ಸುಲಭವಾಗಿ ಸಾಲ ಕೊಡ್ತಾರೆ ಎಂಬ ಕಾರಣಕ್ಕೆ ಮೈಕ್ರೋಫೈನಾನ್ಸ್ ಗೆ ಮೊರೆ ಹೋಗಿ ಅದನ್ನು ತೀರಿಸಲಾಗದೆ, ಅವರು ಕೊಡುವ ಕಿರುಕುಳ ತಾಳಲಾರದೆ ಆತ್ಮಹತ್ಯೆ ದಾರಿ ಹಿಡಿಯುವ ಘಟನೆಗಳು ರಾಜ್ಯದಲ್ಲಿ ಮರುಕಳಿಸುತ್ತಲೇ ಇದೆ.. ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿ ಕಠಿಣ ನಿಯಮಗಳನ್ನು ಅಳವಡಿಸಿದ್ದರೂ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ವ್ಯಕ್ತಿ ಸತ್ತ ನಂತರ ಪೋಷಕರು ಫೈನಾನ್ಸ್ ನವರ ಕಿರುಕುಳಕ್ಕೆ ಹೆದರಿ ಸತ್ತ ಎಂಬ ಆರೋಪಗಳನ್ನು ಮಾಡುತ್ತಾರೆ… ಇಲ್ಲಿ ಸಾಲ ಮಾಡುವ ಮುನ್ನ ಜನ ಪೂರ್ವಾಪರ ಯೋಚಿಸದೆ ಸಾಲ ಮಾಡುವುದು ಮತ್ತು ಅದನ್ನು ಕಟ್ಟಲಾರದೆ ಸುಸ್ತಿದಾರರಾಗಿ ಅನ್ಯ ಮಾರ್ಗವಿಲ್ಲದೆ ಸಾವಿಗೆ ಶರಣಾಗುವುದು ಮುಂದುವರೆಯುತ್ತಿದೆ…
ಸರ್ಕಾರ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಂಡರೂ ಸಾಲ ಪಡೆಯುವವರು ಇರುವ ತನಕ ಬಡ್ಡಿದಂಧೆ ನಡೆಸುವವರು, ಮೈಕ್ರೋಫೈನಾನ್ಸ್ ನಂತಹ ಸಂಸ್ಥೆಗಳು ಇದ್ದೇ ಇರುತ್ತವೆ. ಸಾಲವನ್ನು ತೀರಿಸುವ ಸಾಮರ್ಥ್ಯ ಇರುವವರು ಸಾಲವನ್ನು ತೆಗೆದುಕೊಂಡು ಅದನ್ನು ಮರುಪಾವತಿ ಮಾಡುತ್ತಾ ಮುನ್ನಡೆಯುತ್ತಾರೆ. ಆದರೆ ಕೆಲವೊಮ್ಮೆ ಹಲವು ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಹಣ ಕಟ್ಟಲಾಗದೆ ಕಂತುಗಳನ್ನು ಬಾಕಿ ಉಳಿಸಿಕೊಂಡು ಬಡ್ಡಿಗೆ ಚಕ್ರಬಡ್ಡಿ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಾರೆ. ಈ ವೇಳೆ ಸಾಲ ವಸೂಲಿ ಮಾಡಲು ಬರುವವರ ಗೂಂಡಾವರ್ತನೆ, ಅಶ್ಲೀಲ ಬೈಗುಳಗಳು, ಬೆದರಿಕೆ, ಧಮಕಿ ಅದೆಲ್ಲದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ

ಮೈಕ್ರೋಫೈನಾನ್ಸ್ ಗಳಿಗೆ ಬಡವರೇ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಾಗಿರುವುದರಿಂದ ಸಾಲಪಡೆದ ಒಂದಷ್ಟು ಸಮಯಗಳ ಕಾಲ ಸಮಯಕ್ಕೆ ಸರಿಯಾಗಿ ಕಂತುಗಳನ್ನು ಕಟ್ಟುತ್ತಾರೆಯಾದರೂ ಆ ನಂತರ ಕಟ್ಟಲಾಗದೆ ಉಳಿಸಿಕೊಂಡು ಬಿಡುತ್ತಾರೆ. ಈ ವೇಳೆ ವಸೂಲಿಗೆ ಬರುವವರ ಕಿರುಕುಳದಿಂದ ಯಾಕಪ್ಪಾ ಸಾಲ ಮಾಡಿದೆ ಎಂದು ತಲೆ ಚಚ್ಚಿಕೊಳ್ಳುವಂತಾಗುತ್ತದೆ. ಸರ್ಕಾರ ಕಠಿಣ ಕ್ರಮ ಜಾರಿ ಮಾಡಿದ ಬಳಿಕ ವಸೂಲಿಗೆ ಹೊಸ ತಂತ್ರ ಅಳವಡಿಸಿಕೊಂಡಿದ್ದಾರೆ.
ಮೈಕ್ರೋಫೈನಾನ್ಸ್ ಗಳು ಹುಟ್ಟಿದ್ದೇಗೆ?
ಇನ್ನು ಮೈಕ್ರೋಫೈನಾನ್ಸ್ ಗಳ ಇತಿಹಾಸವನ್ನು ನೋಡಿದ್ದೇ ಆದರೆ ಅವುಗಳು ರೂಪುಗೊಂಡಿದ್ದು ಒಂದೊಳ್ಳೆಯ ಉದ್ದೇಶದಿಂದಲೇ ಆದರೆ ಇವತ್ತು ಮೂಲ ಉದ್ದೇಶಗಳನ್ನು ಮರೆತು ಅವು ಕೇವಲ ಲಾಭ ಮಾಡುವ ಕಾಯಕದಲ್ಲಿ ತೊಡಗಿರುವುದು, ಆರ್ಥಿಕ ವಿಸ್ತರಣೆಗೆ ಮುಂದಾಗಿರುವುದು ಕಾಣಿಸುತ್ತಿದೆ. ಇಷ್ಟಕ್ಕೂ ಈ ಮೈಕ್ರೋಫೈನಾನ್ಸ್ ಗಳು ಕೇವಲ ನಮ್ಮ ದೇಶದಲ್ಲಿ ಮಾತ್ರ ಕಾರ್ಯಾಚರಿಸುತ್ತಿಲ್ಲ. ಎಲ್ಲ ಕಡೆಯೂ ಇವೆ. ಅದರಲ್ಲೂ ಬಾಂಗ್ಲಾದೇಶ, ಕಾಂಬೋಡಿಯಾ, ಅಫ್ಘಾನಿಸ್ತಾನ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಇಂಡೋನೇಷ್ಯಾ ಮತ್ತು ಈಕ್ವೆಡಾರ್ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇವು ಹೆಚ್ಚಾಗಿ ಕಾರ್ಯಾಚರಿಸುತ್ತಿವೆ.
ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮೈಕ್ರೋಫೈನಾನ್ಸ್ ಗಳು ಕಿರುಬಂಡವಾಳವನ್ನು ಸಾಲದ ರೂಪದಲ್ಲಿ ನೀಡಿ ಬಳಿಕ ಅವರಿಂದ ಅದನ್ನು ವಸೂಲಿ ಮಾಡುವ ಉದ್ದೇಶದಿಂದ ಹುಟ್ಟಿಕೊಂಡಿವೆ. ಮತ್ತು ಈ ಮೈಕ್ರೋಫೈನಾನ್ಸ್ ಗಳಿಗೆ ತನ್ನದೇ ಆದ ಇತಿಹಾಸ ಹೊಂದಿವೆ. 18ನೇ ಶತಮಾನದಲ್ಲಿ ಇವುಗಳು ಐರಿಶ್ ನಲ್ಲಿ ಅಸ್ಥಿತ್ವಕ್ಕೆ ಬಂದವು ಎಂದು ಹೇಳಲಾಗುತ್ತಿದೆ.

ಅಲ್ಲಿನ ಜೊನಾಥನ್ ಸ್ವಿಫ್ಟ್ ಎಂಬಾತ ಇದನ್ನು ಪರಿಚಯಿಸಿದನು. ಆಗ ಇದನ್ನು ಮೈಕ್ರೋಲೆಂಡಿಂಗ್ ಎಂದೇ ಕರೆಯಲಾಗುತ್ತಿತ್ತು. ಅವತ್ತಿನ ಉದ್ದೇಶಗಳೇ ಬೇರೆಯಾಗಿತ್ತು. ಆಗ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಆರ್ಥಿಕ ಸಹಾಯದ ಅಗತ್ಯವಿದ್ದ ಕಾರಣ ಇದು ಸಹಕಾರಿಯಾಗಿತ್ತು. ಮತ್ತು ಬಡವರು ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಕೂಡ ಇದರ ಬಹುಮುಖ್ಯ ಉದ್ದೇಶವಾಗಿತ್ತು.
ಕಾಲಾನಂತರದಲ್ಲಿ ಒಂದಷ್ಟು ಬದಲಾವಣೆಗೊಂಡು 1970ರ ಹೊತ್ತಿಗೆ ಆಧುನಿಕ ಮಾರ್ಪಾಡುಗೊಂಡು ಮೈಕ್ರೋಫೈನಾನ್ಸಿಂಗ್ ಆಯಿತು. 1983ರಲ್ಲಿ ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ಮೈಕ್ರೋಫೈನಾನ್ಸಿಂಗ್ ಕಲ್ಪನೆಯಡಿ ಮೊದಲ ಗ್ರಾಮೀಣ ಬ್ಯಾಂಕ್ ನ್ನು ಸ್ಥಾಪಿಸಿದರು. ಆ ಮೂಲಕ ಗ್ರಾಹಕರಿಗೆ ಸಾಲಗಳನ್ನು ನೀಡುವುದರ ಜೊತೆಗೆ, ಬಡತನವನ್ನು ಅನುಭವಿಸುತ್ತಿರುವವರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮತ್ತು ಜನರಲ್ಲಿ ಬ್ಯಾಂಕಿಂಗ್ ಅರಿವು ಮೂಡಿಸಿದಷ್ಟೇ ಅಲ್ಲದೆ, ಸಾಲ ಮತ್ತು ಉಳಿತಾಯ ಎರಡರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು.
ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ…
ಇದೆಲ್ಲವೂ ಕೆಲವು ವರ್ಷಗಳ ಹಿಂದಿನ ತನಕವೂ ಚೆನ್ನಾಗಿಯೇ ಇತ್ತು ಆದರೆ ಈಗ ಎಲ್ಲವೂ ಬದಲಾಗಿ ಹೋಗಿದೆ. ಮೈಕ್ರೋಫೈನಾನ್ಸ್ ಹೆಸರಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಸಂಸ್ಥೆಗಳು ಬಂಡವಾಳ ಹಾಕಿ ಲಾಭ ತರುವ ಉದ್ಯಮವಾಗಿ ಬದಲಾಗಿವೆ. ಹೀಗಾಗಿ ದೇಶದ ಮಟ್ಟಿಗೆ ಹೇಳುವುದಾದರೆ ಆರ್ ಬಿಐನ ಮೂಲ ನಿಯಮವನ್ನು ಗಾಳಿಗೆ ತೂರಿ ಸಾಲ ನೀಡಿ ದುಪ್ಪಟ್ಟು ಬಡ್ಡಿ ವಸೂಲಿಗೆ ನಿಂತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗೆನೋಡಿದರೆ ಮೈಕ್ರೋಫೈನಾನ್ಸ್ ಗೆ ಸಾಲದ ವಿಚಾರದಲ್ಲಿ ತಮ್ಮದೇ ಆದ ಸಾಮಾನ್ಯ ನಿಯಮಗಳಿವೆ. ಆ ನಿಯಮಗಳಂತೆ ಹೇಳುವುದಾರೆ ಮೈಕ್ರೋಫೈನಾನ್ಷಿಯರ್ ಗಳು ಸಾಲಗಳ ಮೇಲೆ ಬಡ್ಡಿಯನ್ನು ಆರ್ ಬಿಐ ನಿಯಮದಡಿ ವಿಧಿಸಬೇಕು ಮತ್ತು ನಿಯಮಿತ ಮಧ್ಯಂತರಗಳಲ್ಲಿ ಪಾವತಿಗಳೊಂದಿಗೆ ನಿರ್ದಿಷ್ಟ ಮರುಪಾವತಿ ಯೋಜನೆಗಳನ್ನು ಸ್ಥಾಪಿಸಬೇಕು. ಕೆಲವು ಸಾಲದಾತರು ಸಾಲ ಪಡೆದವರು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉಳಿತಾಯ ಖಾತೆಯಲ್ಲಿ ಮೀಸಲಿಡುವಂತೆ ಮಾಡಿ ಗ್ರಾಹಕರು ಡೀಫಾಲ್ಟ್ ಆದಾಗ ಅದನ್ನು ವಿಮೆಯಾಗಿ ಬಳಸಲು ಅವಕಾಶ ಮಾಡಿಕೊಡಬೇಕು.
ಇಲ್ಲಿ ಮೈಕ್ರೋಫೈನಾನ್ಸ್ ಗಳು ಅದ್ಯಾವುದನ್ನು ಮಾಡದೆ ನಿಯಮವನ್ನು ಉಲ್ಲಂಘಿಸುತ್ತಿವೆ. ಹಲವು ಕಾರಣಗಳನ್ನು ಮುಂದಿಟ್ಟು ನೀಡುವ ಸಾಲದಲ್ಲಿ ಶೇ.25ರಷ್ಟು ಹಣವನ್ನು ಮೊದಲೇ ಹಿಡಿದಿಟ್ಟುಕೊಂಡು ಅದಕ್ಕೂ ಸೇರಿಸಿ ಬಡ್ಡಿಯನ್ನು ವಸೂಲಿ ಮಾಡಿ ಬಡವರ ಬದುಕಿನಲ್ಲಿ ಆಟವಾಡುತ್ತಿರುವುದು ಇವತ್ತು ಕಂಡು ಬರುತ್ತಿದೆ. ಹೆಚ್ಚು ದಾಖಲೆಗಳನ್ನು ಕೇಳದೆ ಸುಲಭವಾಗಿ ಸಾಲ ನೀಡುತ್ತಾರೆ ಎಂಬ ಉದ್ದೇಶದಿಂದ ಅವರು ಹೇಳಿದಕ್ಕೆಲ್ಲ ಸಹಿ ಹಾಕಿ ಸಾಲ ಪಡೆದುಕೊಳ್ಳುವುದು ಸುಲಭ ಆದರೆ ನಂತರದ ಪರಿಣಾಮ ಅನುಭವಿಸುವಾಗಲೇ ಎಡವಿದ್ದೆಲ್ಲಿ ಎಂಬುದು ಗೊತ್ತಾಗುತ್ತದೆ. ಸಾಲ ಪಡೆದವನು ಥರಗುಟ್ಟುವ ಚಳಿಯಲ್ಲಿಯೂ ಬೆವರುವಂತೆ ಮಾಡಿ ಬಿಡುತ್ತಾರೆ.
ಸರ್ಕಾರ ತಂದ ಕಾನೂನು ಹೇಳುವುದೇನು?
ಸರ್ಕಾರ ತಂದ ಕಾನೂನಿನಲ್ಲಿ ಸಾಲಗಾರರು ಅಥವಾ ಅವರ ಕುಟುಂಬ ಸದಸ್ಯರ ಮೇಲೆ ಬಲವಂತದ ಕ್ರಮಗಳನ್ನು ಹೇರುವುದು, ಅಡ್ಡಿಪಡಿಸುವುದು, ಹಿಂಸೆ ನೀಡುವುದು, ಅವಮಾನಿಸುವುದು, ಬೆದರಿಸುವುದು ಅಥವಾ ಸಾಲಗಾರರು, ಅವರ ಕುಟುಂಬ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು ಅಥವಾ ಅವರ ಒಡೆತನದ ಅಥವಾ ಬಳಸಿದ ಯಾವುದೇ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಇದರ ಜತೆಗೆ ಸಾಲಗಾರರು ವಾಸಿಸುವ ಮನೆ ಅಥವಾ ಇತರ ಸ್ಥಳಗಳಿಗೆ ಆಗಾಗ್ಗೆ ಹೋಗುವುದು, ಹಣವನ್ನು ವಸೂಲಿ ಮಾಡಲು ಹೊರಗುತ್ತಿಗೆ ನೀಡುವುದು ಮತ್ತು ಸಾಲಗಾರರಿಂದ ಯಾವುದೇ ದಾಖಲೆಯನ್ನು ಬಲವಂತವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ. ಆದರೆ ಅಸಹಾಯಕರು ವಸೂಲಿಗಾರರಿಂದ ತಪ್ಪಿಸಿಕೊಂಡು ಓಡಾಡುತ್ತಾರೆ ವಿನಃ ಕಾನೂನನ್ನು ಚಲಾಯಿಸಲು ಸಾಧ್ಯವಾಗುತ್ತಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ಸಾಲ ಪಡೆಯುವ ಸಾಲಗಾರರ ಪೈಕಿ ಬಹುತೇಕರು ಬೆಳೆಯನ್ನು ನಂಬಿ ಸಾಲ ಮಾಡುತ್ತಾರೆ. ಆದರೆ ಅದು ಕೆಲವೊಮ್ಮೆ ಕೈಕೊಟ್ಟಾಗ ದೊಡ್ಡ ಮೊತ್ತದ ಸಾಲವನ್ನು ಮೈಮೇಲೆ ಎಳೆದುಕೊಂಡು ಸಾಲಗಾರರಾಗಿ ಪರಿತಪಿಸುತ್ತಾರೆ. ಆದ್ದರಿಂದ ಮೈಕ್ರೋಫೈನಾನ್ಸ್ ನಿಂದ ಸಾಲಪಡೆಯುವ ಮುನ್ನ ಯೋಚಿಸುವುದು ಅಗತ್ಯವಾಗಿದೆ. ಇಲ್ಲದೆ ಹೋದರೆ ಅಪಾಯ ತಪ್ಪಿದಲ್ಲ…
ಸಾಲ ಮಾಡುವ ಮುನ್ನ ಯೋಚಿಸಿ…
ಇದೆಲ್ಲದರ ನಡುವೆ ಸಾಲ ಮಾಡುವ ಮುನ್ನ ಹತ್ತು ಬಾರಿ ಯೋಚಿಸಬೇಕಾಗುತ್ತದೆ. ಸುಲಭವಾಗಿ, ಯಾವುದೇ ಹೆಚ್ಚಿನ ದಾಖಲೆಗಳಿಲ್ಲದೆ ಸಾಲ ಕೊಡುತ್ತಾರೆ ಎಂಬ ಕಾರಣಕ್ಕೆ ಮೈಕ್ರೋಫೈನಾನ್ಸ್ ಗೆ ಹೆಚ್ಚಿನ ಬಡ್ಡಿಯಾದರೂ ಪರ್ವಾಗಿಲ್ಲ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸಾಲ ಮಾಡುವ ಮೊದಲು ಬ್ಯಾಂಕ್ ಗಳಿಂದ ಸಾಲ ಪಡೆಯಲು ಪ್ರಯತ್ನಿಸಿ. ಅದರಲ್ಲೂ ಪರ್ಸನಲ್ ಲೋನ್ ಪಡೆಯುವವರು ಒಂದಷ್ಟು ಮಾಹಿತಿ, ಸಲಹೆ ಪಡೆಯುವುದು ಉತ್ತಮ.
ಕೆಲವು ತಜ್ಞರು ನೀಡುವ ಸಲಹೆ ಪ್ರಕಾರ ಸಾಲಗಾರರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಮುಖ್ಯ. ಕಂತುಗಳನ್ನು ನಿಗದಿತ ದಿನಾಂಕದೊಳಗೆ ಪಾವತಿಸಲು ವಿಫಲವಾದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಹೆಚ್ಚಿನ ಬ್ಯಾಂಕುಗಳು ಆಟೋ-ಡೆಬಿಟ್ ಸೌಲಭ್ಯದ ಮೂಲಕ ಸಾಲಗಾರನ ಬ್ಯಾಂಕ್ ಖಾತೆಯಿಂದ ನೇರವಾಗಿ ವೈಯಕ್ತಿಕ ಸಾಲದ ಕಂತುಗಳನ್ನು ಸಂಗ್ರಹಿಸುತ್ತವೆ. ಪಾವತಿಗಳು ವಿಳಂಬವಾದರೆ, ಅವು ಶುಲ್ಕಗಳನ್ನು ವಿಧಿಸುತ್ತವೆ. ಬ್ಯಾಂಕುಗಳು ಸಾಮಾನ್ಯವಾಗಿ ನಿಗದಿತ ಪಾವತಿ ದಿನಾಂಕದಿಂದ 7 ದಿನಗಳವರೆಗೆ ಗ್ರೇಸ್ ಅವಧಿಯನ್ನು ಅನುಮತಿಸುತ್ತವೆ. ಈ ಗ್ರೇಸ್ ಅವಧಿಯ ನಂತರವೂ ಕಂತು ಪಾವತಿಸದಿದ್ದರೆ, ತಡವಾಗಿ ಪಾವತಿ ಮಾಡಿದ ದಂಡ ಮತ್ತು ಚೆಕ್ ಬೌನ್ಸ್ ಶುಲ್ಕವನ್ನು ಸರಿದೂಗಿಸಲು ಬ್ಯಾಂಕುಗಳು ನಿಗದಿತ ಶುಲ್ಕವನ್ನು ವಿಧಿಸುತ್ತವೆ.
ಸಾಲ ಪಾವತಿ ಬಗ್ಗೆ ಎಚ್ಚರವಿರಲಿ…
ಆರ್ಬಿಐ ಮಾರ್ಗಸೂಚಿಗಳು ಪ್ರಕಾರ ವೈಯಕ್ತಿಕ ಸಾಲಗಳಿಗೆ ಸಂಬಂಧಿಸಿದ ಯಾವುದೇ ವಿಳಂಬಿತ ಪಾವತಿಗಳ ಕುರಿತು ಬ್ಯಾಂಕ್ಗಳು ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಮಾಹಿತಿ ಬ್ಯೂರೋ ಸಿಐಬಿಗೆ ವರದಿಯನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ವೈಯಕ್ತಿಕ ಸಾಲದ ವಿಳಂಬ ಪಾವತಿಗಳ ಕುರಿತು ವರದಿಯನ್ನು ಸಿಐಬಿಗೆ ಸಲ್ಲಿಸಿದ ನಂತರ, ಅದು ನಿಮ್ಮ ಕ್ರೆಡಿಟ್ ವರದಿಯಲ್ಲಿ ಗಣನೀಯ ಅವಧಿಗೆ ಕಾಣಿಸಿಕೊಳ್ಳುತ್ತದೆ. ಆಗ ನಿಮಗೆ ಹೊಸ ಕ್ರೆಡಿಟ್ ಕಾರ್ಡ್ಗಳು ಅಥವಾ ಸಾಲಗಳನ್ನು ಪಡೆಯುವುದು ಕಷ್ಟಕರವಾಗುತ್ತದೆ.

ನಿಮ್ಮ ಪಾವತಿಗಳ ಬಗ್ಗೆ ನೀವು ಬೇಜವಾಬ್ದಾರಿಯಿಂದ ಅಥವಾ ನಿರ್ಲಕ್ಷ್ಯದಿಂದ ವರ್ತಿಸಿದರೆ, ಬ್ಯಾಂಕ್ ನಿಮ್ಮನ್ನು ಅರ್ಜಿದಾರರನ್ನು ಸಂಪರ್ಕಿಸಿ ಪಾವತಿ ಮಾಡುವಂತೆ ವಿನಂತಿಸಬಹುದು. ಪಾವತಿಸಲು ವಿಫಲವಾದರೆ, ಅವರ ಕ್ರೆಡಿಟ್ ಸ್ಕೋರ್ ಗೆ ಕೂಡಾ ಹೊಡೆತ ಬೀಳಲಿದೆ. ಕಾನೂನು ಕ್ರಮ ಕೈಗೊಳ್ಳಲು ನೋಟಿಸ್ ಸಹ ಕಳುಹಿಸಬಹುದು. ನಿಮ್ಮ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ವೈಯಕ್ತಿಕ ಸಾಲದ ಕಂತನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಬ್ಯಾಂಕ್ ಸಂಪರ್ಕಿಸಿ ತಾತ್ಕಾಲಿಕ ಪರಿಹಾರವನ್ನು ಕೋರಬಹುದು. ಆದರೂ ಯಾವುದೇ ಅನಿರೀಕ್ಷಿತ ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ಇತರ ಹಣಕಾಸಿನ ಬಿಕ್ಕಟ್ಟುಗಳನ್ನು ನಿಭಾಯಿಸಲು ಬ್ಯಾಂಕ್ ಖಾತೆಯಲ್ಲಿ ತುರ್ತು ನಿಧಿಯನ್ನು ಇಟ್ಟುಕೊಳ್ಳುವುದು ಸೂಕ್ತ ಎನ್ನುವುದು ತಜ್ಞರ ಸಲಹೆಯಾಗಿದೆ. ಅಲ್ಲದೆ ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಸೂಕ್ತ.

ಈ ಹೆಚ್ಚುವರಿ ಹಣ, ತುರ್ತು ಸಂದರ್ಭಗಳಲ್ಲಿ ಇಎಂಐ ಪಾವತಿಗಳನ್ನು ಸುಗಮಗೊಳಿಸಲು ಸಹಕಾರಿಯಾಗಬಹುದು.. ಅದು ಏನೇ ಇರಲಿ.. ಕೇವಲ ಸಾಲ ಮಾಡುವುದಷ್ಟೇ ಅಲ್ಲದೆ ಪಾವತಿ ಬಗ್ಗೆಯೂ ಮುಂದಾಲೋಚನೆ ಮಾಡುವುದು ಅಗತ್ಯ. ಇಲ್ಲದೆ ಹೋದರೆ ಇವತ್ತು ಮಾಡಿದ ಸಾಲ ನಾಳೆ ಶೂಲವಾಗಿ ಚುಚ್ಚಬಹುದು… ಹುಷಾರ್
B M Lavakumar








