LatestMysore

ಬರಪರಿಹಾರಕ್ಕೆ ಕೇಂದ್ರಕ್ಕೆ ಪತ್ರ… ಹಣ ಬಿಡುಗಡೆ ನಂತರ ಪರಿಹಾರ ಘೋಷಣೆ:ಡಾ.ಜಿ.ಪರಮೇಶ್ವರ್

ಕೆ.ಆರ್‌.ನಗರ(ಜಿಟೆಕ್ ಶಂಕರ್):  ಬರ ಪರಿಹಾರಕ್ಕೆ ಹಣ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಹಣ ಬಿಡುಗಡೆಯ ನಂತರ ಬರ ಪರಿಹಾರದ ಹಣ ಘೋಷಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿಯೂ ಆದ ಕಂದಾಯ ಸಚಿವ ಜಿ.ಪರಮೇಶ್ವರ್ ಹೇಳಿದರು.

ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬರ ಪೀಡಿತ ರೈತರ ಜಮೀನುಗಳನ್ನು ಪರಿಶೀಲಿಸಿ ನಂತರ ಮಾತನಾಡಿದ ಅವರು  ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಭತ್ತ, ರಾಗಿ, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿದೆ ಎಂದರು.

ಕ್ಷೇತ್ರದ ವ್ಯಾಪಿಗೆ ಸೇರಿದ  ಒಟ್ಟು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ  ಬೆಳೆಗಳು ನಾಶವಾಗಿದ್ದು ಇದೇ ಪರಿಸ್ಥಿತಿ ಇಡೀ ರಾಜ್ಯದಲ್ಲಿದ್ದು ಈ ಸಂಬಂಧ ನಾನು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯಾದ್ಯಂತ ಸಂಚರಿಸಿ ಬೆಳೆ ಹಾನಿಯ ಬಗ್ಗೆ  ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಜೂನ್ ಮೊದಲ ವಾರದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾದ ಹಿನ್ನೆಲೆಯಲ್ಲಿ ರೈತರು ಭತ್ತ ಮತ್ತು ರಾಗಿ ನಾಟಿ ಮಾಡಿದ್ದು ಈಗ ಅದು ಸಹ ಸಂಪೂರ್ಣವಾಗಿ ನಾಶವಾಗಿದೆ ಎಂದು ತಿಳಿಸಿದ ಉಪಮುಖ್ಯಮಂತ್ರಿಗಳು ಇದನ್ನು ನಾವುಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆಂದು ತಿಳಿಸಿದರು.

ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರವನ್ನು ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು ಕೇಂದ್ರ ಸರ್ಕಾರ ಬರ ಪೀಡಿತಕ್ಕೆ ಹಲವು ಕಠಿಣ ನಿಯಮಗಳನ್ನು ಹಾಕಿದ್ದು ಅದನ್ನು ಸಡಿಲಗೊಳ್ಳಿಸುವಂತೆ ಕೇಂದ್ರಕ್ಕೆ ಪತ್ರ ವ್ಯವಹಾರ ಮಾಡಿದ್ದು ಸಡಿಲಿಸಿದರೆ ರಾಜ್ಯ ದಲ್ಲಿ ಮತ್ತಷ್ಟು ತಾಲೂಕುಗಳು ಸೇರ್ಪಡೆಯಾಗುತ್ತದೆ ಎಂದು ನುಡಿದರು.

ಬರ‌ಪರಿಹಾರ ಸಂಬಂಧ ಕೇಂದ್ರ‌ ಸರ್ಕಾರ ತನಿಖಾ ತಂಡ ಕಳುಹಿಸಿ ಸಮೀಕ್ಷೆ ನಡೆಸಿ ನಂತರ ಹಣ ಬಿಡುಗಡೆ ಮಾಡಲಿದ್ದು ಆ ನಂತರ ರಾಜ್ಯ ಸರ್ಕಾರ ಎಕರೆ ಜಮೀನಿಗೆ ಎಷ್ಟು ಪರಿಹಾರ ಎಂಬುದನ್ನು ಘೋಷಿಸುತ್ತೇವೆ ಎಂದು ಹೇಳಿದರು.

ಇದಕ್ಕೂ ಮೊದಲು ಉಪ ಮುಖ್ಯಮಂತ್ರಿಗಳು ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ, ಮತ್ತು ಬಸವ ಭವನಗಳನ್ನು ಪರಿಶೀಲಿಸಿ ಮುಂದುವರಿದ ಕಾಮಗಾರಿಗೆ ಬೇಕಿರುವ ಅನುದಾನವನ್ನು ಸರ್ಕಾರದ ವತಿಯಿಂದ ಕೊಡಿಸುವ ಭರವಸೆ ನೀಡಿದರು.

ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನಬಾಲದಂಡಿ, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ.ಇಒ ವಿ.ಪಿ.ಕುಲದೀಪ್, ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಬಿಸಿಎಂ ಇಲಾಖೆಯ ಕೆ.ಮೇಘನಾ, ಸೆಸ್ಕಾಂ ಎಇಇ ಅರ್ಕೇಶ್ವರಮೂರ್ತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾಸಿನಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು ಹಾಜರಿದ್ದರು

 

admin
the authoradmin

ನಿಮ್ಮದೊಂದು ಉತ್ತರ