ನವದೆಹಲಿ: ಲೋಕಸಭಾ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಜಾರಿಗೆ ತರುವ ಮಸೂದೆಯನ್ನು ಗುರುವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು, ಸಂಸತ್ತಿನಲ್ಲಿ ಸದಸ್ಯರ ಸಂಖ್ಯೆಯನ್ನು ಅಸ್ತಿತ್ವದಲ್ಲಿರುವ 543 ರಿಂದ 850 ಕ್ಕೆ ಹೆಚ್ಚಿಸುವ ಪ್ರಸ್ತಾಪವೂ ನಡೆಯಲಿದೆ.
ಏಪ್ರಿಲ್ 16 ರಿಂದ 18 ರವರೆಗೆ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈ ವಿಚಾರದಲ್ಲಿ ವಿಪಕ್ಷಗಳು ಯಾವ ರೀತಿಯ ಧೋರಣೆ ತಳೆಯಲಿವೆ ಎಂಬುದನ್ನು ನೋಡಬೇಕಾಗಿದೆ.
ಸದ್ಯದ ಮಾಹಿತಿ ಪ್ರಕಾರ ಮಹಿಳಾ ಮೀಸಲಾತಿ ಹೆಚ್ಚಳದ ಬಗ್ಗೆ ಚಕಾರ ಎತ್ತದೆ ಹೋದರೂ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಿಸಿ 850 ಸ್ಥಾನಗಳಿಗೆ ಹೆಚ್ಚಳವಾಗುವುದನ್ನು ವಿರೋಧಿಸುವ ಸಾಧ್ಯತೆಯಿದೆ. ಇನ್ನು ತಿದ್ದುಪಡಿ ಮಸೂದೆ ಮಂಡನೆಗೆ ಸಂಸತ್ತಿನಲ್ಲಿ ಹಾಜರಿರುವ ಮೂರನೇ ಎರಡರಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ. ಪ್ರಸ್ತುತ ಲೋಕಸಭೆಯಲ್ಲಿ ಎನ್ ಡಿಎ ಒಕ್ಕೂಟವು ಈ ಸಂಖ್ಯೆಯನ್ನು ಹೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಡಳಿತಾರೂಢ ಮೈತ್ರಿಕೂಟವು ಸಂವಿಧಾನ (131 ನೇ ತಿದ್ದುಪಡಿ) ಮಸೂದೆ, 2026 ಗಾಗಿ ಪ್ರತಿಪಕ್ಷಗಳಿಂದ ಕಠಿಣ ಸವಾಲನ್ನು ಎದುರಿಸ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ನಾರಿ ಶಕ್ತಿ ವಂದನಾ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವಾಗಿ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಘರ್ಷಣೆ ನಡೆಸಲು ಸಜ್ಜಾಗಿವೆ. ಇಂಡಿ ಕೂಟವು ಮಹಿಳಾ ಮೀಸಲಾತಿಯ ತಕ್ಷಣದ ಅನುಷ್ಠಾನವನ್ನು ಬೆಂಬಲಿಸುವ ಮೂಲಕ ಡಿಲಿಮಿಟೇಶನ್ ಮಸೂದೆಯನ್ನು ವಿರೋಧಿಸಲು ನಿರ್ಧರಿಸಿದೆ.
ಈ ವಿಚಾರವಾಗಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಇಂಡಿಕೂಟದ ನಾಯಕರ ಸಭೆ ಬುಧವಾರ ಅವರ ಅಧಿಕೃತ ನಿವಾಸದಲ್ಲಿ ನಡೆದಿದ್ದು. ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ 19 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಅವರು ಅಲ್ಲಿ ತೆಗೆದುಕೊಂಡ ನಿರ್ಧಾರದಂತೆ ಇಂದು ಸಂಸತ್ತಿನಲ್ಲಿ ಸಂಸದರು ನಡೆದುಕೊಳ್ಳುವ ಸಾಧ್ಯತೆಯಿದೆ ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.








