LatestMysore

ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿ ಗರ್ಭಿಣಿಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು: ವರ್ಷ ಹರೀಶ್ ಗೌಡ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಗರ್ಭಿಣಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿರುವುದರಿಂದ   ಪೌಷ್ಟಿಕಾಂಶವುಳ್ಳ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಇದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಶಾಸಕ ಹರೀಶ್ ಗೌಡ ಪತ್ನಿ ವರ್ಷ ಹರೀಶ್ ಗೌಡ ಹೇಳಿದರು.

ತಾಲೂಕಿನ ಕರ್ಣಕುಪ್ಪೆ ಗ್ರಾಮದಲ್ಲಿ ವಿ ಎಚ್ ಪೌಂಡೇಶನ್ ವತಿಯಿಂದ ಆಯೋಜನೆ ಮಾಡಲಾಗಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ  ಗರ್ಭಿಣಿಯರಿಗೆ ಮಡಿಲು ತುಂಬುವ ಶಾಸ್ತ್ರ ನಡೆಸಿ ಮಾತನಾಡಿದರು. ಗರ್ಭಧಾರಣೆ ಮಹಿಳೆಯ ಜೀವನದಲ್ಲಿ ಒಂದು ಮಹತ್ತರ ಘಟ್ಟ. ಆದ್ದರಿಂದ ಗರ್ಭಿಣಿಯರು ಸುರಕ್ಷಿತ ತಾಯ್ತನಕ್ಕೆ ಆದ್ಯತೆ ನೀಡಬೇಕು. ಸುರಕ್ಷಿತ ಹೆರಿಗೆಗಾಗಿ ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಶುವನ್ನು ಒಂಭತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡು ಪೋಷಿಸುವ ಮಹಿಳೆಯ ತ್ಯಾಗ, ಸಹನಶೀಲತೆ ಅಗಾಧವಾದದ್ದು. ತಾಯಿಯ ಸ್ಥಾನವನ್ನು ಯಾರು ಕೂಡ ತುಂಬಲು ಸಾಧ್ಯವಿಲ್ಲ. ಇವತ್ತು ಮಹಿಳೆಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಿದೆ. ಮಹಿಳೆಯರು ಮನೆಗೆಲಸ, ಕುಟುಂಬದ ನಿರ್ವಹಣೆ ಒತ್ತಡದ ನಡುವೆಯೂ ಆರೋಗ್ಯದತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಗರ್ಭಿಣಿಗೆ ನೀಡುವ ಆಹಾರವು ಭ್ರೂಣ ಬೆಳೆಯಲು, ತಾಯಿಯ ಸ್ವಾಸ್ಥ್ಯ ಕಾಪಾಡಲು ಮುಂದೆ ನಂತರದ ಹೆರಿಗೆ ನೋವನ್ನು ಸಹಿಸಲು ಮತ್ತು ಹಾಲುಣಿಸುವಾಗ, ಅಗತ್ಯವಾದ ಶಕ್ತಿಯನ್ನು ನೀಡಲು ಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಪ್ರೊಟೀನ್‌ ಯುಕ್ತ ಆಹಾರ ಅತ್ಯಗತ್ಯ. ಗರ್ಭಿಣಿ ಮಹಿಳೆಯು ಹೆಚ್ಚಿನ ಪ್ರಮಾಣದ ಪೌಷ್ಟಿಕ ಆಂಶವುಳ್ಳ ಆಹಾರ ಸೇವಿಸಬೇಕು. ಸಸ್ಯಹಾರಿಯಾಗಿದ್ದರೆ ವಿವಿಧ ಬೇಳೆ ಕಾಳುಗಳು, ಒಣ ಹಣ್ಣುಗಳನ್ನು ತಿನ್ನಬೇಕು. ಭ್ರೂಣದಲ್ಲಿ ರಕ್ತ ರಚನೆಗೆ ಕಬ್ಬಿಣಾಂಶವು ಅತಿ ಅಗತ್ಯ. ಇದು ರಕ್ತ ಹೀನತೆಯನ್ನು ನಿವಾರಿಸುವುದು. ಗರ್ಭಿಣಿಯು ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸಬೇಕು ಎಂದರು.

ಗರ್ಭಿಣಿ ರಾಗಿ ಮತ್ತು ಸಜ್ಜೆ ಉಪಯೋಗಿಸಬೇಕು. ಎಳ್ಳು ಮತ್ತು ಕಡು ಹಸಿರು ಬಣ್ಣದ ಸೊಪ್ಪು ತರಕಾರಿಗಳನ್ನು ಬಳಸಬೇಕು. ವಿಟಮಿನ್‌ಗಳು ಅತಿ ಮುಖ್ಯ. ಸಾಕಷ್ಟು ತರಕಾರಿಗಳನ್ನು ಸೇವಿಸಬೇಕು. ಮತ್ತು ನಿಂಬೆ ಜಾತಿಯ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು ಕೆಲಸ ಮಾಡುವುದೇ ನಮ್ಮ ಕಾಯಕ ಫಲಿತಾಂಶ ದೇವರದು ಈ ದಿನ ಕೃಷ್ಣ ಜನ್ಮದಿನದ ಆಚರಣೆ ಮಾಡುತ್ತಿರುವುದು ತುಂಬಾ ಖುಷಿ ಆಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಗಿರಿದಾಸ್ ಡಾ ತೇಜಸ್ವಿನಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ತಾಲೂಕು ಜೆಡಿಎಸ್ ಅಧ್ಯಕ್ಷ ಸುರೇಂದ್ರ ಮುಖಂಡರಾದ ಹರವೇ ಶ್ರೀಧರ್,  ಸತೀಶ್, ಪಾಪಣ್ಣ ಮುದಗನೂರು ಸುಭಾಷ್ ಗ್ರಾ ಪಂ ಮಾಜಿ ಅದ್ಯಕ್ಷ ಪಾಪಣ್ಣ ನಗರಪಾಲಿಕೆ ಮಾಜಿ ಸದಸ್ಯ ಸತೀಶ್ ಕಣಗಾಲು ರಾಘು ಅಶೋಕ ರಾಜಣ್ಣ ಮಹದೇವಪ್ಪ ನಟೇಶ್ ಆರಾಧ್ಯ ಗವಿಮಾದು ಮತ್ತು ಆಶಾ ಕಾರ್ಯಕರ್ತರು  ಇದ್ದರು.

admin
the authoradmin

ನಿಮ್ಮದೊಂದು ಉತ್ತರ