LatestMysore

ವಚನ ಸಾಹಿತ್ಯದಿಂದ ನುಡಿಯಲ್ಲಿ ಜಾಣರು, ನಡೆಯಲ್ಲಿ ಧೀರರಾಗಬಹುದು: ವಚನ ಕುಮಾರಸ್ವಾಮಿ

ಮೈಸೂರು: ವಚನ ಸಾಹಿತ್ಯ ಅಧ್ಯಯನದಿಂದ ನುಡಿಯಲ್ಲಿ ಜಾಣರು, ನಡೆಯಲ್ಲಿ ಧೀರರಾಗಬಹುದು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಸರಗೂರು ತಾಲ್ಲೂಕಿನ ಹಂಚೀಪುರ ಶ್ರೀ ಸಿದ್ಧಮಲ್ಲೇಶ್ವರ ಮಠದಲ್ಲಿ ಬೆಂಗಳೂರಿನ ಬಸವ ಧರ್ಮಕೇಂದ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ 116ನೇ ಮಹಾಮನೆ ಕಾರ್ಯಕ್ರಮದಲ್ಲಿ ಡಾ. ಪ.ಗು. ಹಳಕಟ್ಟಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯ ಇಪ್ಪತ್ತೊಂದನೇ ಶತಮಾನದಲ್ಲಿಯೂ ಜನರ ಬಾಯಲ್ಲಿ ನಲಿದಾಡುತ್ತಿರುವುದು ಅದರ ಸಾರ್ವಕಾಲಿಕ ಮಹತ್ವಕ್ಕೆ ಸಾಕ್ಷಿಯಾಗಿದೆ.

ಮೋಳಿಗೆ ಮಾರಯ್ಯನವರು ಬಸವಣ್ಣನವರ ವಿಚಾರಧಾರೆ ಮತ್ತು ಪ್ರಭಾವಕ್ಕೆ ಒಳಗಾಗಿ ಅರಸುತನಕ್ಕೆ ತಿಲಾಂಜಲಿ ನೀಡಿ, ಕಾಶ್ಮೀರದಿಂದ ಬಸವಕಲ್ಯಾಣಕ್ಕೆ ಬಂದು ಮೋಳಿಗೆ ಕಾಯಕವನ್ನು ಕೈಗೊಂಡರು. ಅರಸುತನಕ್ಕಿಂತ ಕಾಯಕವೇ ಶ್ರೇಷ್ಠ, ಅಧಿಕಾರಕ್ಕಿಂತ ನುಡಿದಂತೆ ನಡೆಯುವ ಬದುಕೇ ಶ್ರೇಷ್ಠ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟ ಮಹಾನ್ ಶರಣರು ಮೋಳಿಗೆ ಮಾರಯ್ಯನವರು ಎಂದು ಹೇಳಿದರು.

ಹಂಚೀಪುರ ಶ್ರೀಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ, ಮಠಗಳು ಭಕ್ತರಲ್ಲಿ ಸಚ್ಚಿಂತನೆಯನ್ನು ಬೆಳೆಸುವ ಜ್ಞಾನಕೇಂದ್ರಗಳಾಗಿವೆ. ಗುರುಮಲ್ಲೇಶ್ವರರು ನೂರಾರು ಗ್ರಾಮಗಳಲ್ಲಿ ಮಠಗಳನ್ನು ಸ್ಥಾಪಿಸಿ, ಜ್ಞಾನದಾಸೋಹದ ಜೊತೆಗೆ ಹಸಿದವರ ಹಸಿವನ್ನೂ ನೀಗಿಸುವ ಮಹತ್ಕಾರ್ಯ ಮಾಡಿದ್ದಾರೆ ಎಂದರು.

ಹಂಚೀಪುರ ಮಠದ ಕಿರಿಯ ಶ್ರೀಗಳಾದ ಶ್ರೀ ತೊಂಟದಾರ್ಯ ಸ್ವಾಮೀಜಿಗಳು ಮಾತನಾಡಿ, ಶರಣರ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ವಚನಗಳ ಅಧ್ಯಯನದಿಂದ ಮನಸ್ಸಿನಲ್ಲಿ ಸತ್ಕಾರ್ಯ ಮಾಡಬೇಕು, ಸಚ್ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂಬ ಅರಿವು ಮೂಡುತ್ತದೆ. ಶರಣರ ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದರು.

ಬಸವ ಧರ್ಮಕೇಂದ್ರ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಬಸವಪ್ರಿಯ ನಾಗರಾಜು ಮಾತನಾಡಿ, ಬಸವಣ್ಣನವರ ತತ್ವಗಳು ಮನುಷ್ಯನನ್ನು ಮಹಾದೇವನನ್ನಾಗಿ ರೂಪಿಸುವ ಶಕ್ತಿಯನ್ನು ಹೊಂದಿವೆ. ಪ್ರತಿಯೊಬ್ಬರೂ ಬಸವಣ್ಣನವರ ಸರಳತೆಯ ತತ್ವವನ್ನು ಮೈಗೂಡಿಸಿಕೊಳ್ಳಬೇಕು. ತಮ್ಮೊಳಗೇ ಶಿವನಿದ್ದಾನೆ ಎಂಬ ಅರಿವಿನಿಂದ ಇಷ್ಟಲಿಂಗದ ಅನುಷ್ಠಾನ ಮಾಡಬೇಕು. ಇದರಿಂದ ಆತ್ಮಶುದ್ಧಿ, ಸತ್ಚಿಂತನೆ ಹಾಗೂ ಉತ್ತಮ ಬದುಕಿನತ್ತ ಸಾಗಲು ಸಾಧ್ಯ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ದಂಪತಿಗಳಿಗೆ ಡಾ. ಪ.ಗು. ಹಳಕಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸರಗೂರು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ.ಎಸ್. ವೀರಭದ್ರಪ್ಪ ಹಾಗೂ ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ. ಸದಸ್ಯ ಆನಂದ್, ಮಹದೇವಪ್ಪ, ಶಿವಪ್ಪಾಜಿ, ಬಾಡಗ ಮಾದಪ್ಪ, ಸುರೇಶ್, ಇಂದ್ರಪ್ಪ, ಬಸವ ಬಳಗದ ಗಣೇಶ್, ಬಸವಣ್ಣ, ಮಲ್ಲಪ್ಪ, ಮಂಜುನಾಥ್, ಶಾಂಬಣ್ಣ, ಶಶಿ, ಪರಶಿವಮೂರ್ತಿ, ಯೋಗೇಶ್, ನಂಜಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

admin
the authoradmin

Leave a Reply