ArticlesLatest

ಮಹಾತ್ಮರ ಜಯಂತಿ… ಆಚರಣೆಗಷ್ಟೇ ಸೀಮಿತವಾಗದೆ ತತ್ವಾದರ್ಶ ಅಳವಡಿಸಿಕೊಳ್ಳುವಂತಾಗಲಿ..!

ಏಪ್ರಿಲ್ ಬಂತೆಂದರೆ ಮಹಾತ್ಮರ ಜಯಂತಿಗಳ ಆಚರರಣೆ, ಆರಾಧನೆ, ಅವರ ಗುಣಗಾನ, ಸ್ಮರಣೆ ಹೀಗೆ ಮಹಾತ್ಮರಾದ ವ್ಯಕ್ತಿಗಳ ವ್ಯಕ್ತಿತ್ವವನ್ನು ನೆನಪಿಸಿಕೊಂಡು ಅಂತಹ ಮಹಾತ್ಮರ ವಿಚಾರಧಾರೆಗಳನ್ನು ಕುರಿತು ಮಾತಾಡುವ ಮನಸ್ಸುಗಳು ಕಾತರವಾಗಿರುತ್ತವೆ. ನಮ್ಮ ಸಮಾಜದಲ್ಲಿ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವುದು ಒಂದು ಪವಿತ್ರ ಹಾಗೂ ಮಹತ್ವದ ಪರಂಪರೆಯಾಗಿದೆ. ನಾವೀಗ ಆಚರಣೆ ಜೊತೆಗೆ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳುವತ್ತ ಗಮನಹರಿಸಬೇಕಿದೆ.. ಮಹನೀಯರ ದಿನಾಚರಣೆಗೆ ಸಂಬಂಧಿಸಿದಂತೆ ನಾವೇನು ಮಾಡಬೇಕು ಎಂಬುದರ ಕುರಿತಂತೆ ಬರಹಗಾರರಾದ ಪರಮೇಶ್ ಕೆ ಉತ್ತನಹಳ್ಳಿ ಅವರು ಇಲ್ಲಿ ಬರೆದಿದ್ದಾರೆ.

ಮಹಾತ್ಮರು, ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನೇ ಸಮಾಜದ ಒಳಿತಿಗಾಗಿ ಸಮರ್ಪಿಸಿದವರು. ಅವರು ಮಾನವಕುಲಕ್ಕೆ ಶಾಂತಿ, ಸತ್ಯ, ಅಹಿಂಸೆ, ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಬೋಧಿಸಿ, ಜನರಿಗೆ ಸರಿಯಾದ ಬದುಕಿನ ಮಾರ್ಗವನ್ನು ತೋರಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದು ಕೇವಲ ಗೌರವ ಸೂಚನೆಯಲ್ಲ, ಅದು ನಮ್ಮ ನೈತಿಕ ಹೊಣೆಗಾರಿಕೆಯೂ ಆಗಿದೆ. ಈ ಕಾರಣದಿಂದಲೇ ಪ್ರತಿವರ್ಷ ಅವರ ಜಯಂತಿಗಳನ್ನು ಆಚರಿಸಿ, ಅವರ ಸೇವೆಯನ್ನು ನೆನಪಿಸಿಕೊಳ್ಳುತ್ತೇವೆ.

ಜಯಂತಿಗಳ ಆಚರಣೆಯ ಮೂಲ ಉದ್ದೇಶವನ್ನು ಗಮನಿಸಿದರೆ, ಅದು ಕೇವಲ ಹಬ್ಬದಂತ ಆಚರಣೆಯಲ್ಲ. ಮಹಾನ್ ವ್ಯಕ್ತಿಗಳ ಚಿಂತನೆಗಳು, ತತ್ವಗಳು ಮತ್ತು ಆದರ್ಶಗಳನ್ನು ಜನರಿಗೆ ಪರಿಚಯಿಸುವುದು, ವಿಶೇಷವಾಗಿ ಯುವಜನತೆಗೆ ಅವುಗಳ ಮಹತ್ವವನ್ನು ತಿಳಿಸುವುದು ಅತ್ಯಂತ ಮುಖ್ಯ. ಅವರ ಜೀವನದಲ್ಲಿ ಎದುರಿಸಿದ ಕಷ್ಟಗಳು, ಅವರು ಅನುಸರಿಸಿದ ಮೌಲ್ಯಗಳು, ಸಮಾಜದ ಮೇಲಿನ ಅವರ ಬದ್ಧತೆ—ಇವೆಲ್ಲವೂ ನಮಗೆ ಸ್ಪೂರ್ತಿದಾಯಕವಾಗಿವೆ. ಇಂತಹ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ಇದೇ ಜಯಂತಿಗಳ ನಿಜವಾದ ಆಶಯವಾಗಿದೆ.

ಆದರೆ ಇಂದಿನ ಸಮಾಜದಲ್ಲಿ ಜಯಂತಿಗಳ ಆಚರಣೆಯ ರೂಪದಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಹಲವಾರು ಕಡೆಗಳಲ್ಲಿ ಮಹಾನ್ ವ್ಯಕ್ತಿಗಳನ್ನು ಜಾತಿ, ಉಪಜಾತಿ, ಭಾಷೆ, ಪ್ರದೇಶಗಳ ಆಧಾರದ ಮೇಲೆ ವಿಭಜಿಸಲಾಗುತ್ತಿದೆ. ಅವರು ಸರ್ವಮಾನವರಾದರೂ, ಅವರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಅವರ ಸಾರ್ವತ್ರಿಕ ಸಂದೇಶಗಳು ಮರೆಯಾಗುತ್ತಿವೆ. ಜಯಂತಿಗಳು ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಹೆಚ್ಚಿಸಬೇಕಾದರೆ, ಅದು ಕೆಲವು ಕಡೆಗಳಲ್ಲಿ ವಿಭಜನೆಯ ಕಾರಣವಾಗುತ್ತಿದೆ ಎಂಬುದು ವಿಷಾದನೀಯ ಸಂಗತಿ.

ಇದಕ್ಕೆ ಮತ್ತೊಂದು ಕಾರಣ ರಾಜಕೀಯ ಪ್ರಭಾವವಾಗಿದೆ. ಕೆಲವು ರಾಜಕೀಯ ಶಕ್ತಿಗಳು ಮಹಾನ್ ವ್ಯಕ್ತಿಗಳ ಹೆಸರನ್ನು ಬಳಸಿಕೊಂಡು ಮತಗಳ ಲಾಭ ಪಡೆಯಲು ಯತ್ನಿಸುತ್ತಿವೆ. ಜಯಂತಿಗಳು ಜನರ ಮನಗೆಲ್ಲುವ ವೇದಿಕೆಗಳಾಗಿ ಮಾರ್ಪಡುತ್ತಿವೆ. ಇದರ ಪರಿಣಾಮವಾಗಿ, ಜಯಂತಿಗಳ ಆಚರಣೆಯ ಮೂಲ ಉದ್ದೇಶ ಹಿಂದುಳಿದಿದೆ. ಮಹಾನ್ ವ್ಯಕ್ತಿಗಳ ತತ್ವಗಳನ್ನು ಬಿಟ್ಟು, ಅವರ ಹೆಸರಿನ ಸುತ್ತ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.

ಇಂದಿನ ಆಚರಣೆಗಳಲ್ಲಿ ಅದ್ದೂರಿತನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ದೊಡ್ಡ ಮೆರವಣಿಗೆಗಳು, ಡಿಜೆ ಸಂಗೀತ, ಭಾರೀ ಅಲಂಕಾರ, ಪ್ರತಿಮೆಗಳ ಪೂಜೆ, ಹೂಮಾಲೆಗಳ ಅರ್ಭಟ—ಇವೆಲ್ಲವೂ ಸಾಮಾನ್ಯವಾಗಿದೆ. ಆದರೆ ಈ ಎಲ್ಲ ಆಚರಣೆಗಳ ಮಧ್ಯೆ ಮಹಾನ್ ವ್ಯಕ್ತಿಗಳ ನಿಜವಾದ ಸಂದೇಶಗಳು ಮರೆಮಾಚಲ್ಪಡುತ್ತಿವೆ. ಅವರ ಬೋಧನೆಗಳು, ಆದರ್ಶಗಳು ಜನರ ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಇದರಿಂದ ಸಮಾಜದಲ್ಲಿ ನೈತಿಕತೆ, ಪ್ರಾಮಾಣಿಕತೆ, ಶಿಸ್ತಿನಂತಹ ಮೌಲ್ಯಗಳು ಕುಂದುವಂತಾಗಿದೆ.

ನಿಜವಾದ ಗೌರವ ಎಂದರೆ ಮಹಾನ್ ವ್ಯಕ್ತಿಗಳ ಜೀವನವನ್ನು ಅನುಸರಿಸುವುದೇ ಆಗಿದೆ. ಅವರು ಬೋಧಿಸಿದ ಮೌಲ್ಯಗಳನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ. ಉದಾಹರಣೆಗೆ, ಸತ್ಯ, ಅಹಿಂಸೆ, ಸಹಿಷ್ಣುತೆ, ಪರೋಪಕಾರ—ಇವುಗಳನ್ನು ಜೀವನದಲ್ಲಿ ಅನುಸರಿಸಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಬಹುದು. ಇಂತಹ ಮೌಲ್ಯಗಳು ಇಂದಿನ ಕಾಲದಲ್ಲೂ ಅತಿ ಅಗತ್ಯವಾಗಿವೆ.

ಜಯಂತಿಗಳು ಕೇವಲ ಒಂದು ದಿನದ ಆಚರಣೆಯಾಗದೆ, ಸಮಾಜದಲ್ಲಿ ಜಾಗೃತಿ ಮೂಡಿಸುವ ಒಂದು ಸಾಧನವಾಗಬೇಕು. ಶಾಲೆಗಳು, ಕಾಲೇಜುಗಳು, ಸಂಘ ಸಂಸ್ಥೆಗಳು ಈ ಸಂದರ್ಭದಲ್ಲಿ ಉಪನ್ಯಾಸಗಳು, ಚರ್ಚೆಗಳು, ಸೇವಾ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಬೇಕು. ಯುವಜನತೆ ಮಹಾನ್ ವ್ಯಕ್ತಿಗಳ ಜೀವನವನ್ನು ಅರಿತುಕೊಂಡು, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೇರಣೆ ಪಡೆಯಬೇಕು. ಇದರಿಂದ ಸಮಾಜದಲ್ಲಿ ಉತ್ತಮ ಚಿಂತನೆಗಳು ಬೆಳೆಯುತ್ತವೆ.

ಇಂದು ನಾವು ನಮ್ಮೊಳಗೆ ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕು—ಜಯಂತಿಗಳನ್ನು ಆಚರಿಸುವ ಮೂಲಕ ನಾವು ನಿಜವಾಗಿಯೂ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತಿದ್ದೇವೆಯೇ? ಅಥವಾ ಕೇವಲ ಸಂಪ್ರದಾಯದ ಹೆಸರಿನಲ್ಲಿ ಆಚರಣೆ ಮಾಡುತ್ತಿದ್ದೇವೆಯೇ? ಈ ಆತ್ಮಾವಲೋಕನ ಅತ್ಯಂತ ಅಗತ್ಯವಾಗಿದೆ. ಆಚರಣೆಗಿಂತಲೂ ಅರ್ಥಪೂರ್ಣತೆ ಮುಖ್ಯ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಮಹಾತ್ಮರ ಜಯಂತಿಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು. ಭವ್ಯ ಆಚರಣೆಗಳಿಗಿಂತಲೂ ಅವರ ಆದರ್ಶಗಳನ್ನು ಅನುಸರಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಮಾಜದಲ್ಲಿ ಸಮಾನತೆ, ಸೌಹಾರ್ದತೆ, ನೈತಿಕತೆ ಬೆಳೆಸಲು ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಾವು ಮಹಾನ್ ವ್ಯಕ್ತಿಗಳಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಜಯಂತಿಗಳನ್ನು ಆಚರಣೆಗಷ್ಟೇ ಸೀಮಿತಗೊಳಿಸದೆ, ಅರ್ಥಪೂರ್ಣ ಜೀವನದತ್ತ ನಮ್ಮನ್ನು ಮುನ್ನಡೆಸುವ ಸಾಧನಗಳಾಗಿ ರೂಪಿಸಿಕೊಳ್ಳಬೇಕು. ಮಹಾತ್ಮರು ತಮ್ಮ ಜೀವನದ ಮೂಲಕ ಸಮಾಜಕ್ಕೆ ದಾರಿ ತೋರಿಸಿದವರು. ಅವರ ತತ್ವಗಳು, ಆದರ್ಶಗಳು ನಮ್ಮ ಬದುಕಿಗೆ ಮಾರ್ಗದರ್ಶಕವಾಗಬೇಕು. ಆದ್ದರಿಂದ, ಆ ದಿನ ಬೌತಿಕ ಆಚರಣೆಗಳಿಗಿಂತ ಅವರ ಉಪದೇಶಗಳನ್ನು ಅರ್ಥಮಾಡಿಕೊಳ್ಳುವ ಕಾರ್ಯಗಳು ನಡೆಯಬೇಕು. ಶಾಲೆಗಳು, ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಾತ್ಮರ ವಿಚಾರಧಾರೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಆಯೋಜಿಸಬಹುದು.

ಆ ದಿನ ಉಪನ್ಯಾಸಗಳನ್ನು ನೀಡುವವರು, ಕೇವಲ ಮಾತಿನಲ್ಲಿ ಅಲ್ಲದೆ ತಮ್ಮ ಜೀವನದಲ್ಲಿ ಮಹಾತ್ಮರ ತತ್ವಗಳನ್ನು ಅನುಸರಿಸುವವರಾಗಿರಬೇಕು. ಅವರ ಮಾತುಗಳು ಜನರ ಮೇಲೆ ಪರಿಣಾಮ ಬೀರುವಂತಾಗುತ್ತದೆ. ಜೊತೆಗೆ, ಕಾರ್ಯಕ್ರಮಗಳು ದೀರ್ಘವಾಗದೇ, ಕನಿಷ್ಠ ಎರಡು ಗಂಟೆಗಳೊಳಗೆ ಸರಳವಾಗಿ, ಅರ್ಥಪೂರ್ಣವಾಗಿ ನಡೆಯಬೇಕು.

ಮತ್ತೊಂದು ಮಹತ್ವದ ವಿಚಾರ ಎಂದರೆ, ಆ ದಿನವನ್ನು ಸೇವಾ ದಿನವನ್ನಾಗಿ ಆಚರಿಸುವುದು. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಕನಿಷ್ಠ ಎರಡು ಗಂಟೆ ಹೆಚ್ಚು ದುಡಿಯಬೇಕು. ಆ ಹೆಚ್ಚುವರಿ ದುಡಿಮೆಯಿಂದ ಬಂದ ಆದಾಯವನ್ನು ವಿಕಲಚೇತನರು, ಬಡವರು, ರೋಗಿಗಳು ಅಥವಾ ಪ್ರಕೃತಿ ವಿಕೋಪದಿಂದ ಬಳಲುತ್ತಿರುವವರಿಗೆ ಸಹಾಯವಾಗಿ ನೀಡಬಹುದು. ಇದರಿಂದ ಮಹಾತ್ಮರ ಸೇವಾ ಮನೋಭಾವವನ್ನು ನಾವೂ ಅನುಸರಿಸಿದಂತಾಗುತ್ತದೆ.

ಈ ರೀತಿಯಲ್ಲಿ ಮಹಾತ್ಮರ ಜಯಂತಿಯನ್ನು ಆಚರಿಸಿದರೆ, ಅದು ಕೇವಲ ಒಂದು ದಿನದ ಆಚರಣೆ ಆಗದೆ, ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬಲ್ಲ ಒಂದು ಅವಕಾಶವಾಗುತ್ತದೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.

 

 

 

admin
the authoradmin

Leave a Reply

Translate to any language you want