ಮೈಸೂರು: ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪ್ರಥಮ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ಎಂ. ರಾಮೇಗೌಡ ಅವರು ರಾಮನಗರದ ಸಂಸ್ಕೃತಿ ಸೌರಭ ಟ್ರಸ್ಟ್ ಕೊಡಮಾಡುವ ಡಾ. ರಾಜ್ ಕುಮಾರ್ ಅಭಿಮಾನಿ ಪುರಸ್ಕಾರವಾದ ‘ಅಭಿಮಾನಿ ರತ್ನ’ ಬಿರುದಿಗೆ ಭಾಜನರಾಗಿದ್ದಾರೆ.
ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಮೂಲಕ ಎಂ. ರಾಮೇಗೌಡರು ನಾಡು-ನುಡಿ, ನೆಲ-ಜಲ ಸೇರಿದಂತೆ ಹಲವಾರು ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಚಿತ್ರನಟರ ಸಂಘವನ್ನು ಸಮಾಜಮುಖಿಯಾಗಿ ಮುನ್ನಡೆಸಿದ್ದಲ್ಲದೆ ಅಂದಿಗೂ ಇಂದಿಗೂ ಡಾ. ರಾಜ್ ಅವರ ಅಪ್ಪಟ ಅಭಿಮಾನಿಯಾಗಿರುವ ಗೌಡರು, ಅಣ್ಣಾವ್ರ ಜೊತೆಗೆ ಹಲವಾರು ಹೋರಾಟಗಳಲ್ಲಿ ಸಹ ಭಾಗಿಯಾಗಿದ್ದರು ಎಂಬುದು ಗಮನಾರ್ಹ.
ನಗರದ ಕೆ.ಜಿ. ಕೊಪ್ಪಲಿನ ಜಯನಗರದ ಎರಡನೇ ಮುಖ್ಯ ರಸ್ತೆಯಲ್ಲಿರುವ ಎಂ. ರಾಮೇಗೌಡರ ನಿವಾಸದಲ್ಲಿ ಏ. 22ರಂದು ಸಂಜೆ 4ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಮಳವಳ್ಳಿಯ ಡಾ. ರಾಜ್ ಕುಮಾರ್ ಕಲಾಸಂಘದ ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ದೊಡ್ಡಯ್ಯ ಅಭಿಮಾನಿ ಪುರಸ್ಕಾರ ಪ್ರದಾನ ಮಾಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಅಧ್ಯಕ್ಷತೆ ವಹಿಸುವರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ, ಚಲನಚಿತ್ರ ಹಿರಿಯ ಕಲಾವಿದ ಶಿವಕುಮಾರ್ ಆರಾಧ್ಯ, ‘ಅಣ್ಣಾವ್ರ’ ಹಿರಿಯ ಅಭಿಮಾನಿ ಬೆಂಗಳೂರಿನ ಚಾಮರಾಜಪೇಟೆಯ ಸಿ. ರಾಜು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ರಾ.ಬಿ. ನಾಗರಾಜ್ ರಾಮನಗರ ತಿಳಿಸಿದ್ದಾರೆ.








