ಮಫ್ತಿಯಲ್ಲಿದ್ದ ಪೊಲೀಸ್ ಪೇದೆ ಹೊಡೆದ ಏಟಿಗೆ ಕಾರ್ಮಿಕನ ಕಣ್ಣಿನ ದೃಷ್ಟಿ ಹೋಯಿತಾ? ಇಷ್ಟಕ್ಕೂ ಆಗಿದ್ದೇನು?

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ನನ್ನದೇನು ತಪ್ಪಿಲ್ಲ.. ನಾನು ಗೆಳೆಯನ ಮನೆ ಹಬ್ಬಕ್ಕೆಂದು ಮದ್ಯ ತರಲು ಬಾರ್ ಗೆ ಹೋಗಿದ್ದೆ ಮದ್ಯ ಖರೀದಿಸುವಾಗ ಅಲ್ಲಿ ಚಿಕ್ಕದೊಂದು ಕಿರಿಕ್ ಆಯಿತಷ್ಟೆ… ನಾನು ಬಾರ್ ನಿಂದ ಹೊರಗೆ ಬರುತ್ತಿದ್ದಂತೆಯೇ ಬುಲೆಟ್ ನಲ್ಲಿ ಬಂದ ಪೊಲೀಸ್ ಪೇದೆ ಮಫ್ತಿಯಲ್ಲಿದ್ದರೂ ನನ್ನ ಮೇಲೆ ಹಲ್ಲೆ ಮಾಡಿದರು. ಅವರು ಕಾಲಿನಿಂದ ಒದ್ದ ರಭಸಕ್ಕೆ ನನ್ನ ಕಣ್ಣಿಗೆ ಏಟಾಯಿತು. ಈಗ ಕಣ್ಣು ಕಾಣಿಸುತ್ತಿಲ್ಲ. ದುಡಿದು ತಿನ್ನುವ ನಾವು ಏನು ಮಾಡಬೇಕು? ಪೊಲೀಸ್ ಪೇದೆ ವಿರುದ್ಧ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ… ನಮಗೆ ನ್ಯಾಯಕೊಡಿಸಿ… ಹೀಗೆಂದು ಅಳಲು ತೋಡಿಕೊಳ್ಳುತ್ತಿರುವ ವ್ಯಕ್ತಿ ಮೈಸೂರು ತಾಲೂಕಿನ ಬೆಳವಾಡಿ ಸಮೀಪದ ಬಸವನಹಳ್ಳಿ ಗ್ರಾಮದ ಸ್ವಾಮಿ, ಆರ್.

ಇಷ್ಟಕ್ಕೂ ಆಗಿದ್ದೇನು ಎನ್ನುವುದನ್ನು ನೋಡುತ್ತಾ ಹೋದರೆ ಪೊಲೀಸ್ ಪೇದೆಯೊಬ್ಬರ ದರ್ಪ ಎದ್ದು ಕಾಣಿಸುತ್ತದೆ. ಘಟನೆ ಬಗ್ಗೆ ಗಾಯಾಳು ಸ್ವಾಮಿ ಹೇಳುವಂತೆ ಮತ್ತು ದೂರು ನೀಡಿರುವಂತೆ ಹೇಳುವುದಾದರೆ ನಾನು ಮನೆಗಳಿಗ ಟೈಲ್ಸ್ ಹಾಕುವ ಮೇಸ್ತ್ರಿ ಕಾರ್ಮಿಕನಾಗಿದ್ದು ಕೆ.ಆರ್. ನಗರ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಮನೆಗಳಿಗೆ ಟೈಲ್ಸ್ ಹಾಕುವ ಗುತ್ತಿಗೆ ಪಡೆದಿದ್ದೇನೆ. ಪಟ್ಟಣದ ಮೈಸೂರು- ಹಾಸನ ರಸ್ತೆಯಲ್ಲಿರುವ ಹರ್ಷಬಾರ್ ನಲ್ಲಿ ಸ್ನೇಹಿತನ ಮನೆಯ ಹಬ್ಬಕ್ಕೆ ಮದ್ಯ ಖರೀದಿಸುವ ವೇಳೆ ಮಾತಿನ ಚಕಮಕಿ ನಡೆದು ಸಣ್ಣಪುಟ್ಟ ಗಲಾಟೆ ನಡೆದು ಬಾರ್ ನಿಂದ ಹೊರ ಬಂದ ವೇಳೆ ಬುಲೆಟ್ ಬೈಕ್ ನಲ್ಲಿ ಮಫ್ತಿಯಲ್ಲಿ ಬಂದ ಪೊಲೀಸ್ ಮುಖ್ಯಪೇದೆ ಪರಶುರಾಮ್ ಗಲಾಟೆ ಬಗ್ಗೆ ತಿಳಿಯದೇ ಏಕಾಏಕಿ ನನಗೆ ಕಾಲಿನಿಂದ ಒದ್ದರು,.

ಕಣ್ಣಿನ ಚಿಕಿತ್ಸೆ ಆಗಿದೆ ಹೊಡೆಯ ಬೇಡಿ ಎಂದು ಎಷ್ಟೇ ಬೇಡಿ ಕೊಂಡರೂ ಬಿಡದೇ ಬಲವಾಗಿ ಕಣ್ಣಿನ ಭಾಗಕ್ಕೆ ಮುಷ್ಠಿಯಿಂದ ಹೊಡೆದರು. ಆವಾಗ ನಾನು ಜೋರಾಗಿ ಕಿರುಚಿ ಸ್ಥಳದಲ್ಲಿ ಬಿದ್ದೆ ಪ್ರಜ್ಞೆ ಬಂದಾಗ ಮೈಸೂರಿನ ಡಿ.ಆರ್.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು, ವೈದ್ಯರು ಚಿಕಿತ್ಸೆ ನೀಡಿ ನೇತ್ರಧಾಮ ಕಣ್ಣಿನ ಆಸ್ಪತ್ರೆಗೆ ಸೇರಿಸಲಾಯಿತು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಎಡ ಭಾಗದ ಕಣ್ಣು ಸಂಪೂರ್ಣವಾಗಿ ದೃಷ್ಟಿ ದೋಷವಾಗಿದೆ ಎಂದು ತಿಳಿಸಿದ ಕೂಡಲೇ ನನಗೆ ಸರ್ವಸ್ವವನ್ನೂ ಕಳೆದು ಕೊಂಡಂತೆ ಆಯಿತು.

ನನಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಅವರ ಭವಿಷ್ಯ ರೂಪಿಸುವುದರೂ ಹೇಗೆ? ಘಟನೆ ನಡೆದು ವಾರ ಕಳೆದರೂ ಮಫ್ತಿಯಲ್ಲಿದ್ದು, ನನ್ನ ಮೇಲೆ ಹಲ್ಲೆ ಮಾಡಿರುವ ಮುಖ್ಯಪೇದೆ ಪರಶುರಾಮ್ ವಿರುದ್ದ ದೂರು ದಾಖಲಿಸಿಲ್ಲ. ದೂರು ವಾಪಸು ಪಡೆಯುವಂತೆ ಪೊಲೀಸ್ ಮುಖ್ಯಪೇದೆ ದೂರುದಾರನಾದ ನನಗೆ ಧಮ್ಕಿ ಹಾಕಿಸುತ್ತಿದ್ದಾರೆ ಎಂದು ಸ್ವಾಮಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರನ್ನು ಕೇಳಿದರೆ, ಮುಖ್ಯಪೇದೆ ಪರಶುರಾಮ್ ಅವರ ಮೇಲೆ ಎಫ್.ಐ.ಆರ್ ದಾಖಲಿಸಲು ನ್ಯಾಯಾಲಯದ ಅನುಮತಿ ಪಡೆಯ ಬೇಕಾಗಿದೆ ಹಾಗಾಗಿ ವಿಳಂಬವಾಗಿದೆ ತಕ್ಷಣವೇ ಎಫ್.ಐ.ಆರ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಘಟನೆ ಬಗ್ಗೆ ಸಂಬಂಧಿಸಿದವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.







