LatestMysore

ಹುಣಸೂರು ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಗಾಂಜಾ, ಅಕ್ರಮ ಮದ್ಯ, ಕಳ್ಳತನ ತಡೆಗೆ  ಒತ್ತಾಯ

ಹುಣನೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಅಕ್ರಮ ಮದ್ಯ, ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಪಂಪ್‌ಸೆಟ್‌ಗಳ ಮೋಟಾರ್, ಸ್ಟಾಟರ್, ಕೇಬಲ್ ಕಳ್ಳತನ ಹೆಚ್ಚಿದೆ. ಸಿ.ಸಿ.ಕ್ಯಾಮೆರಾಗಳಿಲ್ಲದೆ ಅಪರಾಧ ಪ್ರಕರಣಗಳು ಪತ್ತೆಯಾಗುತ್ತಿಲ್ಲ ಎಂದು ಸಾರ್ವಜನಿಕರು ಸಮಸ್ಯೆಗಳನ್ನು ಎಸ್ಪಿ ಎದುರು ಬಿಚ್ಚಿಟ್ಟ ದೃಶ್ಯ ಪೊಲೀಸ್ ಜನ ಸಂಪರ್ಕ ಹಾಗೂ ಜಾಗೃತಿಸಭೆಯಲ್ಲಿ ಕಂಡು  ಬಂದಿತು.

ಪೊಲೀಸ್ ಇಲಾಖೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ತಾಲೂಕಿನ ಹತ್ತಾರು ಸಮಸ್ಯೆಗಳ ಸರಮಾಲೆಯನ್ನು ಅಧಿಕಾರಿಗಳ ಮುಂದಿಡಲಾಯಿತು. ಅದರಲ್ಲಿ ಅಕ್ರಮ ಮದ್ಯ, ಗಾಂಜಾ, ಡ್ರಗ್ಸ್ ವಿಚಾರಗಳು ಮುಖ್ಯವಾಗಿದ್ದವು.

ತಾಲೂಕಿನ ಕಟ್ಟೆಮಳಲವಾಡಿ, ಹನಗೋಡು ಭಾಗದ ಹಳ್ಳಿಗಳಲ್ಲಿ, ನಗರದ ಸರಸ್ವತಿಪುರು, ರಂಗನಾಥ ಬಡಾವಣೆ ಸೇರಿದಂತೆ ಬಹುತೇಕ ಹಳ್ಳಿಗಳ ಮನೆ-ಅಂಗಡಿಗಳಲ್ಲಿ ಮದ್ಯ ಹಾಗೂ ಗಾಂಜಾ ಮಾರಾಟ ನಡೆಯುತ್ತಿದೆ. ಕಟ್ಟೆಮಳಲವಾಡಿಗೆ ಬೈಕ್ ಗಳಲ್ಲಿ ತಂದು ಗಾಂಜಾ ಮಾರುತ್ತಿದ್ದು, ಸಣ್ಣಮಕ್ಕಳು ಸೇವಿಸುತ್ತಿದ್ದಾರೆ. ಹತ್ತಾರು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ನಗರದ ಪರಶುರಾಮ್, ರೇಣುಕಾ, ಬೀರತಮ್ಮನಹಳ್ಳಿಯ ಅಪ್ಪಣ್ಣ, ಬಿ.ಆರ್.ಕಾವಲ್ ನಾಗರಾಜು ಮತ್ತಿತರರು ದೂರಿದರು.

ಹುಣಸೂರಿನಲ್ಲಿ  ಮಲ್ಲಿಕಾರ್ಜುನ ಬಾಲದಂಡಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದರು. ಡಿವೈಎಸ್‌ಪಿ ರವಿ, ಇನ್ಸ್ಪೆಕ್ಟರ್‌ಗಳಾದ ಪುನೀತ್, ಸಂತೋಷ್ ಕಶ್ಯಪ್ ಇದ್ದರು. ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

ಇನ್ನು ದಲಿತ ಮುಖಂಡ ಕಿರಂಗೂರುಸ್ವಾಮಿ, ನೇರಳಕುಪ್ಪೆ ಮಹದೇವ್, ಹನಗೋಡು ಹೋಬಳಿ ಕೇಂದ್ರದಲ್ಲಿ ಹತ್ತು ವರ್ಷಗಳ ಹಿಂದೆ ಸ್ಥಾಪಿಸಿದ ಪೊಲೀಸ್ ಔಟ್‌ ಪೋಸ್ಟ್ ನ್ನು ತೆರವುಗೊಳಿಸಲಾಗಿದೆ. ಹನಗೋಡು ಹೋಬಳಿಯಲ್ಲಿ 30ಕ್ಕೂ ಹೆಚ್ಚು ಹಾಡಿಗಳು, ಪರಿಶಿಷ್ಟರ ಕಾಲನಿಗಳಿದ್ದು ಪೊಲೀಸ್ ಔಟ್ ಪೋಸ್ಟ್ ಅಥವಾ ಉಪ ಠಾಣೆಯನ್ನು ಮರುಸ್ಥಾಪಿಸಲು ಕೋರಿದರು. ಸ್ಥಳ ಪರಿಶೀಲನೆ ನಡೆಸಿ ಕ್ರಮವಹಿಸುವುದಾಗಿ ಎಸ್.ಪಿ.ತಿಳಿಸಿದರು.

ತಾಲೂಕಿನಾದ್ಯಂತ ಪಂಪ್ಸೆಟ್‌ನ ಮೋಟಾರ್, ಸ್ಟಾಟರ್, ಕೇಬಲ್ ಕಳ್ಳತನ ವಿಪರೀತವಾಗಿದ್ದರೂ ಯಾವ ಕ್ರಮವಾಗುತ್ತಿಲ್ಲ ಎಂದು ಕಟ್ಟೆಮಳಲವಾಡಿಯ ಪುಟ್ಟರಾಜು ಇತರರು ದೂರಿದರು.  ಹುಣಸೂರು ನಗರದ ಕೋರ್ಟ್ ವೃತ್ತ, ಕಲ್ಪತರು ವೃತ್ತ, ಕಲ್ಕುಣಿಕೆ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್‌ಲೈಟ್ ವ್ಯವಸ್ಥೆ ಇಲ್ಲ, ಅಪ್ರಾಪ್ತರು ಸ್ಟೀಲಿಂಗ್ ನಡೆಸುತ್ತಿದ್ದಾರೆ. ಸಿಸಿ ಟಿವಿ ಕ್ಯಾಮೆರಾಗಳಿಲ್ಲದೆ ಅಪರಾಧಪತ್ತೆಗೆ ತೊಂದರೆಯಾಗಿದೆ ಎಂದು ಇಂಟೆಕ್‌ ರಾಜು ಹಾಗೂ ಎಚ್.ವೈ.ಮಹದೇವ್, ಮೊಹಿದ್ದೀನ್ ಮತ್ತಿತರರು ತಿಳಿಸಿದರು. ಸಂಚಾರ ಸಮಸ್ಯೆ ಸರಿಪಡಿಸಲು ಹಾಗೂ ಸಿಗ್ನಲ್‌ ಲೈಟ್ ಅಳವಡಿಕೆಗೆ ಕ್ರಮ ವಹಿಸಲಾಗುವುದೆಂದು ಎಸ್‌ಪಿ ಭರವಸೆ ನೀಡಿದರು.

ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಗ್ರಾಮದ ಪ್ರತಿ ಮನೆಯವರ ಕುರಿತು ಅರಿತುಕೊಳ್ಳುವುದಾಗಿದೆ. ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಡ್ಡಾಯವೇನಲ್ಲ ಎಂದು ಸ್ಪಷ್ಟಪಡಿಸಿದರು.

ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಪ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ನಿಗದಿತ ಅವಧಿಯಲ್ಲಿ ತೆರವುಗೊಳಿಸಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಬೇಕು ಎಂದರು. ಸಂಚಾರ ನಿಯಮ, ಪೋಕ್ಸ್‌ ಕಾಯಿದೆ ಬಗ್ಗೆ ಸಬ್‌ಇನ್ಸ್‌ಪೆಕ್ಟರ್ ತಾಜುದ್ದೀನ್ ಮಾಹಿತಿ ನೀಡಿದರು.

ಇದೇ ವೇಳೆ ಜಿಲ್ಲೆಗೆ 400 ಸಿಸಿ ಕ್ಯಾಮೆರಾ ಜಿಲ್ಲೆಯಲ್ಲಿ ಒಟ್ಟು 400 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಚಿಂತಿಸಲಾಗಿದ್ದು, ಹುಣಸೂರು ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ 25 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.ಸಭೆಯಲ್ಲಿ ಪ್ರಸ್ತಾಪವಾಗಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ಎಸ್.ಪಿ. ತಿಳಿಸಿದರು.

ಡಿವೈಎಸ್‌ಪಿ ರವಿ, ಇನ್‌ಫೆಕ್ಟರ್ ಗಳಾದ ಸಂತೋಷ್ ಕಶ್ಯಪ್, ಪುನೀತ್ ಹಾಗೂ ಸಾರ್ವಜನಿಕರು ಹಲವರು ಭಾಗವಹಿಸಿದ್ದರು.

 

 

admin
the authoradmin

Leave a Reply

Translate to any language you want