ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ಕುಸಿತದಿಂದ ಕಂಗಾಲಾಗಿರುವ ಕರ್ನಾಟಕದ ರೈತರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭರವಸೆ ನೀಡಿದ್ದಾರೆ.
ಶುಕ್ರವಾರ ನವದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ನಿಯೋಗವು ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ತಂಬಾಕು ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು. ಬೆಲೆ ಕುಸಿತದಿಂದ ಕಂಗಾಲಾದ ರೈತರ ಬಗ್ಗೆ ಮಾಹಿತಿ ನೀಡಿ ಕರ್ನಾಟಕದ ಮೈಸೂರು, ಹಾಸನ ಸೇರಿದಂತೆ ವಿವಿಧ ಭಾಗಗಳಲ್ಲಿ ತಂಬಾಕು ಬೆಲೆ ಗಣನೀಯವಾಗಿ ಕುಸಿದಿರುವುದನ್ನು ನಿಯೋಗವು ಸಚಿವರ ಗಮನಕ್ಕೆ ತರುವಲ್ಲಿ ಯಶಸ್ವಿಯಾಯಿತು.
“ರೈತರು ಬೆಳೆ ಬೆಳೆಯಲು ಹಾಕಿರುವ ವೆಚ್ಚವೂ ಕೈಗೆ ಬರದಂತಾಗಿದೆ. ಇದರಿಂದ ಸಾವಿರಾರು ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಹಾಗೂ ದರ ತಾರತಮ್ಯವನ್ನು ತಡೆಗಟ್ಟಿ, ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವುದು ತುರ್ತು ಅಗತ್ಯವಾಗಿದೆ” ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ವಿವರಿಸಿದರು.

ಇನ್ನು ರೈತರು ಮಾಡಿರುವ ಮನವಿಯ ಪ್ರಮುಖ ಅಂಶಗಳಾದ ತಂಬಾಕು ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ದೊರಕಿಸಿಕೊಡಬೇಕು, ವೆಚ್ಚಕ್ಕೆ ಅನುಗುಣವಾಗಿ ಲಾಭದಾಯಕ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು,ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ಆರ್ಥಿಕ ನೆರವು ಮತ್ತು ರಕ್ಷಣೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಕುರಿತಂತೆ ಸಚಿವರ ಗಮನಕ್ಕೆ ತರಲಾಯಿತು.
ಇದಕ್ಕೆ ಸಚಿವರ ಸಕಾರಾತ್ಮಕ ಸ್ಪಂದಿಸಿದ ಸಚಿವರು ರೈತರ ಅಹವಾಲುಗಳನ್ನು ಆಲಿಸಿದ ಸಚಿವ ಪಿಯೂಷ್ ಗೋಯಲ್ ಅವರು, ತಂಬಾಕು ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಬೆಲೆ ಕುಸಿತಕ್ಕೆ ಕಾರಣವಾಗಿರುವ ಅಂಶಗಳನ್ನು ಪರಿಶೀಲಿಸಿ, ರೈತರಿಗೆ ಅನ್ಯಾಯವಾಗದಂತೆ ತಂಬಾಕು ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಲೋಕಸಭಾ ಸದಸ್ಯರಾದ ಕೃಷ್ಣ ದತ್ತ ಚಾಮರಾಜ ಯದುವೀರ್ ಒಡೆಯರ್ , ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕರಾದ ಜಿ ಡಿ ಹರೀಶ್ ಗೌಡ, ಎ. ಮಂಜು, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ , ಮಾಜಿ ಶಾಸಕರಾದ ಕೆ. ಮಹದೇವ್ ಆರ್. ಅಶ್ವಿನ್ ಕುಮಾರ್ ಹಾಗೂ ಹೆಚ್.ಡಿ. ಕೋಟೆ ತಾಲ್ಲೂಕಿನ ಜೆಡಿಎಸ್ ಮುಖಂಡ ಕೃಷ್ಣನಾಯಕ ಉಪಸ್ಥಿತರಿದ್ದರು.








