ಚಿಕ್ಕದೇವಮ್ಮನ ಬೆಟ್ಟದ ಹಾಲುಗಡದಲ್ಲಿರುವ ಬಾರ್ ತೆರವಿಗೆ ಗ್ರಾಮಸ್ಥರ ಒಕ್ಕಲೂರಿನ ಆಗ್ರಹ
ಚಿಕ್ಕದೇವಮ್ಮನ ಬೆಟ್ಟದ ಪಾವಿತ್ರ್ಯಕ್ಕೆ ಧಕ್ಕೆ, ಬೃಹತ್ ಪ್ರತಿಭಟನೆಗೆ ಸಿದ್ಧತೆ


ಸರಗೂರು(ಸರಗೂರು ದಾಸೇಗೌಡ): ತಾಲೂಕಿನ ಆರಾಧ್ಯ ಶಕ್ತಿದೇವತೆಯಾದ ಚಿಕ್ಕದೇವಮ್ಮನ ಬೆಟ್ಟದ ಹಾಲುಗಡ ಪ್ರದೇಶದಲ್ಲಿರುವ ಗಣೇಶನ ದೇವಾಲಯದ ಸಮೀಪ ಅನಧಿಕೃತವಾಗಿ ಆರಂಭವಾಗಿರುವ ಮದ್ಯದ ಅಂಗಡಿ ಹಾಗೂ ಬಾರ್ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದು, ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಕುರಿತು ಇಟ್ನ ಗ್ರಾಮಸ್ಥರ ನೇತೃತ್ವದಲ್ಲಿ ಹಾಲುಗಡ ಜಾತ್ರಾ ಆವರಣದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಇಟ್ನ, ಕೊತ್ತೇಗಾಲ, ಚಾಮೇಗೌಡನಹುಂಡಿ, ಕುನ್ನಟಪಟ್ಟಣ, ಶಾಂತಿಪುರ ಹಾಗೂ ಪುರದಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಭಾಗವಹಿಸಿ ಬಾರ್ ತೆರವಿಗೆ ಒಗ್ಗಟ್ಟಿನ ಹೋರಾಟ ನಡೆಸುವ ನಿರ್ಧಾರ ಕೈಗೊಂಡರು.
ಸಭೆಯಲ್ಲಿ ಮಾತನಾಡಿದ ಚಿಕ್ಕದೇವಮ್ಮ ಹಾಲುಗಡ ಜಾತ್ರಾ ಸಮಿತಿ ಅಧ್ಯಕ್ಷ ದೊಡ್ಡವೀರನಾಯಕ ಅವರು, ಚಿಕ್ಕದೇವಮ್ಮನ ಬೆಟ್ಟವು ಸಾವಿರಾರು ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಪ್ರತಿದಿನ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಿ ಹಾಲುಗಡದಲ್ಲಿರುವ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವಿಯ ದರ್ಶನ ಪಡೆಯುತ್ತಾರೆ. ಇಂತಹ ಪವಿತ್ರ ಕ್ಷೇತ್ರದ ಪ್ರವೇಶ ಭಾಗದಲ್ಲೇ ಬಾರ್ ತೆರೆಯಲಾಗಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮದ್ಯದಂಗಡಿ ಕಾರ್ಯಾರಂಭವಾದ ನಂತರ ಭಕ್ತರು ಹಾಗೂ ಕುಟುಂಬ ಸಮೇತರಾಗಿ ಬರುವ ಯಾತ್ರಿಕರು ಮುಜುಗರ ಅನುಭವಿಸುವಂತಾಗಿದೆ. ದೇವಾಲಯದ ಪಾವಿತ್ರ್ಯ ಕಾಪಾಡಬೇಕಾದ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದು ಸರಿಯಲ್ಲ. ಈ ಭಾಗದ ಜನರ ಭಾವನೆಗಳಿಗೆ ಬೆಲೆ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
ಬಾರ್ ಆರಂಭಿಸುವ ಮುನ್ನವೇ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮದ್ಯದಂಗಡಿ ತೆರೆಯದಂತೆ ಒತ್ತಾಯಿಸಲಾಗಿತ್ತು. ಆದಾಗ್ಯೂ ಸ್ಥಳೀಯರ ವಿರೋಧದ ನಡುವೆಯೇ ಬಾರ್ ಆರಂಭವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸಭೆಯಲ್ಲಿ ಮಹಿಳೆಯರು ಸಹ ತಮ್ಮ ಆತಂಕ ವ್ಯಕ್ತಪಡಿಸಿ, ಈ ಭಾಗದಲ್ಲಿ ಕೃಷಿ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ದಿನಪೂರ್ತಿ ದುಡಿದು ಸಂಪಾದಿಸಿದ ಹಣ ಮದ್ಯಪಾನಕ್ಕೆ ಖರ್ಚಾಗುತ್ತಿದೆ. ಇದರ ಪರಿಣಾಮ ಕುಟುಂಬಗಳ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.
ಬಾರ್ ಆರಂಭವಾದ ಬಳಿಕ ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಮದ್ಯಪಾನದ ಪ್ರವೃತ್ತಿ ಹೆಚ್ಚಾಗುವ ಆತಂಕವಿದೆ. ಕೆಲ ಸಂದರ್ಭಗಳಲ್ಲಿ ಮದ್ಯ ಸೇವಿಸಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆಗಳೂ ನಡೆದಿವೆ. ಹೀಗಾಗಿ ಬಾರ್ ನ್ನು ಶೀಘ್ರವೇ ಮುಚ್ಚಿಸಿ ಗ್ರಾಮೀಣ ಕುಟುಂಬಗಳ ನೆಮ್ಮದಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮತ್ತು ಗ್ರಾಮಸ್ಥರು ಶೀಘ್ರದಲ್ಲೇ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಭೇಟಿಯಾಗಿ ಸಮಸ್ಯೆಯ ಕುರಿತು ಸಮಗ್ರ ಚರ್ಚೆ ನಡೆಸಲಿದ್ದಾರೆ. ನಂತರ ಹೋರಾಟದ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಿ, ಹಾಲುಗಡ ಜಾತ್ರಾ ಮೈದಾನದಿಂದ ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸುವ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪಪಂ ಸದಸ್ಯ ಶ್ರೀನಿವಾಸ, ನಿವೃತ್ತ ಎ ಎಸ್ ಐ ಎಸ್. ಬಸವನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಬಿ. ಬಸವರಾಜು, ಜಯರಾಮ್, ವಿ. ಸಿದ್ದರಾಜು, ಆರ್. ಕಾಳಿಂಗನಾಯಕ, ಚಾಮನಾಯಕ, ಸಣ್ಣಸ್ವಾಮಿನಾಯಕ, ನಿಂಗರಾಜು, ಚಿನ್ನನಾಯಕ, ಬೆಟ್ಟನಾಯಕ, ಸುರೇಶ್, ಚಿಕ್ಕಣ್ಣ, ವೆಂಕಟೇಶ್ ನಾಯಕ, ನವೀನ್ ಕುಮಾರ್, ಬಸವರಾಜು, ರವಿಕುಮಾರ್, ಬಸವರಾಜನಾಯಕ, ಚಿಕ್ಕದೇವಮ್ಮಬೆಟ್ಟದ ಪಾರು ಪತ್ತೆದಾರ್ ಮಹದೇವಸ್ವಾಮಿ, ಮಂಜುನಾಥ, ಶಿವಣ್ಣ, ಸೋಮನಾಯಕ,ಸರಗೂರು ಕೃಷ್ಣ, ವೈಕುಂಠ ನಾಯಕ, ಸೇರಿದಂತೆ ವಿವಿಧ ಗ್ರಾಮಗಳ ಯಜಮಾನರು, ಮುಖಂಡರು, ವಿವಿಧ ಜನಾಂಗದ ಮುಖಂಡರು ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.







