹೋಟೆಲ್‌ ಮಾಲೀಕರ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಐದನೆಯ ಆವೃತ್ತಿಯ ಮೈಸೂರು ಟ್ರಾವಲ್‌ ಮಾರ್ಟ್‌ ನಡೆಯಲಿದೆ. ಈ ಬಗ್ಗೆ ಚರ್ಚಿಸಲು ಹಾಗೂ ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸುವ ಸಲುವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲಾಯಿತು. ಇದೇ ವೇಳೆ ಕಾರ್ಯಕ್ರಮದ ರೂಪುರೇಷೆಗಳು, ಸ್ವರೂಪ ಹಾಗೂ ಈ ಹಿಂದಿನ ಆವೃತ್ತಿಗಳ ಯಶಸ್ಸಿನ ಬಗ್ಗೆ ಅವರಿಗೆ ತಿಳಿಸಿ, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದೂ, ಕಾರ್ಯಕ್ರಮವನ್ನು ಉದ್ಘಾಟಿಸಬೇಕೆಂದೂ ಮನವಿ ಸಲ್ಲಿಸಲಾಯಿತು.

ಈ ಹಿಂದೆ ನಡೆದಿರುವ ನಾಲ್ಕು ಆವೃತ್ತಿಗಳ ಮೈಸೂರು ಟ್ರಾವಲ್‌ ಮಾರ್ಟ್‌ ದೇಶದಾದ್ಯಂತದ ಪ್ರವಾಸೋದ್ಯಮಿಗಳನ್ನು ಒಂದು ಸೂರಿನಡಿಯಲ್ಲಿ ತರುವಲ್ಲಿ ಯಶಸ್ಸು ಕಂಡಿದೆ. ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಹಾಗೂ ಒಂದು ಸಾವಿರಕ್ಕೂ ಹೆಚ್ಚು ಪ್ರವಾಸೋದ್ಯಮಿಗಳು ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುವ ಕಾರಣ ದೇಶದಾದ್ಯಂತದಿಂದ ಬರುವ ಎಲ್ಲ ಪ್ರವಾಸೋದ್ಯಮಿಗಳಿಗೂ ಮೈಸೂರಿನ ಪರಿಚಯವಾಗುತ್ತದೆ. ಇಲ್ಲಿನ ಪ್ರವಾಸೋದ್ಯಮ, ಆರ್ಥಿಕತೆಯೂ ಬೆಳೆಯುತ್ತದೆ. ಮೈಸೂರಿನ ಪ್ರವಾಸೋದ್ಯಮಿಗಳಿಗೂ ಇದು ಬಹಳ ಸಹಕಾರಿಯಾಗುತ್ತದೆ.

ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ವಿವಿಧ ಅಗತ್ಯ ಸಂಗತಿಗಳ ಬಗ್ಗೆ ಪ್ಯಾನಲ್‌ ಚರ್ಚೆ, ವಿಚಾರ ಸಂಕಿರಣಗಳು, ಟೂರಿಸಂ ಹಾಗೂ ಹಾಸ್ಪಿಟಾಲಿಟಿ ಪ್ರಶಸ್ತಿ ಪ್ರದಾನ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇರಲಿವೆ. ಇಂತಹ ಎಕ್ಸಿಬಿಷನ್‌ ಮೈಸೂರಿನಲ್ಲಿ ನಡೆಯುವುದರಿಂದ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಮೈಸೂರಿನ ಹೆಸರು ಗುರುತಿಸಿಕೊಳ್ಳುವಂತಾಗುತ್ತದೆ ಎಂಬುದು ಆಯೋಜಕರ ಉದ್ದೇಶವಾಗಿದೆ.

 

admin
the authoradmin

ನಿಮ್ಮದೊಂದು ಉತ್ತರ