ಸಚಿವ ಸಂಪುಟದಲ್ಲಿ ಕೊಡಗಿಗೆ ಆದ್ಯತೆ ನೀಡುತ್ತಾರಾ ಡಿಕೆಶಿ? ಸಚಿವರಾಗೋದು ಯಾರು?
ಮಡಿಕೇರಿ ಶಾಸಕ ಡಾ.ಮಂಥರಗೌಡ ದೆಹಲಿಗೆ ಹೋಗಿದ್ಯಾಕೆ?


ಮಡಿಕೇರಿ: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕೊಡಗಿಗೆ ಸಚಿವಸ್ಥಾನ ಸಿಗುತ್ತಾ? ಎಂಬ ಕುತೂಹಲ ಇಡೀ ಜಿಲ್ಲೆಯ ಜನರದ್ದಾಗಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಗೆ ಯಾವುದೇ ಆದ್ಯತೆ ನೀಡಿಲ್ಲ. ಹೀಗಾಗಿ ಈ ಬಾರಿಯಾದರೂ ಸಚಿವ ಸ್ಥಾನವನ್ನು ಕರುಣಿಸಬಹುದೆಂಬ ನಿರೀಕ್ಷೆಯಂತು ಇದ್ದೇ ಇದೆ… ಸದ್ಯ ಶಾಸಕ ಮಂಥರಗೌಡ ಅವರನ್ನು ದೆಹಲಿಗೆ ಕರೆಯಿಸಿಕೊಂಡಿರುವುದು ಕುತೂಹಲದ ಜತೆಗೆ ಸಮಾಧಾನವನ್ನುಂಟು ಮಾಡಿದೆ.
ಹಾಗೆನೋಡಿದರೆ ಇತ್ತೀಚೆಗೆ ಅಧಿಕಾರಕ್ಕೆ ಬಂದಂತಹ ಎಲ್ಲ ಸರ್ಕಾರಗಳು ಸಚಿವ ಸ್ಥಾನ ನೀಡುವಲ್ಲಿ ಕಡೆಗಣಿಸಿವೆ. ಇದು ಕೊಡಗಿನ ಅಭಿವೃದ್ಧಿ ಮೇಲೆ ಪರಿಣಾಮ ಬೀರಿದೆ. ಸದ್ಯ ಜಿಲ್ಲೆಯ ಶಾಸಕರಾದ ಡಾ.ಮಂಥರಗೌಡ ಮತ್ತು ಪೊನ್ನಣ್ಣ ಅವರು ಕ್ರಿಯಾಶೀಲರಾಗಿ ಪಕ್ಷಬೇಧ ಮರೆತು ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನಹರಿಸುತ್ತಿದ್ದಾರೆ. ಇರುವ ಅಲ್ಪಾವಧಿಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ದೊರೆತರೆ ಒಂದಷ್ಟು ಅನುಕೂಲವಾಗಬಹುದು ಎಂಬುದು ಇಲ್ಲಿನ ಜನರ ಲೆಕ್ಕಾಚಾರವಾಗಿದೆ.
ಹಾಗೆನೋಡಿದರೆ ಈ ಹಿಂದೆಯೇ ಸಂಪುಟ ಪುನಾರಚನೆಯ ಕೂಗು ಎದ್ದಾಗ ಸಚಿವ ಆಕಾಂಕ್ಷಿಗಳಾಗಿ ಪತ್ರ ಬರೆದವರಲ್ಲಿ ಜಿಲ್ಲೆಯ ಎರಡು ಶಾಸಕರಿದ್ದರು. ಹೀಗಾಗಿ ಇಬ್ಬರಲ್ಲಿ ಯಾರಿಗೆ ನೀಡಿದರೂ ಅದು ಜಿಲ್ಲೆಗೆ ನೀಡುವ ಕೊಡುಗೆಯಾಗುತ್ತದೆ. ರಾಜಕೀಯವಾಗಿ ನೋಡಿದ್ದೇ ಆದರೆ ಸಿದ್ದರಾಮಯ್ಯ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರು ಸಿಎಂ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿಕೊಂಡು ಬಂದಿದ್ದರು.

ಆದರೀಗ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟವೂ ವಿಸರ್ಜನೆಯಾಗಿದೆ. ಹೀಗಾಗಿ ಮತ್ತೊಮ್ಮೆ ಸಚಿವ ಸಂಪುಟ ರಚನೆಯಾಗಬೇಕಾಗಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವುದರಿಂದ ಅವರು ಯಾರಿಗೆ ಸಚಿವ ಸ್ಥಾನ ನೀಡುತ್ತಾರೆ? ಅವರು ರಚಿಸಲಿರುವ ಸಚಿವ ಸಂಪುಟದಲ್ಲಿ ಕೊಡಗಿಗೆ ಆದ್ಯತೆ ನೀಡುತ್ತಾರಾ? ಒಂದು ವೇಳೆ ನೀಡಿದರೆ ಇಬ್ಬರು ಶಾಸಕರ ನಡುವೆ ಯಾರ ಮೇಲೆ ಒಲವು ಇರಲಿದೆ ಎಂಬ ಕುತೂಹಲವಂತು ಇದ್ದೇ ಇದೆ.
ಈಗಿನ ಬೆಳವಣಿಗೆಯನ್ನು ಗಮನಿಸಿದರೆ ದೆಹಲಿಗೆ ಬರುವಂತೆ ಶಾಸಕ ಡಾ.ಮಂಥರ ಗೌಡ ಅವರಿಗೆ ತುರ್ತು ಬುಲಾವ್ ಬಂದಿದೆ ಹೀಗಾಗಿ ಅವರು ದೆಹಲಿ ತಲುಪಿದ್ದಾರೆ. ಇದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಡಾ.ಮಂಥರಗೌಡ ಅವರು ಡಿ.ಕೆ.ಶಿವಕುಮಾರ್ ಪಾಳಯದಲ್ಲಿ ಗುರುತಿಸಿಕೊಂಡಿರುವ ಶಾಸಕರು. ಜತೆಗೆ ಉತ್ಸಾಹಿ, ಕ್ರಿಯಾಶೀಲ ಯುವ ಶಾಸಕರಾಗಿರುವ ಕಾರಣದಿಂದಾಗಿ ಒಂದು ಅವಕಾಶ ನೀಡುವ ಇರಾದೆಯೂ ಇರಬಹುದು. ಇದೆಲ್ಲವನ್ನು ಗಮನಿಸಿದರೆ ಹೊಸ ನಿರೀಕ್ಷೆ ಹುಟ್ಟು ಹಾಕಿದ್ದಂತು ನಿಜ.
ಈ ಹಿಂದೆ ಜಿಲ್ಲೆ ಟಿ.ಜಾನ್, ಎಂ.ಎಂ.ನಾಣಯ್ಯ, ಸುಮಾವಸಂತ್ ಒಂದೇ ಅವಧಿಯಲ್ಲಿ ಮೂರು ಮಂದಿ ಸಚಿವರಾಗುವ ಯೋಗವನ್ನು ಕಂಡಿತ್ತು ಅದಾದ ನಂತರ ಜೀವಿಜಯ, ಅಪ್ಪಚ್ಚುರಂಜನ್ ಅಲ್ಪಾವಧಿಗೆ ಸಚಿವರಾಗಿದ್ದರು. ಅಲ್ಲಿಂದ ಇಲ್ಲಿತನಕ ಕೊಡಗಿಗೆ ಸಚಿವ ಸ್ಥಾನ ದೊರೆತಿಲ್ಲ. ಇದೀಗ ಆಶಾಭಾವನೆ ಮೂಡಿದೆ ಮುಂದೇನಾಗಬಹುದು ಎಂಬುದನ್ನು ಕಾದು ನೋಡುವುದು ಅನಿವಾರ್ಯವಾಗಿದೆ…







