ಜಾತಿ ವ್ಯವಸ್ಥೆ ಕಿತ್ತೊಗೆಯುವುದು ಡಾ.ಬಿ.ಆರ್.ಅಂಬೇಡ್ಕರ್ ಆಶಯವಾಗಿತ್ತು:ಪುರುಷೋತ್ತಮ್
ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ನಿಂದ ಜಯಂತಿ ಆಚರಣೆ

ಕುಶಾಲನಗರ (ರಘುಹೆಬ್ಬಾಲೆ) : ದೇಶದ ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಮೈಸೂರು ಮಹಾನಗರಪಾಲಿಕೆ ಮಾಜಿ ಮೇಯರ್ ಪರುಷೋತ್ತಮ್ ಹೇಳಿದರು.
ವಿಶ್ವಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಇಲ್ಲಿನ ಕಲಾ ಭವನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಮುಟ್ಟಿಸಿಕೊಳ್ಳಲಾಗದ ವ್ಯಕ್ತಿಯ ಜನ್ಮ ಜಯಂತಿಯನ್ನು ವಿಶ್ವದ 152 ರಾಷ್ಟ್ರಗಳು ಆಚರಿಸುತ್ತಿರುವುದು ಅವರ ವ್ಯಕ್ತಿತ್ವದ ಘನತೆಯನ್ನು ಸಾರುತ್ತದೆ. ದೇಶದ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವುದಕ್ಕಾಗಿಯೇ ಅವರು 32 ಡಿಗ್ರಿಗಳನ್ನು ಪಡೆದರು ಎಂದು ಅಂಬೇಡ್ಕರ್ ಅವರ ಶಿಕ್ಷಣ ಮತ್ತು ಹೋರಾಟವನ್ನು ಕುರಿತು ವಿಶ್ಲೇಷಿಸಿದದರು.

ಅಂಬೇಡ್ಕರ್ ಅವರಿಗೆ ಗೌರವ ಕೊಡಬೇಕಾದರೆ ಮಹಿಳೆಯರಿಗೆ ವೇದಿಕೆಯಲ್ಲಿ ಅವಕಾಶ ನೀಡಬೇಕು. ತಾಯಿ ಗುಣವಿದ್ದ ಅಂಬೇಡ್ಕರ್ ಅವರು ಮಹಿಳೆಯರಿಗೆ ನೀಡಿದ ಕೊಡುಗೆ ಗಣನೀಯವಾದುದು. ಅಂಬೇಡ್ಕರ್ ನೀಡಿದ ಮತದಾನದ ಹಕ್ಕು, ಮಹಿಳಾ ಮೀಸಲಾತಿಗಾಗಿ ಹೋರಾಡಿದ್ದು, ಪಿತ್ತಾರ್ಜಿತ ಆಸ್ತಿ ಹಕ್ಕು ಮೊದಲಾದವುಗಳನ್ನು ಮಹಿಳೆಯರು ಮರೆಯುವಂತಿಲ್ಲ ಎಂದು ಹೇಳಿದರು.
ಭಗವಾನ್ ಬುದ್ಧನಿಂದ ಪ್ರೇರೇಪಿರಾದ ಅಂಬೇಡ್ಕರ್ ಅವರು ಹಿಂದು ಧರ್ಮದ ಅಸಮಾನತೆಯನ್ನು ತೊಡೆದು ಹಾಕಲು ಯತ್ನಿಸಿ ಕೊನೆಗೆ ವಿಫಲರಾದಾಗ ಬೇಸತ್ತು ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಹೇಳಿದರು.
ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಬದಲಾಯಿಸಲು ಹೊರಟರೆ ಅದನ್ನು ಜೀವಕೊಟ್ಟಾದರೂ ಉಳಿಸಿಕೊಳ್ಳುತ್ತೇವೆ. ಸಂವಿಧಾನ ಎಲ್ಲ ಧರ್ಮವನ್ನು ಗೌರವಿಸುತ್ತದೆ. ಇಂಥ ಸಂವಿಧಾನಕ್ಕೆ ಏನಾದರೂ ಚ್ಯುತಿ ಬಂದರೆ ಹೋರಾಟ ಶತಸಿದ್ಧ ಎಂದು ಘೋಷಿಸಿದರು.
ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರು ಮಾತನಾಡಿ ಅಂಬೇಡ್ಕರ್ ಅವರ ವಿಚಾರಗಳನ್ನು ಸದಾ ಮೆಲುಕು ಹಾಕುತ್ತಿರಬೇಕು. ಈ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
ಭಾರತದ ಆರ್ಥಿಕ ವ್ಯವಸ್ಥೆಗೆ ಅಂಬೇಡ್ಕರ್ ಕೊಡುಗೆ ಬಹು ದೊಡ್ಡದು. ಅವರು ಒಂದು ರುಪಾಯಿ ಸಮಸ್ಯೆ ಕುರಿತು ಮಾಡಿದ ಸಂಶೋಧನೆಯ ಫಲವೇ ದೇಶದ ಇಂದಿನ ರಿಜರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣವಾಯಿತು. ಶಿಕ್ಷಣ ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಸಿಂಹದಂತೆ ಘರ್ಜಿಸುತ್ತಾರೆ ಎಂಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರು ನೀಡಿದ ಸಂವಿಧಾನದ ಆಶಯಗಳನ್ನು ಅನುಷ್ಠಾನ ಗೊಳಿಸುವ ವಾರಸುದಾರರಾಗಬೇಕು ಎಂದು ಆಶಿಸಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ ‘ಮತದಾನದ ಮೂಲಕ ದೇಶದ ಎಲ್ಲ ವರ್ಗದ ಜನತೆಗೆ ಸಮಾನತೆ ತಂದುಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಮಹಿಳೆಯರಿಗೆ ಸಮಾನತೆ ಸಿಗಬೇಕು. ಇದು ಮನೆಯಿಂದಲೇ ಆರಂಭವಾಗಬೇಕು. ಸಂವಿಧಾನ ಇಲ್ಲದಿದ್ದರೆ ನಾನೂ ಕೂಡ ಶಾಸಕನಾಗಲು ಸಾಧ್ಯವಾಗುತ್ತಿರಲಿಲ್ಲ. ಇಂಥ ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು. ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಕುಂಡಾರಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಜೆ.ಸೋಮಣ್ಣ, ಕನ್ನಿಕಾ ಪರಮೇಶ್ವರಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಅಮೃತ್ ರಾಜ್, ಮುಖಂಡರಾದ ಎಚ್.ಡಿ.ಚಂದ್ರು, ಎಂ.ಬಿ.ಸುರೇಶ್, ರಾಜ್ಯ ಎಸ್ ಸಿ, ಎಸ್ ಟಿ ನೌಕರರ ಸಂಘದ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಮಹೇಂದ್ರ, ಕೋಣಮಾರಮ್ಮ ದೇವತಾ ಟ್ರಸ್ಟ್ ಅಧ್ಯಕ್ಷ ಎಂ.ಸಿ.ಮಂಜುನಾಥ್, ಪುರಸಭಾ ಮಾಜಿ ಅಧ್ಯಕ್ಷ ಜೈವರ್ಧನ್, ಸುರೇಶ್, ಟಿ.ಆರ್.ಸತೀಶ್ ಕುಮಾರ್ ಪಾಲ್ಗೊಂಡಿದ್ದರು. ಆರಂಭದಲ್ಲಿ ಕೊಪ್ಪ ಕುಶಾಲನಗರದ ಕಾವೇರಿ ಪ್ರತಿಮೆ ಬಳಿಯಿಂದ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಡೊಳ್ಳು ಕುಣಿತದ ಮೂಲಕ ಮೆರವಣಿ ಮಾಡಲಾಯಿತು. ಬೈಲಕುಪ್ಪೆಯ ನೂರಾರು ಬೌದ್ಧ ಗುರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.







