LatestNews

ಕುಶಾಲನಗರ ವ್ಯಾಪ್ತಿಯಲ್ಲಿ ಮಲಯಾಳಿ ಭಾಷಿಕರಿಂದ ಭಾವೈಕ್ಯತೆಯ ಪ್ರತೀಕ ಓಣಂ ಸಂಭ್ರಮಾಚರಣೆ..

ಕುಶಾಲನಗರ (ಆರ್ ಹೆಚ್): ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ನೆಲೆಸಿರುವ ಮಳೆಯಾಳಿ ಭಾಷಿಕರು ಕೇರಳದ ಅತ್ಯಂತ ಪ್ರಮುಖವಾದ ವಾರ್ಷಿಕ ಸುಗ್ಗಿ ಮತ್ತು ಸಾಂಸ್ಕೃತಿಕ ನಾಡಹಬ್ಬ ಭಾವೈಕ್ಯತೆಯ ಪ್ರತೀಕವಾದ ಓಣಂ ಹಬ್ಬವನ್ನು  ಬುಧವಾರ ಸಂಭ್ರಮ ಸಡಗರದಿಂದ ಆಚರಿಸಿದರು.

ಓಣಂ ಎಂದಾಕ್ಷಣ ಮನೆಯ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ(ಪೊಕಳಂ) ಮಧ್ಯೆ ಬೆಳಗುವ ಹಣತೆ, ಸುಣ್ಣ ಬಣ್ಣ ಬಳಿದು ಶೃಂಗರಿಸಿದ ಮನೆ, ಅಡುಗೆ ಮನೆಯಲ್ಲಿ ಘಮ್ಮೆನ್ನುವ ಭಕ್ಷ್ಯಬೋಜನಗಳು, ಸಂಪ್ರಾದಾಯಿಕ ಉಡುಗೆ ಧರಿಸಿದ್ದ ಮಹಿಳೆಯರ ಹೊಸ ಹುರುಪು  ಹಬ್ಬದ ಸಂದರ್ಭ ಕಂಡುಬಂದ ವಿಶೇಷತೆಗಳು.

ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಗುಡ್ಡೆಹೊಸೂರು, ಏಳನೇ ಹೊಸಕೋಟೆ, ಹಾರಂಗಿ, ಚಿಕ್ಕತ್ತೂರು, ಕೂಡಿಗೆ, ಸಿದ್ಧಲಿಂಗಪುರ, ಅರಸಿಣಕುಪ್ಪೆ,ನಾಕುರು-ಶಿರಂಗಾಲ, ನಂಜರಾಯಪಟ್ಟಣ ಮತ್ತಿತರರ ಗ್ರಾಮಗಳಲ್ಲಿ ಹಬ್ಬದ ಅಂಗವಾಗಿ ಮಳೆಯಾಳಿ ಭಾಷಿಕರು (ಕೇರಳಿಯನ್ನರು) ಸಾಂಪ್ರಾಯಿಕ ಹೊಸ ಉಡುಗೆ ತೊಡುಗೆ ಧರಿಸಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಳೆಯಾಳಿ ಭಾಷಿಕರು ಪರಸ್ಪರ ಸಿಹಿ ವಿತರಿಸುವ ಮೂಲಕ ಓಣಂ ಹಬ್ಬದ ಶುಭಾಶಯ ಹಂಚಿಕೊಂಡರು.

ಸಿಂಹಮಾಸದಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಕೇರಳಿಯರಿಗೆ ಈ ಸಿಂಹಮಾಸ ಚಿನ್ನದ ಮಾಸವಾಗಿದ್ದು, ಸಿಂಹ ಮಾಸದಲ್ಲಿ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಪಟ್ಟಣದ ಸಿದ್ದಯ್ಯ ಬಡಾವಣೆ ನಿವಾಸಿ ಕೃಷ್ಣ ಅವರ ಕುಟುಂಬಸ್ಥರು ಹಾಗೂ ಬಂಧುಬಾಂಧವರು ಒಟ್ಟಿಗೆ ಸೇರಿ ಓಣಂ ಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್,ಓಣಂ ಕೇರಳದ ಅತ್ಯಂತ ಪ್ರಮುಖವಾದ ವಾರ್ಷಿಕ ಸುಗ್ಗಿ ಮತ್ತು ಸಾಂಸ್ಕೃತಿಕ ಹಬ್ಬವಾಗಿದ್ದು,ಮಲೆಯಾಳಿ ಭಾಷಿಗರ ಪ್ರಮುಖ ರಾಷ್ಡ್ರೀಯ ಹಬ್ಬವಾಗಿದೆ.ಓಣಂ ಆಚರಣೆ ಹತ್ತು ದಿನಗಳ ಕಾಲ ನಡೆಯುತ್ತದೆ. ಈ  ಓಣಂ ಆಚರಣೆಗೆ ಕೇವಲ ಮನೆಗಳು ಅಲ್ಲದೇ  ಇಡೀ ನಾಡೇ ತೆರೆದುಕೊಳ್ಳುತ್ತದೆ. ಹಾಗಾಗಿ ಕುಶಾಲನಗರದಲ್ಲಿ ವಿಶೇಷವಾಗಿ ಈ ಹಬ್ಬವನ್ನು ಆಚರಿಸಿದ್ದಾಗಿ ಹೇಳಿದರು.

ಹಬ್ಬದ ಹಿನ್ನೆಲೆ : ಓಣಂ ಹಬ್ಬದ ಕುರಿತು ಪುರಾಣ ಕಥೆಯಿದ್ದು,  ಹಿಂದೆ ರಾಜ್ಯವನ್ನಾಳುತ್ತಿದ್ದ ಬಲಿ ಚಕ್ರವರ್ತಿ ರಾಕ್ಷಸನಾಗಿದ್ದರೂ, ಪ್ರಜೆಗಳ ಬಗ್ಗೆ ವಾತ್ಸಲ್ಯವುಳ್ಳವನೂ, ಧರ್ಮಿಷ್ಠನೂ, ಮಹಾದಾನಿಯೂ, ಮಹಾಪರಾಕ್ರಮಿಯೂ ಆಗಿದ್ದನು. ತನ್ನ ಪರಾಕ್ರಮದಿಂದ ಜಗತ್ತನ್ನೇ ಸುತ್ತುವ ದೇವವಾಹನವನ್ನು ಪಡೆದಿದ್ದನು. ನಂತರ ಅತಿ ಆಸೆ ಗತಿಕೇಡು ಎಂಬಂತೆ ಆಸೆಗೆ ಬಿದ್ದು, ಇಂದ್ರಪದವಿ ಪಡೆಯಲು ಮಹಾಯಾಗ ಕೈಗೊಂಡಾಗ ಹೆದರಿದ ದೇವಾನುದೇವತೆಗಳು ನೆರವಿಗಾಗಿ ಶ್ರೀ ವಿಷ್ಣು ಮೊರೆಹೊಕ್ಕತ್ತಾರೆ.

ಆಗ ದೇವತೆಗಳಿಗೆ ಮುಂದೆ ಬಂದೊದಗುವ ಸಂಕಷ್ಟವನ್ನು ಪರಿಹರಿಸಲು ವಿಷ್ಣು ಬಲಿ ಚಕ್ರವರ್ತಿಯನ್ನು ವಧಿಸಲು ತಂತ್ರವೊಂದನ್ನು ರೂಪಿಸುತ್ತಾನೆ. ವಿಷ್ಣು ವಾಮನ ರೂಪದಲ್ಲಿ ಬಲಿಚಕ್ರವರ್ತಿ ಬಳಿ ಬಂದು ತಪ್ಪಸ್ಸು ಮಾಡಲು ಮೂರು ಅಡಿ ಜಾಗ ಕೇಳುತ್ತಾನೆ. ತನ್ನ ಬಳಿಗೆ ಬೇಡಿ ಬಂದವರನ್ನು ಬರಿ ಕೈಯಲ್ಲಿ ಕಳುಹಿಸದ ಬಲಿ ಚಕ್ರವರ್ತಿ ಮಾತು ಕೊಡುತ್ತಾನೆ.ಆಗ ವಾಮನ ರೂಪದಲ್ಲಿದ್ದ ವಿಷ್ಣು ತ್ರಿವಿಕ್ರಮನಾಗಿ ಬೆಳೆದು ಒಂದು ಪಾದದಿಂದ ಭೂಮಿಯನ್ನೂ, ಮತ್ತೊಂದು ಪಾದದಿಂದ ಆಕಾಶವನ್ನೂ ಅಳೆದು ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ ಆಗ ಮಾತಿಗೆ ತಪ್ಪದ ಬಲಿಚಕ್ರವರ್ತಿ ತನ್ನ ತಲೆಯನ್ನೇ ಒಡ್ಡುತ್ತಾನೆ. ವಾಮನ ರೂಪದಲ್ಲಿದ್ದ ವಿಷ್ಣು ಆತನ ತಲೆಯನ್ನು ಮೆಟ್ಟುತ್ತಿದ್ದಂತಯೇ ಬಲಿಚಕ್ರವರ್ತಿ ಪಾತಾಳ ಸೇರುತ್ತಾನೆ.

ಪಾತಾಳ ಸೇರುವ ಮೊದಲು ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ವರುಷಕ್ಕೊಮ್ಮೆ ನೋಡಲು ಅನುಮತಿಯನ್ನು ಬೇಡುತ್ತಾನೆ. ಅದಕ್ಕೆ ವಿಷ್ಣು ಒಪ್ಪಿಗೆ ನೀಡುತ್ತಾನೆ. ಅದರಂತೆ ಪ್ರತಿವರುಷ ತಿರುಓಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರಲ್ಲಿ ಈಗಲು ಮಾನೆ ಮಾಡಿದೆ.ಅದಕ್ಕಾಗಿ ಮನೆಗಳ ಅಂಗಳದಲ್ಲಿ ಹೂವಿನ ರಂಗೋಲಿ(ಪೊಕಳಂ) ಹಾಕಿ, ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಬಲಿಚಕ್ರವರ್ತಿಗಾಗಿ ಕಾಯುವುದು ಇಂದಿಗೂ ರೂಢಿಯಲ್ಲಿದೆ. ಕೇರಳದ ನಾಡ ಹಬ್ಬವಾಗಿರುವ ಓಣಂಅನ್ನು ಕೇಳರದಲ್ಲಿ ಮಾತ್ರ ಆಚರಿಸದೆ ಕೇರಳಿಗರು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲಾ ಆಚರಿಸಲಾಗುತ್ತಿದೆ.

ನಂತರ ಓಣಂ ಅಂಗವಾಗಿ ತಯಾರಿಸಲಾದ ವಿವಿಧ ಭಕ್ಷ್ಯಭೋಜನಗಳನ್ನು ಬಂಧು-ಮಿತ್ರರೊಂದಿಗೆ ಒಟ್ಟಿಗೆ ಸೇರಿ ಸವಿದರು.ಜಾತಿ, ಮತ,ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಮಳೆಯಾಳಿ ಭಾಷಿಕರಾದ ಹಿಂದೂ,ಮುಸ್ಲಿಂ, ಕ್ರೈಸ್ತರು ಕೇರಳಿಗರ ಹೊನ್ನಿನ ಹಬ್ಬ ಓಣಂವನ್ನು ಸಂಭ್ರಮ ಸಗಡಗರದಿಂದ ಆಚರಿಸಿ ಸಂಭ್ರಮಿಸಿದರು.

admin
the authoradmin

ನಿಮ್ಮದೊಂದು ಉತ್ತರ