ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ರಸಗೊಬ್ಬರ ಮತ್ತು ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ರೈತರಿಗೆ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿ ರವರ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ ರಾಜ್ಯದಲ್ಲಿ ಮುಂಗಾರು/ ಹಿಂಗಾರು ಹಂಗಾಮಿಗೆ ಸಿದ್ಧತೆ ನಡೆಸುತ್ತಿರುವ ರೈತರಿಗೆ ರಸಗೊಬ್ಬರ ಮತ್ತು ಡೀಸೆಲ್ ಬೆಲೆ ಏರಿಕೆಯು ತೀವ್ರ ಆಘಾತವನ್ನು ಉಂಟುಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಟ್ರ್ಯಾಕ್ಟರ್ ಉಳುಮೆ, ನೀರಾವರಿ ಪಂಪ್ಸೆಟ್ ಬಳಕೆ ಮತ್ತು ಬೆಳೆ ಸಾಗಾಣಿಕಾ ವೆಚ್ಚವು ದುಪ್ಪಟ್ಟಾಗಿದೆ. ಇದರ ಜೊತೆಗೆ ರಸಗೊಬ್ಬರಗಳ ಬೆಲೆಯೂ ಗಗನಕ್ಕೇರಿದ್ದು, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಬಿತ್ತನೆ ಮಾಡುವುದೇ ದುಸ್ತರವಾಗಿದೆ.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ಕೃಷಿ ವೆಚ್ಚದ ಈ ಹೊರೆ ರೈತರ ಬೆನ್ನುಮೂಳೆ ಮುರಿದಂತಾಗಿದೆ. ರಸಗೊಬ್ಬರಗಳ (ಯೂರಿಯಾ, ಡಿಎಪಿ, ಇತ್ಯಾದಿ) ಬೆಲೆ ಏರಿಕೆ ಮತ್ತು ಡೀಸೆಲ್ ದರ ಹೆಚ್ಚಳದಿಂದಾಗಿ ಕೃಷಿ ಉತ್ಪಾದನಾ ವೆಚ್ಚವು ಗಣನೀಯವಾಗಿ ಹೆಚ್ಚಾಗಿದೆ. ರೈತರ ಮೇಲಿನ ಹೊರೆ: ಉಳುಮೆ, ಬಿತ್ತನೆ, ಕೊಯ್ಲು ಮತ್ತು ಸಾಗಾಣಿಕೆಗೆ ಡೀಸೆಲ್ ಅತ್ಯಗತ್ಯವಾಗಿದ್ದು, ಬೆಲೆ ಏರಿಕೆಯಿಂದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ರಸಗೊಬ್ಬರಗಳ ಬೆಲೆಯನ್ನು ಕೂಡಲೇ ಇಳಿಸಬೇಕು ಅಥವಾ ರೈತರಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹೆಚ್ಚುವರಿ ಸಹಾಯಧನ ಒದಗಿಸಬೇಕು. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಡೀಸೆಲ್ ಅನ್ನು ರಿಯಾಯಿತಿ ದರದಲ್ಲಿ (ಕಾರ್ಡ್ಗಳ ಮೂಲಕ) ವಿತರಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು. ರಸಗೊಬ್ಬರಗಳ ಮೇಲಿನ ಇತ್ತೀಚಿನ ಬೆಲೆಯನ್ನು ಇಳಿಸಬೇಕು ಅಥವಾ ರೈತರಿಗೆ ಹೆಚ್ಚುವರಿ ಸಬ್ಸಿಡಿ (ಸಹಾಯಧನ) ನೀಡಬೇಕು.
ರಸಗೊಬ್ಬರ ವಿತರಣೆಯನ್ನು ಎಫ್.ಐ.ಡಿ ಮೂಲಕವೇ ವಿತರಿಸಿ ಎಂ.ಆರ್.ಪಿ ದರವನ್ನು ಪ್ರತಿ ವರ್ತಕರ ಅಂಗಡಿಗಳಲ್ಲಿ ನಾಮಫಲಕವನ್ನು ಅಳವಡಿಸುವದು ಕಡ್ಡಾಯಗೊಳಿಸಬೇಕು. ರಸಗೊಬ್ಬರ ದರ ಇಳಿಕೆ ಮತ್ತು ಸಬ್ಸಿಡಿ: ಬೆಲೆ ಏರಿಕೆಯಿಂದ ರೈತರಿಗೆ ಆರ್ಥಿಕ ಹೊರೆಯಾಗುತ್ತಿದ್ದು, ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಿ, ರೈತರಿಗೆ ಕೈಗೆಟುಕುವ ದರದಲ್ಲಿ ಗೊಬ್ಬರ ಸಿಗುವಂತೆ ಮಾಡುವುದು. ಕಡ್ಡಾಯ ಲಿಂಕ್ ಪದ್ಧತಿಗೆ ಕಡಿವಾಣ: ರೈತರು ತಮಗೆ ಬೇಕಾದ ಗೊಬ್ಬರ (ಉದಾಹರಣೆಗೆ ಡಿಎಪಿ) ಕೇಳಿದಾಗ, ಡೀಲರ್ಗಳು ಕಡ್ಡಾಯವಾಗಿ ಬೇರೆ ಗೊಬ್ಬರ ಅಥವಾ ಕೀಟನಾಶಕಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವುದನ್ನು ತಡೆಯುವುದು.
ಕಾಳಸಂತೆ ಮತ್ತು ಕೃತಕ ಅಭಾವ ತಡೆ: ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು. ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ (MSP) ಘೋಷಣೆ ಮಾಡಬೇಕು. ಕಳೆದ 3 ತಿಂಗಳುಗಳಿಂದ ಸರ್ವೆ ಪರವಾನಗಿ ಭೂಮಾಪಕರು ಕೆಲಸಕ್ಕೆ ಗೈರುಹಾಜರಾಗಿದ್ದು ಸರ್ವೇ ಇಲಾಖೆಯ ಕೆಲಸಗಳು ಸ್ಥಗಿತಗೊಂಡಿದ್ದು ಸಾರ್ವಜನಿಕರಿಗೆ ತೊಂದರೆ ಆಗಿರುತ್ತದೆ. ಸರ್ಕಾರವು ಕೂಡಲೇ ಪರವಾನಿಗೆ ಭೂಮಾಪಕರ ಬೇಡಿಕೆಯನ್ನು ಈಡೇರಿಸಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.
ನೆರೆರಾಜ್ಯವಾದ ಕೇರಳ ಸಮೀಪವಿರುವುದರಿಂದ ಹುಣಸೂರು, ಪಿರಿಯಾಪಟ್ಟಣ ಹಾಗೂ ಹೆಚ್.ಡಿ ಕೋಟೆ ತಾಲ್ಲೂಕುಗಳಿಂದ ಅತೀ ಹೆಚ್ಚು ಯೂರಿಯಾ ರವಾನೆಯಾಗುತ್ತಿದ್ದು, ಕೃಷಿಗೆ ಬಳಸಬೇಕಾದ ಯೂರಿಯಾವನ್ನು ಪ್ಲೈವುಡ್ ಕಾರ್ಖಾನೆಗಳಿಗೆ ಬಳಕೆ ಮಾಡುತ್ತಿರುವುದರಿಂದ ಪ್ರತಿವರ್ಷ ಯೂರಿಯಾ ಗೊಬ್ಬರ ಅಭಾವಕ್ಕೆ ಕಾರಣವಾಗಿದೆ. ಹೊರ ರಾಜ್ಯಗಳಿಗೆ ಯೂರಿಯಾ ರವಾನೆಯಾಗುತ್ತಿರುವುದರ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಈ ಒಂದು ಸಾಗಾಣಿಗೆ ನಿರಂತರವಾಗಿ ಸಾಗುತ್ತಿದೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು.

ಹುಣಸೂರು ಮತ್ತು ಹೆಚ್.ಡಿ ಕೋಟೆ ತಾಲ್ಲೂಕಿನ ಭೂ ಹಿಡುವಳಿದಾರರು ಸುಮಾರು 60-70 ವರ್ಷಗಳಿಂದ ಅನುಭವದಲ್ಲಿದ್ದು, ಸರ್ಕಾರದಿಂದ ಸಾಗುವಳಿ ಮಂಜೂರಾತಿ ಪಡೆದಿದ್ದು, ಇಂದಿನ ದಿನಗಳಲ್ಲಿ ದುರಸ್ತಿ ಕಾರ್ಯ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಸದರಿ ಜಮೀನುಗಳು ಅರಣ್ಯ ಇಲಾಖೆಗೆ ಸೇರಿದೆ ಎಂದು ದುರಸ್ತಿ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವುದರಿಂದ ದುರಸ್ತಿ ಕಾರ್ಯವು ಸ್ಥಗಿತಗೊಂಡಿರುತ್ತದೆ. ಆದ್ದರಿಂದ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ವರದಿ ತಯಾರಿಸಿ ಸಾಗುವಳಿದಾರರಿಗೆ ಅನುಭವದಂತೆ ದುರಸ್ತಿ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ , ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಮೇಗೌಡ ಅಗ್ರಹಾರ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ಉಂಡವಾಡಿ ಚಂದ್ರೇಗೌಡ, ಅಧ್ಯಕ್ಷರಾದ ಮೋದೂರು ಶಿವಣ್ಣ, ಜಿಲ್ಲಾ ಖಜಾಂಚಿ ಈಶ್ವರ ತಾಲೂಕು ಸಂಚಾಲಕರಾದ ಅರಳಹಳ್ಳಿ ಬಸವರಾಜೇಗೌಡ, ಜಿಲ್ಲಾ ಉಪಾಧ್ಯಕ್ಷರದ ಅಲಿಜಾನ್, ಗೌರವಾಧ್ಯಕ್ಷರದ ಕಲ್ಲಹಳ್ಳಿ ವಿಷಕಂಠಪ್ಪ, ಕೆ. ಬಿ ಜಯಣ್ಣ ಧನಂಜಯ ಕಿರಿಜಾಜಿ, ಕಟ್ಟೆ ಮಳಲವಾಡಿ ಮಹದೇವು, ಬಸವರಾಜೇಗೌಡ ಮುಂತಾದ ನೂರಾರು ರೈತ ಸಂಘಟನೆಯ ಸದಸ್ಯರುಹಾಜರಿದ್ದರು.








